ಬೆಳೆ ನಷ್ಟ: ರೈತರು ಕಂಗಾಲು

0
19
loading...

ಹಾನಗಲ್ಲ:ಈ ಭಾರಿ ಮಳೆರಾಯ ಮುನಿಸಿಕೊಂಡಿದ್ದರಿಂದ ರೈತ ಸಮೂಹದ ನಿರೀಕ್ಷೆಗಳೆಲ್ಲವನ್ನೂ ಮಣ್ಣುಪಾಲು ಮಾಡಿದೆ. ಹಾನಗಲ್ಲ ತಾಲೂಕಿನಲ್ಲಿ ಇತ್ತಿಚಿನ ವರ್ಷಗಳಲ್ಲಿ ರೈತರು ಭತ್ತದ ಬೆಳೆಗಿಂತ ಗೋವಿನಜೋಳಕ್ಕೆ ಮೋರೆಹೋಗಿದ್ದು, ಪ್ರಮುಖ ಬೆಳೆ ಗೋವಿನಜೋಳ ವರುಣನ ಅವಕೃಪೆಯಿಂದಾಗಿ ಕಾಳು ಕಟ್ಟುವ ಹಂತದಲ್ಲಿ ಬಾಡಿ ಹೋಗಿದ್ದು, ಶೇ. 50 ರಷ್ಟು ಪ್ರಮಾಣದಲ್ಲಿ ಬೆಳೆ ನಷ್ಟವುಂಟಾಗುವ ಭೀತಿ ರೈತರನ್ನು ಕಂಗೆಡಿಸಿದೆ.
ತಾಲೂಕಿನಲ್ಲಿ ಕಳೆದ 15 ದಿನಗಳಿಂದ ಹನಿ ಮಳೆ ಬಿದ್ದಿಲ್ಲ. ಗೋವಿನಜೋಳ ಸರಿಯಾಗಿ ಕಾಳು ಕಟ್ಟುವ ಹಂತದಲ್ಲಿಯೇ ಮಳೆ ಸುರಿಯದಿರುವುದು ಬೆಳೆಯ ಗುಣಮಟ್ಟ ಹಾಗೂ ಫಸಲಿನ ಮೇಲೆ ಪ್ರತಿಕೂಲ ಪರಿಣಾಮ ಉಂಟು ಮಾಡಿದೆ. ಇಂದು ಮಳೆ ಬಿದ್ದೀತು, ನಾಳೆ ಬಿದ್ದೀತು ಎನ್ನುವ ರೈತರ ಆಶಾಭಾವನೆ ನುಚ್ಚುನೂರಾಗಿದೆ. ಪ್ರತಿಬಾರಿಯೂ ಮಳೆ ಅಭಾವದ ನಡುವೆಯೂ ರೈತನ ಕೈ ಹಿಡಿಯುತ್ತಿದ್ದ ಗೋವಿನಜೋಳ ಈ ಬಾರಿ ಕೈಕೊಡುವ ಲಕ್ಷಣಗಳೇ ಹೆಚ್ಚಾಗಿ ಗೋಚರಿಸಲಾರಂಭಿಸಿವೆ. ಅತಿವೃಷ್ಟಿ, ಅನಾವೃಷ್ಟಿಯಿಂದಾಗಿ ಪದೇ ಪದೆ ಸಮಸ್ಯೆಗೀಡಾಗುತ್ತಿರುವ ರೈತರ ಗೋಳು ದೇವರಿಗೆ ಪ್ರೀತಿ ಎನ್ನುವಂತಾಗಿರುವುದು ದುರ್ದೈವ.
ತೇವಾಂಶವೇ ಇಲ್ಲ:
ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಸಕಾಲಕ್ಕೆ ಬಿತ್ತನೆ ಕೈಗೊಳ್ಳಲಾಗಿರುವ ಗೋವಿನಜೋಳ ಹೊಡಿ ಹಾಯ್ದು ನಿಧಾನವಾಗಿ ಕಾಳು ಕಟ್ಟಲಾರಂಭಿಸಿವೆ. ಈ ಹಂತದಲ್ಲಿ ಪ್ರತಿದಿನವೂ ಬೆಳೆ ಬೆಳವಣಿಗೆ ಹೊಂದುವುದು ಸಾಮಾನ್ಯ ಸಂಗತಿ. ಬೆಳೆಯ ಪ್ರತಿ ಬೆಳೆವಣಿಗೆಗಳಿಗೂ ನೀರು ಹಾಗೂ ತೇವಾಂಶದ ಅಗತ್ಯತೆ ಹೆಚ್ಚಿದೆ. 15 ದಿನಗಳ ಅವಧಿಯಲ್ಲಿ ಕನಿಷ್ಟ ಒಂದೆರಡು ಬಾರಿಯಾದರೂ ಮಳೆ ಸುರಿದಿದ್ದರೆ ಬೆಳೆ ಪಾರಾಗುತ್ತಿತ್ತು. ಆದರೆ ಹನಿ ಮಳೆಯೂ ಸುರಿಯದಿರುವುದರಿಂದ ಬೆಳೆಗೆ ಸಕಾಲಕ್ಕೆ ನೀರಿನ ರೂಪದಲ್ಲಿ ಆಹಾರ ಸಿಗದೇ, ಭೂಮಿಯಲ್ಲಿ ತೇವಾಂಶ ಮಾಯವಾಗಿ ಇಡೀ ಕಾಳು ಕಟ್ಟುವ ಹಂತ ಸಂಕಷ್ಟಕ್ಕೀಡಾಗಿದೆ. ಇದರಿಂದ ಶೇ. 50 ರಷ್ಟು ಪ್ರಮಾಣದಲ್ಲಿ ಫಸಲು ಹಾನಿಯಾಗುವ ಸಾಧ್ಯತೆ ಹೆಚ್ಚಿದೆ.
ಈ ಭಾಗದಲ್ಲಿನ ಗೋವಿನಜೋಳದ ಹೊಲ-ಗದ್ದೆಗಳು ಬಾಡಿ ಹೋಗಿದ್ದು, ಬೆಳೆ ಕಂದು ಬಣ್ಣಕ್ಕೆ ತಿರುಗಿದೆ. ಮುಂದಿನ 20-25 ದಿನಗಳಲ್ಲಿ ಗೋವಿನಜೋಳ ಬೆಳೆಯ ಅವಧಿ ಮುಕ್ತಾಯಗೊಳ್ಳಲಿದ್ದು, ಫಸಲು ರೈತರ ಕೈ ಸೇರಲಿದೆ. ಆದರೆ ಮಳೆ ಕೈಕೊಟ್ಟಿರುವುದರಿಂದ ಈ ಬಾರಿ ಹೆಚ್ಚು ಪ್ರಮಾಣದಲ್ಲಿ ಇಳುವರಿ ಗೋತಾ ಆಗಲಿದ್ದು, ಗುಣಮಟ್ಟವೂ ಕಣ್ಮರೆಯಾಗುವುದರಲ್ಲಿ ಅನುಮಾನವಿಲ್ಲ.
ಹೆಗಲೇರಿದ ನಿರ್ವಹಣೆ ವೆಚ್ಚ:
ಕಳೆದ ಕೃಷಿ ಹಂಗಾಮಿನಲ್ಲಿ ಎದುರಿಸಿದ ಸಂಕಷ್ಟದಿಂದ ಬಸವಳಿದಿರುವ ಮಣ್ಣಿನ ಮಕ್ಕಳು ಹೊಸ ನಿರೀಕ್ಷೆಗಳೊಂದಿಗೆ ಸಾಲಸೋಲ ಮಾಡಿ ಈ ಬಾರಿ ಕೃಷಿ ಚಟುವಟಿಕೆ ಪೂರೈಸಿದ್ದಾರೆ. ಭೂಮಿ ಹಸನುಗೊಳಿಸುವುದರಿಂದ ಆರಂಭಿಸಿ, ಬಿತ್ತನೆ, ರಸಗೊಬ್ಬರ-ಕ್ರಿಮಿನಾಶಕ ಸಿಂಪಡಣೆ ಹೀಗೆ ಬೆಳೆಯ ಎಲ್ಲ ಹಂತದ ನಿರ್ವಹಣೆ ಮಾಡಿರುವ ರೈತರೀಗ ಬಂದ ಫಸಲಿನಿಂದ ಕನಿಷ್ಟ ನಿರ್ವಹಣೆ ವೆಚ್ಚವನ್ನೂ ಪಡೆಯುವುದು ಸಂಶಯ. ಬೆಳೆಗೆ ಮಾಡಿರುವ ಸಾಲ ಈ ಬಾರಿಗೂ ಹೆಗಲೇರಿ ಆರ್ಥಿಕ ಸಂಕಷ್ಟ ನೆಲೆಯೂರುವ ಭೀತಿ ಅನ್ನದಾತನನ್ನು ಹೈರಾಣುಗೊಳಿಸಿದೆ.

**** ಗೋವಿನಜೋಳ ಕಾಳು ಕಟ್ಟುವ ಹಂತದಲ್ಲಿ ಮಳೆ ಕೈಕೊಟ್ಟಿರುವುದರಿಂದ ಫಸಲು ನಷ್ಟ ಭೀತಿ ಸಾಧ್ಯತೆ ಹೆಚ್ಚಿದೆ. ಈ ಭಾಗದಲ್ಲಿ ಕಳೆದೆರಡು ವಾರಗಳಿಂದ ಮಳೆ ಬೀಳದೇ ಗೋವಿನಜೋಳ ಸಂಕಷ್ಟಕ್ಕೆ ಸಿಲುಕಿದೆ. ಬರದ ಛಾಯೆಯ ಹಿನ್ನೆಲೆಯಲ್ಲಿ ಈಗಾಗಲೇ ಬೆಳೆ ಹಾನಿ ಸಮೀಕ್ಷೆ ಕೈಗೊಳ್ಳಲಾಗಿದೆ.
– ಸಂತೋಷ್ ಬಡ್ಡಿಯವರ, ಕೃಷಿ ಅಧಿಕಾರಿ

**** ಈ ಬಾರಿ ಹಾನಗಲ್ಲ ತಾಲೂಕಿನಲ್ಲಿ ವಾಡಿಕೆ ಪ್ರಮಾಣಕ್ಕಿಂತ ಅರ್ಧದಷ್ಟು ಸಹ ಮಳೆ ಸುರಿದಿಲ್ಲ. ಎಲ್ಲ ಬೆಳೆಗಳೂ ಸಂಕಷ್ಟಕ್ಕೀಡಾಗಿವೆ. ಸರಕಾರ ತಕ್ಷಣವೇ ಹಾನಗಲ್ಲ ತಾಲೂಕನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಿದ್ದು, ತಕ್ಷಣವೇ ತೊಂದರೆಗೀಡಾಗಿರುವ ರೈತರಿಗೆ ಸರಕಾರ ಅಗತ್ಯ ನೆರವು ಚಾಚಬೇಕು.
– ದೇವೇಂದ್ರಪ್ಪ ಹಣ್ಣಿ, ರೈತ ಇನಾಂಯಲ್ಲಾಪುರ

loading...

LEAVE A REPLY

Please enter your comment!
Please enter your name here