ಸಹಕಾರಿ ಬ್ಯಾಂಕುಗಳಿಂದಲೇ ರೈತ ಸಮುದಾಯಕ್ಕೆ ಹೆಚ್ಚಿನ ಸಾಲ ಸೌಲಭ್ಯ ದೊರೆಯುತ್ತದೆ

0
23
loading...

ಗೋಕಾಕ 11: ರಾಷ್ಟ್ರೀಕೃತ ಬ್ಯಾಂಕುಗಳಿಗಿಂತ ಸಹಕಾರಿ ಬ್ಯಾಂಕುಗಳಿಂದಲೇ ರೈತ ಸಮುದಾಯಕ್ಕೆ ಹೆಚ್ಚಿನ ಸಾಲ ಸೌಲಭ್ಯ ದೊರೆಯುತ್ತದೆ. ಸಹಕಾರಿ ಸಂಘಗಳ ಪ್ರಗತಿಯಲ್ಲಿ ರೈತರ ಸಹಕಾರ ಅಗತ್ಯವಾಗಿದೆ ಎಂದು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಮಂಗಳವಾರದಂದು ಇಲ್ಲಿಯ ಗುರುವಾರ ಪೇಟೆಯಲ್ಲಿ 50 ಲಕ್ಷ ರೂ.ಗಳ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿದ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಗೋಕಾಕ ಶಾಖೆಯ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಡವರಿಗೆ ಯಾವುದೇ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸಾಲ ದೊರೆಯುತ್ತಿಲ್ಲ. ಕೇವಲ ಸಿರಿವಂತರಿಗೆ ಮಾತ್ರ ರಾಷ್ಟ್ರೀಕೃತ ಬ್ಯಾಂಕುಗಳು ಸಾಲ ನೀಡಿ ರೈತರನ್ನು ಕಡೆಗಣಿಸುತ್ತಿವೆ. ರೈತರ ಕಲ್ಯಾಣಕ್ಕಾಗಿ ಸಹಕಾರಿ ಬ್ಯಾಂಕುಗಳು ಕಾರ್ಯನಿರ್ವಹಿಸುತ್ತಿದ್ದು, ಎಲ್ಲ ರೈತ ಸಮುದಾಯ ಸಹಕಾರಿ ಬ್ಯಾಂಕುಗಳ ಮೂಲಕ ಸೌಲಭ್ಯ ಪಡೆದುಕೊಂಡು ಆರ್ಥಿಕವಾಗಿ ಮುಂದೆ ಬರಬೇಕು. ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯಿಂದ ರೈತರನ್ನು ಕಡೆಗಣಿಸುತ್ತಿರುವ ರಾಷ್ಟ್ರೀಕೃತ ಬ್ಯಾಂಕುಗಳಿಗೆ ಕಡಿವಾಣ ಹಾಕಲು ಹಲವಾರು ಕಾಯ್ದೆಗಳನ್ನು ತಿದ್ದುಪಡಿ ಮಾಡಲು ಮುಂದೆ ಬಂದಿದ್ದಾರೆ. ಇದರಿಂದ ರೈತರಿಗೆ ಸಾಕಷ್ಟು ಅನುಕೂಲವಾಗಲಿದೆ. ರೈತ ಸಮುದಾಯದ ಹಿತದೃಷ್ಟಿಯಿಂದ ಪ್ರಧಾನಿ ಮೋದಿಜೀ ಹಲವು ದಿಟ್ಟ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ಇಡೀ ರೈತ ಸಮೂಹದ ಆಶಾ ಕಿರಣವಾಗಿ ಮೋದಿಜೀ ಹೊರಹೊಮ್ಮಿದ್ದಾರೆಂದು ಶ್ಲಾಘಿಸಿದರು.
ಡಿಸಿಸಿ ಬ್ಯಾಂಕಿನಿಂದ ರೈತರ ಏಳ್ಗೆ ಸಾಧ್ಯವಿದೆ. ಈ ದಿಸೆಯಲ್ಲಿ ಬ್ಯಾಂಕಿನ ಅಧ್ಯಕ್ಷ ರಮೇಶ ಕತ್ತಿ ಅವರು ರೈತರ ಅಭ್ಯುದಯಕ್ಕೆ ಶ್ರಮಿಸುತ್ತಿದ್ದಾರೆ. ಸಹಕಾರಿ ಕ್ಷೇತ್ರದಲ್ಲಿ ಕತ್ತಿ ಅವರ ಸಾಧನೆ ಅಪಾರವಾಗಿದ್ದು, ಬಿಡಿಸಿಸಿ ಬ್ಯಾಂಕಿನ ಬಲವರ್ಧನೆಗೊಳಿಸುವಲ್ಲಿ ಅವರ ಪಾತ್ರ ಗಣನೀಯವಾಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಲೋಕಸಭಾ ಮಾಜಿ ಸದಸ್ಯ ರಮೇಶ ಕತ್ತಿ ಮಾತನಾಡಿ, ಗೋಕಾಕ ಶಾಖೆಯ ನೂತನ ಕಟ್ಟಡವನ್ನು ಸಮರ್ಪಿಸುವ ಮೂಲಕ ಕಳೆದ ಎಂಟತ್ತು ವರ್ಷಗಳ ಬೇಡಿಕೆಯನ್ನು ಈಡೇರಿಸಿದಂತಾಗಿದೆ. 50 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತವಾಗಿ ನಿರ್ಮಾಣಗೊಂಡಿರುವ ಈ ಬ್ಯಾಂಕಿನ ಏಳ್ಗೆಗೆ ಎಲ್ಲರ ಸಹಕಾರ ಅಗತ್ಯವಾಗಿದೆ. ಗೋಕಾಕ ತಾಲೂಕಿನ 38 ಸಾವಿರ ರೈತರಿಗೆ 174 ಕೋಟಿ ರೂ. ಶೂನ್ಯ ಬಡ್ಡಿದರದಲ್ಲಿ ಸಾಲ ವಿತರಣೆ ಮಾಡಲಾಗಿದೆ. 1919 ರಲ್ಲಿ ಹಿರಿಯರ ತ್ಯಾಗ ಬಲಿದಾನದಿಂದ ಸ್ಥಾಪಿತಗೊಂಡಿರುವ ಈ ಬ್ಯಾಂಕಿಗೆ 2019 ರಲ್ಲಿ ಶತಮಾನೋತ್ಸವ ಸಂಭ್ರಮ ನಡೆಯಲಿದೆ. ರಾಜ್ಯದಲ್ಲಿ ಪ್ರಥಮ ಹಾಗೂ ದೇಶದಲ್ಲಿಯೇ ದ್ವಿತೀಯ ಸ್ಥಾನ ಪಡೆದಿರುವ ಬಿಡಿಸಿಸಿ ಬ್ಯಾಂಕಿನ ಸಮಗ್ರ ಅಭಿವೃದ್ಧಿಗೆ ಬದ್ಧನಿರುವೆ. ಜಾರಕಿಹೊಳಿ ಸಹೋದರರ ಮಾರ್ಗದರ್ಶನದಲ್ಲಿ ಬ್ಯಾಂಕಿನ ಸರ್ವತೋಮುಖ ಏಳ್ಗೆಗೆ ಶ್ರಮಿಸುವ ಭರವಸೆಯನ್ನು ಕತ್ತಿ ವ್ಯಕ್ತಪಡಿಸಿದರು.
ಬಿಡಿಸಿಸಿ ಬ್ಯಾಂಕಿನಿಂದ ರೈತರಿಗೆ ಹಲವು ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ರೈತರು ಈ ಬ್ಯಾಂಕಿನ ಪ್ರಯೋಜನವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಸಹಕಾರಿ ಕ್ಷೇತ್ರದಲ್ಲಿ ಎಂದಿಗೂ ರಾಜಕೀಯ ಹಸ್ತಕ್ಷೇಪ ನಡೆಯಬಾರದು. ಅಂದಾಗ ಮಾತ್ರ ಸಹಕಾರಿ ಕ್ಷೇತ್ರದ ಏಳ್ಗೆ ಸಾಧ್ಯವಾಗುತ್ತದೆ ಎಂದು ಹೇಳಿದರು.
ಶೂನ್ಯ ಸಂಪಾದನ ಮಠದ ಮುರುಘರಾಜೇಂದ್ರ ಮಹಾಸ್ವಾಮಿಗಳು ಈ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಜಿಲ್ಲೆಯ ಅಭಿವೃದ್ಧಿಗೆ ಜಾರಕಿಹೊಳಿ-ಕತ್ತಿ ಸಹೋದರರು ಒಂದಾಗಿರುವುದು ಇಡೀ ಜಿಲ್ಲೆಗೆ ಹೆಮ್ಮೆಯ ಸಂಗತಿಯಾಗಿದೆ ಎಂದು ಪ್ರಶಂಸಿಸಿದರು.
ಬಿಡಿಸಿಸಿ ಬ್ಯಾಂಕಿನ ಉಪಾಧ್ಯಕ್ಷ ಸುಭಾಸ ಢವಳೇಶ್ವರ, ನಿರ್ದೇಶಕರಾದ ಶಿವಾನಂದ ಡೋಣಿ, ನೀಲಕಂಠ ಕಪ್ಪಲಗುದ್ದಿ, ಪಂಚನಗೌಡ ದ್ಯಾಮನಗೌಡ, ಬ್ಯಾಂಕಿನ ತಜ್ಞದಿಗ್ದರ್ಶಕ ಶಿವಾನಂದ ತುಬಚಿ, ಪ್ರಭಾಶುಗರ ಅಧ್ಯಕ್ಷ ಅಶೋಕ ಪಾಟೀಲ, ಡಿಜಿಎಂ ಎಂ.ಸಿ. ಮಾನಗಾಂವಿ, ನಾಗೇಶ ನಾಯಿಕ, ಸ್ಥಳೀಯ ಶಾಖಾ ವ್ಯವಸ್ಥಾಪಕ ಸುನೀಲ ಹಾಲಬಾವಿ ಸೇರಿದಂತೆ ಹಲವಾರು ಸಹಕಾರಿಗಳು ಉಪಸ್ಥಿತರಿದ್ದರು.
ಬಾಕ್ಸ್: ಬೆಳಗಾವಿ ಜಿಲ್ಲೆಯ ಸರ್ವತೋಮುಖ ಏಳ್ಗೆಗೆ ಜಾರಕಿಹೊಳಿ ಹಾಗೂ ಕತ್ತಿ ಕುಟುಂಬ ಕೈಜೋಡಿಸಿ ಕೆಲಸ ಮಾಡುತ್ತಿದೆ. ರಾಜಕೀಯ, ಸಹಕಾರಿ, ಶಿಕ್ಷಣ ಕ್ಷೇತ್ರ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಒಂದಾಗಿ-ಒಗ್ಗಟ್ಟಾಗಿ ದುಡಿಯುತ್ತಿದ್ದೇವೆ. ಜನರ ಒತ್ತಾಸೆಯ ಮೇರೆಗೆ ನಮ್ಮೆರಡು ಕುಟುಂಬಗಳು ಒಂದಾಗಿವೆ. ಬೇರೆಬೇರೆ ಪಕ್ಷಗಳಲ್ಲಿ ಗುರುತಿಸಿಕೊಂಡಿದ್ದರೂ ಅಭಿವೃದ್ಧಿಯಲ್ಲಿ ಎಂದಿಗೂ ರಾಜಕೀಯ ಮಾಡುವುದಿಲ್ಲ. ಪಕ್ಷಾತೀತ ಮತ್ತು ಜಾತ್ಯಾತೀತವಾಗಿ ಜಿಲ್ಲೆಯ ಅಭಿವೃದ್ಧಿಗೆ ಸಿದ್ಧರಿದ್ದೇವೆ. ಬಿಡಿಸಿಸಿ ಬ್ಯಾಂಕಿನ ಅಧ್ಯಕ್ಷ ಸ್ಥಾನವು ಎಂದೆಂದಿಗೂ ಕತ್ತಿ ಕುಟುಂಬಕ್ಕೆ ಶಾಶ್ವತ. ಅದರಂತೆ ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸ್ಥಾನ ಹಾಗೂ ಅಪೆಕ್ಸ್ ಬ್ಯಾಂಕ ಪ್ರತಿನಿಧಿ ಸ್ಥಾನ ನಮ್ಮ ಗುಂಪಿಗೆ ಮೀಸಲು. ಉಭಯ ಕುಟುಂಬಗಳಿಂದ ರೈತರ ಅಭಿವೃದ್ಧಿ ಸಾಧ್ಯ. ಜೊತೆಗೆ ಬಿಡಿಸಿಸಿ ಬ್ಯಾಂಕಿನ ಸರ್ವತೋಮುಖ ಪ್ರಗತಿಯೇ ನಮ್ಮ ಪ್ರಮುಖ ಧ್ಯೇಯ. ಈ ದಿಸೆಯಲ್ಲಿ ನಾವುಗಳು ದಿಟ್ಟ ಹೆಜ್ಜೆ ಇಟ್ಟಿದ್ದೇವೆ. ಜನರ ಆಶೀರ್ವಾದವೇ ನಮಗೆ ದೊಡ್ಡ ಶಕ್ತಿಯಾಗಿದೆ. ಜನರ ಪ್ರೀತಿ-ವಿಶ್ವಾಸಕ್ಕೆ ಎಂದೆಂದಿಗೂ ಚಿರಋಣಿ.
*ಬಾಲಚಂದ್ರ ಜಾರಕಿಹೊಳಿ,
ಶಾಸಕರು, ಅರಭಾವಿ.

loading...

LEAVE A REPLY

Please enter your comment!
Please enter your name here