ಕೊನೆಯ ಒಬ್ಬ ಅರಣ್ಯವಾಸಿಗೂ ಹಕ್ಕು ಸಿಗುವವರೆಗೂ ಹೋರಾಟ

0
15
loading...

ಕನ್ನಡಮ್ಮ ಸುದ್ದಿ-ಯಲ್ಲಾಪುರ : ಸರ್ಕಾರ ಜಾರಿಗೆ ತಂದ ಅರಣ್ಯ ಹಕ್ಕು ಕಾಯ್ದೆ ಅರಣ್ಯವಾಸಿಗಳ ಪರವಾಗಿದ್ದು, ಕೊನೆಯ ಒಬ್ಬ ಅರಣ್ಯವಾಸಿಗೂ ಹಕ್ಕು ಸಿಗುವವರೆಗೂ ಹೋರಾಟ ಮುಂದುವರಿಸಲಾಗುತ್ತದೆ ಅತಿಕ್ರಮಣದಾರರಿಗೆ ಅರಣ್ಯ ಹಕ್ಕು ದೊರಕಿಸುವ ನಿಟ್ಟಿನ ಕಾರ್ಯಕ್ರಮದ ಅನುಷ್ಟಾನದಲ್ಲಿ ನಮ್ಮ ರಾಜ್ಯ ಅತ್ಯಂತ ಕೊನೆಯ ಸ್ಥಾನದಲ್ಲಿದೆ ಎಂದು ಜಿಲ್ಲಾ ಅತಿಕ್ರಮಣ ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.
ಅವರು ಮಂಗಳವಾರ ಪಟ್ಟಣದ ವೆಂಕಟರಮಣ ಮಠದ ಆವಾರದಲ್ಲಿ ಅತಿಕ್ರಮಣದಾರರ ತಾಲೂಕಾ ಮಟ್ಟದ ಜಾಗೃತಿ ಸಮಾವೇಶದಲ್ಲಿ ಮಾತನಾಡುತ್ತಿದ್ದರು. ಅರಣ್ಯ ಭೂಮಿ ಸಕ್ರಮಕ್ಕೆ ಕಾನೂನಿನಲ್ಲಿ ಯಾವುದೇ ಗೊಂದಲವಿಲ್ಲ.ಆದರೆ ಅದರ ಅನುಷ್ಠಾನದಲ್ಲಿ ಅಧಿಕಾರಿಗಳು ಗೊಂದಲ ಮೂಡಿಸುತ್ತಿದ್ದಾರೆ. ಗ್ರಾಮ ಅರಣ್ಯ ಸಮಿತಿಯವರು ಅಂಧಕಾರದಲ್ಲಿದ್ದಾರೆ. ಸಮಿತಿಯ ಸಬಲೀಕರಣ ಆಗಬೇಕು. ಸಮಿತಿಗೆ ಅರಿವು ಮೂಡಿಸುವ ದೃಷ್ಟಿಯಿಂದ ಕಾನೂನಾತ್ಮಕ ಜಾಗೃತಿ ಮೂಡಿಸುವ ಉದ್ಧೇಶವನ್ನು ವೇದಿಕೆ ಹೊಂದಿದೆ ಎಂದರು.
ಅರಣ್ಯ ಹಕ್ಕು ಕಾಯ್ದೆ ಜಾರಿಗೆ ಬಂದು ದಶಕ ಕಳೆದರೂ ಮಂಜೂರಿ ಪ್ರಕ್ರಿಯೆಯಲ್ಲಿ ಟೇಕಾಫ್ ಪಡೆದುಕೊಳ್ಳದೇ ಅನುಷ್ಠಾನಕ್ಕೆ ಗ್ರಹಣ ಹಿಡಿದಂತಾಗಿದೆ. ಅರಣ್ಯ ಹಕ್ಕು ಕಾಯ್ದೆ ಕುರಿತು ಜಿಲ್ಲೆಯಾದ್ಯಂತ ವ್ಯಾಪಕವಾಗಿ ಜಾಗೃತಿ ಅಭಿಯಾನ ಚುರುಕುಗೊಳಿಸಲಾಗುತ್ತದೆ. ಈಗಾಗಲೇ 2 ವರ್ಷಗಳಲ್ಲಿ 5 ಲಕ್ಷ ಕರಪತ್ರ ಹಂಚುವ ಮೂಲಕ ಜಾಗೃತಿ ಅಭಿಯಾನ ಕೈಗೊಳ್ಳಲಾಗುತ್ತಿದೆ. ಮುಂದಿನ 78 ದಿವಸಗಳಲ್ಲಿ 851 ಗ್ರಾಮ ಅರಣ್ಯ ಹಕ್ಕು ಸಮಿತಿ ವ್ಯಾಪ್ತಿಯಲ್ಲಿ ಜಾಗೃತಿ ಅಭಿಯಾನ ನಡೆಸಲಾಗುತ್ತದೆ. ಎಂದರು.
ಸರ್ಕಾರ ಗ್ರಾಮ ಅರಣ್ಯ ಹಕ್ಕು ಸಮಿತಿಗೆ ಈವರೆಗೂ ಕಾನೂನಿನ ಸಬಲೀಕರಣ ನೀಡಲಿಲ್ಲ. ಕಾನೂನು ಅನುಷ್ಠಾನದಲ್ಲಿ ಅನೇಕ ವೈಫಲ್ಯತೆ ಕಂಡು ಬರುತ್ತಿದೆ. ಅರಣ್ಯ ಹಕ್ಕು ಸಮಿತಿಗೆ ಕನಿಷ್ಠ ಮೂಲಭೂತ ಸೌಲಭ್ಯ ಕಲ್ಪಿಸಿಕೊಟ್ಟಿಲ್ಲ. ನಿರ್ದಿಷ್ಟ ದಾಖಲಾತಿಗೆ ಒತ್ತಾಯಿಸಬಾರದೆಂದು ಕಾನೂನಿನಲ್ಲಿ ಉಲ್ಲೇಖಿಸಿದಾಗ್ಯೂ ದಾಖಲಾತಿ ಕೊರತೆಯ ಕಾರಣ ನೀಡಿ ಅರ್ಜಿ ತಿರಸ್ಕರಿಸಲಾಗುತ್ತಿದೆ, ನಿರ್ದಿಷ್ಟ ದಾಖಲಾತಿಗಾಗಿ ಒತ್ತಾಯಿಸಲಾಗುತ್ತಿದೆ.
ಅರ್ಜಿದಾರನ ವಾಸ್ತವ್ಯ ಸ್ಥಳದಲ್ಲಿ ವಾಸ್ತವ್ಯ ಮಾಡಬೇಕೆಂಬ ಮಾನದಂಡ ಹಾಗೂ ಅರಣ್ಯಭೂಮಿಯಲ್ಲಿ ಅವಲಂಬಿತನಾದಾಗ್ಯೂ ಚಿಕ್ಕ ಹಿಡುವಳಿದಾರರ ಅರ್ಜಿಗಳನ್ನು ತಿರಸ್ಕರಿಸಲಾಗುತ್ತಿದೆ. ಅರಣ್ಯ ಹಕ್ಕು ಕಾಯ್ದೆಯ ಅಂಶ ಕೇಂದ್ರ ಸರ್ಕಾರದ ಬುಡಕಟ್ಟು ಮಂತ್ರಾಲಯ ಅರಣ್ಯ ಅತಿಕ್ರಮಣ ಪ್ರದೇಶದಲ್ಲಿ ಜನವಸತಿ ಪ್ರದೇಶ ಎಂಬ ಆಧಾರದ ಮೇಲೆ ಸಾಗುವಳಿ ಹಕ್ಕನ್ನು ನೀಡಬೇಕೆಂಬ ಮಾನದಂಡ ಅನುಸರಿಸಲಾಗುತ್ತಿಲ್ಲ. ಸಮೂಹ ಉದ್ದೇಶಕ್ಕೆ ಸಲ್ಲಿಸಿದ ಅರ್ಜಿಗಳು ಸರ್ಕಾರದ ಅಧೀನ ಸಂಸ್ಥೆಯಡಿ ಅರ್ಜಿ ನೀಡಿಲ್ಲ ಎಂದು ತಿರಸ್ಕರಿಸಲಾಗುತ್ತಿದೆ. ಆಡಳಿತಾತ್ಮಕ ಇಚ್ಛಾಶಕ್ತಿ ಕೊರತೆ ಕಾಯ್ದೆಯ ಅನುಷ್ಠಾನದ ಹಿನ್ನಡೆಗೆ ಕಾರಣ. ನಿರ್ದಿಷ್ಟ ದಾಖಲೆ ಬೇಕೆಂದು ಅಧಿಕಾರಿಗಳು ಜಪ ಮಾಡುತ್ತಿದ್ದು, ಬಡ ಅತಿಕ್ರಮಣದಾರರಿಗೆ ತಪ್ಪು ಸಂದೇಶ ನೀಡುತ್ತಿದ್ದಾರೆ ಎಂದು ವಿವರಿಸಿದರು.
ಗ್ರಾಮ ಅರಣ್ಯ ಹಕ್ಕು ಸಮಿತಿ ಮೇಲೆ ಸವಾರಿ ಮಾಡಬೇಕೆಂಬ ಸ್ಪಷ್ಟ ಉಲ್ಲೇಖವಿದ್ದರೂ ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳು ಪ್ರತ್ಯೇಕ ಸುತ್ತೋಲೆಯ ಮೂಲಕ ಕಾನೂನು ಹೇರುತ್ತಿರುವುದು ದುರಂತ. ಕಾಯ್ದೆ ಬಂದು 10 ವರ್ಷವಾದರೂ ಶೇ.2.2 ರಷ್ಟು ಅರ್ಜಿಗಳಿಗೆ ಮಾತ್ರ ಹಕ್ಕು ದೊರಕಿದೆ. ಶೇ.5 ರಷ್ಟು ಅರ್ಜಿಗಳು ತಿರಸ್ಕಾರವಾಗಿರುವ ಹಿನ್ನೆಲೆಯಲ್ಲಿ ಶೇ.92 ರಷ್ಟು ಅರ್ಜಿಗಳಿಗೆ ಮಾನ್ಯತೆ ವಿಧಿ ವಿಧಾನದಡಿ ಕ್ರಮ ಜರುಗಿಸಿರುವುದು ಅಂಕಿ-ಅಂಶಗಳಿಂದ ಕಂಡು ಬರುತ್ತದೆ. ಜಿಲ್ಲೆಯಲ್ಲಿ 92,779 ಅರ್ಜಿಗಳಲ್ಲಿ 2028 ಅರ್ಜಿಗಳು ಮಾತ್ರ ಸಾಗುವಳಿ ಹಕ್ಕು ದೊರಕಿದ್ದು ಇರುತ್ತದೆ. ಪಾರಂಪರಿಕ ಅರಣ್ಯ ವಾಸಿಗಳಲ್ಲಿ 80050 ಅರ್ಜಿಗಳು ವಿಚಾರಣೆ ಬಾಕಿ ಇದ್ದು, ಇಲ್ಲಿಯವರೆಗೆ ಕೇವಲ 243 ಪಾರಂಪರಿಕ ಅರಣ್ಯವಾಸಿಗಳು ಸಾಗುವಳಿ ಹಕ್ಕು ಪಡೆದಿರುತ್ತಾರೆ. ಅಲ್ಲದೇ ಸಾಮೂಹಿಕ ಉದ್ದೇಶಕ್ಕೆ ಸಲ್ಲಿಸಿದ 3315 ಅರ್ಜಿಗಳಲ್ಲಿ 456 ಅರ್ಜಿಗಳಿಗೆ ಮಾತ್ರ ಮಾನ್ಯತೆ ದೊರಕಿದೆ ಎಂದು ವಿವರಿಸಿದರು.
ಪ್ರಮುಖರಾದ ಅಣ್ಣಪ್ಪ ನಾಯ್ಕ, ನರಸಿಂಹ ಸಿದ್ದಿ, ಅನಂತ ಗೌಡ, ಇಬ್ರಾಹಿಂ ಶಿರಸಿ, ಶಿವಾನಂದ ನಾಯ್ಕ, ಸುಶೀಲಾ ಸಿದ್ದಿ, ಸಾವಿತ್ರಿ ಸಿದ್ದಿ ಇದ್ದರು. ವಿವಿಧ ಗ್ರಾಮ ಅರಣ್ಯ ಹಕ್ಕು ಸಮಿತಿಗಳ ಪ್ರಮುಖರು, ಅತಿಕ್ರಮಣದಾರರು ಪಾಲ್ಗೊಂಡಿದ್ದರು.

loading...

LEAVE A REPLY

Please enter your comment!
Please enter your name here