ಗದಗ ಜಿಲ್ಲಾ ತೋಟಗಾರಿಕೆ ಇಲಾಖೆಯಲ್ಲಿ ಕೋಟ್ಯಾಂತರ ರೂ.ಗಳ ಅವ್ಯವಹಾರ

0
22
loading...

ಗದಗ: ಜಿಲ್ಲೆಯ ತೋಟಗಾರಿಕೆ ಇಲಾಖೆಯಲ್ಲಿ ಭಾರೀ ಪ್ರಮಾಣದ ಭೃಷ್ಠಾಚಾರ ನಡೆದಿದ್ದು ಈ ಕುರಿತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ತಕ್ಷಣ ವಿಚಾರಣೆ ಕೈಗೊಳ್ಳಬೇಕೆಂದು ಯುವ ಧುರೀಣರಾದ ಎಂ.ಐ.ಮುಲ್ಲಾ ಹಾಗೂ ಎಂ.ಎಸ್.ನಾಗರಕಟ್ಟಿ ಅವರು ಆಗ್ರಹಿಸಿದ್ದಾರೆ.
ಬುಧವಾರ ಗದಗ ಜಿಲ್ಲಾ ಪಂಚಾಯತ್‍ನ ಸಿಇಓ ಅವರಿಗೆ ಈ ಕುರಿತು ಜಂಟಿಯಾಗಿ ದೂರು ನೀಡಿದ್ದಾರೆ. 2014-15 ಹಾಗೂ 2015-16 ನೇ ಸಾಲಿನಲ್ಲಿ ತೋಟಗಾರಿಕೆ ಇಲಾಖೆಯಲ್ಲಿ ಜಿಲ್ಲಾ ಮೈಕ್ರೋ ಇರಿಗೇಶನ್ ಸಮಿತಿಯಿಂದ ಅನುಷ್ಠಾನಗೊಂಡ ಹನಿ ನೀರಾವರಿ ಯೋಜನೆಯಲ್ಲಿ ಹನಿ ನೀರಾವರಿ ಘಟಕವನ್ನು ಅಳವಡಿಸಲು ರೈತರಿಗೆ ಸಹಾಯ ಧನ ವಿತರಿಸಲು ತೋಟಗಾರಿಕೆ ಇಲಾಖೆಯ ಕೆಲವು ತಾಲೂಕಿನ ತೋಟಗಾರಿಕಾ ಅಧಿಕಾರಿಗಳು ಮತ್ತು ತೋಟಗಾರಿಕೆ ಉಪ ನಿರ್ದೆಶಕರು, ಡೀಲರ, ಕಂಪನಿಗಳು ಸುಳ್ಳು ದಾಖಲೆಗಳನ್ನು ಸೃಷ್ಠಿಸಿ ಜಿಲ್ಲಾ ಖಜಾನೆಯ ಲೆಕ್ಕ ಶೀರ್ಷಿಕೆಯಿಂದ ಹಣವನ್ನು ಪಡೆದು ಅಕ್ರಮವಾಗಿ ದುರುಪಯೋಗ ಮಾಡಿಕೊಂಡಿರುವದು ಮೇಲ್ನೋಟಕ್ಕೆ ಕಂಡು ಬಂದಿದೆ.
ಜಿಲ್ಲಾ ಮೈಕ್ರೋ ಇರಿಗೇಶನ್ ಸಮಿತಿಯ ಅಧ್ಯಕ್ಷರೂ ಆಗಿರುವ ಜಿಲ್ಲಾ ಪಂಚಾಯತ್‍ನ ಸಿಇಓ ಅವರು ಈ ಕುರಿತು ಉನ್ನತ ಮಟ್ಟದ ವಿಚಾರಣೆ, ತನಿಖೆ ಕೈಗೊಂಡು ದುರುಪಯೋಗ ಆಗಿರುವ ಆಗುತ್ತಿರುವ ಹಣವನ್ನು ಮರಳಿ ಸರಕಾರದ ಬೊಕ್ಕಸಕ್ಕೆ ಜಮಾ ಮಾಡಿಸಬೇಕಲ್ಲದೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ.
ಈ ಕುರಿತು ಸುಧೀರ್ಘ ವಿವರಣೆಯ ಪತ್ರ ಬರೆದಿರುವ ದೂರುದಾರರು ಮಾಹಿತಿ ಹಕ್ಕು ಅಧಿನಿಯಮದಡಿ ಅಧಿಕಾರಿಗಳಿಗೆ ಮಾಹಿತಿ ಕೇಳಿದ್ದು ಸಂಬಂಧಿಸಿದ ಅಧಿಕಾರಿಗಳು ದೂರು ಸಲ್ಲಿಸಿದರೂ ಯಾವ ಅಧಿಕಾರಿಗಳೂ ಈ ಕುರಿತು ಮಾಹಿತಿಯೂ ನೀಡಿಲ್ಲ ಉತ್ತರವನ್ನೂ ನೀಡಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ತಮ್ಮ ತಪ್ಪಿನ ಅರಿವಾಗಿದೆ ಅಲ್ಲದೆ ಆಗಿರುವ ಭೃಷ್ಠಾಚಾರವನ್ನು ಮುಚ್ಚಿ ಹಾಕುವ ತಜಿವಿಜಿಯಲ್ಲಿದ್ದಾರೆ.
2014-15 ರಲ್ಲಿ ರೈತರಿಗೆ ಹನಿ ನೀರಾವರಿ ಘಟಕವನ್ನು ಅಳವಡಿಸಿಕೊಂಡಿದ್ದಕ್ಕೆ ಗದಗ ತಾಲೂಕಿನ ಫಲಾನುಭವಿಗಳಿಗೆ ಗದಗ ಜಿಲ್ಲಾ ಖಜಾನೆಯ ಲೆಕ್ಕ ಶಿರ್ಷಿಕೆಯಡಿ ಒಂದು ಕೋಟಿ 47 ಲಕ್ಷ ರೂ.ಗಳನ್ನು ಸಹಾಯಧನದ ಚೆಕ್ ವಿತರಿಸಿದ್ದು, ಶಿರಹಟ್ಟಿ ತಾಲೂಕಿನ ಫಲಾನುಭವಿಗಳಿಗೆ ಒಂದು ಕೋಟಿ 22ವರೆ ಲಕ್ಷ ರೂ.ಗಳ ಸಹಾಯಧನದ ಚೆಕ್‍ನ್ನು ಜಿಲ್ಲಾ ಖಜಾನೆಯ ಮೂಲಕ ನೀಡಲಾಗಿದೆ.
2014-15 ಹಾಗೂ 2015-16 ನೇ ಸಾಲಿಗೆ ಸಂಬಂಧಿಸಿದಂತೆ ಸಹಾಯಧನ ವಿತರಿಸಿದ ಬಗ್ಗೆ ತೋಟಗಾರಿಕೆ ಇಲಾಖೆಗೆ ಮಾಹಿತಿಯನ್ನು ಪೂರೈಸಲು ಹಾಗೂ ಹನಿ ನೀರಾವರಿ ಘಟಕಗಳನ್ನು ಅಳವಡಿಸಿದ ಜಮೀನುಗಳಣ್ನು ಪರಿಶೀಲನೆ ಮಾಡಲು ಕೋರಿ ಅರ್ಜಿ ಸಲ್ಲಿಸಿದ್ದು ಗದಗ ತಾಲೂಕಿನ ತೋಟಗಾರಿಕೆ ಅಧಿಕಾರಿಗಳು ಅಪೂರ್ಣ ಮಾಹಿತಿಯುಳ್ಳ ದಾಖಲೆಗಳನ್ನು ಪೂರೈಸಿದ್ದಾರೆ.
2014-15 ನೇ ಸಾಲಿಗೆ ಸಂಬಂಧಿಸಿದಂತಗೆ ಗದಗ, ರೋಣ, ಶಿರಹಟ್ಟಿ ತಾಲೂಕಿನ ತೋಟಗಾರಿಕೆ ಇಲಾಖೆಯ ಹಣ ತೆಗೆಯುವ ಅಧಿಕಾರಿಗಳು ಜಿಲ್ಲಾ ಖಜಾನೆಯ ಲೆಕ್ಕ ಶಿರ್ಷಿಕೆಯಿಂದ ಒಟ್ಟು 3 ಕೋಟಿ 57 ಲಕ್ಷ ರೂ.ಗಳ ಹಣವನ್ನು ಚೆಕ್ ಮುಖಾಂತರ ತೆಗೆದು ಸಂಬಂಧಪಟ್ಟ ಫಲಾನುಭವಿ ರೈತರಿಗೆ/ ಹನಿ ನೀರಾವರಿ ಘಟಕವನ್ನು ಅಳವಡಿಸಿದ ಡೀಲರುಗಳಿಗೆ/ ಹನಿ ನೀರಾವರಿ ಪರಿಕರಣಗಳನ್ನು ವಿತರಿಸುವ ಕಂಪನಿಗಳಿಗೆ ಸಹ ಸಂದಾಯ ಮಾಡಿದ್ದು ಈ ಸಹಾಯಧನವನ್ನು ವಿತರಿಸಿದ/ ಸಂದಾಯ ಮಾಡಿದ ಒಟ್ಟು ಫಲಾನುಭವಿಗಳ ಪೈಕಿ ಶೇ. 50 ರಷ್ಟು ಕ್ಕಿಂತಲೂ ಹೆಚ್ಚು ಫಲಾನುಭವಿಗಳಿಗೆ ಸರಿಯಾದ ರೀತಿಯಲ್ಲಿ ಹನಿ ನೀರಾವರಿ ಘಟಕಗಳನ್ನು ಅಳವಡಿಸಿರುವುದಿಲ್ಲ ಹಾಗೂ ಸರಿಯಾಗಿ ಸಹಾಯಧನ ಸಂದಾಯವಾಗಿಲ್ಲ ಎಂಬುದಕ್ಕೆ ಹಾಗೂ ಒಂದು ಗ್ರಾಮದಲ್ಲಿ ಫಲಾನುಭವಿ ಜಮೀನದಲ್ಲಿ ತೆಗೆಸಿದ ಫೋಟೋಗಳನ್ನೇ ಬೇರೆ ಗ್ರಾಮದ ಜಮೀನಿನ ಅರ್ಜಿಗೆ ಅಂಟಿಸಿ ಹಣ ಲಪಟಾಯಿಸಿದ ಬಗ್ಗೆ ತಮ್ಮ ಬಳಿ ಮಾಹಿತಿ ಹಕ್ಕಿನಡಿ ಪಡೆದ ಇಲಾಖೆಯೇ ನೀಡಿರುವ 155 ಪುಟಗಳ ದಾಖಲೆಗಳಿದ್ದು ಈ ಬಗ್ಗೆ ಉಗ್ರ ಹೋರಾಟ ನಡೆಸುವ ಮೂಲಕ ಅನಕ್ಷರಸ್ಥ ಹಾಗೂ ಮಾಹಿತಿ ಇಲ್ಲದ ಮುಗ್ದ ರೈತರಿಗೆ ನ್ಯಾಯ ಒದಗಿಸುವದರೊಂದಿಗೆ ಸರಕಾರದ ಹಣ ಹೀಗೆ ಅಪವ್ಯಯ ಆಗದಂತೆ ಹೋರಾಟ ಕಾನೂನು ಸಮರ ಕೈಗೊಳ್ಳುವದಾಗಿ ಎಂ.ಐ.ಮುಲ್ಲಾ ಹಾಗೂ ಎಂ.ಎಸ್.ನಾಗರಕಟ್ಟಿ ಅವರು ಸ್ಪಷ್ಠಪಡಿಸಿದ್ದಾರೆ.
ಕೋಟ್ಯಾಂತರ ರೂ.ಗಳ ಅವ್ಯವಹಾರದ ಈ ಪ್ರಕರಣದಲ್ಲಿ ವಾಸ್ತವಿಕವಾಗಿ ತನಿಖೆಯಾದ್ದದ್ದೆ ಆದರೆ ಕೆಳಮಟ್ಟದಿಂದ ಹಿಡಿದು ಜಿಲ್ಲಾ ಮಟ್ಟದ ಅಧಿಕಾರಿಗಳೂ ಭಾಗೀಯಾಗಿದ್ದು ಇಂದಲ್ಲ ನಾಳೆ ಈ ಪ್ರಕರಣದ ಸತ್ಯಾಸತ್ಯತೆಗಳು ಹೊರಬಂದಾಗ ಹಿರಿಯ ಅಧಿಕಾರಿಗಳು ಅಮಾನತ್‍ಗೊಳ್ಳುವದಂತೂ ಸತ್ಯ ಎಂದೆನ್ನುತ್ತಾರೆ ಎಂ.ಐ.ಮುಲ್ಲಾ ಹಾಗೂ ಎಂ.ಎಸ್.ನಾಗರಕಟ್ಟಿ.

loading...

LEAVE A REPLY

Please enter your comment!
Please enter your name here