ಖಾಯಂ ಪೌರಾಯುಕ್ತರ ನೇಮಕಕ್ಕೆ ಆಗ್ರಹ

0
29
loading...

ಕನ್ನಡಮ್ಮ ಸುದ್ದಿ-ದಾಂಡೇಲಿ : ನಗರ ಸಬೆಯಲ್ಲಿ ಖಾಯಂ ಪೌರಾಯುಕ್ತರು ಇಲ್ಲದಿರುವುದರಿಂದ ಜನ ಸಾಮಾನ್ಯರು ತಮ್ಮ ಕೆಲಸ ಕಾರ್ಯಗಳಿಗೆ ಪ್ರತಿನಿತ್ಯ ಪರದಾಡುವಂತಾಗಿದೆ. ಈ ನಿಟ್ಟಿನಲ್ಲಿ ಕೂಡಲೇ ಖಾಯಂ ಪೌರಾಯುಕ್ತರನ್ನು ನೇಮಿಸಬೇಕೆಂದು ಮತ್ತು ನೀರಿನ ಕರವನ್ನು ಕಡಿಮೆಗೊಳಿಸಬೇಕೆಂದು ಆಗ್ರಹಿಸಿ ನಗರದ ಬಿಜೆಪಿ ಯುವ ಮೋರ್ಚಾ ಶನಿವಾರ ನಗರ ಸಭೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ, ಪ್ರಭಾರಿ ಪೌರಾಯುಕ್ತ ಹಾಗೂ ತಹಶೀಲ್ದಾರ್ ವಿದ್ಯಾದರ ಗುಳಗುಳಿಯವರಿಗೆ ಮನವಿ ನೀಡಿತು.

ಕಳೆದ ಕೆಲ ತಿಂಗಳುಗಳಿಂದ ನಗರ ಸಬೆಯಲ್ಲಿ ಖಾಯಂ ಪೌರಾಯುಕ್ತರಿಲ್ಲದೆ ಜನಸಾಮಾನ್ಯರಿಗೆ ತೀವ್ರ ತೊಂದರೆಯಾಗುತ್ತಿದೆ. ನಗರದ ಅಭಿವೃದ್ಧಿ ಹಾಗೂ ನಗರದಲ್ಲಿರುವ ಸಮಸ್ಯೆಗಳ ಪರಿಹಾರ ತ್ವರಿತಗತಿಯಲ್ಲಿ ನಡೆಯದೆ ವಿಳಂಭವಾಗುತ್ತಿದೆ. ಇದೀಗ ನೀರಿನ ಕರವನ್ನು ಹೆಚ್ಚಳಗೊಳಿಸಿದ್ದು, ಬಡವರೇ ಇರುವ ದಾಂಡೇಲಿಯಲ್ಲಿ ಜನರ ಪರಿಸ್ಥಿತಿಗೆ ಅನುಗುಣವಾಗಿ ನೀರಿನ ಕರವನ್ನು ಆಕರಿಸಲು ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಈ ಸಂದರ್ಭದಲ್ಲಿ ಬಿಜೆಪಿ ನಗರ ಘಟಕದ ಅಧ್ಯಕ್ಷ ಬಸವರಾಜ ಕಲಶೆಟ್ಟಿ, ಯುವ ಮೋರ್ಚಾ ಅಧ್ಯಕ್ಷ ಮಂಜುನಾಥ ಪಾಟೀಲ, ಯುವ ಮೋರ್ಚಾ ಉಪಾಧ್ಯಕ್ಷರುಗಳಾದ ಬುದ್ಧಿವಂತ ಗೌಡ ಪಾಟೀಲ, ರಮೇಶ ಹೊಸಮನಿ, ಕಾರ್ಯದರ್ಶಿ ಈರಯ್ಯಾ ಸಾಲೀಮಠ, ಯುವ ಮೋರ್ಚಾ ಮುಖಂಡರುಗಳಾದ ರೂಪೇಶ ರಾಯಣ್ಣ, ಶಿವಾರಾಜ ಹೊನ್ನೂರು, ವಿಷ್ಣು ನಾಯರ್, ದೀಪಕ ಕಾಕ್ತೀಕರ, ಶಶಿಕುಮಾರ್.ಎಚ್.ಎನ್, ರಾಘವೇಂದ್ರ ಬಿಡಿಕರ, ಮಹಾವೀರ ಗಾಳಿ ಮೊದಲಾದವರು ಉಪಸ್ಥಿತರಿದ್ದರು.

ಹೋರಾಟ ಅನಿವಾರ್ಯ-ಮಂಜುನಾಥ ಪಾಟೀಲ
ಖಾಯಂ ಪೌರಾಯುಕ್ತರು ನಗರ ಸಭೆಯಲ್ಲಿ ಇಲ್ಲದಿರುವುದರಿಂದ ದೈನಂದಿನ ಕೆಲಸ ಕಾರ್ಯಗಳು ವಿಳಂಭಗತಿಯಲ್ಲಿ ನಡೆಯುತ್ತಿದೆ. ನಗರದಲ್ಲಿ ಬೀದಿ ದೀಪ, ನೀರು ಸರಬರಾಜು ಮೊದಲಾದ ಸಮಸ್ಯೆಗಳಾದಾಗ ತ್ವರಿತಗತಿಯಲ್ಲಿ ಸ್ಪಂದನೆ ಸಿಗುತ್ತಿಲ್ಲ. ನಗರದಲ್ಲಿ ಸಮಸ್ಯೆಗಳು ತಾಂಡವವಾಡುತ್ತಿದೆ. ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳದಿದ್ದ ಪಕ್ಷದಲ್ಲಿ ಉಗ್ರ ಹೋರಟ ಅನಿವಾರ್ಯ ಎಂದು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಮಂಜುನಾಥ ಪಾಟೀಲ ಅವರು ಪತ್ರಿಕೆಗೆ ತಿಳಿಸಿದ್ದಾರೆ.

loading...