ಜಿ+3 ಜಿ+4 ಕಟ್ಟಡಗಳ ನಿರ್ಮಾಣದ ಅನುಮತಿಗೆ ಶೀಘ್ರದಲ್ಲಿ ಕ್ರಮ: ಗುಳಗುಳಿ

0
13
loading...

ಕನ್ನಡಮ್ಮ ಸುದ್ದಿ-ದಾಂಡೇಲಿ : ದಾಂಡೇಲಿ ನಗರಸಭೆಗೆ ವಿವಿಧ ಸಂಪನ್ಮೂಲ ಕ್ರೋಢಿಕರಣ ಹಾಗೂ ಅವುಗಳ ಸಮರ್ಪಕ ಸದ್ಬಳಕೆ ಬಗ್ಗೆ ನಗರಸಭೆಯ ಸದಸ್ಯರು, ಸ್ಥಳೀಯ ಸಂಘ ಸಂಸ್ಥೆಗಳ ಸಲಹೆ ಅತಿ ಅವಶ್ಯ ಎಂದು ದಾಂಡೇಲಿ ನಗರಸಭೆಯ ಪ್ರಭಾರಿ ಆಯುಕ್ತ ಹಾಗೂ ಹಳಿಯಾಳ ತಹಶೀಲ್ದಾರಾಗಿರುವ ವಿದ್ಯಾಧರ ಗುಳಗುಳಿ ನುಡಿದರು.

ಅವರು ನಗರ ಸಭೆಯಲ್ಲಿ ಜರುಗಿದ 2017-18ನೇ ಸಾಲಿನ ನಗರಸಭೆ ಬಜೆಟ್ ಮಂಡನೆಯ ಪೂರ್ವ ಸಿದ್ಧತಾ ಸಭೆಯಲ್ಲಿ ನಗರಸಭೆಯ ಸದಸ್ಯರು ಅಧಿಕಾರಿಗಳು ಹಾಗೂ ಅವ್ಹಾನಿತ ಸಂಘ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಸಲಹೆ ಸೂಚನೆಯನ್ನು ಆಲಿಸಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ವಿವಿಧ ತೆರಿಗೆಗಳಿಂದ ನಗರಸಭೆಗೆ ಬರುವ ಅಂದಾಜು ರೂ.7.50 ಕೋಟಿ ಹಣದಲ್ಲಿ, ನೀರು ಸರಬರಾಜು, ಕಸ ವಿಲೆವಾರಿ, ದಾರಿ ದೀಪಗಳ ವಿದ್ಯುತ್ ಸಂಪರ್ಕ ಇವುಗಳಿಗೆ ಹೆಚ್ಚಿನ ಭಾಗ ಹಣ ವೆಚ್ಚವಾಗುತ್ತಿದೆ. ನಗರಸಭೆಯ ಆಡಳಿತದ ವೆಚ್ಚದ ಕಡಿತ ಕುರಿತು ಚಿಂತಿಸಬೇಕಾಗಿದೆ ಎಂದು ಅವರು ತಿಳಿಸಿದರು.

ದಾಂಡೇಲಿಯ ಸ್ವಚ್ಛತಾ ಕಾರ್ಯಕ್ರಮಕ್ಕಾಗಿ ಕಸ ಸಂಗ್ರಹಿಸುವ ವಾಹನಗಳ ಸಂಚಾರದ ವ್ಯವಸ್ಥೆಯನ್ನು ಸುಧಾರಿಸಿ ಬರುವ ದಿನಗಳಲ್ಲಿ ವಾರ್ಡಿನ ನಗರಸಭಾ ಸದಸ್ಯರ ನೇತ್ರತ್ವದಲ್ಲಿ ವಾರ್ಡಿನ ಅನುಭವಿ ಸಮಾಜ ಸೇವಕರನ್ನು ಒಳಗೊಂಡು, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ವಾರ್ಡ್ ಸಮಿತಿಗಳನ್ನು ರಚಿಸಲಾಗುವದೆಂದರು. ನಗರದಲ್ಲಿ ಜಿ+3 ಜಿ+4 ಕಟ್ಟಡಗಳ ನಿರ್ಮಾಣಕ್ಕೆ ಸರ್ಕಾರದಿಂದ ಅನುಮತಿ ಪಡೆಯಲು ಶೀಘ್ರದಲ್ಲಿ ಕ್ರಮಕೈಕೊಳ್ಳುವ ಭರವಸೆಯನ್ನು ನೀಡಿದರು.

ಈ ಸಂದರ್ಭದಲ್ಲಿ ಸರ್ಕಾರ ಇತ್ತೀಚಿಗೆ ಪೌರಕಾರ್ಮಿಕರ ವೇತನ ಹೆಚ್ಚಳ ಮಾಡಿರುವದರಿಂದ ಹೆಚ್ಚಿದÀ ಆಡಳಿತ ವೆಚ್ಚಕ್ಕಾಗಿ ಸರ್ಕಾರದಿಂದ ಅಧಿಕ ಹಣ ಬಿಡುಗಡೆಗೆ ಒತ್ತಾಯಿಸಬೇಕಾಗಿದೆ. ಎಂದು ನಗರಸಭೆ ಅಧ್ಯಕ್ಷ ನಾಗೇಶ ಸಾಳುಂಕೆ ತಿಳಿಸಿದರು.

ಸಭೆಯಲ್ಲಿ ಕಾಗದ ಕಾರ್ಖಾನೆಯ ಕೆ.ಜಿ ಗಿರಿರಾಜ, ಎಸ್ಕಾಡಿನ ಅಧ್ಯಕ್ಷ ಈಶ್ವರ ಘಟಕಾಂಬಳೆ, ಲಯನ್ಸ್ ಕ್ಲಬಿನ ಯು.ಎಸ್. ಪಾಟೀಲ, ಕರ್ನಾಟಕ ರಾಜ್ಯ ಮುನ್ಸಿಪಲ ಪೌರಕಾರ್ಮಿಕರ ಸಂಘದ ಅಧ್ಯಕ್ಷ ಹರೀಶ ನಾಯ್ಕ ನಗರಸಭಾ ಸದಸ್ಯ ರಾಜು ರುದ್ರಪಾಟಿ, ಮಹಮ್ಮದ್ ಫನಿಬಂದ್, ನಾಮ ನಿರ್ದೇಶಿತ ಸದಸ್ಯ ರಾಮಲಿಂಗ ಜಾಧವ ಚರ್ಚೆಯಲ್ಲಿ ಭಾಗವಹಿಸಿ ಸಲಹೆ ಸೂಚನೆ ನೀಡಿದರು.

ನಗರಸಭೆಯ ಉಪಾಧ್ಯಕ್ಷ ಅಶ್ಪಾಕ ಶೇಖ, ಸಹಾಯಕ ಅಭಿಯಂತರ ಎ.ಆರ್. ದೇಶಪಾಂಡೆ, ಹಣಕಾಸು ವಿಭಾಗದ ಅಧಿಕಾರಿ ಮೈಕಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

loading...