ದ್ವಿಚಕ್ರ ವಾಹನಗಳನ್ನು ಬಾಡಿಗೆ ರೂಪದಲ್ಲಿ ಕೊಡುವುದನ್ನು ನಿಷೇಧಿಸುವಂತೆ ಮನವಿ

0
26
loading...

ಕನ್ನಡಮ್ಮ ಸುದ್ದಿ-ದಾಂಡೇಲಿ : ಜಿಲ್ಲೆಯ ಪ್ರವಾಸಿ ಸ್ಥಾನಗಳಿಗೆ ಬರುವ ಪ್ರವಾಸಿಗಳಿಗೆ ಪರವಾನಗಿಯಿಲ್ಲದೇ ದ್ವಿಚಕ್ರ ವಾಹನಗಳನ್ನು ದಿನದ ಬಾಡಿಗೆ ರೂಪದಲ್ಲಿ ಕೊಡುತ್ತಿರುವುದು ಕಂಡು ಬಂದಿದ್ದು, ಈ ಕೂಡಲೆ ಅದನ್ನು ನಿಷೇಧಿಸಬೇಕೆಂದು ನಗರದ ಅಟೋ ಮಾಲಕರ ಮತ್ತು ಚಾಲಕರ ಸಂಘವು ನಗರದ ಉಪತಹಶೀಲ್ದಾರ್ ಮಂಜುನಾಥ ಮೇತ್ರಿಯವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮಂಗಳವಾರ ಮನವಿ ನೀಡಿ ಆಗ್ರಹಿಸಿದ್ದಾರೆ.

ಜಿಲ್ಲಾದಿಕಾರಿಗಳಿಗೆ ಸಲ್ಲಿಸಿದ ಮನವಿಯಲ್ಲಿ ಜಿಲ್ಲೆಯಲ್ಲಿ ಅಟೋಚಾಲಕರು ಬಡತನದ ಪರಿಸ್ಥಿತಿಯಲ್ಲಿದ್ದು ತಮ್ಮ ಹೊಟ್ಟೆಪಾಡಿನ ಉಪಜೀವನಕ್ಕೆ ಅಟೋಗಳಿಗೆ ಬರುವ ಬಾಡಿಗೆದಾರರು ಮತ್ತು ಪ್ರವಾಸಿ ತಾಣಗಳನ್ನು ನೋಡಲು ಬರುವ ಪ್ರವಾಸಿಗರನ್ನು ಅವಲಂಬಿಸಿರುತ್ತಾರೆ.
ಈಗಾಗಲೇ ಬಹಳಷ್ಟು ದ್ವಿಚಕ್ರ ವಾಹನಗಳಾಗಿದ್ದು, ಅಟೋಗಳಿಗೆ ಬಾಡಿಗೆ ಬರುವುದು ತುಂಬಾ ಕಡಿಮೆಯಾಗಿರುತ್ತದೆ. ಸಾಲ-ಸೋಲ ಮಾಡಿ ಅಟೋ ಖರೀದಿಸಿ ಬಾಡಿಗೆಯಿಲ್ಲದೇ ಪರದಾಡುವ ಪರಿಸ್ಥಿತಿಯಲ್ಲಿ ಅಟೋ ಚಾಲಕರಿದ್ದಾರೆ. ಈ ಎಲ್ಲ ಹಿನ್ನಲೆಯಲ್ಲಿ ಜಿಲ್ಲೆಯ ಪ್ರವಾಸಿ ಸ್ಥಾನಗಳಲ್ಲಿ ಪರವಾನಗೆಯಿಲ್ಲದೆ ದ್ವಿಚಕ್ರ ವಾಹನಗಳನ್ನು ದಿನದ ಬಾಡಿಗೆ ರೂಪದಲ್ಲಿ ಪ್ರವಾಸಿಗಳಿಗೆ ಕೊಡುತ್ತಿರುವುದನ್ನು ನಿಲ್ಲಿಸಲು ಅಗತ್ಯ ಕ್ರಮ ಕೈಗೊಂಡು ಜಿಲ್ಲೆಯ ಬಡ ಅಟೋಚಾಲಕರಿಗೆ ಸಹಾಯ ಮಾಡಬೇಕೆಂದು ಮನವಿಯಲ್ಲಿ ವಿನಂತಿಸಲಾಗಿದೆ.

ಈ ಸಂದರ್ಭದಲ್ಲಿ ಅಟೋ ಮಾಲಕರ ಮತ್ತು ಚಾಲಕರ ಸಂಘದ ಅಧ್ಯಕ್ಷ ಬಾಬಾಸಾಬ ಜಮಾದಾರ, ಪ್ರಧಾನ ಕಾರ್ಯದರ್ಶಿ ರಾಜೇಸಾಬ ಕೇಸನೂರು, ಮಾಜಿ ನಗರ ಸಭಾ ಉಪಾಧ್ಯಕ್ಷ ಆದಂ ದೇಸೂರು, ಸಿಐಟಿಯು ಮುಖಂಡ ಉದಯ ನಾಯ್ಕ, ಆಮ್ ಆದ್ಮಿ ಮುಖಂಡ ಫೈರೋಜ್ ಪಿರ್ಜಾದೆ, ಅಟೋ ಮಾಲಕರ ಮತ್ತು ಚಾಲಕರ ಸಂಘದ ಪದಾಧಿಕಾರಿಗಳಾದ ಸಲೀಂ ಖತೀಬ, ಅಬ್ದುಲ್ ಅಂಕೋಲೆಕರ, ಮುಸ್ತಾಫ ಶೇಖ, ಅಲ್ತಾಪ್ ಮುಲ್ಲಾ, ಮಂಜು ಕಿಳಿಕ್ಕತ್ ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು.

loading...