ಮಹತ್ವದ ಹೆಜ್ಜೆ ಇಟ್ಟ ತೋಟಗಾರ್ಸ್ ಸೇಲ್ ಸೊಸೈಟಿ

0
22
loading...

ಕನ್ನಡಮ್ಮ ಸುದ್ದಿ-ಶಿರಸಿ: ಸಾರ್ವಜನಿಕರಿಗೆ ಅಗತ್ಯವಿರುವ ಎಲ್ಲ ವಸ್ತುಗಳೂ ಒಂದೇ ಸೂರಿನಡಿ ಸಿಗುವ ಜೊತೆಗೆ ಅಂಗಡಿಕಾರರಿಂದ ಗ್ರಾಹಕರ ಸುಲಿಗೆ ತಪ್ಪಿಸುವ ಉದ್ದೇಶದಿಂದ ರಾಜ್ಯದ ಪ್ರಸಿದ್ಧ ಅಡಕೆ ವಹಿವಾಟು ಸಂಸ್ಥೆಯಾದ ಶಿರಸಿಯ ತೋಟಗಾರ್ಸ್ ಸೇಲ್ ಸೊಸೈಟಿ (ಟಿ.ಎಸ್.ಎಸ್.) ಮಹತ್ವದ ಹೆಜ್ಜೆಯಿಟ್ಟಿದೆ. ನೂತನ ಸೂಪರ್ ಮಾರ್ಕೆಟ್‍ಅನ್ನು ಡಿ.24ರಂದು ಆರಂಭಿಸುವ ಮೂಲಕ ಈ ಉದ್ದೇಶ ಈಡೇರಿಸಿಕೊಳ್ಳಲು ಮುಂದಾಗಿದೆ. ಇದೇ ವೇಳೆ ವಿಶೇಷ ರಿಯಾಯತಿ ದರದ 4 ದಿನಗಳ ಟಿ.ಎಸ್.ಎಸ್. ಹಬ್ಬಕ್ಕೂ ಚಾಲನೆ ದೊರೆಯಲಿದೆ.
ಶುಕ್ರವಾರ ಟಿ.ಎಸ್.ಎಸ್. ಸಂಸ್ಥೆಯಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಸಂಸ್ಥೆಯ ಅಧ್ಯಕ್ಷ ಶಾಂತಾರಾಮ ಹೆಗಡೆ ಈ ಕುರಿತು ಮಾಹಿತಿ ನೀಡಿದರು. ಸಂಸ್ಥೆಯ ಹಳೆಯ ಕಟ್ಟಡದಲ್ಲಿದ್ದ ಸೂಪರ್ ಮಾರ್ಕೆಟ್ ಇದೀಗ 4.25 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಶ್ರೀಪಾದ ಹೆಗಡೆ ಕಡವೆ ಸ್ಮಾರಕ ಸಂಕೀರ್ಣಕ್ಕೆ ಸ್ಥಳಾಂತರಗೊಳ್ಳಲಿದೆ. ಮಾರ್ಕೆಟ್ ಆಧುನಿಕ ಸೌಲಭ್ಯಗಳನ್ನು ಒಳಗೊಂಡು ಹೆಚ್ಚುವರಿಯಾಗಿ ಗ್ರಾಹಕರ ಬೇಡಿಕೆ ಈಡೇರಿಸಲು
ಸಿದ್ಧವಾಗಿದೆ ಎಂದರು. ಈಗ ಲಭ್ಯವಿರುವ ಸೌಲಭ್ಯಗಳ ಜೊತೆಗೆ ಕ್ರೀಡೆಗೆ ಸಂಬಂಧಿಸಿದ ಸಲಕರಣೆ, ಬಟ್ಟೆ ಅಂಗಡಿ, ಬಂಗಾರ ಮಳಿಗೆ, ಸ್ತ್ರೀಯರಿಗೆ ಬೇಕಾದ ವಸ್ತುಗಳು, ಟಿಎಸ್‍ಎಸ್ ಜೀನ್ಸ್ ಮಳಿಗೆಗಳು, ಸೇರಿದಂತೆ ಹಲವು ವಸ್ತುಗಳು ಹೆಚ್ಚುವರಿಯಾಗಿ ನೂತನ ಸೂಪರ್ ಮಾರ್ಕೆಟ್‍ಗೆ ಸೇರ್ಪಡೆಯಾಗಲಿದೆ. ಶೋಷಣಾರಹಿತ ಸಮಾಜ ನಿರ್ಮಿಸುವುದು ಸಂಸ್ಥೆ ಉದ್ದೇಶವಾಗಿದ್ದು, ಸಂಸ್ಥೆಯ ಗ್ರಾಹಕರನ್ನು ಸಂತೃಪ್ತಗೊಳಿಸಲು ಈ ವ್ಯವಸ್ಥೆ ಆರಂಭಿಸಲಾಗಿದೆ ಎಂದು ತಿಳಿಸಿದರು.
ಡಿ.24ರಂದು ಸಚಿವ ಆರ್.ವಿ.ದೇಶಪಾಂಡೆ ಕಾರ್ಯಕ್ರಮ ಉದ್ಘಾಟಿಸುವರು. ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ.ಪಾಟೀಲ, ಸಹಕಾರಿ ಸಚಿವ ಎಚ್.ಎಸ್.ಮಹಾದೇವ ಪ್ರಸಾದ, ವಿಧಾನ ಪರಿಷತ್ ಸದಸ್ಯ ಶ್ರೀಕಾಂತ ಘೋಟ್ನೇಕರ್, ಸಹಕಾರ ಸಂಘಗಳ ನಿಬಂಧಕರಾದ ಎಂ.ಕೆ.ಅಯ್ಯಪ್ಪ, ಪತ್ರಕರ್ತ ಹರಿಪ್ರಕಾಶ ಕೋಣೆಮನೆ, ನಬಾರ್ಡ್ ಮುಖ್ಯ ಮಹಾಪ್ರಬಂಧಕ ಎಂ.ಐ. ಗಣಗಿ ಸೇರಿದಂತೆ ಇತರರು ಪಾಲ್ಗೊಳ್ಳುವರು ಎಂದು ಹೇಳಿದರು.
ಡಿ.24ರಿಂದ ಡಿ.27ರವರೆಗೆ ನಡೆಯುವ ಟಿ.ಎಸ್.ಎಸ್. ಹಬ್ಬದಲ್ಲಿ ಗೃಹೋಪಯೋಗಿ, ದಿನಸಿ, ಕೃಷಿ ಸಾಮಗ್ರಿ ಸೇರಿದಂತೆ ಎಲ್ಲ ರೀತಿಯ ವಸ್ತುಗಳು ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ಹಬ್ಬದ ಅಂಗವಾಗಿ ರಂಗೋಲಿ, ಸೂಪರ್ ಮಿನಿಟ್, ಸಿಹಿತಿಂಡಿ ತಯಾರಿಕೆ, ಛದ್ಮವೇಶ, ವಿದ್ಯಾರ್ಥಿಗಳಿಗೆ ನೃತ್ಯ, ಆರತಿ ತಾಟು ಮತ್ತು ಭಾವಗೀತೆ ಸ್ಪರ್ಧೆ, ಸಾಂಪ್ರದಾಯಿಕ ಹಾಡು, ಚಲನಚಿತ್ರ ಗಈತೆ ಸೇರಿದಂತೆ ಹಲವು ಸ್ಪರ್ಧೆಗಳು ನಡೆಯಲಿವೆ. ಹಬ್ಬದಲ್ಲಿ ಗರಿಷ್ಟ ಮಾರಾಟ ಬೆಲೆಯ ಮೇಲೆ ಆಕರ್ಷಕ ರಿಯಾಯತಿಯನ್ನು ನೀಡಲಾಗುತ್ತದೆ. ಅಲ್ಲದೇ, ಲಕ್ಕಿ ಡಿಪ್ ಕೂಡ ಇದೆ ಎಂದು ಹೇಳಿದರು.
ನಗದು ರಹಿತ ವ್ಯವಹಾರದೆಡೆ ಸಂಸ್ಥೆ ದಾಪುಗಾಲಿಟ್ಟು ಹಾಕುತ್ತಿದೆ. ಈ ನಿಟ್ಟಿನಲ್ಲಿ ಪಿಓಎಸ್ ಹಾಗೂ ಮೊಬೈಲ್ ಪೇಮೆಂಟ್ ವ್ಯವಸ್ಥೆಯನ್ನೂ ಶೀಘ್ರದಲ್ಲಿ ಸಂಸ್ಥೆಯಡಿ ಅಳವಡಿಸಿಕೊಳ್ಳಲಾಗುವುದು ಎಂದು ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ರವೀಶ ಹೆಗಡೆ ಹೇಳಿದರು. ಭವಿಷ್ಯದಲ್ಲಿ ಕಂದ್ರ ಸರ್ಕಾರದ ನಗದು ರಹಿತ ವ್ಯವಹಾರಕ್ಕೆ ಸಂಸ್ಥೆ ಈ ಮೂಲಕ ಸಿದ್ಧತೆ ನಡೆಸಿದೆ ಎಂದ ಅವರು, ಸೂಪರ್ ಮಾರ್ಕೆಟ್ ಆರಂಭಿಸಿ ಗ್ರಾಹಕರಿಗೆ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ವಸ್ತುಗಳು ಸಿಗುವಂತೆ ಮಾಡಲಾಗುತ್ತದೆ. ಭವಿಷ್ಯದಲ್ಲಿ ಸಾವಯವ ಗೊಬ್ಬರ ಮಾರಾಟ ಮಾಡಲು ಸಂಸ್ಥೆ ಚಿಂತನೆ ನಡೆಸಿದೆ ಎಂದು ತಿಳಿಸಿದರು. ಅಡಕೆ ದಲಾಲಿ, ಸ್ವೀಟ್ ಸುಪಾರಿ, ಅಡಕೆ ವಹಿವಾಟು ಇದ್ದಂತೆ ಸೂಪರ್ ಮಾರ್ಕೆಟ್ ಕೂಡ ಸಂಸ್ಥೆಯ ಒಂದು ಭಾಗ. ಹಾಗಾಗಿ ಸೂಪರ್ ಮಾರ್ಕೆಟ್ ಆರಂಭದಿಂದ ಅಡಕೆ ಮಾರುಕಟ್ಟೆ ಮೇಲೆ ವ್ಯತಿರಿಕ್ತ ಪರಿಣಾಮ ಆಗುವುದಿಲ್ಲ ಎಂದ ಅವರು, ಸರ್ವೋಚ್ಛ ನ್ಯಾಯಾಲಯದ ಆದೇಶವನ್ನು ತಪ್ಪಾಗಿ ಅರ್ಥೈಸಿ ಅಧಿಕಾರಿಗಳು ಅನುಷ್ಠಾನ ಮಾಡುತ್ತಿದ್ದಾರೆ. ಒಂದೇ ಪೌಚಿನಲ್ಲಿ ಅಡಕೆ, ತಂಬಾಕು ಮಾರದಂತೆ ಆದೇಶವಿದೆಯೇ ವಿನಃ ತಂಬಾಕು ಹಾಗೂ ಅಡಕೆ ಬೇರೆ ಬೇರೆ ಪೌಚ್‍ಗಳಲ್ಲಿ ಬರುತ್ತಿರುವಾಗ ಗುಟಕಾ ನಿಷೇಧ ಮಾಡುತ್ತಿರುವ ಕಾರ್ಯ ಅವೈಜ್ಞಾನಿಕವಾಗಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಸಿದರು.
ಈ ಸಂದರ್ಭದಲ್ಲಿ ಟಿ.ಎಸ್.ಎಸ್. ನಿರ್ದೇಶಕ ವಿನಾಯಕ ಹೆಗಡೆ, ಚಂದ್ರಶೇಖರ ಹೆಗಡೆ ಹಾಗೂ ಇತರರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here