ರೈತಪರ ಭಾಜಪ ಹೋರಾಟ: ಸುನೀಲ ಹೆಗಡೆ

0
35
loading...

ರೈತಪರ ಭಾಜಪ ಹೋರಾಟ: ಸುನೀಲ ಹೆಗಡೆ
ಜಿಲ್ಲಾ ರೈತಮೋರ್ಚಾ ಪದಾಧಿಕಾರಿಗಳ ಆಯ್ಕೆ
ಹಳಿಯಾಳ: ಭಾರತೀಯ ಜನತಾಪಕ್ಷದ ರೈತಮೋರ್ಚಾ ಸಂಕಷ್ಟದಲ್ಲಿರುವ ರೈತರ ಪರವಾಗಿ ಬೀದಿಗಿಳಿದು ಹೋರಾಟ ಮಾಡುವ ಹಾಗೂ ರಚನಾತ್ಮಕ ಕಾರ್ಯಗಳನ್ನು ಮಾಡಬೇಕಾಗಿದೆ ಎಂದು ಮಾಜಿ ಶಾಸಕ ಸುನೀಲ ಹೆಗಡೆ ಹೇಳಿದರು.
ಪಕ್ಷದ ರೈತಮೋರ್ಚಾ ಜಿಲ್ಲಾ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಪ್ರಾಕೃತಿಕ ವಿಕೋಪದ ಕಾರಣ ಅನಾವೃಷ್ಟಿ ಉಂಟಾದ ಹಿನ್ನೆಲೆಯಲ್ಲಿ ಬರಗಾಲದ ಬವಣೆಯಲ್ಲಿ ರೈತರು ಸಂಕಷ್ಟದಲ್ಲಿದ್ದು, ಕೃಷಿಕರ ಸಾಲಮನ್ನಾ ಮಾಡುವುದು, ಬೆಳೆಗಳಿಗೆ ಉತ್ತಮ ಬೆಲೆ ದೊರೆಯುವಂತಾಗಬೇಕು. ಕಬ್ಬಿಗೆ ಪ್ರತಿ ಟನ್‌ಗೆ 4 ಸಾವಿರ ರೂ. ದರ ಸಿಗಬೇಕು. ಬೆಂಬಲ ಬೆಲೆಯ ಖರೀದಿ ಕೇಂದ್ರಗಳನ್ನು ಸರ್ಕಾರ ಶೀಘ್ರ ಆರಂಭಿಸಬೇಕು ಎಂದು ಆಗ್ರಹಿಸಿ ಪಕ್ಷದ ವತಿಯಿಂದ ಹೋರಾಟ ನಡೆಸಲು ಕಾರ್ಯಕರ್ತರು ಸಿದ್ಧರಿರಬೇಕು ಎಂದರು.
ಕಾಳಿನದಿ ಯೋಜನೆಯ ಶೀಘ್ರ ಅನುಷ್ಠಾನಕ್ಕೆ ಆಗ್ರಹಿಸಿ ಜನೇವರಿಯಿಂದ ಹೋರಾಟ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವದಾಗಿ ಘೋಷಿಸಿದ ಸುನೀಲ ಹೆಗಡೆ ಸ್ಥಳೀಯ ಜನಪ್ರತಿನಿಧಿಯಾದ ಸಚಿವ ಆರ್‌.ವಿ. ದೇಶಪಾಂಡೆಯವರು ರೈತರ ಸಮಸ್ಯೆಗಳನ್ನು ಕಡೆಗಣಿಸುತ್ತಿದ್ದಾರೆ. ರೈತರ ಸರ್ವಾಂಗೀಣ ಅಭಿವೃದ್ಧಿಯ ಬಗ್ಗೆ ಚಿಂತನೆ ಮಾಡುತ್ತಿಲ್ಲ ಎಂದು ಟೀಕಿಸಿದರು.
ಪಕ್ಷದ ಮುಖಂಡ ರಾಜು ಧೂಳಿ ಮಾತನಾಡುತ್ತಾ ಅಡಿಕೆ, ಕಾಫಿ, ತೆಂಗು ಬೆಳೆಗಾರರ ಸಮಸ್ಯೆಯ ಕೂಗು ದೆಹಲಿಯವರೆಗೆ ತಲುಪುತ್ತಿದ್ದು, ಅದೇ ರೀತಿ ಭತ್ತ, ಗೋವಿನಜೋಳ, ಹತ್ತಿ, ಕಬ್ಬು ಮೊದಲಾದ ಬೆಳೆಗಳ ರೈತರ ಗೋಳು ಸಹ ದೇಶದ ರಾಜಧಾನಿವರೆಗೆ ಮುಟ್ಟುವಂತಾಗಬೇಕು ಎಂದು ಆಶಿಸಿದರು. ಸಾವಯವ ಕೃಷಿಗೆ ಆದ್ಯತೆ ದೊರಕುವಂತಾಗಬೇಕು. ರೈತರು, ಮದ್ಯವರ್ತಿಗಳ ಕಾಟದಿಂದ ಮುಕ್ತಿ ಹೊಂದುವಂತಾಗಬೇಕಾಗಿದೆ ಎಂದರು.
ಭಾಜಪ ರೈತಮೋರ್ಚಾ ಜಿಲ್ಲಾಧ್ಯಕ್ಷ ಗಣಪತಿ ಕರಂಜೇಕರ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿಗಳಾದ ಮಹೇಶ ಹೊಸಕೊಪ್ಪ, ಗಣಪತಿ ಸಣ್ಣನಿಂಗಪ್ಪನವರ, ತಾಲೂಕಾಧ್ಯಕ್ಷ ಸಾತೂರಿ ಗೋಡಿಮನಿ ಹಾಗೂ ಪಕ್ಷದ ತಾಲೂಕಾಧ್ಯಕ್ಷ ಶಿವಾಜಿ ನರಸಾನಿ, ಪ್ರಧಾನ ಕಾರ್ಯದರ್ಶಿ ವಿ.ಎಂ. ಪಾಟೀಲ, ಪ್ರಮುಖರಾದ ಗುರುನಾಥ ದಾನಪ್ಪನವರ, ಅನಿಲ ಮುತ್ನಾಳೆ, ಬಸವರಾಜ ಮೇತ್ರಿ, ಮಂಜುನಾಥ ಅಳ್ನಾವರಕರ, ಪ್ರಕಾಶ ಕೊರವರ, ಪ್ರಕಾಶ ಕಮ್ಮಾರ ಮೊದಲಾದವರು ಉಪಸ್ಥಿತರಿದ್ದರು.

-: ಜಿಲ್ಲಾ ರೈತಮೋರ್ಚಾ ಪದಾಧಿಕಾರಿಗಳು :-
ಅಧ್ಯಕ್ಷ- ಗಣಪತಿ ಸಹದೇವ ಕರಂಜೇಕರ ಕೆಸರೊಳ್ಳಿ (ಹಳಿಯಾಳ), ಉಪಾಧ್ಯಕ್ಷರುಗಳು- ವಿಶ್ವನಾಥ ಹೆಗಡೆ ಶಿಗೇಹಳ್ಳಿ (ಶಿರಸಿ), ಗುರುನಾಥ ಗಾಂವಕರ (ಅಂಕೋಲಾ), ವಿಜಯಕುಮಾರ ಹಿರೇಮಠ (ಯಲ್ಲಾಪುರ), ಅಶೋಕ ದತ್ತಾ ದೇಸಾಯಿ ರಾಮನಗರ (ಜೋಯಿಡಾ), ಕೋಶಾಧ್ಯಕ್ಷ- ನಾರಾಯಣ ಭಟ್‌ ಹಂಡಿಮನೆ (ಯಲ್ಲಾಪುರ), ಕಾರ್ಯದರ್ಶಿಗಳು- ಶಿವಾನಂದ ಶಿರಮಾಪುರ ಅಜ್ಜಳ್ಳಿ (ಮುಂಡಗೋಡ), ಗಣಪತಿ ನಾಯ್ಕ (ಅಂಕೋಲಾ), ಚಂದ್ರಣ್ಣಾ ನಾಯ್ಕ ಹಾದಿಮನಿ ಗುಡ್ನಾಪುರ ಬನವಾಸಿ (ಶಿರಸಿ), ಬಸವರಾಜ ಮೇತ್ರಿ ಮದ್ನಳ್ಳಿ (ಹಳಿಯಾಳ), ನಾಗರಾಜ ರಾಮಾ ನಾಯ್ಕ ಹೊಲಗೇರಿ (ಸಿದ್ಧಾಪುರ), ಸದಸ್ಯರು- ಮೋಹನ ನಾಯ್ಕ ಬೈಲೂರ (ಭಟ್ಕಳ), ಬಸಣ್ಣಾ ಕುರುಬಗಟ್ಟಿ ಬೆಳವಟಗಿ (ಹಳಿಯಾಳ), ಚಂದ್ರಪ್ಪಾ ನಂದಿಪೂರ (ಮುಂಡಗೋಡ), ಶ್ರೀಧರ ಹೆಗಡೆ ಕೂಜಳ್ಳಿ (ಕುಮಟಾ), ಉದಯ ಪ್ರಭು ಗೋಟೆಗಾಳಿ (ಕಾರವಾರ), ಲಕ್ಷ್ಮಣ ಗೌಡಾ ದೇವಳಮಕ್ಕಿ (ಕಾರವಾರ), ಪ್ರಕಾಶ ಬೆಳ್ಳಿ, ಶ್ರೀಧರ ಭಟ್‌ (ಕುಮಟಾ), ಮಂಜುನಾಥ ನಾಯ್ಕ ಶಿರಾಲಿ (ಭಟ್ಕಳ), ರಾಜಶೇಖರ ಬೆಳ್ಳಿಕಟ್ಟಿ ಶಿರಗೂರ ದಾಂಡೇಲಿ (ಹಳಿಯಾಳ).

loading...

LEAVE A REPLY

Please enter your comment!
Please enter your name here