ಸಾರ್ವಜನಿಕ ವಲಯದಲ್ಲಿ ಅಚ್ಚರಿ ತಂದ ಧರಣಿ

0
15
loading...

ಶಿವಾನಂದ ಪದ್ಮಣ್ಣವರ

ಚಿಕ್ಕೋಡಿ: ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಚಿಕ್ಕೋಡಿ ಜಿಲ್ಲಾ ಕೇಂದ್ರ ರಚನೆ ವಿಷಯವಾಗಿ ನಡೆಯುತ್ತಿರುವ ರಾಜಕೀಯ ಮೇಲಾಟಗಳನ್ನು ಖಂಡಿಸಿ ಜಿಲ್ಲಾ ಹೋರಾಟ ಸಮಿತಿ ಹಾಗೂ ಇನ್ನೀತರ ಸಂಘಟನೆಗಳ ಹಂಗಿಲ್ಲದೇ ಏಕಾಂಗಿಯಾಗಿ ಸೋಮವಾರ ಅಲ್ಲಮಪ್ರಭು ಅನ್ನದಾನ ಸಮಿತಿ ಅಧ್ಯಕ್ಷ ಚಂದ್ರಕಾಂತ ಹುಕ್ಕೇರಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲು ಮುಂದಾಗಿದ್ದಾರೆ.

ಕಳೆದ ಎರಡು ದಿನಗಳ ಹಿಂದೆ ಚಿಕ್ಕೋಡಿ ಜಿಲ್ಲಾ ರಚನೆ ವಿಷಯವಾಗಿ ಸಚಿವರೊಬ್ಬರು ಸುಳಿವು ನೀಡಿದ್ದಕ್ಕೆ ದೊಡ್ಡ ಹೋರಾಟಕ್ಕೆ ಮುಂದಾಗಿದ್ದ ಗೋಕಾಕ ತಾಲೂಕಿನ ಸಂಘಟನೆಗಳಂತೆ ಚಿಕ್ಕೋಡಿಯಲ್ಲಿ ಹೋರಾಟಕ್ಕೆ ಮುಂದಾಗದ ಸಂಘಟನೆಗಳಿಗೆ ತೊಡೆತಟ್ಟಿರುವ ಸಮಾಜಸೇವಕ ಚಂದ್ರಕಾಂತ ಹುಕ್ಕೇರಿ ಅವರು ಶನಿವಾರ ಬೆಳಗ್ಗೆಯಿಂದ ಪಟ್ಟಣದ ಮಹಾವೀರ ಸರ್ಕಲ್‌ ಬಳಿ ಧರಣಿ ಸತ್ಯಾಗ್ರಹ ಆರಂಭಿಸಿರುವುದು ಸಾರ್ವಜನಿಕ ವಲಯದಲ್ಲಿ ಅಚ್ಚರಿ ಮೂಡಿಸಿದೆ.

ಏಕಾಂಗಿ ಹೋರಾಟಕ್ಕಿಳಿದ ಈ ಸಮಾಜ ಸೇವಕನ ಬೆನ್ನಿಗೆ ಮುಂಜಾನೆಯಿಂದ ಸಾಲುಗಟ್ಟಿ ಜನ ನಿಮ್ಮ ಬೆಂಬಲಕ್ಕೆ ನಾವಿದ್ದೇವೆ ಎಂದು ಧೈರ್ಯ ತುಂಬುತ್ತಿರುವ ದೃಶ್ಯ ಸಾಮಾನ್ಯವಾಗಿ ಕಂಡುಬರುತ್ತಿತ್ತು. ಅದರಂತೆ ಧರಣಿ ಸ್ಥಳಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ಜಿಲ್ಲಾ ಹೋರಾಟಕ್ಕೆ ಬೆಂಬಲ ಸೂಚಿಸಿದರು. ಕರಗಾಂವ ಏತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್‌.ಆರ್‌. ಪಾಟೀಲ, ಜೆಡಿಎಸ್‌ ವಿದ್ಯಾರ್ಥಿ ಘಟಕದ ಅಧ್ಯಕ್ಷ ಕಾಡಗೌಡ ಪಾಟೀಲ ಜಿಲ್ಲಾ ರಚನೆ ಹೋರಾಟಕ್ಕೆ ದನಿಗೂಡಿಸಿದರು.

1997ರಲ್ಲಿ ಚಿಕ್ಕೋಡಿ ಜಿಲ್ಲಾ ಘೋಷಣೆ ನಂತರ ಆದೇಶ ಹಿಂಪಡೆದ ಸರಕಾರ ಕ್ರಮ ಖಂಡಿಸಿ ಅಂದು ರಚಿಸಿದ ಜಿಲ್ಲಾ ಹೋರಾಟ ಸಮಿತಿ ವರ್ಷದಿಂದ ವರ್ಷಕ್ಕೆ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತ ಬಂದಿದೆ. ಈ ಸಮಿತಿಯಲ್ಲಿರುವ ಬಹುತೇಕರು ರಾಜಕೀಯ ನಾಯಕರ ಬೆಂಬಲಕ್ಕೆ ನಿಂತಿದ್ದಾರೆ. ಇನ್ನೂ ಕೆಲವರು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಸಂದರ್ಭ ಸಿಕ್ಕಾಗ ವಿಷಯ ಪ್ರಸ್ತಾಪಿಸಲು ಮುಂದಾಗುತ್ತಾರೆ ಇನ್ನುಳಿದ ಸಂದರ್ಭದಲ್ಲಿ ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿಗೂ ನಮಗೂ ಸಂಬಂಧವಿಲ್ಲ ಎನ್ನುತ್ತಾರೆ ಇಂತಹವರಿಂದ ಜಿಲ್ಲಾ ರಚನೆ ಸಾಧ್ಯವೇ ಇಲ್ಲ ಹೀಗಾಗಿ ಹೊಸದಾಗಿ ಜಿಲ್ಲಾ ಹೋರಾಟ ಸಮಿತಿ ರಚಿಸಬೇಕೆಂಬ ಕೂಗು ಕೇಳಿ ಸಹ ಸಾರ್ವಜನಿಕ ವಲಯದಿಂದ ಬಂದಿದೆ.

ಸಮಾಜ ಸೇವಕ ಚಂದ್ರಕಾಂತ ಹುಕ್ಕೇರಿ ಮಾತನಾಡಿ, ಜಿಲ್ಲಾ ರಚನೆ ವಿಷಯವಾಗಿ ಗೋಕಾಕ ಭಾಗದ ಜನರಿಗಿರುವ ಇಚ್ಛಾಶಕ್ತಿ ಚಿಕ್ಕೋಡಿ ಭಾಗದ ಜನರಿಗಿಲ್ಲ. ಸಮಾಜದ ಏಳು-ಬೀಳುಗಳಿಗೆ ಕೈಜೋಡಿಸಬೇಕಾದ ಸಂಘಟನೆಗಳೇ ಕೈಕಟ್ಟಿ ಕುಳಿತುಕೊಳ್ಳುವ ಪರಿಸ್ಥಿತಿ ಚಿಕ್ಕೋಡಿಯಲ್ಲಿ ನಿರ್ಮಾಣವಾಗಿದೆ. ಅಥಣಿ ಹಾಗೂ ರಾಯಬಾಗ ತಾಲೂಕಿನ ಜನ ತೊಂದರೆ ಅನುಭವಿಸುತ್ತಿದ್ದರೂ ಅಲ್ಲಿನ ಜನಪ್ರತಿನಿಧಿಗಳು ಈ ಬಗ್ಗೆ ಸೊಲ್ಲೆತ್ತದೇ ಸುಮ್ಮನೆ ಕುಳಿತಿರುವುದು ಅಚ್ಚರಿ ಮೂಡಿಸಿದೆ. ನಾನು ಏಕಾಂಗಿಯಾಗಿ ಪ್ರತಿಭಟನೆಗಿಳಿದ ಉದ್ದೇಶ ಜನರ ಅನುಕೂಲವೇ ಹೊರತು ನನ್ನದೇನು ಸ್ವಾರ್ಥವಿಲ್ಲ. ಸ್ವಾರ್ಥ ತುಂಬಿದ ಮನಸ್ಸುಗಳು ಸುಮ್ಮನಿವೆ ಎಂದು ಜನಪ್ರತಿನಿಧಿಗಳನ್ನು ಛೇಡಿಸಿದರು.

ಧರಣಿ ಬೆಂಬಲ ಸೂಚಿಸಿ ಕರಗಾಂವ ಏತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್‌.ಆರ್‌. ಪಾಟೀಲ ಮಾತನಾಡಿ, ಭೌಗೋಳಿಕವಾಗಿ ಅತಿದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ಜಿಲ್ಲೆ ವಿಭಜನೆ ಅನಿವಾರ್ಯ ಎಂಬುದು ಸರಕಾರಕ್ಕೂ ಗೊತ್ತಿರುವ ವಿಷಯವಾಗಿದೆ. ಆದರೆ ಸರಕಾರ ಕೆಲವರ ತಾಳಕ್ಕೆ ತಕ್ಕಂತೆ ಕುಣಿದು ಜಿಲ್ಲೆಯ ಜನರ ಹಿತಾಸಕ್ತಿ ಬಲಿಕೊಡಲು ಮುಂದಾಗಿದ್ದು, ಇದರಲ್ಲಿ ರಾಜಕೀಯ ಹೆಚ್ಚಿನ ಪಾತ್ರವಹಿಸಿದೆ ಎಂದು ಕಿಡಿಕಾರಿದರು. ಇನ್ನಾದರೂ ಸರಕಾರ ರಾಜ್ಯದ ಅತಿದೊಡ್ಡ ಜಿಲ್ಲೆಯ ವಿಭಜಿಸಿ ಜನರಿಗೆ ಸೂಕ್ತ ಸೌಲಭ್ಯ ಕಲ್ಪಿಸಿಕೊಡುವತ್ತ ಚಿಂತನೆ ನಡೆಸಬೇಕಾಗಿದೆ ಎಂದರು.

ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಸಂಜು ಬಡಿಗೇರ ಮಾತನಾಡಿ, ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ ನಿಷ್ಕ್ರೀಯವಾಗಿದ್ದು, ಸಮಿತಿ ವಿಸರ್ಜಿಸಿ ಹೊಸದಾಗಿ ಸಮಿತಿ ರಚನೆ ಮಾಡಬೇಕು. ಅಲ್ಲದೇ ರಾಜಕೀಯ ಪ್ರೇರೇಪಣೆಯಿಂದ ಪದೇ-ಪದೇ ಮುಂದೆ ಸಾಗುತ್ತಿರುವ ಜಿಲ್ಲಾ ರಚನೆಯ ವಿಷಯದಲ್ಲಿ ಸಂಘಟನೆಗಳಲ್ಲಿ ಸಾರ್ವಜನಿಕರು ಭಾಗವಹಿಸಬೇಕು. ಇದರಿಂದ ಮಾತ್ರ ಹೋರಾಟದಲ್ಲಿ ಯಶಸ್ವಿ ಕಾಣಲು ಸಾಧ್ಯವೆಂದರು.

ಪ್ರತಿಕ್ರಿಯೆ:

ಸಮಾಜದ ಏಳು-ಬೀಳುಗಳಿಗೆ ಕೈಜೋಡಿಸಬೇಕಾದ ಸಂಘಟನೆಗಳು ಹಾಗೂ ಜನಪ್ರತಿನಿಧಿಗಳು ಕೈಕಟ್ಟಿ ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ನಾನು ಏಕಾಂಗಿಯಾಗಿ ಪ್ರತಿಭಟನೆಗಿಳಿದ ಉದ್ದೇಶ ಜನರ ಅನುಕೂಲವೇ ಹೊರತು ನನ್ನದೇನು ಸ್ವಾರ್ಥವಿಲ್ಲ. ಸ್ವಾರ್ಥ ತುಂಬಿದ ಮನಸ್ಸುಗಳು ಸುಮ್ಮನಿವೆ.

ಚಂದ್ರಕಾಂತ ಹುಕ್ಕೇರಿ

ಸಮಾಜ ಸೇವಕ

ಪ್ರತಿಕ್ರಿಯೆ:

ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ ನಿಷ್ಕ್ರೀಯವಾಗಿದ್ದು, ಸಮಿತಿ ವಿಸರ್ಜಿಸಿ ಹೊಸದಾಗಿ ಸಮಿತಿ ರಚನೆ ಮಾಡಬೇಕು.

ಸಂಜು ಬಡಿಗೇರ

ಅಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆ

loading...

LEAVE A REPLY

Please enter your comment!
Please enter your name here