2 ರಾಜ್ಯ ಹೆದ್ದಾರಿಗಳು ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತನೆ

0
41
loading...

ಕನ್ನಡಮ್ಮ ಸುದ್ದಿ-ಕಾರವಾರ : ಕೇಂದ್ರ ಸರಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಇಲಾಖೆಯು ದೇಶದ 2266 ಕಿ.ಮೀ. ಉದ್ದದ ರಾಜ್ಯ ಹೆದ್ದಾರಿ ಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಉನ್ನತೀಕರಿಸಲು ತಾತ್ವಿಕ ಒಪ್ಪಿಗೆ ನೀಡಿದ್ದು, ಅದರಲ್ಲಿ ಜಿಲ್ಲೆಯಲ್ಲಿ ಎರಡು ರಾಜ್ಯ ಹೆದ್ದಾರಿಗಳು ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತನೆಗೊಳ್ಳಲಿದೆ.
ಜಿಲ್ಲೆಯ ಕಾರವಾರ – ಕೈಗಾ, ಮುಂಡಗೋಡ – ಸವಣೂರು, ಗದಗ – ಗಜೇಂದ್ರಗಡದ ವರೆಗಿನ 318 ಕಿ.ಮೀ. ಉದ್ದದ ರಾಜ್ಯ ಹೆದ್ದಾರಿ ಹಾಗೂ ದಾಂಡೇಲಿ – ಹಳಿಯಾಳ, ಧಾರವಾಡ – ಸೌದತ್ತಿ, ಮುದೋಳ – ಜಮಖಂಡಿ ವಿಜಯಪುರ ವರೆಗಿನ 270 ಕಿ.ಮೀ. ಉದ್ದದ ಎರಡು ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿ ಯನ್ನಾಗಿ ಉನ್ನತೀಕರಿಸಲು ಕೇಂದ್ರ ಸರಕಾರ ತಾತ್ವಿಕ ಒಪ್ಪಿಗೆ ನೀಡಿದೆ ಈ ಬಗ್ಗೆ ಈಗಾಗಲೇ ಸಂಬಂಧಪಟ್ಟ ರಾಜ್ಯದ ಇಲಾಖೆಯ ಅಧಿಕಾರಿಗಳಿಗೆ ಕೇಂದ್ರ ಸರಕಾರ ಮಾಹಿತಿ ನೀಡಿದ್ದು, ಮುಂದಿನ ದಿನಗಳಲ್ಲಿ ಸರ್ವೇ ಕಾರ್ಯ ಪ್ರಾರಂಭವಾಗಲಿದೆ.
ಕಳೆದ ವರ್ಷ ಕೇಂದ್ರ ಸರಕಾರವು ಜಿಲ್ಲೆಯ ರಾಮನಗರ – ಸದಾಶಿವಗಡ, ಖಾನಾಪುರ – ಯಲ್ಲಾಪುರ ಹಾಗೂ ಯಲ್ಲಾಪುರ – ಭಟ್ಕಳ (ವಾಯಾ – ಶಿರಸಿ – ಸಿದ್ದಾಪುರ – ತಾಳಗುಪ್ಪ) ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿಸಲು ಮಂಜೂರಾತಿ ನೀಡಿದ್ದು, ಅದರ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಡಿ.5 ರಂದು ಸಲ್ಲಿಕೆಯಾಗಲಿದೆ.
ಜಿಲ್ಲೆಯಲ್ಲಿ ಅದರಲ್ಲೂ ವಿಶೇಷವಾಗಿ ಕಾರವಾರ – ಕೈಗಾ ರಸ್ತೆಯನ್ನು ಅಗಲೀಕರಣ ಮಾಡಬೇಕೆಂಬ ಬೇಡಿಕೆ ಅನೇಕ ವರ್ಷಗಳಿಂದ ಕೇಳಿ ಬರುತ್ತಿದೆ. ದೇಶದ ಬಹುಮುಖ್ಯ ಯೋಜನೆಯಾದ ಕೈಗಾದ ಅಣು ವಿದ್ಯುತ್ ಸ್ಥಾವರಕ್ಕೆ ಜಿಲ್ಲಾ ಕೆಂದ್ರದಿಂದ ಸಂಪರ್ಕ ಸಾಧಿಸಲು ಸುಸಜ್ಜಿತ ರಸ್ತೆಯ ಅವಶ್ಯಕತೆಯನ್ನು ಈ ಮೊದಲೇ ಒಪ್ಪಿಕೊಳ್ಳಲಾಗಿದೆ. ಈ ರಸ್ತೆಯಲ್ಲಿಯೇ ಕೊಂಕಣ ರೇಲ್ವೆ ನಿಲ್ದಾಣ, ಕೈಗಾರಿಕಾ ಕೇಂದ್ರಗಳಿರುವುದರಿಂದ ರಸ್ತೆಯ ವಿಸ್ತಾರ ಅತ್ಯವಶ್ಯಕವಾಗಿದೆ. ಈಗ ಕೇಂದ್ರ ಸರಕಾರ ಕಾರವಾರ – ಗಜೇಂದ್ರಗಡ (ವಾಯಾ – ಕೈಗಾ) 318 ಕಿ.ಮೀ. ಅಗಲದ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿಸಲು ತಾತ್ವಿಕ ಪರವಾನಗಿ ನೀಡಿರುವುದು ಮುಂದಿನ ದಿನಗಳಲ್ಲಿ ಸಂಚಾರಕ್ಕೆ ಸುಸಜ್ಜಿತ ರಸ್ತೆಯ ಕನಸು ನನಸಾಗುವ ನಿರೀಕ್ಷೆ ಮೂಡಿಸಿದೆ. ಮುಂದಿನ ದಿನಗಳಲ್ಲಿ ಕಾರವಾರ – ಕೈಗಾ ರಸ್ತೆಯ ಸರ್ವೆ ಕಾರ್ಯ ಪ್ರಾರಂಭವಾಗಲಿದ್ದು, ಸದ್ಯದಲ್ಲಿಯೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಸಂಬಂಧಪಟ್ಟ ಗ್ರಾಮ ಪಂಚಾಯತಿಗಳಿಗೆ ರಸ್ತೆ ಅಕ್ಕ – ಪಕ್ಕದಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೆ ಪರವಾನಗಿ ನೀಡಲು ಓಊ ನಿಯಮಾವಳಿಯನ್ನು ಪಾಲಿಸಲು ಸೂಚನಾ ಪತ್ರ ರವಾನೆಯಾಗಲಿದೆ. ಸರ್ವೆ ಕಾರ್ಯದ ನಂತರ ರಾಷ್ಟ್ರೀಯ ಹೆದ್ದಾರಿಗಾಗಿ ಆಸ್ತಿ ಕಳೆದುಕೊಳ್ಳುವವರಿಗೆ ಕಾನೂನು ಬದ್ಧ ಪರಿಹಾರ ನೀಡುವ ಬಗ್ಗೆ ರೂಪುರೇಷೆ ನಿರ್ಧಾರಿತವಾಗಲಿದೆ.
ಈಗಾಗಲೇ ಕಾರವಾರ – ಕೈಗಾ ರಸ್ತೆ ಅಗಲೀಕರಣಕ್ಕೆ 2016-17ನೇ ಸಾಲಿನ ಕೇಂದ್ರ ರಸ್ತೆ ನಿಧಿಯಿಂದ 7 ಕೋಟಿ ರು. ಮಂಜೂರಾಗಿದೆ. ಕಿನ್ನರದ ಮಂದ್ರಾಳಿಯಿಂದ 5.5 ಮೀಟರ್ ಅಗಲದ ರಸ್ತೆ ಕಾಮಗಾರಿಯನ್ನು ಸದ್ಯದಲ್ಲಿಯೇ ಪ್ರಾರಂಭಿಸುವ ನಿರೀಕ್ಷೆಯಿದೆ.

loading...

LEAVE A REPLY

Please enter your comment!
Please enter your name here