ಕೃಷಿ ಮಹಿಳಾ ಸಬಲೀಕರಣ ಕುರಿತು ತರಬೇತಿ

0
67
loading...

ಬಾಗಲಕೋಟ : ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಾಗೂ ಧಾರವಾಡ ಕೃಷಿ ವಿಶ್ವವಿದ್ಯಾಲಯ, ಇವರ ಸಹಯೋಗದೊಂದಿಗೆ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಿಗೆ ‘ಕೃಷಿ ಮಹಿಳಾ ಸಬಲೀಕರಣ’ ಕುರಿತು ಇತ್ತೀಚೆಗೆ ತರಬೇತಿ ಜರುಗಿತು.

ರೈತರಿಗೆ ತಲುಪಿಸುವಂತಹ ವಿಷಯಗಳನ್ನು ತರಗತಿ, ಪ್ರಾತ್ಯಕ್ಷಿಕೆ ಹಾಗೂ ಕ್ಷೇತ್ರ ಭೇಟಿಗಳ ಮೂಲಕ ಈ ಅಧಿಕಾರಿಗಳಿಗೆ ತರಬೇತಿ ನೀಡಲಾಯಿತು. ವಿಶ್ವವಿದ್ಯಾಲಯದ ಆವರಣದಲ್ಲಿರುವ ಆದಾಯವೃದ್ಧಿಗಾಗಿ ತರಕಾರಿ ಬೆಳೆ ಹಾಗೂ ಪುಷ್ಪ ಕೃಷಿಯ ಬಗ್ಗೆ ವಿಶ್ವವಿದ್ಯಾಲಯದ ವಿಜ್ಞಾನಿಗಳಾದ ಡಾ. ವಸಂತ ಗಾಣಿಗೇರ ಹಾಗೂ ಡಾ. ಸತೀಶ ಪಾಟೀಲ ಪ್ರಾತ್ಯಕ್ಷಿಕೆಗಳ ಮೂಲಕ ಅವುಗಳ ಸಮಗ್ರ ವಿವರಣೆ ನೀಡಿದರು. ಅಲ್ಲದೆ ಕೊಯ್ಲೋತ್ತರ ತಂತ್ರಜ್ಞಾನ ವಿಭಾಗದಲ್ಲಿ ಸಂಸ್ಕರಣೆ, ಮೌಲ್ಯವರ್ಧನೆ ಕುರಿತಾಗಿ ಡಾ. ಭುವನೇಶ್ವರಿ ಹಾಗೂ ಡಾ. ದೀಪಾ ತೇರದಾಳ ಪ್ರಾಯೋಗಿಕವಾಗಿ ತರಬೇತಿ ನೀಡಿದರು.

ಎರಡನೆಯ ದಿನ ಶಿಬಿರಾರ್ಥಿಳಿಗೆ ಬೆಳಗಾವಿ ಜಿಲ್ಲೆಯ ರಾಮದುರ್ಗದ ಪ್ರಗತಿಪರ ರೈತ ಮಹಿಳೆ ಶ್ರೀಮತಿ ಅಶ್ವಿನಿ ಸರದೇಶಪಾಂಡೆಯವರ ತೋಟಕ್ಕೆ ಹೋಗಿ ಅಲ್ಲಿ ನೆಲ್ಲಿಕಾಯಿ, ನಿಂಬೆ ಹಾಗೂ ಚಿಕ್ಕು ಗಿಡಗಳ ಪ್ರಭೇದಗಳನ್ನು ತೋರಿಸಲಾಯಿತು. ನೆಲ್ಲಿಕಾಯಿಯ ಮೌಲ್ಯವರ್ಧನೆ ಮಾಡುವ ಅಶ್ವಿನಿಯವರು ಸ್ವತಃ ತಾವೇ ಮಾರಾಟ ಮಾಡುತ್ತಾರೆ. ನೆಲ್ಲಿಕಾಯಿ ಅಡಿಕೆ, ಉಪ್ಪಿನಕಾಯಿ, ಮರಬ್ಬ, ಜೂಸ್‌ ಮತ್ತೀತರ ಪದಾರ್ಥಗಳನ್ನು ಮಾಡಿ ಸಾಕಷ್ಟು ಆದಾಯ ಪಡೆಯುತ್ತಿದ್ದಾರೆ.

ನಂತರ ಬೆಳಗಾವಿಯ ಶ್ರೀಮತಿ ಆಶಾ ತೇಜಸ್ವಿ ನಾಯಕ ಅವರ ಹೊಲಕ್ಕೆ ಹೋಗಿ ಭೇಟಿ ನೀಡಿ ಅವರ ಹೊಲದಲ್ಲಿ ರೇಷ್ಮೆ ಸಾಕಾಣಿಕೆ, ಪುಷ್ಪ, ತರಕಾರಿ, ನೆಡುತೋಪು ಕೃಷಿಗಳ ಬಗ್ಗೆ ತಿಳಿದುಕೊಳ್ಳಲಾಯಿತು. ವಿಶೇಷವೆಂದರೆ ಈ ಎರಡೂ ಕ್ಷೇತ್ರಭೇಟಿಗಳು ಸಂಪೂರ್ಣವಾಗಿ ಸಾವಯವಕ್ಕೆ ಒಳಪಟ್ಟಿದ್ದು. ಎಲೆಕೋಸು, ಹೂಕೋಸು, ಬದನೆಗಳಂತಹ ಅವಶ್ಯವಾಗಿಯೇ ಬೇಕೆನಿಸಿದ ರಾಸಾಯನಿಕಗಳನ್ನು ತ್ಯಜಿಸಿ ಸಾವಯವಕ್ಕೆ ಒಳಪಡಿಸಿ ಇಳುವರಿಯನ್ನು ಪಡೆಯುತ್ತಿರುವುದು ವಿಶೇಷವಾಗಿತ್ತು. ಜೊತೆಗೆ ತಾವೇ ಮಾರಾಟ ಮಾಡುವುದು ಆದಾಯವೃದ್ಧಿಗಾಗಿ ಕಾರಣವಾಗಿದೆ.

ಆಶಾ ಅವರು ಬೊಕ್ಕೆ ತಯಾರಿಕೆಯಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿರುವುದರಿಂದ ಇಂದು ಅವರು ಬಿಡುವಿಲ್ಲದ ಹಾಗೂ ಆದಾಯಸಹಿತ ಕಾರ್ಯನಿರತರಾಗಿದ್ದಾರೆ. ಇಂತಹ ಪ್ರಾಯೋಗಿಕ ಭೇಟಿಗಳಿಂದ ಅಧಿಕಾರಿಗಳನ್ನು ಹೆಚ್ಚಿನ ಜ್ಞಾನವನ್ನು ಪಡೆದು ಅವೈಜ್ಞಾನಿಕ ಕೃಷಿಯನ್ನು ಮಾಡುತ್ತಿರುವ ರೈತರಿಗೆ ಜಾಗೃತಿ ಮೂಡಿಸುವಲ್ಲಿ ಕಾರ್ಯತತ್ಪರರಾಗಬೇಕು ಎಂಬುದು ವಿಸ್ತರಣಾ ನಿರ್ದೇಶಕರಾದ ಡಾ. ವೈ. ಕೆ. ಕೋಟಿಕಲ್‌ ಶಿಬಿರಾರ್ಥಿಗಳಿಗೆ ಸಮಾರೋಪದ ದಿನದಂದು ಕಿವಿಮಾತು ಹೇಳಿದರು. ಕು.ವಿಜಯಾ ಹೊಸಮನಿ, ಡಾ.ಶಶಿಕುಮಾರ, ಡಾ.ಮಹೇಶ.ವೈ.ಎಸ್‌, ಡಾ.ವಿಜಯಮಹಾಂತೇಶ, ಡಾ.ಉಮಾ ಅಕ್ಕಿ, ಡಾ.ಅಂಬರೀಶ ಹಾಗೂ ಸಿಬ್ಬಂದಿಯವರು ಈ ತರಬೇತಿಯಲ್ಲಿ ಪಾಲ್ಗೊಂಡಿದ್ದರು.

loading...

LEAVE A REPLY

Please enter your comment!
Please enter your name here