ವಿಶ್ವಕರ್ಮ ಸಮುದಾಯ ನಿಗಮದಿಂದ ಪಂಚ ವೃತ್ತಿಗಳ ಅಭಿವೃದ್ಧಿಗಾಗಿ ವಿಶೇಷ ಆದ್ಯತೆ

0
34
loading...

ಕನ್ನಡಮ್ಮ ಸುದ್ದಿ-ಗಂಗಾವತಿ : ಕರ್ನಾಟಕ ವಿಶ್ವಕರ್ಮ ಸಮುದಾಯಗಳ ನಿಗಮದಿಂದ ವಿಶ್ವಕರ್ಮ ಸಮುದಾಯಗಳ ಜನರ ಆರ್ಥಿಕ ಅಭಿವೃದ್ಧಿಗಾಗಿ ಅವರು ಕೈಗೊಳ್ಳುವ ಚಟುವಟಿಕೆಗಳಿಗೆ ಸಾಲ, ಸಹಾಯ ಧನದ ಸೌಲಭ್ಯ ಒದಗಿಸಲು ವಿಶೇಷ ಆದ್ಯತೆ ನೀಡಲಾಗಿದೆ ಎಂದು ಕರ್ನಾಟಕ ವಿಶ್ವಕರ್ಮ ಸಮುದಾಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಬಿ.ಪಿ ಸತ್ಯವತಿ ತಿಳಿಸಿದರು.
ಅವರು ನಗರದ ಹೊಸಳ್ಳಿ ರಸ್ತೆಯಲ್ಲಿರುವ ಶ್ರೀ ಗಾಯತ್ರಿ, ಮೌನೇಶ್ವರ, ವಿಶ್ವಕರ್ಮ ದೇವಸ್ಥಾನಕ್ಕೆ ಭೇಟಿ ನೀಡಿ ಸಮಾಜ ಬಾಂಧವರೊಂದಿಗೆ ಚರ್ಚಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ಸಮುದಾಯಕ್ಕೆ ಬರುವಂತಹ ಪಂಚ ವೃತ್ತಿಗಳ (ಚಿನ್ನ, ಬೆಳ್ಳೆ ಕೆಲಸ, ಶಿಲ್ಪಕಲೆ, ಲೋಹದ ಕೆಲಸ, ಮರಗೆಲಸ ಮತ್ತು ಯರಕಕೆಲಸ) ಅಭಿವೃದ್ಧಿಗಾಗಿ ಉಪಕರಣಗಳನ್ನು ಖರೀದಿಸಲು ತಾಂತ್ರಿಕತೆಯನ್ನು ಮೇಲ್ದರ್ಜೆಗೇರಿಸಲು ವಾರ್ಷಿಕ ಶೇಕಡಾ 4 ರಷ್ಟು ಬಡ್ಡಿದರದಲ್ಲಿ ಗರಿಷ್ಠ ರೂ. 40,000/- ಗಳ ವರೆಗೆ ಸಾಲ ಹಾಗೂ ರೂ. 10,000/- ಗಳ ವರೆಗೆ ಸಹಾಯಧನ ಮಂಜೂರು ಮಾಡಲಾಗುವುದು ಮತ್ತು ಸಣ್ಣ ಮತ್ತು ಅತೀಸಣ್ಣ ರೈತರ ಜಮೀನುಗಳಿಗೆ ಕೊಳವೆ ಬಾವಿ ಕೊರೆಯಿಸಿ, ಪಂಪ್‍ಸೆಟ್ ಮತ್ತು ಉಪಕರಣಗಳನ್ನು ಸರಬರಾಜು ಮಾಡಿ ವಿದ್ಯುತ್ ಸಂಪರ್ಕ ಕಲ್ಪಿಸಿ ನೀರಾವರಿ ಸೌಲಭ್ಯ ಒದಗಿಸಲಾಗುವುದು ಎಂದು ತಿಳಿಸಿದರು.
ಮಹಿಳೆಯರನ್ನು ಸಬಲೀಕರಣಗೊಳಿಸಲು ಮಹಿಳಾ ಸ್ವ ಸಹಾಯ ಗುಂಪುಗಳ ಮೂಲಕ ಮಹಿಳೆಯರು ಕೈಗೊಳ್ಳುವ ಆರ್ಥಿಕ ಚಟುವಟಿಕೆಗಳಿಗೆ ಅಂದರೆ ಅಗರಬತ್ತಿ ತಯಾರಿಕೆ, ರೆಡಿಮೇಡ್ ಗಾರ್ಮೇಂಟ್‍ಗಳು, ಡೈರಿ ವ್ಯಾಪಾರ ಇತ್ಯಾದಿ ಎಲ್ಲಾ ವ್ಯಾಪಾರ ಚಟುವಟಿಕೆಗಳಿಗೆ ಗರಿಷ್ಠ ರೂ.50,000/- ಗಳ ವರೆಗೆ ಸಾಲ ಮಂಜೂರು ಮಾಡಲಾಗುವುದು. ಸಮಾಜ ಬಾಂಧವರು ನಿಗಮದ ಸೌಲಭ್ಯವನ್ನು ಪಡೆಯಬಹುದು ಎಂದು ಕರ್ನಾಟಕ ವಿಶ್ವಕರ್ಮ ಸಮುದಾಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಬಿ.ಪಿ ಸತ್ಯವತಿ ತಿಳಿಸಿದರು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ರವಿಶಂಕರ ಪತ್ತಾರ್, ನಾಗಲಿಂಗಪ್ಪ ಪತ್ತಾರ್, ಸುಶೀಲಮ್ಮ ಅಂಬಣ್ಣ ಸರಾಫ್ ಮತ್ತು ಮಂಜುನಾಥ ಪತ್ತಾರ್, ಸುನೀಲ್‍ಕುಮಾರ, ವೆಂಕಟೇಶ ಆಚಾರ್, ಮಂಜುನಾಥ ಸರಾಫ್, ಕೃಷ್ಣಮೂರ್ತಿ ಪತ್ತಾರ್ ಇನ್ನೂ ಅನೇಕ ಮುಖಂಡರು ಉಪಸ್ಥಿತರಿದ್ದರು.

loading...