ಸದಾ ಮುಚ್ಚಿರುವ ಕರ್ಣಾಟಕ ಬ್ಯಾಂಕ್‌ ಎ.ಟಿ.ಎಮ್‌. : ಗ್ರಾಹಕರಿಗೆ ಪರದಾಟ

0
41
loading...

ಅಂಕೋಲಾ : ಕೆ.ಸಿ. ರಸ್ತೆಯಲ್ಲಿರುವ ಕರ್ಣಾಟಕ ಬ್ಯಾಂಕ್‌ ಎ.ಟಿ.ಎಮ್‌. ನವೆಂಬರ್‌ 8 ನಂತರ ಕಾರ್ಯನಿರ್ವಹಿಸದೆ ತನ್ನ ಬಾಗಿಲನ್ನು ಸದಾ ಮುಚ್ಚಿಟ್ಟು ಈ ಬ್ಯಾಂಕಿನ ವ್ಯವಹಾರವನ್ನೇ ನಂಬಿಕೊಂಡಿದ್ದ ಸಾವಿರಾರು ಗ್ರಾಹಕರು ಮತ್ತು ಇತರೆ ಬ್ಯಾಂಕಿನ ಗ್ರಾಹಕರ ಪಾಲಿಗೆ ಖಳನಾಯಕನಂತೆ ಆಗಿದ್ದು ಗ್ರಾಹಕರಿಗೆ ಸೂಕ್ತ ಸಮಯದಲ್ಲಿ ಹಣ ದೊರೆಯದೆ ಪರದಾಡುವಂತಾಗಿದೆ.
ತಾಲೂಕಿನಲ್ಲಿರುವ ಕರ್ಣಾಟಕ ಬ್ಯಾಂಕಿನ ಏಕೈಕ ಎ.ಟಿ.ಎಮ್‌. ಇದಾಗಿದ್ದು, ಪ್ರಧಾನಿ ಮೋದಿ ಆರಂಭಿಸಿದ ನೋಟು ಬದಲಾವಣೆಗೆ ಈವರೆಗೂ ಈ ಬ್ಯಾಂಕ್‌ ಹೊಂದಿಕೊಳ್ಳದಿರುವುದು ಬ್ಯಾಂಕನ ನಿರ್ಲಕ್ಷ್ಯ ಎಂದರೆ ತಪ್ಪಾಗಲಿಕ್ಕಿಲ್ಲ. ತಮ್ಮಲ್ಲಿ ಹೊಸ 2000 ಮತ್ತು 500ರ ನೋಟು ಹಾಕುವ ತಂತ್ರಜ್ಞಾನ ಇರದಿರುವುದು ಎ.ಟಿ.ಎಮ್‌. ಮುಚ್ಚಲು ಕಾರಣವೆನ್ನುವ ಬ್ಯಾಂಕ ಸಿಬ್ಬಂದಿಗಳು ಕನಿಷ್ಠ ಪಕ್ಷ ಚಲಾವಣೆಯಲ್ಲಿರುವ 100 ರೂಪಾಯಿ ನೋಟುಗಳನ್ನು ಸ್ವಲ್ಪ ಪ್ರಮಾಣದಲ್ಲಿಯಾದರೂ ಹಾಕಿ ತಮ್ಮ ಕರ್ತವ್ಯ ಪ್ರಜ್ಞೆ ತೋರಿಸಬೇಕಿತ್ತು. ತಮ್ಮ ಎ.ಟಿ.ಎಮ್‌.ಗಳಿಗೆ ಹಣ ತುಂಬುವ ವ್ಯವಸ್ಥೆಯನ್ನು ಬೇರೆ ಸೆಕ್ಯೂರಿಟಿ ಏಜೆನ್ಸಿಗಳಿಗೆ ವಹಿಸಲಾಗಿದೆ ಎನ್ನುವ ಬ್ಯಾಂಕನವರು ಮತ್ತು ಸರಿಯಾಗಿ ಕಾರ್ಯನಿರ್ವಹಿಸದ ಏಜೆನ್ಸಿಗಳು ಅಸಲಿ ನೋಟುಗಳನ್ನು ಕಮಿಶನ್‌ ಆಶೆಗೆ ಕಾಳಧನಿಕರಿಗೆ ನೀಡಿ ಗ್ರಾಹಕರಿಗೆ ಪರದಾಡುವಂತೆ ಮಾಡುತ್ತಿದ್ದಾರೆಯೇ ಎನ್ನುವ ಗುಮಾನಿ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ. ಪ್ರತಿ ದಿನ ಪಾಳಿ ಪ್ರಕಾರ ಕಾರ್ಯ ನಿರ್ವಹಿಸುವ ಎ.ಟಿ.ಎಂ. ಸಿಬ್ಬಂದಿಗಳು ತಮ್ಮಲ್ಲಿ ಬರುವ ಗ್ರಾಹಕರಿಂದ ಬೈಗುಳ ಕೇಳಿಸಿಕೊಳ್ಳುತ್ತಿದ್ದಾರೆ.
ಈ ಬ್ಯಾಂಕಿನ ಹೊಸ ಎ.ಟಿ.ಎಂ. ಕಾರ್ಡ ಪಡೆದ ಗ್ರಾಹಕರು ಮೊದಲ ಬಾರಿಗೆ ಇವರದೇ ಎ.ಟಿ.ಎಂ. ಯಂತ್ರದಲ್ಲಿ ಕಾರ್ಡ ಬಳಸುವುದು ಕಡ್ಡಾಯ. ಅದರ ನಂತರವಷ್ಟೇ ಬೇರೆ ಬ್ಯಾಂಕಿನ ಎ.ಟಿ.ಎಂ.ನಲ್ಲಿ ಕರ್ಣಾಟಕ ಬ್ಯಾಂಕ್‌ನ ಕಾರ್ಡ ಬಳಕೆಯಾಗುತ್ತದೆ. ಆದರೆ ಇವರ ಎ.ಟಿ.ಎಂ. ಸದಾ ಬಾಗಿಲು ಮುಚ್ಚಿರುವು ದರಿಂದ ಹೊಸ ಎ.ಟಿ.ಎಂ. ಕಾರ್ಡದಾರರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಸಂಬಂಧಿಸಿದವರು ಗ್ರಾಹಕರ ಹಿತ ರಕ್ಷಣೆ ಹಾಗೂ ಬದ್ಧತೆಯಿಂದ ಇನ್ನು ಮುಂದಾದರೂ ತಮ್ಮ ದೋಷವನ್ನು ಸರಿಪಡಿಸಿಕೊಂಡು ಎಂದಿನಂತೆ ಕಾರ್ಯನಿರ್ವಹಿಸುವಂತಾಗಲಿ ಎನ್ನುವುದು ಗ್ರಾಹಕರ ಆಶಯವಾಗಿದೆ.

loading...

LEAVE A REPLY

Please enter your comment!
Please enter your name here