ಸಾಮಾನ್ಯ ಸಭೆ: ತಾಲ್ಲೂಕು ಘೋಷಣೆಯಾಗದಿದ್ದರೆ ಸಾಮೂಹಿಕ ರಾಜೀನಾಮೆ

1
38
loading...

ನಿಡಗುಂದಿ: ಪಟ್ಟಣ ಪಂಚಾಯ್ತಿ ಅಧ್ಯಕ್ಷ ಸಂಗಮೇಶ ಬಳಿಗಾರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಎಲ್ಲಾ 16 ಜನ ಸದಸ್ಯರು ಭಾಗವಹಿಸಿ, ಪಟ್ಟಣದ ಅಭಿವೃದ್ಧಿ ಬಗ್ಗೆ ಚರ್ಚಿಸಿದರು.
ಜಗದೀಶ ಶೆಟ್ಟರ್‌ ಮುಖ್ಯಮಂತ್ರಿಯಾಗಿದ್ದಾಗ ಘೋಷಣೆಗಾಗಿದ್ದ 43 ತಾಲ್ಲೂಕುಗಳ ಪೈಕಿ ನಿಡಗುಂದಿ ಪಟ್ಟಣವೂ ಸೇರಿತ್ತು. ಆದರೆ ಸೋಮವಾರ ಕಂದಾಯ ಸಚಿವ ಕಾಗೋಡು ತಿಮ್ಮಪ್ಪನವರು ಕೇವಲ 33 ಪಟ್ಟಣಗಳನ್ನು ಮಾತ್ರ ತಾಲ್ಲೂಕು ಕೇಂದ್ರಗಳನ್ನಾಗಿ ಘೋಷಿಸಲು ಹೊರಟಿದೆ, ನಿಡಗುಂದಿ ಪಟ್ಟಣಕ್ಕೆ ತಾಲ್ಲೂಕು ಕೇಂದ್ರ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಲು ಪಟ್ಟಣ ಪಂಚಾಯ್ತಿಯ ಎಲ್ಲಾ ಸದಸ್ಯರು ಠರಾವು ಅಂಗೀಕರಿಸಿದರು. ಒಂದು ವೇಳೆ ತಾಲ್ಲೂಕು ಕೇಂದ್ರ ಘೋಷಣೆಯಾಗದಿದ್ದರೇ ಪಟ್ಟಣ ಪಂಚಾಯ್ತಿಯ ಎಲ್ಲಾ ಸದಸ್ಯರು ಸಾಮೂಹಿಕ ರಾಜೀನಾಮೆಗೂ ಸಿದ್ಧ ಎಂದು ಪಟ್ಟಣ ಪಂಚಾಯ್ತಿ ಸದಸ್ಯ ಸಂಗಮೇಶ ಕೆಂಭಾವಿ ಹೇಳಿದರು. ಅದಕ್ಕೆ ಎಲ್ಲಾ ಸದಸ್ಯರು ಒಪ್ಪಿಗೆ ಸೂಚಿಸಿದರು.
ಪಟ್ಟಣದಲ್ಲಿ ಗಲೀಜು ನೀರು ಪೂರೈಕೆಯಾಗುತ್ತಿದೆ ಎಂದು ತಮ್ಮ ಬಡಾವಣೆಯಲ್ಲಿ ಪೂರೈಕೆಯಾದ ನೀರನ್ನು ಬಾಟಲಿಯಲ್ಲಿ ತಂದು ತೋರಿಸಿ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ಸದಸ್ಯರಾದ ಅನ್ನಪೂರ್ಣ ಉಳ್ಳಿ, ಶೇಖರ ದೊಡಮನಿ, ಸುಮಾ ಕುಂಬಾರ, ಪಟ್ಟಣದಲ್ಲಿ ಹಲವು ದಿನಗಳಿಂದ ನದಿಯಿಂದ ಪೂರೈಕೆಯಾಗುವ ನೀರು ಶುದ್ಧ ಮಾಡದೆ ನೇರವಾಗಿ ಪೂರೈಕೆಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಉತ್ತರಿಸಿದ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ವಸಂತ ಪವಾರ ಮೊದಲಾದವರು, ಕಾಮಗಾರಿಗೆ ಫಿಲ್ಟರ್‌ ಉಸುಕಿನ ಕೊರತೆ ಎದುರಾಗಿತ್ತು, ಅದು ಸದ್ಯ ನಿವಾರಣೆಯಾಗಿದ್ದು, ಇದೇ ತಿಂಗಳಾಂತ್ಯಕ್ಕೆ ನದಿಯಿಂದ ಬಂದ ನೀರನ್ನು ಶುದ್ಧೀಕರಣ ಘಟಕದ ಮೂಲಕ ಶುದ್ದೀಕಣರಗೊಂಡು ಪೂರೈಸಲಾಗುವುದು ಎಂದು ಭರವಸೆ ನೀಡಿದರು.
ಆಕ್ರಮ ನಿವೇಶನ ಹಂಚಿಕೆ ತನಿಖೆಗೆ:
ಲಕ್ಕವ್ವನ ಕೆರೆಯ ಹತ್ತಿರ ಸುಮಾರು 30 ಕ್ಕೂ ಹೆಚ್ಚು ಜನರಿಗೆ 10 ವರ್ಷಗಳ ಹಿಂದೆ ಇದ್ದ ಗ್ರಾಮ ಪಂಚಾಯ್ತಿ ಆಡಳಿತದ ಕೆಲವರು ಕೈಬರಹದ ಉತಾರಿ ನೀಡಿ ನಿವೇಶನವನ್ನು ಕುಂಚಿಕೊರವರಾದ ನಮಗೆ ನೀಡಲಾಗಿದೆ, ನಮಗೆ ಸದ್ಯ ಗಣಕಯಂತ್ರದ ಉತಾರಿ ನೀಡಲು ಸತಾಯಿಸಲಾಗುತ್ತದೆ ಎಂದು ನಿವೇಶನ ಪಡೆದ ಬಡ 30 ಕ್ಕೂ ಹೆಚ್ಚು ಕುಂಚಿಕೊರವರು ಸಾಮಾನ್ಯ ಸಭೆಗೆ ಆಗಮಿಸಿ ಕೈ ಮುಗಿದು ವಿನಂತಿಸಿಕೊಂಡರು.
ಮುಖ್ಯಾಧಿಕಾರಿ ವಸಂತ ಪವಾರ ಮಾತನಾಡಿ, ಇವರಿಗೆ ಹಂಚಿಕೆಯಾದ ನಿವೇಶನದ ಬಗ್ಗೆ ಯಾವುದೇ ದಾಖಲೆಯಿಲ್ಲ, ಹೀಗಾಗಿ ಉತಾರಿ ನೀಡಲು ಸಾಧ್ಯವಾಗುತ್ತಿಲ್ಲ ಎಂದರು. ಯಾವ ಆಡಳಿತವಿದ್ದಾಗ ಕೈಬರಹದ ಉತಾರಿ ನೀಡಲಾಗಿದೆ ಎಂಬಿತ್ಯಾದಿಯನ್ನು ಅಂಶಗಳ ಬಗ್ಗೆ ಕುಲಂಕೂಷ ತನಿಖೆ ನಡೆಸಬೇಕು ಎಂದು ಕೆಲ ಸದಸ್ಯರು ಒತ್ತಾಯಿಸಿದರು.
ಪಟ್ಟಣದ ಲಕ್ಕವ್ವನ ಕೆರೆ, ಗುಂಡಿನಬಾವಿ ಕೆರೆ, ಹುಡೇದ ಕೆರೆಗಳ ಜೀಣೋದ್ಧಾರ ಮಾಡಿ ಅವುಗಳನ್ನು ನದಿಯಿಂದ ತುಂಬಿಸುವ ಬಗ್ಗೆ ಚರ್ಚಿಸಲಾಯಿತು. ಪಟ್ಟಣದಲ್ಲಿರುವ ಪಂಚಾಯ್ತಿ 70 ನಿವೇಶನ ಆಸ್ತಿಗಳನ್ನು ಪಂಚಾಯ್ತಿ ವ್ಯಾಪ್ತಿಗೆ ಪಡೆದು ಕೆಲವೆಡೆ ಉದ್ಯಾನ ನಿರ್ಮಿಸಲು ತೀರ್ಮಾನಿಸಲಾಯಿತು.
ಶತಮಾನ ಕಂಡ ನಿಡಗುಂದಿಯ ಮಾದರಿ ಪ್ರಾಥಮಿಕ ಶಾಲೆಯ ಜೀರ್ಣೋದ್ಧಾರಕ್ಕೆ ಶಾಸಕ ಶಿವಾನಂದ ಪಾಟೀಲ 20 ಲಕ್ಷ ರೂ ಬಿಡುಗಡೆ ಮಾಡಿದ್ದು, ಪಂಚಾಯ್ತಿಯಿಂದ ಅಲ್ಲಿ ಸುಂದರ ಉದ್ಯಾನ ಹಾಗೂ ಶಾಲಾ ಆವರಣದೊಳಗೆ ಪ್ರಾಣಿಗಳು ಬಾರದಂತೆ ಕ್ರಮ ಕೈಗೊಳ್ಳಲು ಕ್ರೀಯಾಯೋಜನೆ ರೂಪಿಸಲು ಸದಸ್ಯ ಸಂಗಮೇಶ ಕೆಂಭಾವಿ ಒತ್ತಾಯಿಸಿದರು. ಅದಕ್ಕೆ ಎಲ್ಲಾ ಸದಸ್ಯರು ಒಮ್ಮತ ಸೂಚಿಸಿದರು.
ಪಟ್ಟಣದ ಆಯಕಟ್ಟಿನ ಸ್ಥಳಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲು ನಿರ್ಧರಿಸಲಾಯಿತು. ಹಳೆ ಬಸ್‌ನಿಲ್ದಾಣದ ಹತ್ತಿರ ದೋಬಿ ಘಾಟ್‌ ನಿರ್ಮಿಸಿ ಅದಕ್ಕೆ ನೀರು ಪೂರೈಸಬೇಕೆಂದು ಸದಸ್ಯ ಶಂಕರ ರೇವಡಿ ಆಗ್ರಹಿಸಿದರು.
ಪಟ್ಟಣ ಪಂಚಾಯ್ತಿ ಉಪಾಧ್ಯಕ್ಷೆ ಅನ್ನಪೂರ್ಣ ವಡವಡಗಿ ಸೇರಿದಂತೆ ಸದಸ್ಯರು ಇದ್ದರು.

loading...

1 COMMENT

LEAVE A REPLY

Please enter your comment!
Please enter your name here