ಸ್ಪರ್ಧಾತ್ಮಕ ಪರೀಕ್ಷೆಗಳೆ ಪೂರ್ವ ತಯಾರಿ ಅವಶ್ಯಕ

0
52
loading...

ಕನ್ನಡಮ್ಮ ಸುದ್ದಿ-ಚನ್ನಮ್ಮನ ಕಿತ್ತೂರ: ಪಟ್ಟಣದ ಕಿನಾವಿವ ಸಂಘದ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಹಾಗೂ ಧಾರವಾಡದ ಗುರುದೇವ ಐಎಎಸ್‌ ಕೆಎಎಸ್‌ ತರಬೇತಿ ಕೇಂದ್ರ ಆಶ್ರಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ಕುರಿತು ಒಂದು ದಿನದ ಉಚಿತ ಕಾರ್ಯಾಗಾರವನ್ನು ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಮಾತನಾಡಿದ ಮಹೇಶ ಪತ್ರಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕಾಲಾವಕಾಶ ಬಹಳ ಕಡಿಮೆಯಿದ್ದು, ಪದವಿ ವರ್ಗಗಳ ಜೊತೆಗೆ ಸ್ಫರ್ಧಾತ್ಮಕ ಪರೀಕ್ಷೆಗಳ ತಯಾರಿ ಮಾಡಿಕೊಳ್ಳವುದರಿಂದ ಹೆಚ್ಚು ಅಂಕಗಳನ್ನು ಗಳಿಸಲು ಸಾಧ್ಯ. ಸ್ಪರ್ಧಾತ್ಮಕ ಪರೀಕ್ಷೆಗಳು ಪ್ರಾಥಮಿಕ ಪ್ರೌಢ ಹಾಗೂ ಪದವಿಯಲ್ಲಿ ನಾವು ಓದಿದ ವಿಷಯಗಳೇ ಹೆಚ್ಚಾಗಿರುವುದರಿಂದ ಕೆಪಿಎಸ್‌ಸಿ ಮತ್ತು ಯುಪಿಎಸ್‌ಸಿ ಪರೀಕ್ಷೆಗಳನ್ನು ಎದುರಿಸಲು ನಮ್ಮ ಗ್ರಾಮೀಣ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಪ್ರಸ್ತುತವಾಗಿ ನಮ್ಮ ಮಾತೃಭಾಷೆಯಲ್ಲಿಯೇ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಅವಕಾಶವಿರುವುದರಿಂದ ಗ್ರಾಮೀಣ ಪ್ರದೇಶದ ಜನರಿಗೂ ಸಹ ಹೆಚ್ಚಿನ ಅವಕಾಶಗಳಿವೆ. ಪ್ರಚಲಿತ ವಿದ್ಯಮಾನಗಳು ಹಾಗೂ ವೃತ್ತಪತ್ರಿಕೆಗಳು ಹಾಗೂ ದಿನಪತ್ರಿಕೆಗಳನ್ನು ಪ್ರತಿನಿತ್ಯ ಓದುವ ಹವ್ಯಾಸ ಬೆಳೆಸಿಕೊಳ್ಳುವುದರಿಂದ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಬಹುದು ಎಂದು ಹೇಳಿದರು.
ಮಂಜುನಾಥ ಮಾತನಾಡಿ ನಮ್ಮ ತಯಾರಿಯ ಜೊತೆಗೆ ನಮಗೆ ಉತ್ತಮ ಮಾರ್ಗದರ್ಶನದ ಅವಶ್ಯಕತೆಯು ಅಷ್ಟೇ ಅಗತ್ಯ. ಇಂದಿನ ಸ್ಪರ್ಧಾ ಜಗತ್ತಿನಲ್ಲಿ ನಮಗೆ ಅವಶ್ಯವಿರುವ ಎಲ್ಲ ಸೌಲಭ್ಯಗಳಿರುವ ತರಬೇತಿ ಕೇಂದ್ರಗಳಲ್ಲಿ ತರಬೇತಿಯನ್ನು ಪಡೆಯಬೇಕೆಂದು ಹೇಳಿದರು. ಸುಮಿತ್ರಾ ಲಿಂಗದಳ್ಳಿ ಹಾಗೂ ಅಕ್ಷತಾ ಪತ್ತಾರ ತಮ್ಮ ಅನುಭವಗಳನ್ನು ತಿಳಿಸಿ ಈ ರೀತಿಯ ಕಾರ್ಯಾಗಾರವನ್ನು ಹಮ್ಮಿಕೊಳ್ಳುವುದರಿಂದ ನಮ್ಮಲ್ಲಿ ಆತ್ಮಸ್ಥೈರ್ಯ ಮೂಡುತ್ತದೆ ಎಂದು ತಿಳಿಸಿದರು. ಅಧ್ಯಕ್ಷತೆಯನ್ನು ಅರ್ಥಶಾಸ್ತ್ರ ವಿಭಾಗದ ಹಿರಿಯ ಉಪನ್ಯಾಸಕಿ ರತ್ನಾ ಎನ್‌. ಶೆಟ್ಟರ ವಹಿಸಿ ಮಾತನಾಡಿ, ಗ್ರಾಮೀಣ ವಿದ್ಯಾರ್ಥಿಗಳಿಗೆ ಈ ರೀತಿ ಉಚಿತ ಕಾರ್ಯಾಗಾರವನ್ನು ಹಮ್ಮಿಕೊಳ್ಳುವುದರಿಂದ ನಮ್ಮ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಮಾಹಿತಿ ದೊರೆಯುತ್ತದೆ ಎಂದು ಹೇಳಿದರು. ಪ್ರಾಸ್ತಾವಿಕವಾಗಿ ಪ್ರೊ. ಎಸ್‌.ಎಸ್‌.ಬಿರಾದಾರಪಾಟೀಲ ಮಾತನಾಡಿದರು.
ಈ ಸಂದರ್ಭದಲ್ಲಿ ಪ್ರೊ. ಪಿ.ಬಿ.ಹೊನ್ನಪ್ಪನವರ ಸ್ವಾಗತಿಸಿದರು, ಗಾಯತ್ರಿ ಸಾಳೊಂಖೆ ಅತಿಥಿಗಳನ್ನು ಪರಿಚಯಿಸಿದರು, ಪ್ರೊ. ಅರ್‌.ಬಿ.ಹಾವಿನಾಳೆ ವಂದಿಸಿದರು. ಉದ್ಯೋಗಮಾಹಿತಿ ಅಧಿಕಾರಿ ಡಾ. ಕೆ.ಎನ್‌.ನರಹರಿ ಕಾರ್ಯಕ್ರಮ ನಿರೂಪಿಸಿದರು.

loading...

LEAVE A REPLY

Please enter your comment!
Please enter your name here