ಏತ ನೀರಾವರಿ ಯೋಜನೆ ಕಾಮಗಾರಿಗೆ ಚಾಲನೆ

0
37
loading...

ಕನ್ನಡಮ್ಮ ಸುದ್ದಿ-ಮುಂಡರಗಿ : ರಾಜ್ಯ ಸರ್ಕಾರದಿಂದ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ಹಲವಾರು ಯೋಜನೆಗಳನ್ನು ಜಾರಿ ತರಲಾಗಿದ್ದು ಅವುಗಳನ್ನು ರೈತರು ಸದುಪಯೋಗ ಪಡೆದುಕೊಳ್ಳುವುದರ ಮೂಲಕ ಆರ್ಥಿಕತೆಯಲ್ಲಿ ಸಬಲರಾಗಬೇಕು ಎಂದು ಶಾಸಕ ರಾಮಕೃಷ್ಣ ದೊಡ್ಡಮನಿ ಹೇಳಿದರು.
ತಾಲೂಕಿನ ಶಿಂಗಟಾಲೂರ ಗ್ರಾಮದಲ್ಲಿ ಸಿಂಗಟಾಲೂರ ಏತ ನೀರಾವರಿ ಯೋಜನೆಯ ಎಸ್‍ಸಿಪಿ ಎಸ್‍ಡಿಪಿ ಯೋಜನೆಯಡಿಯಲ್ಲಿ ಎಸ್ಸಿಎಸ್ಟಿ ಜನಾಂಗದವರ ಜಮೀನುಗಳಿಗೆ ಬೋರ್‍ವೆಲ್ ಮೂಲಕ ನೀರಾವರಿ ಸೌಲಭ್ಯ ಕಲ್ಪಿಸುವ ಕಾಮಗಾರಿಗೆ ಶನಿವಾರ ಸಂಜೆ ಚಾಲನೆ ನೀಡಿ ಅವರು ಮಾತನಾಡಿದರು.
ಸರ್ಕಾರದಿಂದ ಆಯ್ಕೆ ಮಾಡಲಾದ ರೈತನ ಜಮೀನಿನಲ್ಲಿ 8 ಲಕ್ಷ ರೂ.ವೆಚ್ಚದಲ್ಲಿ ಬೋರ್‍ವೆಲ್ ಹಾಕಿಸಿ ಆ ಬೋರ್‍ವೆಲ್ ಮೂಲಕ ನೀರಾವರಿ ಸೌಲಭ್ಯ ಕಲ್ಪಿಸಲಾಗುತ್ತದೆ. ಸಿಂಗಟಾಲೂರ 3, ಹಮ್ಮಿಗಿ 2, ಕೊರ್ಲಹಳ್ಳಿ 2 ರೈತ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದ್ದು, ಬರುವ ದಿನಗಳಲ್ಲಿ ಹಂತ ಹಂತವಾಗಿ ಎಲ್ಲ ರೈತರ ಜಮೀನುಗಳಿಗೆ ಈ ಯೋಜನೆ ಕಲ್ಪಿಸಲಾಗುತ್ತದೆ ಎಂದು ತಿಳಿಸಿದರು.
ನೀರಾವರಿ ಯೋಜನೆಯಲ್ಲಿ 28, ಅಂಬೇಡ್ಕರ್ ನಿಗಮದಲ್ಲಿ 65, ದೇವರಾಜ ಅರಸು ನಿಗಮದಲ್ಲಿ 12, ಅಲ್ಪಸಂಖ್ಯಾತ ನಿಗಮದಲ್ಲಿ 36 ರೈತ ಫಲಾನುಭವಿಗಳನ್ನು ಆಯ್ಕೆ ಮಾಡಿ ಜಮೀನುಗಳಿಗೆ ಬೋರ್‍ವೆಲ್ ಕಲ್ಪಿಸುವಂತೆ ಸರ್ಕಾರಕ್ಕೆ ಈಗಾಗಲೇ ವರದಿ ಸಲ್ಲಿಸಲಾಗಿದೆ. ಶೀಘ್ರದಲ್ಲೇ ಆ ಕಾಮಗಾರಿಗಳಿಗೂ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ಶಿಂಗಟಾಲೂರ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ ಮುಂಡವಾಡ, ತಾಲೂಕು ಪಂಚಾಯಿತಿ ಸದಸ್ಯ ರುದ್ರಗೌಡ ಪಾಟೀಲ, ಎ.ವೈ.ನವಲಗುಂದ, ಮೌಲಾಸಾಬ ಕೊಂಬಳಿ, ದಂಡೆವ್ವ ಮಾದರ, ದಂಡೆಪ್ಪ ಹರಿಜನ, ಸಿಂಗಟಾಲೂರ ಏತ ನೀರಾವರಿ ಎಇಇ ಎಚ್.ಟಿ.ವಾಲಿಕಾರ, ರೈತ ಫಲಾನುಭವಿ ಹನಮಪ್ಪ ಮಾದರ ಸೇರಿದಂತೆ ಇನ್ನಿತರಿದ್ದರು.

loading...