ಕೃಷಿ ಕ್ಷೇತ್ರಕ್ಕೆ ಸರ್ಕಾರ ಸಹಾಯ ಧನ ಕಡಿಮೆ ನೀಡುತ್ತಿದೆ: ಕುಲಪತಿ ಮಹೇಶ್ವರ

0
27
loading...

ಕನ್ನಡಮ್ಮ ಸುದ್ದಿ
ಬೆಳಗಾವಿ: ಭಾರತದಲ್ಲಿ ಕೃಷಿ ಚಟುವಟಿಕೆಗಳಿಗಾಗಿ ಸರ್ಕಾರ ನೀಡುತ್ತಿರುವ ಸಹಾಯಧನವು ಇತರೆ ದೇಶಗಳಿಗೆ ಹೋಲಿಸಿದರೆ ತೀರಾ ಕಡಿಮೆ ಇದೆ ಎಂದು ತೋಟಗಾರಿಕಾ ವಿಶ್ವವಿದ್ಯಾಲಯ ಕುಲಪತಿಗಳು ಡಿ.ಎಲ್. ಮಹೇಶ್ವರ ಹೇಳಿದರು.
ಶುಕ್ರವಾರ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಅಧ್ಯಯನ ವಿಭಾಗವು ಆಯೋಜಿಸಿದ್ದ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕೀರಣದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳ ಭಾಷಣದಲ್ಲಿ ಭಾರತದಲ್ಲಿ ಸಮಗ್ರ ಕೃಷಿ ಬೆಳವಣಿಗೆ: ಸಮಸ್ಯೆಗಳು ಮತ್ತು ಸವಾಲುಗಳು ಎಂಬ ವಿಷಯ ಕುರಿತು ಉಪನ್ಯಾಸ ನೀಡಿದರು.
ಇತ್ತೀಚಿಗೆ ಸಂಭವಿಸುತ್ತಿರುವ ಅನಾವೃಷ್ಠಿಯಿಂದಾಗಿ ಭಾರತ ಮತ್ತು ಕರ್ನಾಟಕದ ಹಲವಾರು ಪ್ರದೇಶಗಳು ಬರಪೀಡಿತವಾಗಿವೆ ಇಂತಹ ಸನ್ನೀವೇಶದಲ್ಲಿ ಮಳೆಯಾಶ್ರಿತ ಕೃಷಿಯಿಂದ ಸಮಗ್ರ ಹಾಗೂ ಸಂತುಲಿತ ಕೃಷಿ ಅಭಿವೃದ್ಧಿಯನ್ನು ಮನಗಾಣುವುದು ಕನಸಿನ ಮಾತಾಗಿದೆ ಆದರೆ ಕೃಷಿಯ ಎಲ್ಲ ಚಟುವಟಿಕೆಗಳನ್ನು ಪುನರ್ ಸಂಘಟಿಸಿ ವ್ಯವಸಾಯ ಕೈಗೊಂಡರೆ ಸಮಗ್ರ ಒಳಗೊಳ್ಳುವ ಕೃಷಿ ಬೆಳವಣಿಗೆಯು ಸಾಧ್ಯವಾಗುತ್ತದೆ.
ಹಾಗೆಯೇ ಅಧುನಿಕ ದಿನಗಳಲ್ಲಿ ವಿವಿಧ ಪೌಷ್ಠಿಕಾಂಶಗಳಿಂದ ಕೂಡಿದ ಆಹಾರಗಳನ್ನು ತಂತ್ರಜ್ಞಾನದ ಮೂಲಕ ಅಭಿವೃದ್ಧಿ ಪಡಿಸಬೇಕೆಂಬುದು ಜನರ ಹೆಬ್ಬಯಕೆ ಇದರಿಂದಾಗಿ ಹೆಚ್ಚುತ್ತಿರುವ ಜನಸಂಖ್ಯೆಗೆ ಅಗತ್ಯ ಆಹಾರ ಪೂರೈಕೆಯಾಗುತ್ತದೆಂಬುದು ಸಾಮಾನ್ಯರ ನಂಬಿಕೆ. ಆದರೆ ಇಂತಹ ಪೌಷ್ಠಿಕಾಂಶವುಳ್ಳ ಆಹಾರಗಳಿಂದ ಉತ್ತಮ ಆಹಾರ ಮತ್ತು ಆರೋಗ್ಯವನ್ನು ಗಳಿಸಲು ಸಾಧ್ಯವಿಲ್ಲ ಆದ್ದರಿಂದ ಪ್ರಕೃತಿಯ ಒಡನಾಟದೊಡನೆ ಬೆಳೆಯುವ ಆಹಾರ ಪದ್ಧತಿಯೇ ಶ್ರೇಷ್ಠ ಹಾಗೂ ಆರೋಗ್ಯದಾಯಕವೆಂದು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಶಿವಾನಂದ ಬಿ. ಹೊಸಮನಿ ಮಾತನಾಡಿ, ಕೃಷಿಯನ್ನು ಕೈಗಾರಿಕಾ ಮಾದರಿಯಲ್ಲಿ ನವೀನ ತಂತ್ರಜ್ಞಾನಗಳನ್ನು ಬಳಸಿಕೊಂಡು ಅಭಿವೃದ್ಧಿ ಪಡಿಸಬೇಕಾದ ಅಗತ್ಯತೆಯಿದೆ. ಏಕೆಂದರೆ ವ್ಯವಸಾಯಗಾರನು ಸಹ ಒಬ್ಬ ವ್ಯವಸ್ಥಾಪಕನ ರೀತಿಯಲ್ಲಿ ಕೃಷಿ ಉದ್ಯಮವನ್ನು ಬೆಳಸಿದ್ದಲ್ಲಿ ಮಾತ್ರ ಕೃಷಿಯ ಸುಸ್ಥಿರ ಅಭಿವೃದ್ಧಿ ಸಾಧ್ಯ. ಹಾಗೆಯೇ ಉತ್ಪಾದನಾ ಆಧಾರಿತ ಕೃಷಿಗೆ ಬದಲಾಗಿ ಮಾರುಕಟ್ಟೆ ಆಧಾರಿತ ಕೃಷಿಯನ್ನು ಅವಲಂಬಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ವಿಚಾರ ಸಂಕೀರಣದ ಜಂಟಿ ಸಂಘಟನಾ ಕಾರ್ಯದರ್ಶಿ ಡಾ. ಕಿರಣಕುಮಾರ ಅತಿಥಿಗಳ ಪರಿಚಯ ಹಾಗೂ ಸ್ವಾಗತ ಭಾಷಣವನ್ನು ನಡೆಸಿಕೊಟ್ಟರು. ಡಾ. ಹುಚ್ಚೇಗೌಡ ವಂದಿಸಿದರು. ರಾಘವೇಂದ್ರ ಹಜಗೋಳಕರ ನಿರೂಪಿಸಿದರು.
ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ರೈ ಟೆಕ್ನಾಲಜಿ ವಿಶ್ವವಿದ್ಯಾಲಯ ಕುಲಪತಿಗಳು, ಬೆಂಗಳೂರು, ಪ್ರೊ. ರೂಪಾ ವಾಸುದೇವನ್, ತೋಟಗಾರಿಕಾ ವಿಶ್ವವಿದ್ಯಾಲಯ ವಿಶೇಷಾಧಿಕಾರಿ ಡಾ. ಅಶೋಕ ಆಲೂರ, ವ್ಯವಹಾರ ನಿರ್ವಹಣೆ ಮತ್ತು ಅರ್ಥಶಾಸ್ತ್ರ ನಿಕಾಯದ ನಿರ್ದೇಶಕ ಪ್ರೊ. ತಳವಾರ ಸಾಬಣ್ಣಾ, ಪ್ರಾಧ್ಯಾಪಕಿ ಪ್ರೊ. ಮುಕ್ತಾ ಎಸ್. ಆದಿಯವರು ವಿಭಾಗದ ಮುಖ್ಯಸ್ಥರಾದ ಡಿ.ಎನ್. ಪಾಟೀಲ, ಶೀಲಾ ಭಂಡಾರಕರ, ವ್ಯವಸ್ಥಾಪಕರು, ನಬಾರ್ಡ ಧಾರವಾಡ ಇವರು ಹಾಜರಿದ್ದರು. ಭಾರತದ ವಿವಿಧ ರಾಜ್ಯಗಳಿಂದ ಆಗಮಿಸಿದ ನೂರಕ್ಕೂ ಅಧಿಕ ಸಂಖ್ಯೆಯ ಪ್ರತಿನಿಧಿಗಳು, ವಿಶ್ವವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. ಈ ಸಂದರ್ಭದಲ್ಲಿ ಎರಡು ದಿನಗಳು ನಡೆದ ವಿವಿಧ ಗೋಷ್ಠಿಗಳ ವರದಿಯನ್ನು ಸಂಶೋಧನಾ ವಿದ್ಯಾರ್ಥಿಯಾದ ನಂದನ ಕಟಾಂಬಳೆ ಮಂಡಿಸಿದರು.

loading...