ಸಾಮೂಹಿಕ ವಿವಾಹಗಳಿಂದ ದುಂದುವೆಚ್ಚಗಳಿಗೆ ಕಡಿವಾಣ: ಶ್ರೀಗಳು

0
29
loading...

ಗಂಗಾವತಿ(ಕಾರಟಗಿ) : ಸರಳ ಹಾಗೂ ದೇವಸ್ಥಾನಗಳಲ್ಲಿ ನಡೆಯುವ ಸಾಮೂಹಿಕ ವಿವಾಹಗಳಿಂದ ದುಂದುವೆಚ್ಚಗಳಿಗೆ ಕಡಿವಾಣ ಹಾಕಬಹುದಾಗಿದೆ ಎಂದು ಹೆಬ್ಬಾಳದ ಶ್ರೀ ನಾಗಭೂಷಣ ಶಿವಾಚಾರ್ಯ ಸ್ವಾಮೀಜಿಗಳು ಅಭಿಪ್ರಾಯಪಟ್ಟರು.
ಅವರು ಮಂಗಳವಾರ ಕಾರಟಗಿ ಸಮೀಪದ ಮರ್ಲಾನಹಳ್ಳಿ ಗ್ರಾಮದ ಶ್ರೀನಿವಾಸ ದೇವಸ್ಥಾನದ ಆವರಣದ ಶ್ರೀ ತಿರುಮಲಾ ವೇದಿಕೆಯಲ್ಲಿ ಶ್ರೀನಿವಾಸ ಸೇವಾ ಟ್ರಸ್ಟ್ ಹಮ್ಮಿಕೊಂಡಿದ್ದ 31ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ನೂತನ ವಧು-ವರರಿಗೆ ಆರ್ಶೀವಚನ ನೀಡಿ ಮಾತನಾಡಿದರು.
ಬಡವರು ತಮ್ಮ ಮಕ್ಕಳಿಗೆ ಮದುವೆ ಮಾಡಿಸಲು ಹರಸಾಹಸಪಡಬೇಕಾದ ಪರಿಸ್ಥಿತಿ ಇದೆ ಆದರೆ, ಇಂತಹ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮಗಳು ಬಡವರ ಪಾಲಿನ ಸಂಜೀವಿನಿಗಳಾಗಿವೆ ಎಂದರು.
ಸಾಲ-ಶೂಲ ಮಾಡಿ ಅದ್ದೂರಿ ವಿವಾಹಗಳನ್ನು ಏರ್ಪಡಿಸುವುದರಿಂದ ಯಾವುದೇ ಪ್ರಯೋಜನವಿಲ್ಲ, ಉಳ್ಳವರು ಇಂತಹ ಉಚಿತ ಸಾಮೂಹಿಕ ಕಲ್ಯಾಣ ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲಕ ಸಮಾಜದ ಋಣ ತೀರಿಸಬೇಕೆಂದು ಅವರು ಮನವಿ ಮಾಡಿದರು.
ದಿ.ಅಪ್ಪಾರಾವ್ ಕುಟುಂಬದವರು ಸತತ 31ನೇ ವರ್ಷದ ಉಚಿತ ಸಾಮೂಹಿಕ ಕಲ್ಯಾಣ ಕಾರ್ಯಕ್ರಮ ಆಯೋಜಿಸಿರುವುದು ಅವರ ಧಾರ್ಮಿಕ ಹಾಗೂ ಕಲ್ಯಾಣದ ಪರಿಕಲ್ಪನೆಗೆ ಕೈಗನ್ನಡಿಯಾಗಿದೆ ಎಂದ ಅವರು, ಅಪ್ಪಾರಾವ್ ಕುಟುಂಬದ ನರಸಿಂಗರಾವ್, ಸುಬ್ಬಾರಾವ್ ಹಾಗೂ ಈ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ವಿಶೇಷ ಸೇವೆ ಸಲ್ಲಿಸಿದ ಕೊಲ್ಲಾ ನಾಗೇಶ್ವರರಾವ್, ಕೊಲ್ಲಾ ಸುರೇಂದ್ರರಾವ್, ಡಾ.ಮಲ್ಲನಗೌಡರವರನ್ನು ಸ್ವಾಮಿಜಿಗಳು ವಿಶೇಷವಾಗಿ ಅಭಿನಂದಿಸಿದರು.
ಈ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಒಟ್ಟು 16ಜೋಡಿಗಳು ಶ್ರೀಗಳ ಸಮ್ಮುಖದಲ್ಲಿ ಸತಿ-ಪತಿಗಳಾದರು. ಈ ಸಂದರ್ಭದಲ್ಲಿ ದೇವಸ್ಥಾನದ ಆವರಣದಲ್ಲಿ ಬೆಳೆಗ್ಗೆಯಿಂದ ಅನ್ನದಾಸೋಹ ಏರ್ಪಡಿಸಲಾಗಿತ್ತು.
ವೇದಿಕೆಯಲ್ಲಿ ರೌಡಕುಂದ ಮಠದ ಶ್ರೀ ಮರಿಲಿಂಗಸ್ವಾಮೀಜಿ, ಪಂಡಿತ ಶ್ರೀ ಶರಣಯ್ಯ ಶಾಸ್ತ್ರೀ, ಜಿ.ಪಂ.ಸದಸ್ಯೆ ಸ್ವಾತಿ ಮೋಹನ್‍ರಾವ್, ಅಪ್ಪಾರಾವ್, ಬಿಜೆಪಿ ಮುಖಂಡ ನಾಗರಾಜ ಬಿಲ್ಗಾರ, ಗ್ರಾಮದ ಮುಖಂಡರಾದ ಸಂಗಪ್ಪ ದಳಪತಿ, ಗಣೇಶಗೌಡ, ನಿಂಗನಗೌಡ್ರು, ನಾಗರಾಜ ಪಲ್ಲೇದ, ಶಿವಪ್ಪ ಗಿರಿಣಿ, ಚಂದ್ರಶೇಖರ ಪಲ್ಲೇದ, ಕೆವಿಆರ್ ಚಿರಂಜಿವಿ, ವೀರರಾಜು, ವಿರೇಶ ಈಡಿಗೇರ, ಜೆ.ರಾಮ್‍ಬಾಬು, ಶ್ರೀನಿವಾಸ ಪಲ್ಲೇದ, ಮುರಡಪ್ಪ ಮತ್ತಿತರರು ಪಾಲ್ಗೊಂಡಿದ್ದರು.

loading...