ಸೇವಾಲಾಲರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು

0
27
loading...

ಕನ್ನಡಮ್ಮ ಸುದ್ದಿ-ಬೆಳಗಾವಿ: ಯುವ ಜನಾಂಗ ಸಂತ ಸೇವಾಲಾಲ ಮಹಾರಾಜರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಬೆಳಗಾವಿ ಗ್ರಾಮೀಣ ಶಾಸಕ ಸಂಜಯ ಪಾಟೀಲ ಹೇಳಿದರು.
ನಗರದ ಬಂಜಾರ ಕಾಲೋನಿಯಲ್ಲಿ ನಿರ್ಮಿಸಿರುವ ಸೇವಾಲಾಲ ಭವನ ಹಾಗೂ ಸಂತ ಸೇವಾಲಾಲ ಮಹಾರಾಜರ 278ನೇ ಜಯಂತಿ ಸಮಾರಂಭ ಬುಧವಾರ ಉದ್ಘಾಟಿಸಿ ಮಾತನಾಡಿದರು. ಬಂಜಾರ ಸಮಾಜದ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಬಂಜಾರ ಕಾಲೋನಿಯಲ್ಲಿ ಕುಡಿವ ನೀರು, ರಸ್ತೆ, ಚರಂಡಿ, ಶೌಚಾಲಯ ಹಾಗೂ ಶಿಕ್ಷಣ ಸೇರಿದಂತೆ ನಾನಾ ಮೂಲ ಸೌಲಭ್ಯ ಕಲ್ಪಿಸಲಾಗುವುದು. ರಾಜ್ಯದಲ್ಲಿರುವ ಬಂಜಾರ ಅಭಿವೃದ್ಧಿ ನಿಗಮದಿಂದ ಸಿಗುವ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು. ಬಿಜೆಪಿ ಆಡಳಿತದ ವೇಳೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕಾಳಜಿ ವಹಿಸಿ ಬಂಜಾರ ಅಭಿವೃದ್ಧಿ ನಿಗಮ ಸ್ಥಾಪಿಸಿದ್ದಾರೆ ಎಂದು ಹೇಳಿದರು.
ಕಾರಂಜಿ ಮಠದ ಶಿವಯೋಗಿ ದೇವರು ಮಾತನಾಡಿ, ಲಂಬಾಣಿ ಸಮಾಜ ಬಾಂಧವರು ಮಕ್ಕಳ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಬೇಕು. ಸಮಾಜ ಬಾಂಧವರು ಸರಕಾರ ಸೌಲಭ್ಯಗಳನ್ನು ಪಡೆದುಕೊಂಡು ಸಮಗ್ರ ಅಭಿವೃದ್ಧಿ ಹೊಂದಬೇಕು. ಬಾಂಧವರು ಸಾಮಾಜಿಕ, ರಾಜಕೀಯ, ಆರ್ಥಿಕವಾಗಿ ಅಭಿವೃದ್ಧಿ ಸಾಧಿಸಬೇಕು ಎಂದು ಹೇಳಿದರು.
ಜಿಲ್ಲಾ ಬಂಜಾರ ಸೇವಾ ಸಂಘದ ಅಧ್ಯಕ್ಷೆ ಶೈಲಜಾ ಚೌಹಾಣ ಮಾತನಾಡಿ, ಸಮಾಜ ಬಾಂಧವರು ಸಂಘಟಿತ ಹೋರಾಟ ಮಾಡಬೇಕು. ಸೌಲಭ್ಯಗಳಿಂದ ವಂಚಿತರಾಗಬಾರದು ಎಂದು ಹೇಳಿದರು. ನಗರ ಸೇವಕಿ ಅನುಶ್ರೀ ದೇಶಪಾಂಡೆ ಮಾತನಾಡಿದರು.
ನಾನಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಹಾಗೂ ಸಂತ ಸೇವಾಲಾಲ ಸಂಘದ ಮುಖಂಡರನ್ನು ಶಾಸಕ ಸಂಜಯ ಪಾಟೀಲ ಸನ್ಮಾನಿಸಿದರು.
ಬಿ.ಎಲ್.ನಾಯಕ, ಎನ್. ಮುದ್ನಾಳ, ರಮೇಶ. ಚವಾಣ, ಶಂಕರ ಲಮಾಣಿ, ಡಿ.ಆರ್. ಲಮಾಣಿ, ಆರ್.ಎಂ.ನಾಯಕ, ಕಾಮಪ್ಪ ಹಿಂದಿನಮನಿ, ಎಚ್ ಎಲ್. ಲಮಾಣಿ, ಬಾಲಚಂದ್ರ ಚವಾಣ, ಡಾ. ಬಿ ಸಿ. ಚವಾಣ, ಗೋಪಿ ಚಂದ, ಭೂಸೇನಾ ನಿಗಮದ ಅಧಿಕಾರಿ ಡಿ ಎಸ್. ಶೆಗುಣಿಸಿ ಸೇರಿದಂತೆ ಲಂಬಾಣಿ ತಾಂಡಾಗಳಿಂದ ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಸಂತ ಸೇವಾಲಾಲ ಸಂಘದ ಅಧ್ಯಕ್ಷ ಭೀಮಪ್ಪ ನಾಯಕ ಅಧ್ಯಕ್ಷತೆ ವಹಿಸಿದ್ದರು. ಅಶೋಕ ಚವಾಹ ಸ್ವಾಗತ, ನಿರೂಪಿಸಿದರು. ಬಿ.ಎಲ್.ಲಮಾಣಿ ವಂದಿಸಿದರು.

loading...