ಆಧುನಿಕ ಯುಗದಲ್ಲಿ ಮಹಿಳೆ ಪ್ರತಿಯೊಂದು ಹೆಜ್ಜೆಯನ್ನು ಯೋಚಿಸಿ ಇಡಬೇಕು: ನಾಗರತ್ನ ಭಾವಿಕಟ್ಟಿ

0
73
loading...

ಕನ್ನಡಮ್ಮ ಸುದ್ದಿ-ರಾಣೇಬೆನ್ನೂರ : ಮಹಿಳೆಯರು ತಮ್ಮ ಸಮಸ್ಯೆಗಳ ಪರಿಹಾರಕ್ಕೆ ಕೇಂದ್ರ, ರಾಜ್ಯ ಸರಕಾರಗಳು ಹಾಗೂ ಕುಟುಂಬದ ಮೇಲೆ ಅವಲಂಬಿತರಾಗದೆ ತಾವೇ ಅವುಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂದು ರಾಜ್ಯ ವೀರಶೈವ ಪಂಚಮಸಾಲಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ನಾಗರತ್ನ ಭಾವಿಕಟ್ಟಿ ಹೇಳಿದರು.
ಇಲ್ಲಿಯ ಆದಿಶಕ್ತಿ ದೇವಸ್ಥಾನದ ಬಿ.ಕೆ.ಗುಪ್ತಾ ಸಮುದಾಯಭವನದಲ್ಲಿ ಮಂಗಳವಾರ ತಾಲೂಕ ವೀರಶೈವ ಪಂಚಮಸಾಲಿ ಮಹಿಳಾ ಘಟಕದ ವತಿಯಂದ ಏರ್ಪಡಿಸಲಾಗಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಆಧುನಿಕ ಯುಗದಲ್ಲಿ ಮಹಿಳೆ ಪ್ರತಿಯೊಂದು ಹೆಜ್ಜೆಯನ್ನು ಯೋಚಿಸಿ ಇಡಬೇಕಾಗಿದೆ. ಪ್ರಸ್ತುತ ದಿನಗಳಲ್ಲಿ ಭ್ರಷ್ಟಾಚಾರ ಹೆಚ್ಚಾಗಲು ಶೇ.50ರಷ್ಟು ಮಹಿಳೆಯೇ ಕಾರಣ. ಈ ನಿಟ್ಟಿನಲ್ಲಿ ಒಂದು ಕಾಳನ್ನು ಹೆಚ್ಚಿಗೆ ತೆಗೆದುಕೊಳ್ಳಬಾರದು ಎಂಬ ತತ್ವದಲ್ಲಿ ಬಲವಾದ ನಂಬಿಕೆ ಹೊಂದಿದ್ದ ಆಯ್ದಕ್ಕಿ ಮಾರಮ್ಮನನ್ನು ಆದರ್ಶವಾಗಿಟ್ಟುಕೊಂಡು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಮಹಿಳೆಯರು ಮುಂದೆ ಬರಬೇಕಾಗಿದೆ ಎಂದರು.

ಮಹಿಳೆಯರ ಸಮಸ್ಯೆಗಳಿಗೆ ಮಹಿಳೆಯರೇ ಕಾರಣ, ಸಮಸ್ಯೆ ಬಂದಾಗ ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳದೆ ಅವುಗಳ ಪರಿಹಾರಕ್ಕೆ ಚಿಂತನೆ ಮಾಡಿ ಅಗತ್ಯ ಕ್ರಮ ಕೈಗೊಳ್ಳಬೇಕು. 12ನೇ ಶತಮಾನದ ಶರಣೆಯರು ಇಂದಿನ ಮಹಿಳೆಯರಿಗೆ ಪ್ರೇರಣೆಯಾಗಿದ್ದಾರೆ. ಮಹಿಳೆಯರು ತಮ್ಮ ಇತಿಹಾಸವನ್ನು ತಾವೇ ಸೃಷ್ಟಿ ಮಾಡಿಕೊಳ್ಳಬೇಕು ಎಂದರು.
ಉಪನ್ಯಾಸ ನೀಡಿದ ಡಾ.ಪೂರ್ಣಿಮ ಭಾವಿ, ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಟಿವಿ ಧಾರವಾಹಿ ವೀಕ್ಷಣೆಯಲ್ಲಿ ತಮ್ಮ ಅಮೂಲ್ಯವಾದ ಸಮಯವನ್ನು ವ್ಯರ್ಥ ಮಾಡುತ್ತಿದ್ದಾರೆ. ಧಾರವಾಹಿ ಪಾತ್ರಧಾರಿಗಳೇ ಮಹಿಳೆಯರಿಗೆ ಆದರ್ಶವಾಗಿರುವುದು ಬೇಸರದ ಸಂಗತಿ. ಅದರ ಬದಲು ವಿಜ್ಞಾನ, ಸಾಹಿತ್ಯ, ಅಂತರಿಕ್ಷಯಾನ ಮುಂತಾದ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳೆಯರನ್ನು ಆದರ್ಶವಾಗಿಟ್ಟುಕೊಳ್ಳಬೇಕು. ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ ಸಮಾಜದಲ್ಲಿ ಆದರ್ಶ ವ್ಯಕ್ತಿಗಳಾಗಿ ಹೊರಹೊಮ್ಮುವಂತೆ ಮಾಡುವಲ್ಲಿ ಮಹಿಳೆಯರ ಪಾತ್ರ ಬಹುಮುಖ್ಯವಾಗಿದೆ ಎಂದರು.
ರಾಜ್ಯ ವೀರಶೈವ ಪಂಚಮಸಾಲಿ ಸಂಘದ ರಾಜ್ಯಾಧ್ಯಕ್ಷ ಬಿ.ನಾಗನಗೌಡರ, ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಆರ್.ಅಂಗಡಿ, ತಾಲೂಕ ಘಟಕದ ಅಧ್ಯಕ್ಷ ಚಂದ್ರಣ್ಣ ತಿಳವಳ್ಳಿ, ಪೂರ್ಣಿಮಾ ಶಿವಾನಂದ ಬೆನ್ನೂರ, ಜಿಲ್ಲಾ ಉಪಾಯಕ್ಷೆ ಗೀತಾ ಜಂಬಿಗಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ರಾಜ್ಯ ವೀರಶೈವ ಪಂಚಮಸಾಲಿ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ವಸಂತ ಹುಲ್ಲತ್ತಿ ಅಧ್ಯಕ್ಷತೆ ವಹಿಸಿದ್ದರು.
ಇದೇ ಸಂದರ್ಭದಲ್ಲಿ ತಾಲೂಕ ಪಂಚಮಸಾಲಿ ಮಹಿಳಾ ನೂತನ ಪದಾಧಿಕಾರಿಗಳಿಗೆ ಪದಗ್ರಹಣದ ಶಪಥ ಬೋಧಿಸಲಾಯಿತು ಹಾಗೂ ಎಪಿಎಂಸಿ ಸದಸ್ಯ ಬಸವರಾಜ ಹುಲ್ಲತ್ತಿ ಹಾಗೂ ಭೂಮಿಕಾ ಅಂಕದ ಇವರುಗಳನ್ನು ಸನ್ಮಾನಿಸಲಾಯಿತು.
ತಾಲೂಕ ವೀರಶೈವ ಪಂಚಮಸಾಲಿ ಮಹಿಳಾ ಘಟಕದ ಅಧ್ಯಕ್ಷೆ ನಿರ್ಮಲಾ ದಾವಳಗಿ, ಎ.ಬಿ.ರತ್ನಮ್ಮ, ಪ್ರಭಾವತಿ ತಿಳವಳ್ಳಿ, ಶಿಲ್ಪಾ ತಿಳವಳ್ಳಿ, ವನಜಾಕ್ಷಿ ಬಳ್ಳಾರಿ, ರಾಜೇಶ್ವರಿ ಪಾಟೀಲ, ವಿಜಯಲಕ್ಷ್ಮಿ ಮಳವಳ್ಳಿ, ವಿಜಯಶ್ರೀ ಮುಂಡಾಸದ, ಲತಾ ಶಿವಲಿಂಗಪ್ಪನವರ, ಪ್ರೇಮಾ ಬಾರಿಗಿಡದ, ಲೀಲಾ ಪಟ್ಟಣಶೆಟ್ಟಿ, ಅನುಸೂಯ ಮಲ್ಲೂರ, ನಾಗರತ್ನ ಗುಡಿಹಳ್ಳಿ ಸೇರಿದಂತೆ ಮತ್ತಿತರು ಇದ್ದರು.

loading...