ಇದು ಮಹಿಳೆಯರ ಶತಮಾನ; ಆದರೆ…

0
182
loading...

ಇನ್ನಾದರೂ ಬದಲಾಗುವುದೇ ಮಹಿಳೆಯರ ಸ್ಥಾನಮಾನ
ಬೆಳಗಾವಿ: “ನಮ್ಮನ್ನು ನಿತ್ಯ 12 ತಾಸು ದುಡಿಸಿಕೊಳ್ಳಬೇಡಿ, ಉತ್ತಮ ವೇತನ ನೀಡಿ, ಮತದಾನದ ಹಕ್ಕು ಕೊಡಿ” ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಗೆ ಕಾರಣಿಕರ್ತರಾದ ಅಂದಿನ ಮಹಿಳೆಯರು 106 ವರುಷಗಳ ಹಿಂದೆ ಸರಕಾರಗಳ ಮುಂದಿಟ್ಟಿದ್ದ ಬೇಡಿಕೆಗಳಿವು. ಪರಿಪೂರ್ಣವಾಗಿ ಈಡೇರಿದ್ದು `ಮತದಾನದ ಹಕ್ಕು’ಬೇಡಿಕೆ ಎನ್ನುವುದು ವಿಪರ್ಯಾಸ. ಉಳಿದೆರಡೂ ಬೇಡಿಕೆಗಳು ಈಡೇರಿವೆ ಅಂದರೆ ಅದು ಬರೀ ಮಾತಾದೀತು.! ಆದರೆ, ಅವಳ ಎದೆಯಲ್ಲಿ ಅಂದು ಹೊತ್ತಿದ ಕಿಡಿ ನಂತರದ ದಿನಗಳಲ್ಲಿ ಹಾದಿಯನ್ನು ಗಟ್ಟಿಗೊಳಿಸಿದ್ದು ಇಲ್ಲಿ ಸ್ಮರಣೀಯ.
1910 ಮಾ.8ರಂದು ಕೋಪನ್‍ಹೇಗನ್‍ನಲ್ಲಿ ನಡೆದ ಸಮಾಜವಾದಿ ಮಹಿಳೆಯರ ಎರಡನೇ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಕ್ಲಾರಾ ಝೆಟ್ಕಿನ್ ಅವರು ಮಾ.8 ನ್ನು ಅಂತಾರಾಷ್ಟ್ರೀಯ ಮಹಿಳಾ ದಿನವನ್ನಾಗಿ ಆಚರಿಸಲು ಕರೆಯಿತ್ತರು.
ಜತೆಗೆ ಭಾಷಣದಲ್ಲಿ, “ಮಹಿಳೆಯರಿಗೆ ಸಮಾನ ವೇತನ ನೀಡಿ, ಸಾಮಾನ್ಯ ಹಕ್ಕು ಕೊಡಿ, ಅವಳು ಹಿಂಸೆ ಮುಕ್ತ ಬದುಕು ಸಾಗಿಸಲು ಅವಕಾಶ ಕೊಡಿ ಎಂದು ಆಶಿಸಿದರು. ಆ ಮಾತುಗಳಿಗೆ ಈಗ ನೂರಾರು ವರುಷ. ಮಹಿಳೆ ತಾನೀಗ ತನ್ನ ಹಕ್ಕನ್ನು ಸಂಪೂರ್ಣ ಚಲಾಯಿಸುತ್ತಿರುವಳೇ ? ಅವಳದು ಹಿಂಸೆ ಮುಕ್ತ ಬದುಕಾಗಿದೆಯೇ? ಮಹಿಳೆಯರೇ ಉತ್ತರಿಸಬೇಕು. ಮಹಿಳಾ ದಿನಾಚರಣೆಯ ಈ ಹೊತ್ತಿನಲ್ಲಾದರೂ ಹಿಂದಿನ-ಇಂದಿನ-ಮುಂದಿನ ನಡೆ ಬಗ್ಗೆ ಯೋಚಿಸಿದಲ್ಲಿ ಅವಳ ದಾರಿ ಸುಗಮವಾದೀತಷ್ಟೇ.
ಮಾ.8 ಮಹಿಳಾ ದಿನ. ಮಹಿಳೆಯರಿಗೆ ಸಂಬಂಧಿಸಿದ ಪ್ರಮುಖ ಬೇಡಿಕೆಗಳನ್ನಿಟ್ಟು ಹೋರಾಡಲು ಸ್ಫೂರ್ತಿದಾಯಕ ದಿನ. `ಜಾಗತಿಕ ಮಟ್ಟದಲ್ಲಿ ಲಿಂಗ ಸಮಾನತೆ, ಲಿಂಗ ನ್ಯಾಯದ ಪ್ರಶ್ನೆ ಬಗ್ಗೆ ಹೆಚ್ಚಿದ ಜಾಗೃತಿಯಿಂದಾಗಿ 1975ನ್ನು ವಿಶ್ವಸಂಸ್ಥೆಯು ಅಂತಾರಾಷ್ಟ್ರೀಯ ಮಹಿಳಾ ವರ್ಷ ಎಂದು ಯಾವಾಗ ಘೋಷಿಸಿತೋ ಅಲ್ಲಿಂದ ಎಲ್ಲೇಡೆ ಮಹಿಳಾ ಜಾಗೃತಿ ಕಾರ್ಯ ಚುರುಕಾದವು.
ಅವಳ ಬೆಳವಣಿಗೆ ಹಾದಿ ಇಮ್ಮಡಿಗೊಂಡಿತು.
ಕಷ್ಟಕರವೆಂದರೆ ನಡೆದ ಹಾದಿಯುದ್ದಕ್ಕೂ ಬೇರೆ ಬೇರೆ ಸಮಸ್ಯೆಗಳ ಸುಳಿಗೆ ಸಿಲುಕುತ್ತಾ ಹೋಗಿದ್ದು, ಹೋಗುತ್ತಿರುವುದು ಇಂದು ಚರ್ಚಿಸಬೇಕಾದ ವಿಷಯ. ಮಹಿಳೆ, ಹಲವಾರು ಕ್ಷೇತ್ರಗಳಲ್ಲಿ ಕಾಲಿಟ್ಟರೂ ಧೋರಣೆ ರೂಪಿಸುವ, ಉನ್ನತ ನಿರ್ಧಾರ ತೆಗೆದುಕೊಳ್ಳುವ ಮಟ್ಟದಲ್ಲಿ ಸೂಕ್ತ ಪ್ರಾತಿನಿಧ್ಯ ಇಲ್ಲವಾಗಿದ್ದು, ಲಿಂಗ ಅಸಮಾನತೆ ಹೆಚ್ಚುತ್ತಾ ಹೋಗಿದ್ದು, ಇವತ್ತು ಮಾರುಕಟ್ಟೆ ಸರಕಿನಂತಾಗಿದ್ದು ದುರಂತದ ಸಂಗತಿ.

ಮಹಿಳೆ ಸಬಲಳಾಗಿಯೂ ಹಲವು ಸಮಸ್ಯೆಗಳನ್ನು ಎದುರಿಸುತ್ತಿರಲು ಸರಕಾರಗಳ ತಳೆಯುವ ನೀತಿಗಳೇ ಕಾರಣ. ಸಮಾನರಲ್ಲಿ ಸಮಾನತೆ ಕಾಣಬೇಕೆಂದರೆ ಅಸಮಾನ ಸಮಾಜದಲ್ಲಿ ದುರ್ಬಲರಿಗೆ ಮೀಸಲು ನೀಡುವುದು ಸಂವಿಧಾನ ಬದ್ಧ. ಆದರೆ, ಅಂತಾರಾಷ್ಟ್ರೀಯ ಮಹಿಳಾ ದಿನ ಎಂದರೆ ಅದು ಬರೀ ಮಹಿಳಾ ಮೀಸಲು ಕುರಿತು ಮಾತು ಎಂತಾಗುತ್ತಿದೆ.

ರಾಜಕೀಯ ಸಂಸ್ಥೆಗಳಲ್ಲಿ ಮೀಸಲು ಸೌಲಭ್ಯದಿಂದ ಮಹಿಳೆಯರ ಸ್ಥಾನ ಉತ್ತಮವಾಗಲಾರದು. ಇಂತಹ ಗಂಭೀರ ಪ್ರಶ್ನೆಗಳ ಮೇಲೆ ಗಮನ ಕೇಂದ್ರೀಕರಿಸಲು ಹಾಗೂ ಮಹಿಳೆಯರ ಸ್ಥಾನಮಾನ ಉತ್ತಮ ಪಡಿಸಲು ಅವರಿಗೆ ಸಂಬಂಧಿಸಿದ ವಿಷಯಗಳನ್ನು ಚರ್ಚಿಸಲು ಮಾತ್ರ ಇದು ಅನುಕೂಲವಾಗುತ್ತದೆ.
ಸರಕಾರಗಳ ಧೊರಣೆಗಳೇನೆ ಇರಲಿ. ಮಹಿಳೆ ಅವೆಲ್ಲವನ್ನು ಎದುರಿಸಿ ಮುಂದಡಿಯಿಡುತ್ತಿದ್ದಾಳೆ. ಆದರೆ ಅವಳು ನಡೆದು ಬಂದ ಹಿಂದಿನ ಹಾದಿಯಲ್ಲಿನ ತೊಡರುಗಳತ್ತ ಗಮನ ಹರಿಸಿದಾಗ ಆತಂಕವಾಗುತ್ತದೆ. ಮಹಿಳಾ ಅಸಮಾನತೆ ಕುರಿತಂತೆ ಈ ಹಿಂದೆ ವಿಶ್ವಸಂಸ್ಥೆ ಅಭಿವೃದ್ಧಿ ಯೋಜನೆ ವಿಭಾಗ (ಯುಎನ್‍ಡಿಪಿ) ಅಂತಾರಾಷ್ಟ್ರೀಯ ಮಹಿಳಾ ದಿನದಂದು ಏಷ್ಯಾದ ಮಾನವ ಅಭಿವೃದ್ಧಿಯನ್ನು ಪ್ರಕಟಿಸಿ, “ಆರೋಗ್ಯ, ವಯಸ್ಕ ಸಾಕ್ಷರತೆ, ಆರ್ಥಿಕ ಚಟುವಟಿಕೆಗಳಲ್ಲಿ ಭಾಗವಹಿಸುವಿಕೆ ಇತ್ಯಾದಿ ಲಿಂಗ ಸಮಾನತೆಯ ಹೆಚ್ಚಿನ ಸೂಚ್ಯಂಕಗಳಲ್ಲಿ ಶೇ.73ರಷ್ಟು ಭಾರತದ ಜನಸಂಖ್ಯೆ ಹೊಂದಿರುವ ದಕ್ಷಿಣ ಏಷ್ಯಾವು ಅತಿ ಕೆಳಮಟ್ಟದ ಬಡ ಆಫ್ರಿಕನ್‍ಗಳಿಗಿಂತಲೂ ಹಿಂದೆ ಬಿದ್ದಿದೆ” ಎಂಬ ವರದಿ ನಿಜಕ್ಕೂ ಆಶ್ಚರ್ಯಕರ.
ಈ ಪ್ರಕಾರ ಆರ್ಥಿಕ ಚಟುವಟಿಕೆಗಳಲ್ಲಿ ಮಹಿಳೆಯರ ಭಾಗವಹಿಸುವಿಕೆ ದ.ಏಷ್ಯಾದಲ್ಲಿ ಕೇವಲ ಶೇ.36ರಷ್ಟಿದೆ. (ಬೇರೆಡೆ ಶೇ.70 ಇದೆ) ಹೆರಿಗೆಯ ವೇಳೆ ಸಾಯುವ ಮಹಿಳೆಯರ ಸಂಖ್ಯೆ ಇಡೀ ಜಗತ್ತಿನಲ್ಲಿಯೇ ಅತಿ ಹೆಚ್ಚು ಭಾರತದಲ್ಲಿಯೇ, ಇಡೀ ವಿಶ್ವದ ಪ್ರಾಥಮಿಕ ಶಾಲೆಗಳಲ್ಲಿ ಬಾಲಕ-ಬಾಲಕಿಯರ ಅನುಪಾತ 95 ಇದ್ದು, ದ.ಏಷ್ಯಾದಲ್ಲಿ 93 ಇದೆ. ಉನ್ನತ ಶಿಕ್ಷಣದಲ್ಲಿ 71ಇದ್ದು ವಿಶ್ವದಲ್ಲಿ ಸರಾಸರಿ 106 ಇದೆ.
===ಬಾಕ್ಸ್===
ಶತಶತಮಾನಗಳಿಂದ ಬಡತನ, ಅನಕ್ಷರತೆ, ಕಂದಾಚಾರ, ಸತಿ ಪದ್ಧತಿಯಂತಹ ಕ್ರೂರ ಸಮಸ್ಯೆಗಳನ್ನು ಎದುರಿಸುತ್ತ ಬಂದ ಅವಳಿಗೆ ಆಧುನಿಕ ಜಗತ್ತು ಮುಂದಿಟ್ಟ ಸಮಸ್ಯೆಗಳು ಇನ್ನೂ ಕ್ರೂರ. ಸಂಪ್ರದಾಯದ ನಮ್ಮ ಸಮಾಜದ ಅಮಾನವೀಯ ಧೋರಣೆಗೆ ಜೀವ ಕೊಡುವಂತಾಗಿದೆ. ಭ್ರೂಣ ಹತ್ಯೆ, ಶಿಶು ಹತ್ಯೆ ಅವ್ಯಾಹತವಾಗಿ ನಡೆಯತೊಡಗಿವೆ. ವರದಕ್ಷಿಣೆ, ದೌರ್ಜನ್ಯಗಳು ಕಾರಣವಿರಬಹುದು. ಈ ಪ್ರಕರಣಗಳು ಗ್ರಾಮೀಣ ಪ್ರದೇಶಕ್ಕಿಂತ ಪಟ್ಟಣದಲ್ಲೇ ಹೆಚ್ಚು ನಡೆಯುತ್ತಿವೆ. `ಬಸ್ಸು, ರೈಲು ನಿಲ್ದಾಣ, ಉದ್ಯೋಗ ಸ್ಥಳ, ಆಫೀಸು, ಪೆÇಲೀಸ್ ಠಾಣೆ ಎಲ್ಲಿಯೂ ಹೆಣ್ಣು ಸುರಕ್ಷಿತಳಲ್ಲ” ಎನ್ನುವುದು ಆಧುನಿಕ ಜಗತ್ತಿನ ಕರಾಳತೆ.
ಏನೇ ಸಮಸ್ಯೆಗಳಿರಲಿ, ಪ್ರತಿಭೆ, ಅರ್ಹತೆ, ಪರಿಣತಿ ಮಾನದಂಡಗಳು ನಿರ್ಮಾಣಗೊಂಡಿದ್ದರ ಫಲ ಮಹಿಳೆ ಎಲ್ಲಾ ಕ್ಷೇತ್ರಗಳಲ್ಲಿ ಕಾಲೂರಲ ಸಾಧ್ಯವಾಗಿದೆ.
ಏಕಸ್ವಾಮ್ಯದ ಉದ್ಯಮಗಳಲ್ಲಿ ತೊಡಗಿಸಿಕೊಂಡಿದ್ದು ಅಲ್ಲದೆ ಉತ್ಪಾದನಾ ಕಾರ್ಯಗಳಲ್ಲಿ ಪಾಲ್ಗೊಳ್ಳುತ್ತಿರವುದು ಒಳ್ಳೆಯ ಬೆಳವಣಿಗೆ. ಹೀಗೆಯೇ ಮಹಿಳೆಯರ ಸ್ಥಾನಮಾನ ಉತ್ತಮ ಪಡಿಸುವ ಮತ್ತು ಅವರ ಸಮಾಜ ಬೆಳವಣಿಗೆಗಾಗಿ ಅವರಿಗೆ ಅಗತ್ಯ ಸಮಾನತೆ ನೀಡುವ ಸ್ಪುಟವಾದ ಸುಧಾರಣೆಗಳ ವಾಸ್ತವ ಸ್ವರೂಪ ಪಡೆಯಬೇಕು. ಪುರುಷನಿಗಿಂತ ಮೇಲೆ ಬೆಳೆದು ನಿಂತ ಮಹಿಳೆಯಲ್ಲಿ ಏನೇ ಸಮಸ್ಯೆ ಬಂದರೂ ಅದನ್ನು ಎದುರಿಸುವ ಆತ್ಮವಿಶ್ವಾಸ ತುಂಬುವುದು, ಪರುಷರಿಂದ ಮಹಿಳೆಯರಲ್ಲಿ ಆತ್ಮ ವಿಶ್ವಾಸ ತುಂಬುವ ಕೆಲಸ ನಿರಂತರ ಆಗುವುದರಿಂದ ಮಾತ್ರ ಅವಳ ಬೆಳವಣಿಗೆಯ ಹಾದಿಯಲ್ಲಿ ಇನ್ನಷ್ಟು ಹೊಸತನ ಕಂಡು ಬರಲು ಸಾಧ್ಯ.

**************

ತೃಪ್ತಿತರದ ಮಹಿಳೆಯರ ಮಿಸಲಾತಿ…

ಮಹಿಳೆಯ ಮೀಸಲಾತಿ ಕೆವಲ ಶಾಸನಗಳಿಗೆ ಮಾತ್ರ ಸೀಮಿತವೇ….?

ಜಗತ್ತಿನಲ್ಲಿ ಭಾರತದ ಸಾಹಿತ್ಯ, ಸಂಸ್ಕøತಿಗೆ ಉನ್ನತ ಸ್ಥಾನವಿದೆ. ಸಂಪದ್ಭರಿತ ರಾಷ್ಟ್ರವಾಗಿದ್ದು, ವೈವಿಧ್ಯತೆಯಲ್ಲಿ ಏಕತೆಯನ್ನು ಬಿಂಬಿಸುವ ಏಕೈಕ ರಾಷ್ಟ್ರವೇ ಭಾರತ. ಇದು ಬಡ ಜನರಿಂದ ಕೂಡಿದ ಶ್ರೀಮಂತ ರಾಷ್ಟ್ರ ಎಂಬ ಹೆಗ್ಗಳಿಕೆಯನ್ನು ಹೊತ್ತು ಕೊಂಡಿದೆ.
ವಿವಿಧ ಧರ್ಮ ಮತ್ತು ಪರಂಪರೆಯ ಮಧ್ಯೆ ಬದುಕಿದ ಭಾರತೀಯರಲ್ಲಿ, ಹಿಂದೆ ಗುಪ್ತರ ಕಾಲದಲ್ಲಿ ಮಧ್ಯರಾತ್ರಿ ಒಬ್ಬ ತೀರಾ ವಯಸ್ಸಾದ ಮುದುಕಿ ಬುಟ್ಟಿಯಲ್ಲಿ ವಜ್ರ, ಮುತ್ತು, ರತ್ನ, ಹವಳ ತುಂಬಿಕೊಂಡು ನಿರ್ಭೀತಿಯಿಂದ ಸಾಗುತ್ತಿದ್ದಳೆಂದು ಹೇಳಲಾಗುತ್ತದೆ. ಅಷ್ಟರ ಮಟ್ಟಿಗೆ ಅಂದು ಮಹಿಳೆ ನಿರ್ಭಯದಿಂದ ಮತ್ತು ಸ್ವತಂತ್ರಳಾಗಿದ್ದಳು. ಅದರೆ ಇಂದು 21ನೇ ಶತಮಾನದಲ್ಲಿ ನಾವು ಅಂತಹ ಸ್ವತಂತ್ರ ಬದುಕು ಬಾಳಲು ಸಾಧ್ಯವಿಲ್ಲ. ದೇಶ ಅಭಿವೃದ್ಧಿ ಹೊಂದುತ್ತಿದೆ ಹೌದು, ಅದರ ಜೊತೆ ಜೊತೆಗೆ ಅದಕ್ಕಿಂತ ತೀವ್ರಗತಿಯಲ್ಲಿ ಸ್ತ್ರೀಯರ ಮೇಲಿನ ಅತ್ಯಾಚಾರ, ಶೋಷಣೆಗಳು ಲೆಕ್ಕಕ್ಕೆ ಸಿಗದಷ್ಟು ಜರಗುತ್ತಿದ್ದುದು ಸತ್ಯಸಂಗತಿ. ಮಹಿಳೆ ಮೇಲೆ ಇಂದು ಆಗುತ್ತಿರುವ ದೌರ್ಜನ್ಯ ಅಷ್ಟಿಷ್ಟಲ್ಲ.
ಇಷ್ಟೆಲ್ಲಾ ಶೋಷಣೆಗಳ ಮಧ್ಯೆಯೂ ಸ್ತ್ರೀ ಮುಂದೆ ಬಂದು ರಾಜಕೀಯ, ಕ್ರೀಡೆ, ಸಾಹಿತ್ಯ, ಸಂಸ್ಕøತಿ, ಸಂಗೀತ, ವಾಣಿಜ್ಯ ಕ್ಷೇತ್ರದಲ್ಲಿ ಪಾದಾರ್ಪಣೆ ಮಾಡಿ ಪ್ರತಿಭೆ ಮೆರೆದು ಸಾಧಿಸಿ ತೋರಿರುವುದು ಗಮನಾರ್ಹ.
ಇಂದು ಮಹಿಳೆ ರಾಷ್ಟ್ರದ ಪ್ರಥಮ ಪ್ರಜೆಯಾಗಿ ಅಧಿಕಾರ ಅನುಭವಿಸಿದ್ದರೂ ಅವಳನ್ನು ಎರಡನೆಯ ದರ್ಜೆ ಪ್ರಜೆಯಾಗಿ, ದ್ವಿತೀಯ ದರ್ಜೆ ಲಿಂಗ ಎಂದು ಪರಿಗಣಿಸುತ್ತಿರುವುದು ವಿಷಾದನೀಯ.
ಮೂರು ತಿಂಗಳ ಮಗುವಿನಿಂದ 70 ವರ್ಷದ ಮುದುಕಿಯ ಮೇಲೂ ಅತ್ಯಾಚಾರ ನಡೆದ ಪ್ರಕರಣಗಳು ದಾಖಲಾಗಿವೆ. ಇಂದಿನ ಪರಿಸ್ಥಿತಿ ಹೇಗಾಗಿದೆ ಎಂದರೆ ರಾತ್ರಿ ಅಲ್ಲ, ಹಗಲಿನಲ್ಲಿಯೇ ಮನೆಯಿಂದ ಹೊರ ಹೋದ ಮಹಿಳೆ ಮರಳಿ ಬರದಂತಾಗಿದೆ. ಈ ನಿಟ್ಟಿನಲ್ಲಿ ಚಿಂತಿಸುವ ಸ್ಥಿತಿ ಬಂದೊದಗಿದೆ. ಅಂಕಿ-ಅಂಶಗಳ ಪ್ರಕಾರ ದೆಹಲಿಯಲ್ಲಿ 5 ನಿಮಿಷದಲ್ಲಿ 4 ಅತ್ಯಾಚಾರಗಳು ದಾಖಲಾಗುತ್ತಿವೆ. ಪ್ರತಿದಿನ ಪತ್ರಿಕೆಯಲ್ಲಿ ಮತ್ತು ಟಿವಿ ಚಾನಲ್‍ಗಳಲ್ಲಿ ಅಂತಹ ಪ್ರಕರಣ ನೋಡುತಿದ್ದೇವೆ. ನಿರ್ಭಯಾ ಪ್ರಕರಣದ ನಂತರ ಮತ್ತೆ ಅತ್ಯಾಚಾರಗಳೂ ಹೆಚ್ಚಾಗುತ್ತಿವೆ.
ಇಂತಹ ಸಮಯದಲ್ಲಿ ಮಹಿಳೆಯರು ಇಷ್ಟೇ ಅಲ್ಲದೆ ಇನ್ನೂ ಅನೇಕ ಘಟನೆಗಳಿಗೆ ಆಘಾತ ಕೃತ್ಯಗಳಿಗೆ ಒಳಗಾಗುತ್ತಿದ್ದಾಳೆ ಅವುಗಳೆಂದರೆ, ವರದಕ್ಷಿಣೆ, ಶಿಶುಹತ್ಯೆ, ಮಹಿಳಾ ಅಪಹರಣ, ಮಾನಸಿಕ ಕಿರುಕುಳ ಹೀಗೆ ಹೇಳುತ್ತಾ ಹೋದರೆ ಮಹಿಳೆ ಎದುರಿಸುತ್ತಿರುವ ಸಮಸ್ಯೆಗಳಿಗೆ ಅಂತ್ಯವೆಂಬುದಿಲ್ಲ ಎನಿಸುತ್ತಿದೆ.
ಇಂದು ಉದ್ಯೊಗಸ್ಥ ಮಹಿಳೆಯರು ಎಲ್ಲ ಕ್ಷೇತ್ರದಲ್ಲೂ ಕಿರುಕಳ ಅನುಭವಿಸುತ್ತಿದ್ದಾರೆ. ಅದಕ್ಕೆ ಉದಾಹರಣೆಗಳು ಸಾಕಷ್ಟು ಇವೆ. ಸಣ್ಣ ಕೆಲಸದಿಂದ ಹಿಡಿದು ಉನ್ನತ ಸ್ಥಾನದಲ್ಲಿ ಇರವ ಐಎಎಸ್, ಐಪಿಎಸ್, ಕೆಪಿಎಸ್ ಹೀಗೆ ಉನ್ನತ ಸ್ಥಳಗಳಲ್ಲೂ ಸ್ತ್ರೀ ಶೋಷಣೆ ಮುಂದುವರಿದಿದೆ. ಹೀಗಾಗಿ ದಕ್ಷ ಆಡಳಿತ ನಡೆಸಲು ಆಗುತಿಲ್ಲ. ದಕ್ಷ ಆಡಳಿತ ನಡೆಸುವ ಮಹಿಳಾ ಅಧಿಕಾರಿಗಳ ಮೇಲೆ ಇಲ್ಲಸಲ್ಲದ ಅಪವಾದ ಹೊರಿಸಿ ಮಾನಸಿಕ ಹಿಂಸೆ ಕೊಡುತ್ತಿದ್ದಾರೆ. ನಮ್ಮನ್ನಾಳುವ ರಾಜಕಿಯ ವರ್ಗಗಳು ಮಹಿಳೆಯರಿಗೆ ಪುರುಷರಷ್ಟೆ ಸಮಾನ ಅವಕಾಶ ಕೊಟ್ಟಿದ್ದೇವೆಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಶಾಸನಗಳಿಗೆ ಮಾತ್ರ ಸೀಮಿತವಾಗಿದೆ ಎನ್ನಿಸುತ್ತಿದೆ.
ಮಿಸಲಾತಿ ಹೇಗೆ ಇರಲಿ, ಅದನ್ನು ಬದಿಗಿಟ್ಟು ಮಹಿಳೆಯರು ಅಂಜದೆ ಯಾವುದೆ ಸಮಸ್ಯೆ ಬಂದರೂ ಅದನ್ನು ಎದುರಿಸುವಂತಳಾಗಬೇಕು. ಮಹಿಳೆಯರು ಧೈರ್ಯ ಮಾಡಿ. ಮಾನಸಿಕವಾಗಿ, ದೈಹಿಕವಾಗಿ ಸಧೃಡವಾಗಬೇಕು. ಅಂದಾಗ ಮಾತ್ರ ತಮಗೆ ಎದುರಾಗುವ ಸಮಸ್ಯೆಯನ್ನು ಮೆಟ್ಟಿನಿಲ್ಲಬಹುದು. ಮಹಿಳೆಯರು ಎಂದು ತಲೆ ಎತ್ತಿ ನಿರ್ಭಯದಿಂದ ಓಡಾಡುವರೊ, ಅಂದು ತಮಗೆ ಏನೇ ಸಮಸ್ಯೆ ಎದುರಾದರು ಅದರ ವಿರುದ್ಧ ಹೊರಾಡಬಲ್ಲರು.
ಮಹಿಳೆಯರ ಮೇಲೆ ಆಗುತ್ತಿರುವ ದೌರ್ಜನ್ಯ, ಮಾನಸಿಕ ಹಿಂಸೆ, ಅತ್ಯಾಚಾರದಂತ ಪ್ರಕರಣಗಳು ನಡೆಯದಂತಾಗಲು ಸಮಾಜದಲ್ಲಿ ಪರಿವರ್ತನೆ ಉಂಟು ಮಾಡಬೇಕಿದೆ. ಮಾರ್ಗದರ್ಶನ, ಬೋಧನೆ, ತರಬೇತಿ ಮೂಲಕ ಜನಜಾಗೃತಿ ಉಂಟು ಮಾಡುವ ಕೆಲಸವಾಗಬೇಕಿದೆ. ಪ್ರಜ್ಞಾವಂತ ನಾಗರಿಕ ಸಮಾಜ ನಿರ್ಮಾಣವಾಗಬೇಕಿದೆ. ಒಟ್ಟಿನಲ್ಲಿ ಗಾಂಧೀಜಿ ಕಂಡ ಕನಸು ನನಸಾಬೇಕಿದೆ. ಮಹಿಳೆಯರು ನೆಮ್ಮದಿಯಿಂದ ಬಾಳುವಂತಾಗಲಿ.
ಸುಧಾ ಪಾಟೀಲ

loading...