ಗಜೇಂದ್ರಗಡ ತಾಲೂಕು ಘೋಷಣೆ: ಮುಗಿಲು ಮುಟ್ಟಿದ ಹಷೋದ್ಘಾರ

0
66
loading...

ಕನ್ನಡಮ್ಮ ಸುದ್ದಿ-ಗಜೇಂದ್ರಗಡ : ಐತಿಹಾಸಿಕ ಹಿನ್ನಲೆಯುಳ್ಳ ಗಜೇಂದ್ರಗಡ ಪಟ್ಟಣವನ್ನು ಹಿಂದಿನ ಬಿಜೆಪಿ ಸರ್ಕಾರ 43 ನೂತನ ತಾಲೂಕಗಳ ಘೋಷಣೆಯ ಪಟ್ಟಿಯಲ್ಲಿ ಸೇರ್ಪಡೆಗೊಂಡಿದ್ದು, ಅದನ್ನು ಮತ್ತೆ ನೆನೆಗುದಿಗೆ ಬಿಡಲಾಗಿತ್ತು. ಆದರೆ, ಮತ್ತೆ ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ 12ನೇ ಬಜೆಟ್‍ನಲ್ಲಿ 49 ನೂತನ ತಾಲೂಕು ಘೋಷಣೆ ಮಾಡಿದ್ದು, ಇದರಲ್ಲಿ ಗಜೇಂದ್ರಗಡವೂ ಒಳಗೊಂಡಿದೆ. ಈ ಹಿನ್ನಲೆಯಲ್ಲಿ ಈ ಭಾಗದ ಜನರ ಹಷೋದ್ಘಾರ ಮುಗಿಲು ಮುಟ್ಟಿತು. ದಶಕಗಳ ಕನಸು ನನಸಾಯಿತು ಎಂದು ಸಂಭ್ರಮಾಚರಣೆ ನಡೆಸಿದರು.
ಗಜೇಂದ್ರಗಡ ತಾಲೂಕು ಹೋರಾಟ ಸಮಿತಿ ಹಾಗೂ ಕರ್ನಾಟಕ ಜನಹಿತ ವೇದಿಕೆ ಕಾರ್ಯಕರ್ತರು ಕಾಲಕಾಲೇಶ್ವರ ವೃತ್ತದಲ್ಲಿ ಪಟಾಕಿ ಸಿಡಿಸಿ, ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು. ಬಜೆಟ್‍ನಲ್ಲಿ ಗಜೇಂದ್ರಗಡ ತಾಲೂಕು ಘೋಷಣೆಯಾಗಿರುವದಕ್ಕೆ ಸಂತಸ ವ್ಯಕ್ತಪಡಿಸಿ, ಇದು ದಶಕಗಳ ಹೋರಾಟಕ್ಕೆ ಸಿಕ್ಕ ಫಲ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ವಕೀಲ ಬಿ.ಎಂ ಸಜ್ಜನರ, ಅಶೋಕ ವನ್ನಾಲ, ಹೆಚ್.ಎಸ್. ಸೋಂಪೂರ, ರಾಜು ಸಾಂಗ್ಲಿಕರ, ಶರಣಪ್ಪ ರೇವಡಿ, ವಿರೇಶ ಸಂಗಮದ, ರಾಚಯ್ಯ ಬಾಳಿಕಾಯಿಮಠ, ಮುತ್ತಣ್ಣ ಲಕ್ಕಲಕಟ್ಟಿ ಇತರರು ಇದ್ದರು.

***ಭಾಕ್ಸ***
ಗಜೇಂದ್ರಗಡ ತಾಲೂಕಿಗೆ ಗುರುತಿಸಿದ ಗ್ರಾಮ:
ಗಜೇಂದ್ರಗಡ ತಾಲ್ಲೂಕಿಗೆ ನರೇಗಲ್, ಮಾರನಬಸರಿ, ನಾಗೇಂದ್ರಗಡ, ಚಿಲಝರಿ, ಲಕ್ಕಲಕಟ್ಟಿ, ಉಣಚಗೇರಿ(ಗಜೇಂದ್ರಗಡ), ಅಮರಗಟ್ಟಿ, ಪುರ್ತಗೇರಿ, ರುದ್ರಾಪೂರ, ಹಿರೇಕೊಪ್ಪ, ಮಾಟರಂಗಿ, ರಾಂಪೂರ, ನಾಗರಸಕೊಪ್ಪ, ವಿರಾಪೂರ, ಗೋಗೇರಿ, ಕುಂಟೋಜಿ, ರಾಜೂರ, ವದೇಗೋಳ, ಭೈರಾಪೂರ, ಜಿಗೇರಿ, ಕೊಡಗಾನೂರ, ಮ್ಯಾಕಲಝರಿ, ದಿಂಡೂರ, ಗೌಡಗೇರಿ, ನಿಡಗುಂದಿ, ಬೆಣಚಮಟ್ಟಿ, ಕಳಕಾಪೂರ, ಹಾಲಕೇರಿ, ಸೂಡಿ, ಬಳಗೋಡ, ಬೆವನಕಟ್ಟಿ, ಗುಳಗುಳಿ, ಇಟಗಿ, ದ್ಯಾಮುಣಸಿ, ಮುಶಿಗೇರಿ, ಹಿರೇಅಳಗುಂಡಿ, ಶಾಂತಗೇರಿ, ಚಿಕ್ಕಅಳಗುಂಡಿ, ನೆಲ್ಲೂರ, ಹಿರೇಕುರಬನಾಳ, ಬೊಮ್ಮಸಾಗರ, ಕಲ್ಲಿಗನೂರ, ಸರ್ಜಾಪೂರ ಗ್ರಾಮ ಸೇರಿ ಒಟ್ಟು 43 ಗ್ರಾಮಗಳು ಮತ್ತು 7 ಕಂದಾಯ ಗ್ರಾಮಗಳನ್ನು ಒಳಗೊಂಡು ಒಟ್ಟು 50 ಗ್ರಾಮಗಳನ್ನು ಗಜೇಂದ್ರಗಡಡ ನೂತನ ತಾಲೂಕಿಗೆ ಸೇರ್ಪಡೆಯಾಗಲು ಗುರುತಿಸಿದ ಗ್ರಾಮಗಳಾಗಿವೆ.
ಗಜೇಂದ್ರಗಡ ತಾಲೂಕಿಗೆ ನಾಲ್ಕು ಸಮೀತಿ ವರದಿ ಸಲ್ಲಿಕೆ:
ಸಧ್ಯ ರೋಣ ತಾಲ್ಲೂಕಿನ 42ಕ್ಕೂ ಅಧಿಕ ಗ್ರಾಮಗಳ ನಾಗರಿಕರು ವ್ಯಾಪಾರ, ವಿದ್ಯಾಭ್ಯಾಸ, ವಿಶೇಷ ತಹಶೀಲ್ದಾರ ಹಾಗೂ ಉಪನೋಂದಣೀ ಕಾರ್ಯಾಲಯಕ್ಕೆ ಎಲ್ಲದಕ್ಕೂ ಗಜೇಂದ್ರಗಡವನ್ನೆ ಅವಲಂಬಿಸಿದ್ದಾರೆ. ತಾಲ್ಲೂಕುಗಳ ಪುನರ್‍ರಚನೆ ಸಬಂಧ ಈ ಹಿಂದೆ ನಾಲ್ಕು ಸಮಿತಿಗಳು ವರದಿ ನೀಡಿದ್ದವು. ಇದರಲ್ಲಿ ಎಂ. ವಾಸುದೇವರಾವ್, ಪಿ.ಸಿ ಗದ್ದಿಗೌಡರ, ಟಿ ಎಂ ಹುಂಡೇಕಾರ ಸಮೀತಿಗಳು ಗಜೇಂದ್ರಗಡ ತಾಲೂಕ ಕೇಂದ್ರವಾಗಲು ಯೋಗ್ಯವಾಗಿದೆ ಎಂದು ವರದಿ ಸಲ್ಲಿಸಿದ್ದವು. 2008ರಲ್ಲಿ ಬಿ.ಎಸ್ ಯಡಿಯೂರಪ್ಪ ಮುಖ್ಯಮಂತ್ರಿಗಳಾಗಿದ್ದಾಗ ರಚನೆಗೊಂಡ ನಿವೃತ್ತ ಐಎಎಸ್ ಅಧಿಕಾರಿ ಎಂ.ಬಿ ಪ್ರಕಾಶ ನೇತೃತ್ವದ ಸಮಿತಿ ಗಜೇಂದ್ರಗಡವನ್ನು ನೂತನ ತಾಲೂಕ ಪಟ್ಟಿಯಿಂದ ಕೈಬಿಟ್ಟಿತು. ಕೆಲ ದಿನಗಳ ಹಿಂದೆ ಸರ್ಕಾರ ಪ್ರಕಾಶ ವರದಿ ಆಧರಿಸಿ ನೂತನ ತಾಲೂಕು ಕೇಂದ್ರಗಳ ರಚನೆಗೆ ಮುಂದಾಗಿದೆ ಎಂದು ತಿಳಿಯಲಾಗಿತ್ತು. ಆಗ ” ಗಜೇಂದ್ರಗಡ ತಾಲೂಕ ಹೋರಾಟ ಸಮೀತಿ ” ಮೆಲಿಂದ ಮೇಲೆ ಆಗಿನ ಮುಖ್ಯಮಂತ್ರಿ ಜಗದೀಶ ಶೆಟ್ಟರರನ್ನು ಭೇಟಿ ಮಾಡಿ ತಾಲೂಕ ಕೇಂದ್ರವನ್ನಾಗಿ ಮಾಡಲು ಮನವಿ ಸಲ್ಲಿಸಿತು. ಬಜೆಟ್ ಮಂಡಣೆ ಪೂರ್ವದಲ್ಲಿಯೂ ತಾಲೂಕು ಹೋರಾಟ ಸಮೀತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದರು.

loading...