ಗೃಹಬಳಕೆ ಅನಿಲ ಬೆಲೆ ಗಗನಕ್ಕೆ: ವೆಲ್ಫೇರ್ ಪಾರ್ಟಿ ಪ್ರತಿಭಟನೆ

0
20
loading...

ಕನ್ನಡಮ್ಮ ಸುದ್ದಿ-ಭಟ್ಕಳ : ಕೇಂದ್ರ ಸರ್ಕಾರ ಗೃಹಬಳಕೆ ಅನಿಲ ಹಾಗೂ ಬ್ಯಾಂಕ್ ವ್ಯವಹಾರಗಳ ಮೇಲಿನ ಶುಲ್ಕವನ್ನು ಹೆಚ್ಚಳ ಮಾಡಿ ಜನಸಮಾನ್ಯರ ಜೀವನ ದುಸ್ತಗೊಳಿಸಿದೆ ಎಂದು ಭಟ್ಕಳ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಕಾರ್ಯಕರ್ತರು ಶುಕ್ರವಾರ ಸಂಜೆ ಸಹಾಯಕ ಆಯುಕ್ತರ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ರಾಷ್ಟ್ರಪತಿಗಳಿಗೆ ಮನವಿ ಅರ್ಪಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವೆಲ್ಫೇರ್ ಪಾರ್ಟಿ ಭಟ್ಕಳ ತಾಲೂಕು ಅಧ್ಯಕ್ಷ ಖಮರುದ್ದೀನ್ ಮಷಾಯಿಖ್, “ಅಛ್ಛೆ ದಿನ್ ಆಯಿಂಗೆ” ಎಂದು ಜನರನ್ನು ಮರಳು ಮಾಡಿ ಅಧಿಕಾರಕ್ಕೆ ಬಂದ ಕೇಂದ್ರದ ಮೋದಿ ಸರ್ಕಾರ ದಿನೆ ದಿನೆ ಅವಶ್ಯಕ ವಸ್ತುಗಳ ಬೆಲೆಯನ್ನು ಏರಿಸುವುದರ ಮೂಲಕ ಜನ ಜೀವನ ದುಸ್ತರಗೊಳಿಸಿದೆ. ಪೆಟ್ರೋಲ್, ಡಿಸೇಲ್, ಗೃಹಬಳಕೆಯ ಅನಿಲ, ಏಕಾಎಕಿ ನೋಟ್ ಅಮಾನ್ಯೀಕರಣ ಮಾಡುವುದರ ಮೂಲಕ ಜನರ ಬದುಕುವ ಹಕ್ಕನ್ನು ಕಸಿದುಕೊಳ್ಳುತ್ತಿದೆ ಎಂದು ಆರೋಪಿಸಿದರು.
478 ರೂ ಇದ್ದ ಗೃಹಬಳಕೆ ಅನಿಲದ ಬೆಲೆಯನ್ನು ಇಂದು 765 ರೂ ಗೆ ಹೆಚ್ಚಿಸಲಾಗಿದ್ದು ಕಮರ್ಷಿಯಲ್ ಅನಿಲವನ್ನು 935 ರೂ ಗೆ ಏರಿಸಲಾಗಿದೆ. ದೇಶವನ್ನು ಡಿಜಿಟಲೈಜ್ಡ್ ಮಾಡುವುದಾಗಿ ಹೇಳಿದ ಸರ್ಕಾರ ಈಗ ಏಕಾಎಕಿ ಪ್ರಮುಖ ಬ್ಯಾಂಕುಗಳ ಶುಲ್ಕವನ್ನು ಹೆಚ್ಚಳ ಮಾಡಿದೆ ಇದರಿಂದಾಗಿ ಸಣ್ಣಪುಟ್ಟ ವ್ಯಾಪಾರಿಗಳಿಗೆ, ಬಡ ಮಧ್ಯಮ ವರ್ಗದವರಿಗೆ ತುಂಬಾ ತೊಂದರೆಯಾಗುತ್ತಲಿದೆ ಅಚ್ಚೆ ದಿನಗಳ ನಿರೀಕ್ಷೆಯಲ್ಲಿದ್ದ ಜನಸಮಾನ್ಯರ ಮೇಲೆ ಬರೆ ಎಳೆದಂತಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಮುಖಂಡರಾದ ಡಾ.ನಸೀಮ್ ಖಾನ್, ಸೈಯ್ಯದ್ ಅಶ್ರಫ್ ಬರ್ಮಾವರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶೌಕತ್ ಖತೀಬ್, ಜಿಲ್ಲಾ ಯುವಾ ಮೋರ್ಚಾ ಅಧ್ಯಕ್ಷ ಸೈಯ್ಯದ್ ಅಬುಲ್ ಅಲಾ ಬರ್ಮಾವರ್, ಫಾರುಖ್ ಮಾಸ್ಟರ್, ಅಬ್ದುಲ್ ಜಬ್ಬಾರ್ ಅಸದಿ, ಅಬ್ದುಲ್ ಮಜೀದ್ ಕೋಲಾ ಹಾಗೂ ಮಹಿಳಾ ಮೋರ್ಚಾದ ಸದಸ್ಯರು ಉಪಸ್ಥಿತರಿದ್ದರು.

loading...