ರೇಲ್ವೆಗಾಗಿ ಜಮೀನು ನೀಡಿದ ಕುಟುಂಬಕ್ಕೆ ಉದ್ಯೋಗ ವಿಳಂಬ: ಜೋಶಿ

0
28
loading...

ಕನ್ನಡಮ್ಮ ಸುದ್ದಿ-ನವದೆಹಲಿ/ ಹುಬ್ಬಳ್ಳಿ : 2010 ರಲ್ಲಿ ರೇಲ್ವೆ ಮಂಡಳಿ ರೇಲ್ವೆ ಅಭಿವೃದ್ಧಿಗಾಗಿ ಭೂಮಿ ಕಳೆದುಕೊಂಡವರ ಕುಟುಂಬದ ಒಬ್ಬ ಸದಸ್ಯರಿಗೆ ನೌಕರಿ ನೀಡುವ ಬಗ್ಗೆ ಹೊರತಂದ ಮಾರ್ಗದರ್ಶಿ ಆದೇಶ ಈ ವರೆಗೂ ಅನುಷ್ಠಾನಗೊಳ್ಳದೇ ರೇಲ್ವೆಗೆ ಭೂಮಿ ನೀಡಿದ ಕುಟುಂಬದವರು ಅನಿಶ್ಚತೆಯಲ್ಲಿರುವದರಿಂದ ಅದರಲ್ಲಿರುವ ನ್ಯೂನ್ಯತೆಗಳನ್ನು ಸರಿಪಡಿಸಿ ಅನುಷ್ಠಾನಗೊಳಿಸುವ ಕ್ರಮ ಕೈಗೊಳ್ಳಬೇಕೆಂದು ಸಂಸದ ಪ್ರಲ್ಹಾದ ಜೋಶಿ ಸರಕಾರವನ್ನು ಒತ್ತಾಯಿಸಿದರು. ಅವರು ಇಂದು ಬೆಳಿಗ್ಗೆ ಸಂಸತ್ತಿನಲ್ಲಿ ಶೂನ್ಯವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿ ಮಾತನಾಡಿದರು.

ರೇಲ್ವೆ ಮಂಡಳಿ ದಿನಾಂಕ 16.7.2010 ರಂದು ಎಲ್ಲ ರೇಲ್ವೆ ಜನರಲ್ ಮ್ಯಾನೇಜರ್‍ಗಳಿಗೆ ನೀಡಿದ ಸುತ್ತೋಲೆಯಲ್ಲಿ ಆಯಾ ವಲಯದಲ್ಲಿ ರೇಲ್ವೆ ಅಭಿವೃದ್ಧಿಗಾಗಿ ಭೂಮಿ ನೀಡಿದ ಕುಟುಂಬದ ಒಬ್ಬರು ಅರ್ಹ ಸದಸ್ಯರಿಂದ ರೇಲ್ವೆಯಲ್ಲಿ ‘ಡಿ’ ಗ್ರೂಪ್ ನೌಕರಿಗಾಗಿ ಅರ್ಜಿಗಳನ್ನು ಪಡೆದು ಆ ಸುತ್ತೋಲೆಯಲ್ಲಿ ವಿವರಿಸಿದ ಅರ್ಹತಾ ಅಂಶಗಳನ್ನು ಪರಿಗಣಿಸಿ ಸೂಕ್ತ ಕ್ರಮಕ್ಕಾಗಿ ನಿರ್ದೇಶನ ನೀಡಿತ್ತು. ಅದರನ್ವಯ ಹುಬ್ಬಳ್ಳಿಯಲ್ಲಿಯ ನೈರುತ್ಯ ರೇಲ್ವೆ ಕಛೇರಿಯಿಂದಲೂ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಪಡೆದು ಕ್ರೂಡಿಕರಿಸಿರುವದಾಗಿ ತಿಳಿದು ಬರುವುದ. ಆದರೆ ಈ ಸುತ್ತೋಲೆ ಹೊರಬಂದು 7 ವರ್ಷಗಳಾದರೂ ಯಾವುದೇ ಕ್ರಮವಾಗಿಲ್ಲ, ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಈ ಸುತ್ತೋಲೆಯ ಕೆಲವು ವಿಷಯಗಳು ಅಸ್ಪಷ್ಟವಾಗಿರುವ ಕಾರಣ ಈ ಬಗ್ಗೆ ಯಾವುದೇ ನಿರ್ದಿಷ್ಟ ಕ್ರಮ ಸಾಧ್ಯವಾಗಿಲ್ಲ, ಸ್ಪಷ್ಟೀಕರಣಕ್ಕಾಗಿ ರೇಲ್ವೆಮಂಡಳಿಯನ್ನು ಕೋರಲಾಗಿದ್ದು ಸ್ಪಷ್ಟೀಕರಣ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸುತ್ತಾರೆ. ಆದರೆ ಭೂಮಿ ಕಳೆದುಕೊಂಡ ಕುಟುಂಬಗಳು ಈವರೆಗೂ ನಿರೀಕ್ಷೆಯಲ್ಲೇ ಇದ್ದು ನಿರಾಶರಾಗುತ್ತಿದ್ದಾರೆ. ಕಾರಣ ಈ ಬಗ್ಗೆ ರೇಲ್ವೆ ಸಚಿವರು ಈ ಸುತ್ತೋಲೆಯಲ್ಲಿನ ಅಸ್ಪಷ್ಟತೆಯನ್ನು ವಾರಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕೆಂದು ಪ್ರಲ್ಹಾದ ಜೋಶಿ ಸರಕಾರವನ್ನು ಆಗ್ರಹಿಸಿದ್ದಾರೆ.

loading...