ವಾಜಪೇಯಿ ನಗರ ವಸತಿ ಯೋಜನೆ ಫಲಾನುಭವಿಗಳಿಗೆ ಆದೇಶ ಪತ್ರ ವಿತರಣೆ

0
142
loading...

ಕನ್ನಡಮ್ಮ ಸುದ್ದಿ-ಮುಂಡರಗಿ : ವಾಜಪೇಯಿ ನಗರ ವಸತಿ ಯೋಜನೆಯಡಿಯಲ್ಲಿ 93 ಎಸ್ಸಿ, ಎಸ್ಟಿ ಜನಾಂಗದ ಫಲಾನುಭವಿಗಳಿಗೆ ಈಗ ಮನೆ ನಿರ್ಮಿಸಿಕೊಳ್ಳಲು ಸರ್ಕಾರದಿಂದ ಸಹಾಯ ಧನದ ಆದೇಶಪತ್ರ ನೀಡಲಾಗುತ್ತಿದೆ. ಬರುವ ದಿನಗಳಲ್ಲಿ ಬಸವ ವಸತಿ ಯೋಜನೆಯಡಿಯಲ್ಲಿ ಶಿರಹಟ್ಟಿ, ಲಕ್ಷ್ಮೇಶ್ವರ, ಮುಂಡರಗಿಯ ಸಾಮಾನ್ಯ ವರ್ಗದ ಒಟ್ಟು 600 ಫಲಾನುಭವಿಗಳಿಗೆ ಮನೆ ನಿರ್ಮಿಸಿಕೊಳ್ಳಲು ಸಹಾಯಧನ ನೀಡಲಾಗುವುದು ಎಂದು ಶಾಸಕ ರಾಮಕೃಷ್ಣ ದೊಡ್ಡಮನಿ ಹೇಳಿದರು
ಪುರಸಭೆ ಸಭಾಭವನದಲ್ಲಿ 2016-17ನೇ ಸಾಲಿನ ವಾಜಪೇಯಿ ನಗರ ವಸತಿ ಯೋಜನೆಯಡಿಯಲ್ಲಿ ಆಯ್ಕೆಯಾದ ಎಸ್ಸಿಎಸ್ಟಿ ಫಲಾನುಭವಿಗಳಿಗೆ ಸೋಮವಾರ ಆದೇಶ ಪತ್ರ ವಿತರಿಸಿ ಅವರು ಮಾತನಾಡಿದರು.
ಸಾರ್ವಜನಿಕರು ವಾಜಪೇಯಿ ನಗರ ವಸತಿ ಯೋಜನೆಯಡಿಯಲ್ಲಿ ಮತ್ತು ಪುರಸಭೆಯಿಂದ ಆಶ್ರಯ ಮನೆಗಳನ್ನು ಪಡೆದುಕೊಳ್ಳಲು ಅಧಿಕಾರಿಗಳಿಗೆ ಅಥವಾ ಮಧ್ಯೆ ವರ್ತಿಗಳಿಗೆ ಲಂಚ ನೀಡಬಾರದು. ಒಂದು ವೇಳೆ ಯಾರಾದರೂ ಲಂಚ ಪಡೆದರೇ ಅಂತವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ತಿಳಿಸಿದರು.
ಜಿ.ಪಂ.ಅಧ್ಯಕ್ಷ ವಾಸಣ್ಣ ಕುರಡಗಿ ಮಾತನಾಡಿ, ರಾಜ್ಯ ಸರ್ಕಾರದಿಂದ ವಸತಿ ಯೋಜನೆಯಾಗಿ ಅನೇಕ ಯೋಜನೆ ಜಾರಿ ತರಲಾಗಿದೆ. ಅಂತಹ ಯೋಜನೆಗಳ ಬಗೆಗೆ ಅಧಿಕಾರಿಗಳು ಜನರಿಗೆ ತಿಳುವಳಿಕೆ ನೀಡಬೇಕು. ಸಾರ್ವಜನಿಕರು ಅವುಗಳನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಪುರಸಭೆ ಅಧ್ಯಕ್ಷೆ ಹೇಮಾವತಿ ಅಬ್ಬಿಗೇರಿ ಮಾತನಾಡಿದರು.
ಬಾಕ್ಸ್ ಸುದ್ದಿ…
ವಾಜಪೇಯಿ ನಗರ ವಸತಿ ಯೋಜನೆಯಡಿಯಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡುವ ವಿಚಾರದಲ್ಲಿ ಪುರಸಭೆ ಅಧ್ಯಕ್ಷರಾದ ನಮ್ಮನ್ನು ಗಣನೆಗೆ ತಗೆದುಕೊಂಡಿಲ್ಲ, ಆದ್ದರಿಂದ ನಾವು ಸಾರ್ವಜನಿಕರಂತೆ ಕಾರ್ಯಕ್ರಮ ವೇದಿಕೆ ಮುಂದೆ ಕುಳಿತುಕೊಳ್ಳುತ್ತೇವೆ ಎಂದು ಪುರಸಭೆ ಅಧ್ಯಕ್ಷೆ ಹೇಮಾವತಿ ಅಬ್ಬಿಗೇರಿ ಶಾಸಕ ರಾಮಕೃಷ್ಣ ದೊಡ್ಡಮನಿ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಸಾರ್ವಜನಿಕ ಆಸನದಲ್ಲಿ ಕುಳಿತುಕೊಂಡರು.
ಪುರಸಭೆ ಅಧ್ಯಕ್ಷೆಯಾಗಿ ಕಾರ್ಯಕ್ರಮ ಶೋಭೆ ತರುವಂತ ಕೆಲಸ ಮಾಡಬೇಕು. ಆ ರೀತಿ ಕಾರ್ಯಕ್ರಮದಲ್ಲಿ ಕುಳಿತುಕೊಳ್ಳುವುದು ತಪ್ಪು ವೇದಿಕೆ ಮೇಲೆ ಬನ್ನಿ ಎಂದು ಜಿ.ಪಂ.ಅಧ್ಯಕ್ಷ ವಾಸಣ್ಣ ಕುರಡಗಿ ಅಧ್ಯಕ್ಷೆ ಹೇಮಾವತಿ ಅವರಿಗೆ ಮನವಿ ಮಾಡಿದರು.
ಸಾರ್ವಜನಿಕರು ನಮಗೆ ಮತ ಹಾಕಿ ಕಳುಹಿಸಿದ್ದಾರೆ, ಯೋಜನೆಯಲ್ಲಿ ಆಯ್ಕೆಯಾದ ಫಲಾನುಭವಿಗಳು ಯಾರು ಎನ್ನುವುದು ನಮಗೆ ತಿಳಿದಿಲ್ಲ, ನಾವು ಜನಪ್ರತಿನಿಧಿಗಳು ಯಾಗಿರೋದು ಯಾವುದಕ್ಕೆ, ನೀವು ಆಯ್ಕೆ ಮಾಡಿಲ್ಲ ಶಾಸಕರು ನಮ್ಮನ್ನು ಆಯ್ಕೆ ಮಾಡಿದ್ದಾರೆ ಎಂದು ಫಲಾನುಭವಿಗಳು ಹೇಳಿದಾಗ ನಾವು ಪುರಸಭೆ ಸದಸ್ಯರಾಗಿದ್ದು ಏನಕ್ಕೆ ಅಂತ ಬೇಸರವಾಗುತ್ತೆ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಪರುಶುರಾಮ ಕರಡಿಕೊಳ್ಳ ಹೇಳಿದರು.
ಇದೇಲ್ಲಕ್ಕೂ ಪ್ರತಿಕ್ರಿಯಿಸಿ ಶಾಸಕ ರಾಮಕೃಷ್ಣ ದೊಡ್ಡಮನಿ, ಫಲಾನುಭವಿಗಳ ಆಯ್ಕೆ ಮಾಡುವ ವಿಚಾರದಲ್ಲಿ ಆಶ್ರಯ ಕಮೀಟಿ ಮಾಡಲಾಗಿದೆ. ಅದರಲ್ಲಿ ಪುರಸಭೆ ಅಧ್ಯಕ್ಷರು ಸಹ ಸದಸ್ಯರಿದ್ದಾರೆ. ಅವರ ಗಮನಕ್ಕೆ ತಂದು ಫಲಾನುಭವಿಗಳ ಆಯ್ಕೆ ಮಾಡಲಾಗಿದೆ. ಸುಮ್ಮನೇ ರಾಜಕೀಯ ಮಾಡಬಾರದು. ಸಾರ್ವಜನಿಕ ಅಭಿವೃದ್ಧಿ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಿ ಶ್ರಮಿಸಬೇಕು ಹೊರತು ಯಾವುದೋ ಕ್ಷುಲ್ಲಕ ಕಾರಣಕ್ಕೆ ಅಭಿವೃದ್ಧಿ ಕಾರ್ಯವನ್ನು ಹಾಳು ಮಾಡುವುದು ಸರಿಯಲ್ಲ. ಆದ್ದರಿಂದ ಪುರಸಭೆ ಅಧ್ಯಕ್ಷರು ಹಾಗೂ ಸದಸ್ಯರು ಕಾರ್ಯಕ್ರಮ ವೇದಿಕೆ ಮೇಲೆ ಬಂದು ಕಾರ್ಯಕ್ರಮ ನಡೆಸಬೇಕು ಎಂದರು.
ಈ ಸಂದರ್ಭದಲ್ಲಿ ಕೆಲ ಸಮಯ ಮಾತಿನ ಚಕಮುಖಿ ನಡೆಯಿತು. ನಂತರ ಗೊಂದಲ ತಿಳಿಯಾಗಿ ಕಾರ್ಯಕ್ರಮ ಮುಂದುವರೆಯಿತು.
ಇದೇ ಸಂದರ್ಭದಲ್ಲಿ ಪುರಸಭೆ ಉಪಾಧ್ಯಕ್ಷ ಬಸವರಾಜ ನರೇಗಲ್, ಸ್ಥಾಯಿ ಸಮಿತಿ ಅಧ್ಯಕ್ಷ ಪರುಶುರಾಮ ಕರಡಿಕೊಳ್ಳ, ಸದಸ್ಯರಾದ ವೀರೇಶ ಸಜ್ಜನರ, ಕೊಟ್ರಮ್ಮ ಇಟಗಿ, ರೇಖಾ ದೇಸಾಯಿ, ದಾನೇಶ್ವರಿ ಭಜಂತ್ರಿ, ರೀಹಾನಬೇಗಂ ಕೆಲೂರ, ಬಸವರಾಜ ರಾಮೇನಹಳ್ಳಿ, ಶಾರದ ದೇಸಾಯಿ, ಮುಖಂಡರಾದ ಧ್ರುವಕುಮಾರ ಹೊಸಮನಿ, ಕೊಟ್ರೇಶಪ್ಪ ಅಂಗಡಿ, ಶ್ರೀನಿವಾಸ ಅಬಿಗೇರಿ ಸೇರಿದಂತೆ ಇತರರು ಇದ್ದರು.
ಮುಖ್ಯಾಧಿಕಾರಿ ಎಂ.ಎ.ನೂರುಲ್ಲಾಖಾನ್ ಪ್ರಾಸ್ಥವಿಕವಾಗಿ ಮಾತನಾಡಿ ಸ್ವಾಗತಿಸಿದರು. ಆರ್.ಎ.ಹೊಸಮನಿ ಕಾರ್ಯಕ್ರಮ ನಿರ್ವಹಿಸಿದರು.

loading...