‘ವೀರ ಸಿಂಧೂರ ಲಕ್ಷ್ಮಣ’ ನಾಟಕ ಪ್ರದರ್ಶನ

0
75
loading...

ಕನ್ನಡಮ್ಮ ಸುದ್ದಿ-ಹಾನಗಲ್ಲ : ಸ್ನೇಹಿತನ ನೆನಪಿಗಾಗಿ ತಾ.ಪಂ ಅಧ್ಯಕ್ಷ ಶಿವಬಸವ ಪೂಜಾರ ಅವರು ಬಣ್ಣ ಹಚ್ಚಲಿದ್ದು, ನಾಟಕದ ಮೂಲಕ ಅಗಲಿದ ಗೆಳೆಯನಿಗೆ ರಂಗ ನಮನ ಸಲ್ಲಿಸುವುದಕ್ಕಾಗಿ ಇದೇ 25 ರಂದು ಶನಿವಾರ ಸಂಜೆ ಇಲ್ಲಿನ ಶ್ರೀಕುಮಾರೇಶ್ವರ ಬಯಲು ರಂಗ ಮಂದಿರದಲ್ಲಿ ‘ವೀರ ಸಿಂಧೂರ ಲಕ್ಷ್ಮಣ’ ನಾಟಕ ಪ್ರದರ್ಶನ ಆಯೋಜಿಸಿದ್ದಾರೆ.
ಶಿವಬಸವ ಪೂಜಾರ ಅವರು ‘ಸಿಂಧೂರ ಲಕ್ಷ್ಮಣ’ ಪಾತ್ರ ನಿರ್ವಹಿಸಲಿರುವ ಈ ನಾಟಕವು ಸ್ನೇಹಿತ, ಹೆಸರಾಂತ ರಂಗ ಕಲಾವಿದ ದಿ.ವಸಂತ ಕಡೂರ ಅವರಿಗೆ ರಂಗ ನಮನದ ಮೂಲಕ ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸುವ ಉದ್ದೇಶದಿಂದ ನಡೆಯಲಿದ್ದು, ಸ್ಥಳೀಯ ರಂಗ ಕಲಾವಿದರು ಅವರಿಗೆ ಸಾತ್ ನೀಡಲಿದ್ದಾರೆ.
ತಾಲೂಕು ಪಂಚಾಯಿತಿ ಅಧ್ಯಕ್ಷ ಶಿವಬಸವ ಪೂಜಾರ ಅವರು ಈ ಭಾಗದಲ್ಲಿ ಹೆಸರು ಪಡೆದ ಪಳಗಿದ ರಂಗ ಕಲಾವಿದರು. ‘ವೀರ ಸಿಂಧೂರ ಲಕ್ಷ್ಮಣ’ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ನಾಟಕಗಳಲ್ಲಿ ರಂಗವೇರುವ ಅವರಲ್ಲಿ ಸಿಂಧೂರ ಲಕ್ಷ್ಮಣ, ಸಂಗೊಳ್ಳಿ ರಾಯಣ್ಣ ಪರಕಾಯ ಪ್ರವೇಶವಾದಂತೆ ಭಾಸವಾಗುತ್ತದೆ.
ತಾಲೂಕಿನ ಆಡೂರ ಗ್ರಾಮದ ಕೃಷಿಕ, ಉದ್ಯಮಿಯಾದ ಶಿವಬಸವ ಪೂಜಾರ ಅವರು ಸುತ್ತಲಿನ ಗ್ರಾಮಗಳ ಕಲಾವಿದರನ್ನು ಕಟ್ಟಿಕೊಂಡು ಹವ್ಯಾಸಿ ರಂಗ ಕಲಾ ತಂಡದ ಮೂಲಕ ನಾಡಿನೆಲ್ಲೆಡೆ ನಾಟಕ ಪ್ರದರ್ಶನ ನೀಡಿದ್ದಾರೆ.
ಪಕ್ಕದ ಬಾಳಂಬೀಡ ಗ್ರಾಮದ ವಸಂತ ಕಡೂರ ಈ ತಂಡದ ನುರಿತ ಕಲಾವಿದ. 400 ಕ್ಕೂ ಅಧಿಕ ನಾಟಕಗಳಲ್ಲಿ ಕಲಾ ಫ್ರೌಡಿಮೆ ಮೆರೆದರು. ವಿವಿಧ ಸಂಘ, ಸಂಸ್ಥೆಗಳ ಮೂಲಕ ಸಂಗೀತ, ಕಲೆ, ಸಾಹಿತ್ಯ, ನಾಟಕ ಕಲೆಯ ಉಳಿವಿಗಾಗಿ ಶ್ರಮಿಸಿದವರು.
ಫೆಬ್ರವರಿ 17 ರಂದು ತಮ್ಮ ಬಾಳ ಪಯಣ ಮುಗಿಸಿದ ಅವರ ನೆನಪಿಗಾಗಿ ತಮ್ಮ ತಂಡದೊಂದಿಗೆ ಮತ್ತೊಮ್ಮೆ ರಂಗ ಪ್ರದರ್ಶನಕ್ಕೆ ಸಜ್ಜಾಗಿದ್ದಾರೆ ತಾಲೂಕು ಪಂಚಾಯಿತಿ ಅಧ್ಯಕ್ಷ ಶಿವಬಸವ ಪೂಜಾರ.
ಕಲಾವಿದರಾದ ಕೆ.ಆರ್ ಹಿರೇಮಠ, ಎಸ್,ಬಿ ಹಿರೇಮಠ, ಬಸವರಾಜ ಅಂಗಡಿ, ರವಿ ಲಕ್ಷ್ಮೇಶ್ವರ, ಬಾಲಚಂದ್ರ ಅಂಬಿಗೇರ, ಅಶೋಕ ತೋಟದ, ಕೃಷ್ಣಾ ಸುಂಕದ, ಮಾಲತೇಶ ಗುಂಡೇರ, ಗುಡ್ಡಪ್ಪ ಪೊಲೀಸಿ ಮತ್ತು ವೃತ್ತಿಪರ ಕಲಾವಿದೆ ಭಾರತಿ ದಾವಣಗೇರಿ, ರಂಬಾ ಶಿಗ್ಗಾಂ ನಾಟಕದಲ್ಲಿ ಅಭಿನಯಿಸಲಿದ್ದಾರೆ.

loading...