ಸಂಗೀತ ಕಲಿಸಿ, ಉಳಿಸಿ, ಬೆಳಸಿ: ಶಾಂತಲಕ್ಷ್ಮೀ

0
32
loading...

ಕನ್ನಡಮ್ಮ ಸುದ್ದಿ
ಬೆಳಗಾವಿ : ಸಂಗೀತವನ್ನು ಕಲಿಯುವುದಷ್ಟೇ ಅಲ್ಲ ಅದನ್ನು ಬೇರೆಯವರಿಗೆ ಕಲಿಸಬೇಕು. ಇದರಿಂದ ಸಂಗೀತ ಉಳಿಯುತ್ತದೆ ಬೆಳೆಯುತ್ತದೆ. ಈ ಕಾರ್ಯವನ್ನು ನಾದಸುಧಾ ಸುಗಮ ಸಂಗೀತ ಶಾಲೆಯ ಸಂಸ್ಥಾಪಕ ಸತ್ಯನಾರಾಯಣ ಅವರು ಮಾಡುತ್ತಿದ್ದಾರೆಂದು ಕಲಾಶ್ರೀ ಪ್ರಶಸ್ತಿ ವಿಜೇತೆ ವಿದೂಷಿ ಶಾಂತಲಕ್ಷ್ಮೀ ನಾಗೇಂದ್ರನಾಥ ಇಂದಿಲ್ಲಿ ಹೇಳಿದರು.
ನಗರದ ತಿಲಕವಾಡಿಯಲ್ಲಿರುವ ಇಸ್ಕಾನ ಬಯಲು ವೇದಿಕೆಯಲ್ಲಿ ಬೆಳವಡಿ ಉತ್ಸವದಲ್ಲಿ ಹಾಗೂ ಸತೀಶ ಶುಗರ್ಸ ಸಂಗೀತ ಸ್ಪರ್ಧೆಯಲ್ಲಿ ಪಾಲ್ಗೊಂಡ ನಾದಸುಧಾ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭವನ್ನು ಹಮ್ಮಿಕೊಂಡಿದ್ದರು. ದೀಪ ಬೆಳಗುವುದರೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾಗೇಂದ್ರನಾಥ ಮೇಲಿನಂತೆ ಅಭಿಪ್ರಾಯ ಪಟ್ಟ ಅವರು ಸಂಗೀತ ಆರೋಗ್ಯವನ್ನು ನೀಡುತ್ತದೆ. ನೀರೋಗಿಯಾಗಿರುತ್ತಾನೆಂಬುದಕ್ಕೆ ಏಳು ದಶಕಗಳನ್ನು ಕಳೆದಿರುವ ನಾನೇ ಪ್ರತ್ಯಕ್ಷ ಸಾಕ್ಷಿ ಎಂದು ಹೇಳಿದರು.
ಅತಿಥಿಗಳಾಗಿ ಆಗಮಿಸಿದ್ದ ಲೇಖಕ ಗುಂಡೇನಟ್ಟಿ ಮಧುಕರ ಕನ್ನಡ ಸಾಹಿತ್ಯದಲ್ಲಿ ತ.ರಾ.ಸು. ಅವರ ಹಂಸಗೀತೆ, ಅನಕೃ ಅವರ ಸಂಧ್ಯಾರಾಗ ಹಾಗೂ ಭೈರಪ್ಪನವರ ಮಂದ್ರ ಹೀಗೆ ಹಲವಾರು ಕಾದಂಬರಿಗಳು ಸಂಗೀತ ಪರಂಪರೆ, ಮಹತ್ವ ಕುರಿತು ಕಥಾರೂಪದಲ್ಲಿ ನಿರೂಪಿಸಲ್ಪಟ್ಟವುಗಳಾಗಿವೆ. ಸಂಗೀತ ವಿದ್ಯಾರ್ಥಿಗಳಾದ ನೀವೆಲ್ಲ ಓದಲೇಬೇಕಾದಂತಹ ಕೃತಿಗಳೆಂದು ಹೇಳಿದ ಅವರು ಯಾವುದೇ ಒಂದು ಕಾರ್ಯಕ್ರಮ ಹಮ್ಮಿಕೊಳ್ಳುವುದು ಹಾಗೂ ಅದನ್ನು ಅಚ್ಚುಕಟ್ಟಾಗಿ ನಿಭಾಯಿಸವುದರ ಹಿಂದೆ ತುಂಬ ಶ್ರಮವಿದೆ, ಅದು ಸತ್ಯನಾರಾಯಣ ಅವರಿಗೆ ಕರಗತವಾಗಿದೆಯೆಂದರು.
ನಾದಸುಧಾ ಸುಗಮ ಸಂಗೀತ ಶಾಲೆ ಸಂಸ್ಥಾಪಕರಾದ ಸತ್ಯನಾರಾಯಣ ಮಕ್ಕಳು ತಮ್ಮಲ್ಲಿರುವ ಪ್ರತಿಭೆಯಿಂದ ಮುಂದೆ ಬಂದಿದ್ದಾರೆ ಇದರಲ್ಲಿ ನನ್ನದೇನೂ ಇಲ್ಲವೆಂದು ತುಂಬ ವಿನಮ್ರವಾಗಿ ನುಡಿದ ಅವರು ಸಂಗೀತ ಕಲಿಕೆಯನ್ನುವುದು ನಿತ್ಯ ನಿರಂತರವಾದದ್ದು ಅದಕ್ಕೆ ಕೊನೆಯೆಂಬುದಿಲ್ಲ. ನಿತ್ಯದ ಸಂಗೀತ ಸಾಧನೆಯೊಂದಿಗೆ ಕಲಾವಿದ ತನ್ನಲ್ಲಿರುವ ಪ್ರತಿಭೆ ಕಾಪಾಡಿಕೊಳ್ಳಬೇಕಾಗುತ್ತದೆ ಎಂದರು. ನಿಹಾರಿಕಾ, ಸೃಜನಾ, ಸ್ವಾತಿ ಸುತಾರ, ಸಾನಿಕಾ, ಅನನ್ಯಾ, ಅಭಿಜ್ಞಾ, ಅಂತರಾ, ಸ್ಫೂರ್ತಿ, ಸ್ನೇಹಾ ಇವರ ಸಾಧನೆಯನ್ನು ಗುರುತಿಸಿ ಫಲಪುಷ್ಪ, ನೆನಪಿನ ಕಾಣಿಕೆಗಳನ್ನು ನೀಡಿ ಸನ್ಮಾನಿಸಿ ಗೌರವಿಸಲಾಯಿತು.
‘ಗುಮ್ಮನ ಕರೆಯದಿರೆ…’ ದಾಸರ ಪದಕ್ಕೆ ಹೆಜ್ಜೆ ಹಾಕಿದ ಪುಟಾಣಿಗಳಾದ ಸ್ವಾತಿ ಹಾಗೂ ಸ್ಫೂರ್ತಿ ಜನರ ಗಮನ ಸೆಳೆದರು.
ಪುಟಾಣಿಗಳಾದ ಅಭಿಜ್ಞಾ (ಶರಣೆಂಬೆ ನಾ..) ನಿಹಾರಿಕಾ(ಅಮ್ಮಾ ನಾನು ದೇವರಾಣೆ…) ಸೃಜನಾ (ಮೀರಾ ಭಜನ), ಸಾನಿಕಾ ಠಾಕೂರ(ಬ್ರಹ್ಮ.. ವಿಷ್ಣು.. ಆಣಿ ಮಹೇಶ್ವರ..) ಸ್ವಾತಿ ಸುತಾರ(ಲಾಲಿ.. ಲಾಲಿ…) ಮುಂತಾದ ಹಾಡುಗಳಿಂದ ಜನರ ಮನ ತಣಿಸಿದರು. ವಿಜೇತ ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ರಾಜೇಂದ್ರ ಭಂಡಾರಿ, ಶ್ರೀಮತಿ ಗಿರಿಜಾ ಹಾಲಗಿ ನಿರೂಪಿಸಿದರು. ನರ್ಮದಾ ವಂದಿಸಿದರು.

loading...