ಸ್ತ್ರೀ ಎಂದರೆ ಅಷ್ಟೇ ಸಾಕೆ…?

0
44
loading...

ಹೆಣ್ಣು ಸಮಾಜದ ಕಣ್ಣು ಎಂಬ ಮಾತು ಈ ಪುರುಷ ಪ್ರದಾನ ಸಮಾಜದಲ್ಲಿ ಹೆಣ್ಣಿನ ಮಹತ್ವ ಎಷ್ಟೆಂಬುವುದನ್ನು ಯುಗ ಪುರುಷರು ಅರಿತುಕೊಳ್ಳಬೇಕಿದೆ. ಒಮ್ಮನಸ್ಸಿನಿಂದ ಪುರುಷರು ಹೆಣ್ಣಿನ ಮಹತ್ವವನ್ನು ಒಪ್ಪಿಕೊಂಡರೆ ಒಳ್ಳೆಯದು. ಪುರುಷರು ಹೆಣ್ಣಿನ ಮಹತ್ವವನ್ನು ತಿಳಿದುಕೊಳ್ಳದಿದ್ದರೆ ಈ ಪ್ರಪಂಚದಲ್ಲಿ ಮತ್ತ್ಯಾವ ವಿಷಯವನ್ನು ಅವರು ತಿಳಿದುಕೊಳ್ಳಲು ಸಾಧ್ಯವಿಲ್ಲ. ಸ್ತ್ರೀ ಎಂದರೆ ಅಷ್ಟೆ ಸಾಲದು ಅವಳನ್ನು ಗೌರವ ಭಾವನೆಯಿಂದ ಕಾಣಬೇಕು.
ಇಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ. ಇದು ಒಂದು ದಿನಕ್ಕೆ ಮಾತ್ರ ಸೀಮಿತವಾಗದಿರಲಿ. ಹಾಗಂತ ಪ್ರತಿ ದಿನವೂ ಆಚರಿಸಲು ಹೇಳುತ್ತಿಲ್ಲ. ಈ ಮಹಿಳಾ ದಿನಾಚರಣೆ ಎಂಬುವುದು ಕೇವಲ ಒಂದು ದಿನದ ನೆನಪಿಗಾಗಿ ಉಳಿಯಬಾರದು. ಪ್ರತಿ ದಿನ ಪ್ರತಿ ಕ್ಷಣ ಮಹಿಳೆಯರ ಬಗ್ಗೆ ಗೌರವ, ಪ್ರೀತಿ, ಕಾಳಜಿಯನ್ನು ಹೊಂದಬೇಕು. ಯಾವುದೇ ಒಂದು ಕೆಲಸವಾಗಬೇಕಾದರೆ ಅದಕ್ಕೆ ಸಂಘಟನೆ ಎನ್ನುವುದು ಮುಖ್ಯ. ಸಂಘಟನೆಯಿಂದ ಎಂತಹ ಕಷ್ಟ ಕೆಲಸವನ್ನಾದರೂ ಮಾಡಲು ಸಾಧ್ಯವಾಗುತ್ತದೆ. ಈ ಸಂಘಟನೆಯ ತದ್ರೂಪವೇ ಮಹಿಳಾ ದಿನಾಚರಣೆ. ಈ ಸಂಘಟನೆ ವರ್ಷಕ್ಕೊಂದು ಬಾರಿ ಆಚರಿಸುವ ಹಬ್ಬದಂತಾಗದಿರಲಿ .
ಹೆಣ್ಣು ಅಡಿಗೆ ಮನೆಗೆ ಮಾತ್ರ ಸೀಮಿತ ಎಂಬ ಮಾತೊಂದು ಹಿಂದಿನ ಕಾಲದಲ್ಲಿತ್ತು. ಆದರೆ ಇಂದು ಹೆಣ್ಣು ಅಡಿಗೆ ಮನೆಗೆ ಸೀಮಿತವಾಗಿರದೇ ಎಲ್ಲ ರಂಗಗಳಲ್ಲಿಯೂ ತನ್ನ ಚಾಪನ್ನು ಮುಂದುವರೆಸಿದ್ದಾಳೆ. ಓಡುವ ಕುದುರೆಯನ್ನು ಕಟ್ಟಿ ಹಿಡಿಯಲಾರದಷ್ಟು ಹೆಣ್ಣು ಮುಂದುವರೆದಿದ್ದಾಳೆ.
ಪುರುಷನಷ್ಟೇ ಸಮನಾಗಿ ಹೆಣ್ಣು ಕೆಲಸ ಮಾಡುತ್ತಿದ್ದಾಳೆ. ಆದರೆ, ಇದನ್ನು ಸಹಿಸಿಕೊಳ್ಳುವ ಮನೋಭಾವ ಪುರುಷರಿಗಿಲ್ಲ. ತಮಗೆ ಮುಖದ ಮೇಲೆ ಮೀಸೆ ಹೊತ್ತವರು ಎಂಬ ಅಹಂ ಹೆಚ್ಚು. ಮಹಿಳೆಯರಿಗೆ ಹಿಂದೆ ಜಡೆ ಇದ್ದ ಮಾತ್ರಕ್ಕೆ ಪುರುಷರಿಗಿಂತ ಕಡಿಮೆ ಎಂದು ಭಾವಿಸುವುದು ಬೇಡ. ಯಾಕೆಂದರೆ ಮೀಸೆಗಿಂದ ಜಡೆಯ ಅಳತೆಯೇ ಹೆಚ್ಚು, ಬಲಿಷ್ಠ ಕೂಡ.
ಹೆಣ್ಣು ಶತಮಾನಗಳಿಂದ ಮೇಲು ಕೀಳೆಂಬ ಭಾವನೆಗಳನ್ನು ಅನುಭವಿಸುತ್ತ, ಶೋಷಣೆಗೆ ಒಳಗಾಗುತ್ತ ಬಂದಿದ್ದಾಳೆ. ಈ ಹಿಂದೆ ಕೇವಲ ನಾಲ್ಕು ಗೋಡೆಗಳ ಮಧ್ಯದಲ್ಲಿಯೇ ಇರಬೇಕು, ಮನೆಯಿಂದ ಹೊರಗೆ ಬಂದರೆ ಅದು ಹೆಣ್ಣಿಗೆ ಅಪಚಾರ ಎಂಬಂತೆ ಆವತ್ತಿನ ವಿಚಾರಗಳದ್ದವು. ಸತಿ ಸಹಗಮನ ಪದ್ಧತಿಯು ಹೆಣ್ಣಿನ ಬದುಕಿಗೆ ಒಂದು ಮಾರಕ ರೋಗದಂತೆ ಅಪ್ಪಳಿಸುತ್ತಿತ್ತು. ಗಂಡ ಸತ್ತ ಕೂಡಲೆ ಹೆಂಡತಿಯೂ ಚಿತೆಗೆ ಹಾರುವುದು ಎಷ್ಟು ಸರಿ? ಒಂದು ವೇಳೆ ಹೆಣ್ಣು ಸತ್ತರೆ ಗಂಡು ಬೆಂಕಿಗೆ ಹಾರುತ್ತಿದ್ದನೇ? ಖಂಡಿತಾ ಇಲ್ಲ. ಬದಲಾಗಿ ಹೆಂಡತಿಯನ್ನು ಸುಟ್ಟ ಬೆಂಕಿ ಆರುವ ಮೊದಲೇ ಗಂಡನೆನಿಸಿಕೊಂಡವನು ಎರಡನೇ ಮದುವೆಗೆ ಸಜ್ಜಾಗುತ್ತಿದ್ದನು. ಎಂಥ ವಿಪರ್ಯಾಸವಲ್ಲವೇ? ಈ ಒಂದು ಉದಾಹರಣೆ ಸಾಕು ಹೆಣ್ಣು ಎಷ್ಟೆಲ್ಲ ಕಷ್ಟಗಳನ್ನು ಅನುಭವಿಸುತ್ತ ಬಂದಿರುವಳೆಂದು.
ಆಧುನಿಕ ಕಾಲದಲ್ಲಿಯೂ ಹೆಣ್ಣಿನ ಮೇಲಿನ ಶೋಷಣೆ ಕಡಿಮೆಯಾಗಿಲ್ಲವೆಂದರೆ ತಪ್ಪಾಗಲಾರದು. ಅಂದು ಸತ್ತ ಗಂಡನೊಂದಿಗೆ ಒಂದೇ ಸಾರಿ ಚಿತೆಗೆ ಹಾರಿ ಸಾಯುತ್ತಿದ್ದ ಹೆಣ್ಣು, ಇಂದು ಪ್ರತಿ ದಿನವೂ ಅಸಮಾನತೆ, ಅವಮಾನ, ಲಿಂಗ ತಾರತಮ್ಯ, ಹೆಣ್ಣೆಂದರೆ ಕೀಳು ಎಂಬ ಮಾತುಗಳಿಂದಲೇ ಪ್ರತಿ ಕ್ಷಣ ಉರಿಯುವ ಕೆಂಡದೊಂದಿಗೆ ಸೆಣಸಾಡಿ ಸತ್ತು ಬದುಕುತ್ತಿದ್ದಾಳೆ.
ಎಷ್ಟು ಯುಗಗಳು ಕಳೆದರೂ ಹೆಣ್ಣು ಪುರುಷರಷ್ಟೆ ಸಮಾನಳು ಎಂದು ಈ ಸಮಾಜ ಒಪ್ಪಕೊಳ್ಳಲು ತಯಾರಿಲ್ಲ. ಎಷ್ಟೋ ಮಹಿಳಾ ದಿನಾಚರಣೆಗಳು ಕಳೆದರೂ ಹೆಣ್ಣಿನ ಸಮಸ್ಯೆಗಳು, ಸವಾಲುಗಳು ಸಂಪೂರ್ಣ ಬಗೆಹರಿಯಲು ಸಾಧ್ಯವಿಲ್ಲ. ಸಮಾನಳು ಎಂದು ಒಪ್ಪಿಕೊಳ್ಳದಿದ್ದರೂ ಪರವಾಗಿಲ್ಲ ಆದರೆ, ಅವಳಿಗೂ ಮನಸ್ಸಿದೆ, ಅವಳೂ ತಮ್ಮಂತೆ ಈ ಸಮಾಜದಲ್ಲಿ ಬದುಕಲು ಅರ್ಹಳು ಎಂಬ ಮನೋಭಾವ ಎಲ್ಲ ಪುರುಷರಲ್ಲಿ ಇದ್ದರೆ ಅದೇ ಮಹಿಳಾ ದಿನಾಚರಣೆಗೆ ಅವರು ಕೊಡುವ ಉಡುಗೊರೆ ಎಂದು ನಾವು ನೀವೆಲ್ಲರೂ ತಿಳಿದುಕೊಳ್ಳೋಣ…

loading...