ಚೆನ್ನಪಟ್ಟಣ ಹನುಮಂತ ದೇವರ ಜಾತ್ರೆಯ ವೈಭವದ ಬ್ರಹ್ಮರಥೋತ್ಸವ

0
49
loading...

ಭಟ್ಕಳ : ಭಟ್ಕಳದ ಅತೀ ಪ್ರಸಿದ್ಧ ಜಾತ್ರೆ ಎಂದೇ ಕರೆಯಲ್ಪಡುವ ಚೆನ್ನಪಟ್ಟಣ ಹನುಮಂತ ದೇವರ ಜಾತ್ರೆಯ ಪ್ರಯುಕ್ತ ವೈಭವದ ಬ್ರಹ್ಮರಥೋತ್ಸವವು ಬುಧವಾರ ಸಂಜೆ ಸಂಭ್ರಮ, ಸಡಗರದಿಂದ ಸಹಸ್ರಾರು ಭಕ್ತರ ರಾಮನಾಮ ಘೋಷಣೆಗಳೊಂದಿಗೆ ಅದ್ದೂರಿಯಾಗಿ ಜರುಗಿತು.
ಪ್ರತಿ ವರ್ಷವೂ ಕೂಡಾ ಯುಗಾದಿಯ ಮಾರನೆಯ ದಿನ ಗ್ರಾಮ ದೇವತೆ ಶ್ರೀ ಚೆನ್ನಪಟ್ಟಣ ಹನೂಮಂತ ದೇವಸ್ಥಾನದ ಧ್ವಜಾರೋಹಣದೊಂದಿಗೆ ವಾರ್ಷಿಕ ರಥೋತ್ಸವ ಕಾರ್ಯಕ್ರಮ ಆರಂಭವಾಗಿದ್ದು ಬುಧವಾರ ಬ್ರಹ್ಮ ರಥೋತ್ಸವ ಹಾಗೂ ಇಂದು (ಏ.06ರಂದು) ಚೂರ್ಣೋತ್ಸವದೊಂದಿಗೆ ಮುಕ್ತಾಯವಾಗಲಿದೆ.
ಬುಧವಾರ ಸಂಜೆ 5.30ಕ್ಕೆ ಆರಂಭವಾದ ಚೆನ್ನಪಟ್ಟಣ ಹನುಮಂತ ದೇವರ ಬ್ರಹ್ಮರಥೋತ್ಸವದಲ್ಲಿ ಸಹಸ್ರಾರು ಭಕ್ತಾಧಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದು ಕಂಡು ಬಂತು.
ರಥೋತ್ಸವದಲ್ಲಿ ಸಾಂಪ್ರದಾಯಿಕವಾದ ಹುಲಿವೇಷ ಹೆಸರುವಾಸಿಯಾಗಿದ್ದು, ಹುಲಿ ವೇಷಧಾರಿಗಳು ಪ್ರಮುಖ ಆಕರ್ಷಣೆಯಾಗಿದ್ದರು. ಅದರಂತೆ ಚಂಡೆ ವಾದ್ಯ, ಭಜನೆ ಮುಂತಾದ ಕಾರ್ಯಕ್ರಮಗಳು ರಥೋತ್ಸವವದ ಕಳೆಯನ್ನು ಇನ್ನಷ್ಟು ಹೆಚ್ಚಿಸಿದವು.
ಸೂಮಾರು ಒಂದೂವರೆ ಗಂಟೆಗಳ ಕಾಲ ನಡೆದ ಹನುಮಂತ ದೇವರ ರಥೋತ್ಸವದಲ್ಲಿ ಭಕ್ತರು ಕಿಕ್ಕಿರಿದು ಸೇರಿದ್ದರು. ಕಳೆದ ಬಾರಿಗಿಂತ ಈ ಬಾರಿ ಅತೀ ಹೆಚ್ಚು ಜನರು ಸೇರಿದ್ದು, ರಥೋತ್ಸವ ದಿನದಿಂದ ದಿನಕ್ಕೆ ಪ್ರಸಿದ್ಧಿ ಪಡೆಯುತ್ತಿರುವುದಕ್ಕೆ ಸಾಕ್ಷಿಯಾಯಿತು. ರಥೋತ್ಸವದಲ್ಲಿ ಹಲವಾರು ಗಣ್ಯರೂ ಕೂಡಾ ಭಾಗವಹಿಸಿದ್ದರು. ಭಟ್ಕಳದ ಅತೀ ದೊಡ್ಡ ಜಾತ್ರೆಯಾಗಿರುವುದರಿಂದ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಒದಗಿಸಿತ್ತು. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದರು. ಒಟ್ಟಿನಲ್ಲಿ ಭಟ್ಕಳದ ಚೆನ್ನಪಟ್ಟಣ ಹನುಮಂತ ದೇವರ ಬೃಹ್ಮರಥೋತ್ಸವ ಭಕ್ತರ ಹರ್ಷೋದ್ಘಾರಗಳ ನಡುವೆ ಸುಸಂಪನ್ನಗೊಂಡಿತು.

loading...