ದಾಂಡೇಲಿ ತಾಲ್ಲೂಕಿನ ಅಭಿವೃದ್ಧಿಗೆ ಪಣತೊಡಬೇಕು: ಸುನೀಲ ಹೆಗಡೆ

0
46
loading...

ಕನ್ನಡಮ್ಮ ಸುದ್ದಿ-ದಾಂಡೇಲಿ : ಈ ಭಾರಿಯ ಬಜೆಟಿನಲ್ಲಿ ದಾಂಡೇಲಿಯನ್ನು ತಾಲ್ಲೂಕನ್ನಾಗಿ ಘೋಷಣೆ ಮಾಡಿರುವುದು ಸಮಸ್ತ ದಾಂಡೇಲಿಗರ ಹೋರಾಟಕ್ಕೆ ಸಂದ ಜಯ. ದಾಂಡೇಲಿ ತಾಲ್ಲೂಕು ರಚನಾ ಸಮಿತಿಯ ನಿರಂತರವಾದ ಹೋರಾಟಕ್ಕೆ ತಾಲ್ಲೂಕು ರಚನೆಯ ಶ್ರೇಯಸ್ಸು ಸಲ್ಲಬೇಕಾಗಿದೆ. ಬಹುವರ್ಷಗಳ ಕನಸು ಈಡೇರಿಸಿಕೊಂಡ ದಾಂಡೇಲಿಯನ್ನು ಮಾದರಿ ಹಾಗೂ ಅಭಿವೃದ್ಧಿಶೀಲ ತಾಲ್ಲೂಕನ್ನಾಗಿ ಮಾಡಲು ಪಣತೊಡಬೇಕೆಂದು ಮಾಜಿ ಶಾಸಕ ಸುನೀಲ ಹೆಗಡೆ ಅವರು ಹೇಳಿದರು.

ಅವರು ಶುಕ್ರವಾರ ರಾತ್ರಿ ನಗರದ ಎಲ್.ಐ.ಸಿ ಕಛೇರಿ ಮುಂಭಾಗದಲ್ಲಿ ಬಿಜೆಪಿ ಪಕ್ಷದ ವತಿಯಿಂದ ನಡೆದ ಪಂಡಿತ ದೀನದಯಾಳ ಉಪಾಧ್ಯಯರ ಜನ್ಮ ಶತಮಾನೋತ್ಸವ ಹಾಗೂ ಭಾರತ ರತ್ನ ಅಂಬೇಡರ್ಕರವರ 125 ನೇ ಜನ್ಮಾ ವರ್ಷಾಚರಣೆಯ ಪ್ರಯುಕ್ತ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ದಾಂಡೇಲಿ ತಾಲ್ಲೂಕು ರಚÀನಾ ಸಮಿತಿ ಕೈಗೊಂಡಿದ್ದ 57 ದಿನಗಳ ಸರಣಿ ಉಪವಾಸ ಸತ್ಯಾಗ್ರಹ ಮತ್ತು ಹೋರಾಟದಲ್ಲಿ ಭಾಗವಹಿಸಿದ್ದ ಮುಖಂಡರುಗಳಿಗೆ ಮತ್ತು ಸಂಘ ಸಂಸ್ಥೆಯ ಪ್ರತಿನಿಧಿಗಳಿಗೆ ನಡೆದ ಸನ್ಮಾನ ಸಮಾರಂಭವನ್ನುದ್ದೇಶಿಸಿ ಮಾತನಾಡಿದರು.

ದಾಂಡೇಲಿ ತಾಲ್ಲೂಕಿನ ಹುಟ್ಟು ಆಗಿದೆ. ಹುಟ್ಟು ಬೇರೆ, ಅಸ್ವಿತ್ವ ಬೇರೆ. ಆ ನಿಟ್ಟಿನಲ್ಲಿ ತಾಲ್ಲೂಕಿನ ಅಸ್ತಿತ್ವಕ್ಕಾಗಿ ಎಲ್ಲರು ಒಂದಾಗಬೇಕು. ಕಳೆದ 35 ವರ್ಷಗಳಿಂದ ದಾಂಡೇಲಿ ತಾಲ್ಲೂಕು ರಚನೆಗಾಗಿ ಹೋರಾಟ ಮಾಡಿಕೊಂಡು ಬರಲಾಗುತ್ತಿದ್ದು, ದಾಂಡೇಲಿ ತಾಲ್ಲೂಕು ರಚನೆಯ ಕೀರ್ತಿ ಸಮಸ್ತ ದಾಂಡೇಲಿಗರಿಗೆ ಸಲ್ಲಲೆಬೇಕು. ನೂತನ ತಾಲ್ಲೂಕನ್ನು ಶೀಘ್ರದಲ್ಲಿಯೆ ಅಸ್ವಿತ್ವಕ್ಕೆ ತಂದು ಇಡೀ ರಾಷ್ಟ್ರದಲ್ಲಿ ಮಾದರಿ ತಾಲ್ಲೂಕನ್ನಾಗಿ ಮಡಲು ಸರ್ವರು ಪಣತೊಡಬೇಕೆಂದು ಕರೆ ನೀಡಿ, ಪಂಡಿತ ದೀನದಯಾಳ ಉಪಾಧ್ಯಯರ ಜನ್ಮ ಶತಮಾನೋತ್ಸವ ಮತ್ತು ಅಂಬೇಡರ್ಕರವರ 125 ನೇ ಜನ್ಮಾ ವರ್ಷಾಚರಣೆಯ ನಿಮಿತ್ತ ಹಮ್ಮಿಕೊಂಡ ಕಾರ್ಯಕ್ರಮ ಶ್ಲಾಘನೀಯ ಕಾರ್ಯಕ್ರಮ ಎಂದು ಬಣ್ಣಿಸಿದರು.

ದಾಂಡೇಲಿ ತಾಲ್ಲೂಕು ರಚನಾ ಸಮಿತಿಯ ಪದಾಧಿಕಾರಿಗಳಿಗೆ ಮತ್ತು ಹೋರಾಟದಲ್ಲಿ ಭಾಗಿಯಾದ ವಿವಿಧ ಸಂಘ ಸಂಸ್ಥೆಯ ಪ್ರತಿನಿಧಿಗಳಿಗೆ ಸೇರಿ ಸುಮಾರು 60 ಕ್ಕೂ ಹೆಚ್ಚು ಜನರಿಗೆ ಈ ಸಂದರ್ಭದಲ್ಲಿ ಸನ್ಮಾನ ಮಾಡಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಡಿದ ದಾಂಡೇಲಿ ತಾಲ್ಲೂಕು ರಚನಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಕ್ರಂ ಖಾನ್ ಅವರು ಈ ಸನ್ಮಾನ ನಮ್ಮ ಸಮಿತಿಯ ಜವಬ್ದಾರಿಯನ್ನು ಹೆಚ್ಚಿಸಿದೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ದಾಂಡೇಲಿಯ ಸಮಗ್ರ ಅಭಿವೃದ್ಧಿಗೆ ದಾಂಡೇಲಿ ತಾಲ್ಲೂಕು ರಚನಾ ಸಮಿತಿ ಮುಂದೆಯು ಶ್ರಮಿಸಲಿದೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹಿರಿಯ ವಕೀಲ ಹಾಗೂ ಬಿಜೆಪಿ ಮುಖಂಡ ಎಂ.ಸಿ.ಹೆಗಡೆಯವರು ಪಂಡಿತ ದೀನದಯಾಳ ಉಪಾಧ್ಯಯರ ಮತ್ತು ಭಾರತ ರತ್ನ ಅಂಬೇಡರ್ಕರವರ ಆದರ್ಶ ಎಲ್ಲರಿಗೂ ಅನುಕರಣೀಯ. ನಿಸ್ವಾರ್ಥವಾಗಿ ಸಮಾಜಕ್ಕಾಗಿ ಬದುಕು ಕಟ್ಟಿಕೊಂಡ ಪಂಡಿತ ದೀನದಯಾಳ ಉಪಾಧ್ಯಯರ ಸಾರ್ಥಕ ಸೇವೆ ಸ್ಮರಣೀಯ ಎಂದರು.

ಬಿಜೆಪಿ ಪಕ್ಷದ ಹಿರಿಯ ಮುಖಂಡ ಅಶೋಕ ಪಾಟೀಲ ಅವರು ಸಂವಿಧಾನ ಶಿಲ್ಪಿ ಭಾರತ ರತ್ನ ಅಂಬೇಡರ್ಕರವರ ಜೀವನಾದರ್ಶಗಳು ಮತ್ತು ಸಾಮಾಜಿಕ ಅಸಮಾನತೆಯ ವಿರುದ್ದ ಅವರು ಕೈಗೊಂಡ ಹೋರಾಟ ಮತ್ತು ಜಾಗೃತಿಯನ್ನು ಮೆಲುಕು ಹಾಕಿದರು.

ವೇದಿಕೆಯಲ್ಲಿ ಬಿಜೆಪಿ ನಗರ ಘಟಕದ ಅಧ್ಯಕ್ಷ ಬಸವರಾಜ ಕಲಶೆಟ್ಟಿ, ಪಕ್ಷದ ಮುಖಂಡರುಗಳಾದ ಸುಧಾಕರ ರೆಡ್ಡಿ, ಎಸ್.ಸೋಮಕುಮಾರ್, ಅಬ್ದುಲ್ ವಹಾಬ ಬನ್ಸಾರಿ, ಮಂಜುನಾಥ ಪಾಟೀಲ, ರಫೀಕ ಹುದ್ದಾರ, ಮಾರುತಿ ಡೊಂಬರ, ರಿಯಾಜ ಅಹ್ಮದ, ದಶರಥ ಬಂಡಿವಡ್ಡರ, ಶ್ರೀರಾಂ ಪಾಟೀಲ, ದೇವಕ್ಕ, ಸುಭಾಸ ಅರವೇಕರ, ನರೇಂದ್ರ ಚೌವ್ಹಾಣ್ ಮೊದಲಾದವರು ಉಪಸ್ಥಿತರಿದ್ದರು.

ಪಕ್ಷದ ನಗರ ಘಟಕದ ಅಧ್ಯಕ್ಷ ಬಸವರಾಜ ಕಲಶೆಟ್ಟಿ ಸ್ವಾಗತಿಸಿದರು. ಬಿಜೆಪಿ ಮುಖಂಡ ಗುರು ಮಠಪತಿ ವಂದಿಸಿ ಕಾರ್ಯಕ್ರಮ ನಿರೂಪಿಸಿದರು.

loading...