ಬಹುಮುಖ ಪ್ರತಿಭೆ ಪತ್ರಕರ್ತ, ಮಾಲತೇಶ ಅಂಗೂರಗೆ ಮಾಧ್ಯಮ ಆಕಾಡಮಿ ಪ್ರಶಸ್ತಿಯ ಗರಿ

0
40
loading...

ಪ್ರತಿಭೆ ಯಾರಸೊತ್ತು ಅಲ್ಲ, ಪ್ರತಿಯೊಬ್ಬರಲ್ಲೂ ಒಂದಿಲ್ಲ ಒಂದು ಪ್ರತಿಭೆ ಗುಪ್ತಗಾಮಿನಿಯ ಹಾಗೆ ಅಡಗಿರುತ್ತದೆ. ಆಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹ ನೀಡಿದಾಗ ಖಂಡಿತವಾಗಿ ಆಪ್ರತಿಭೆ ಅರಳುತ್ತದೆ. ತನ್ನ ಕಡೆ ಸಮಾಜ ನಿಬ್ಬೆರಗಾಗುವಂತೆ ಮಾಡುತ್ತದೆ ಎನ್ನುವದಕ್ಕೆ ಪ್ರತ್ಯಕ್ಷಸಾಕ್ಷಿಯಾಗಿದ್ದಾರೆ ಹಾವೇರಿಯ ಬಹುಮುಖ ಪ್ರತಿಭೆಯ ಹಿರಿಯ ಪತ್ರಕರ್ತ, ಸಾಹಿತಿ, ವನ್ಯಜೀವಿ ಛಾಯಾಗ್ರಾಹಕ ಮಾಲತೇಶ ಅಂಗೂರ.
ಕಡು ಬಡತನದಲ್ಲಿ ಹಿನ್ನಲೆಯಿಂದ ಬಂದಿರುವ ಇವರು ವಿದ್ಯಾರ್ಥಿದೆಸೆಯಿಂದಲೇ ಓದಿನ ಹವ್ಯಾಸದ ಗೀಳು ಹಚ್ಚಿಕೊಂಡ ಸಾಹಿತ್ಯ ಕ್ಷೇತ್ರದತ್ತ ಒಲವು ಬೆಳೆಸಿಕೊಂಡರು. ಸಾಹಿತ್ಯ, ಪತ್ರಿಕೋದ್ಯಮ, ಛಾಯಾಗ್ರಹಣ, ವನ್ಯಜೀವಿಗಳ ಛಾಯಾಗ್ರಹಣದಲ್ಲಿ ನಿರಂತರ ಒಡನಾಟದಿಂದಾಗಿ ಸಾಮಾನ್ಯ ವ್ಯಕ್ತಿ ಅಸಮಾನ್ಯನಾಗಿ ಬೆಳೆದ ಪರಿ ಅನನ್ಯವಾದುದು.
ಸದಾ ಕ್ಯಾಮೆರಾವನ್ನು ಸಂಗಾತಿಯನ್ನಾಗಿ ಮಾಡಿಕೊಂಡು ಕಾಡು-ಮೇಡು, ಬೆಟ್ಟ-ಗುಡ್ಡ, ಹೊಳೆ-ಹಳ್ಳಗಳನ್ನು , ಕೆರೆಕಟ್ಟೆಗಳನ್ನು ಹುಡುಕಿಕೊಂಡು ತಿರುಗಾಡುತ್ತ ಇವರು ಸೆರೆ ಹಿಡಿದಿರುವ ಒಂದೊಂದು ಚಿತ್ರಗಳನ್ನು ನೋಡುವುದು ರಸವತ್ತಾದ ಕವಿತೆಗಳನ್ನು ಓದಿದ ಅನುಭವ ನೀಡುತ್ತವೆ, ಮೇಲಾಗಿ ಇವರು ಕವಿಯು ಹೌದು. ಇವರ ಛಾಯಾಚಿತ್ರಗಳನ್ನು ನೋಡುವುದೆ ಕಣ್ಣಿಗೆ ಹಬ್ಬ ವಿದ್ದಂತೆ. ಎಷ್ಟು ನೋಡಿದರು ಇನ್ನು ನೋಡಬೇಕೆನ್ನುವ ಕಾಡುವ ಗುಣ ಇವರ ಛಾಯಾಚಿತ್ರಗಳ ವೈಶಿಷ್ಟ್ಯವಾಗಿದೆ.
ಕ್ಷಣಾರ್ಧದಲ್ಲಿ ಕಾಣಿಸಿಕೊಂಡು ಮರೆಯಾಗುವ ವನ್ಯಜೀವಿಗಳನ್ನು ಬೆನ್ನುಹತ್ತಿ ಅವುಗಳನ್ನು ಕ್ಯಾಮೆರಾದಲ್ಲಿ ದಾಖಲಿಸುವುದು ಸುಲಭದ ಕೆಲಸವಲ್ಲ. ಅದಕ್ಕೆ ಸತತ ಪರಿಶ್ರಮ, ಗಂಟೆಗಟ್ಟಲೆ ಕೆಲವೊಮ್ಮೆ ದಿಗಟ್ಟಲೆ ಕಾಯುವಿಕೆ ಜೊತೆಗೆ ಅದೃಷ್ಟವು ಸಹ ಬೇಕಾಗುತ್ತದೆ. ತಮ್ಮ ಬಿಡುವಿಲ್ಲದ ಪತ್ರಿಕೋದ್ಯಮದ ಒತ್ತಡದ ಕೆಲಸದ ನಡುವೆ ಇವರ ಸಾಹಸ ನಿಜಕ್ಕೂ ಮೆಚ್ಚಲೆಬೇಕು. ಒಬ್ಬ ವ್ಯಕ್ತಿಯಿಂದ ಇಷ್ಟಲ್ಲಾ ಕಾರ್ಯ ಸಾಧ್ಯವೇ? ಎನ್ನುವ ಅನಮಾನ ಮೂಡದಿರದು. ಪತ್ರಿಕಾಲಯದಲ್ಲಿ ತಡರಾತ್ರಿಯವರೆಗೆ ಇದ್ದು ಕೆಲಸ ಮುಗಿಸಿಕೊಂಡು ಮನೆಗೆ ಹೋದರೂ ಮರುದಿನ ಬೆಳಿಗ್ಗೆ 6ಕ್ಕೆ ಕ್ಯಾಮೆರಾದೊಂದಿಗೆ ಕೆರೆ-ಕಟ್ಟೆಗಳಲ್ಲಿ ಹಾಜರಾಗುವ ಅಂಗೂರ ಅವರು ಅಲ್ಲಿ ಈಜು ಮುಗಿಸಿಕೊಂಡು, ಹಾರುವ ಬಾನಾಡಿಗಳನ್ನು ಬೆನ್ನುಬಿದ್ದು ಅವುಗಳ ಛಾಯಾಚಿತ್ರಗಳನ್ನು ಸೆರೆಹಿಡಿದು ಮನೆಗೆ ಮರಳಿದವರೆ ಮತ್ತೆ ತಮ್ಮ ವೃತ್ತಿಯಲ್ಲಿ ನಿರತರಾಗುತ್ತಾರೆ.
ಪತ್ರಿಕಾಕ್ಷೇತ್ರದಲ್ಲಿ ರಜೆಗಳು ತೀರಾ ಕಡಿಮೆ, ಆದರೆ ಬೆಳಗಿನ ಸಮಯದಲ್ಲಿ ಸಿಹಿ ನಿದ್ದೆಯನ್ನು ಮರೆತು ಬೆಳಗಿನ ಜಾವದಲ್ಲಿ ಕ್ಯಾಮೆರವನ್ನು ಹೆಗಲಿಗೇರಿಸಿಕೊಂಡು ಕಟ್..ಕಟಾರ ಎಂದು ಸದ್ದು ಮಾಡುವ ದ್ವಿಚಕ್ರವಾಹನವನ್ನು ಏರಿ ಸಾಗಿದರೆ ಅಂದು ಯಾವುದಾದರು ವನ್ಯಜೀವಿಯ ಛಾಯಾಚಿತ್ರ ಇವರ ಕ್ಯಾಮೆರಾದಲ್ಲಿ ದಾಖಲಾಗಿದೆ ಎಂದೆ ಅರ್ಥ! ಇದು ಒಂದು ದಿನದ ಮಾತಲ್ಲ, ಇವರ ಈ ಹವ್ಯಾಸ ಕಳೆದ ಹತ್ತಾರು ವರ್ಷಗಳಿಂದ ನಡೆದುಕೊಂಡು ಬಂದಿದೆ.
ಈಜಿನಲ್ಲಿಯು ಸಹ ಅಸಮಾನ್ಯ ಸಾಧನೆ ಮಾಡಿರುವ ಇವರು, ನೀರಿನಲ್ಲಿ ಯೋಗಾಭ್ಯಾಸಮಾಡುತ್ತಾರೆ. ನೀರಮೇಲೆ ಗಂಟೆಗಟ್ಟಲೆ ಪದ್ಮಾಸನ ಹಾಕಿಕೊಂಡು ತೇಲುತ್ತಾರೆ. ನೀರಿನಲ್ಲಿ ವಿವಿಧ ಯೋಗಾಸನಗಳ ಮೂಲಕ ಜನತೆಯನ್ನು ನಿಬ್ಬರೆಗಾಗುವಂತೆ ಮಾಡುತ್ತಾರೆ. ತಮ್ಮ ನಿತ್ಯದ ಒತ್ತಡ ನಿವಾರಣೆಗೆ ಟೆನ್ನಿಸ್ ಆಟ, ಈಜು, ಪಕ್ಷಿ ವೀಕ್ಷಣೆ, ವನ್ಯಜೀವಿಗಳ ಛಾಯಾಗ್ರಹಣ, ಕವಿತೆ ರಚನೆ, ವನ್ಯಜೀವಿಗಳ ಬಗ್ಗೆ ಲೇಖನ ಬರೆಯುವುದು, ಪ್ರವಾಸÀ ಹೀಗೆ ನಿರಂತರ ಚಟುವಟಿಕೆಗಳ ಮೂಲಕ ಒತ್ತಡಕ್ಕೆ ಪರಿಹಾರವನ್ನು ಕಂಡುಕೊಂಡಿದ್ದಾರೆ.
ಕಾಡು ಮೇಡುಗಳನ್ನು ಅಲೆಯುತ್ತಾ ಅಪರೂಪವಾಗುತ್ತಿರುವ ವನ್ಯಜೀವಿಗಳಿಗಾಗಿ ತಮ್ಮ ಜೀವವನ್ನು ಪಣಕ್ಕಿಟ್ಟು ದಿನಗಟ್ಟಲೆ ಅಲೆದಾಡಿ ಕಾದು ಕುಳಿತು ವನ್ಯಜೀವಿಗಳು ಎದುರಾದಾಗ ಅವುಗಳ ವಿಭಿನ್ನ ಭಂಗಿಗಳ ಚಿತ್ರಗಳನ್ನು ಸೆರೆಹಿಡಿದು ಕ್ಯಾಮೆರಾದಲ್ಲಿ ಸೆರೆಯಾದ ಚಿತ್ರಗಳನ್ನು ಕಂಡು ಸಂತೋಷ ಪಡುವ ಪರಿ ಅನನ್ಯ ಅನುಭವವೆ ಸರಿ. ಅದರಲ್ಲೂ ಪಕ್ಷಿ ಸಂಕುಲದ ಬೆನ್ನು ಹತ್ತಿ ಛಾಯಾಚಿತ್ರ ತೆಗೆಯುವುದು ಸುಲಭದ ಮಾತಲ್ಲ. ತತಕ್ಷಣ ಪುರ್ರಂತ ವೇಗವಾಗಿ ಹಾರಿ ಹೋಗುವ ಪಕ್ಷಿಗಳ ಬೆನ್ನುಹತ್ತಲು ಗಂಟೆಗಟ್ಟಲೆ ತಾಳ್ಮೆಯಿಂದ ಕುಳಿತು ಸಿದ್ಧರಾಗಿರಬೇಕಾಗಿರುತ್ತದೆ. ಪ್ರಕೃತಿಯ ಸಸ್ಯ ಸಿರಿಯ ಮಡಿಲಲ್ಲಿ ಅವಿತು ಕುಳಿತ ವಿವಿಧ ಬಗೆಯ ಬಾನಾಡಿಗಳನ್ನು ಸೂಕ್ಷ್ಮವಾಗಿ ವೀಕ್ಷಿಸಿ ಛಾಯಚಿತ್ರ ತೆಗೆಯುವದಂತೂ ಬಲು ಕಷ್ಟ ಹಾಗೂ ಸಾಹಸದ ಕೆಲಸ. ಕ್ಯಾಮರಾವನ್ನು ಪಟಕ್ಕನೇ ಕೈಗೆತ್ತಿ ಕ್ಲಿಕ್ಕಿಸಿ ಕ್ಯಾಮರಾದಲ್ಲಿ ಸುಂದರ ದೃಶ್ಯ ಕಾವ್ಯವೊಂದು ಮೂಡಿಸುವವರೇ ವನ್ಯ ಜೀವಿ ಛಾಯಾಗ್ರಾಹಕರು.
ವನ್ಯಜೀವಿ ಛಾಯಾಗ್ರಹಣ ಸವಾಲಿನ ಕೆಲಸ, ಈಸವಾಲನ್ನು ಸಮರ್ಥವಾಗಿ ಎದುರಿಸಿ ಮಾಲತೇಶ ಅಂಗೂರ ಅವರು ಅಳಿವಿನಂಚಿನಲ್ಲಿರುವ ಅನೇಕ ವನ್ಯಜೀವಿಗಳ ಬಗ್ಗೆ ಅರಿವು ಮೂಡಿಸಲು ವನ್ಯಜೀವಿಗಳ ಛಾಯಾಚಿತ್ರಗಳನ್ನು ಸೆರೆಹಿಡಿಯುವುದು, ಅವಗಳ ಬಗ್ಗೆ ಲೇಖನ ಬರೆದು ಪ್ರಕಟಿಸುವುದು, ಆಮೂಲಕ ಜನರಲ್ಲಿ ಅರಿವು ಮೂಡಿಸುವ ಇವರ ಕೆಲಸವನ್ನು ಗುರುತಿಸಿ ನಾಡಿನ ಹೆಸರಾಂತ ಪತ್ರಿಕೆಗಳು ಇವರ ಬರೆದಿರುವ ವನ್ಯಜೀವಿಗಳ ಬಗೆಗಿನ ಚಿತ್ರ -ಲೇಖನಗಳನ್ನು ಪ್ರಕಟಿಸುತ್ತಾ ವನ್ಯಜೀವಿಗಳ ಉಳಿವು, ಅವಗಳ ಜೀವನ ಕ್ರಮಗಳನ್ನು ತಿಳಿಸುವ ಕೆಲಸವನ್ನು ಸದ್ದಿಲ್ಲದೇ ಮಾಡುತ್ತಾ ಬಂದಿದ್ದಾರೆ.
2015ರ ಜೂನ10-11ರಂದು ಹಾವೇರಿಯ ಜಿಲ್ಲಾ ಸರಕಾರಿ ನೌಕರರ ಭವನದಲ್ಲಿ ಅಂಗೂರವರು ಸೆರೆಹಿಡಿದಿದ್ದ ಅಪರೂಪದ 110ಕ್ಕೂ ಹೆಚ್ಚು ಛಾಯಾಚಿತ್ರಗಳ ಪ್ರದರ್ಶನವನ್ನು ಸ್ಥಳೀಯ ಸಾಹಿತಿ ಹಾಗೂ ಕಲಾವಿದರ ಬಳಗವು ಮೊದಲಬಾರಿಗೆ ರಾಜ್ಯಮಟ್ಟದಲ್ಲಿ ಎರ್ಪಡಿಸುವ ಮೂಲಕ ಅಂಗೂರ ಅವರ ಛಾಯಾಚಿತ್ರಗಳ ವೀಕ್ಷಣೆಗೆ ಸಾರ್ವಜನಿಕವಾಗಿ ಅವಕಾಶ ಕಲ್ಪಿಸಿತ್ತು. ಅಪರೂಪದ ಛಾಯಾಚಿತ್ರ ಪ್ರದರ್ಶನವನ್ನು ವನ್ಯಜೀವಿ ಛಾಯಾಗ್ರಾಹಕರಾಗಿದ್ದ ಮಾಜಿ ಸಚಿವ ದಿ. ಎಚ್.ಎಸ್.ಮಹದೇವಪ್ರಸಾದ ಉದ್ಘಾಟಿಸಿದ್ದರು. ಈಛಾಯಾಚಿತ್ರ ಪ್ರದರ್ಶನವನ್ನು ಖ್ಯಾತ ಸಾಹಿತಿ, ಚಿಂತಕರಾದ ಬಂಡಾಯ ಕವಿ ಚಂದ್ರಶೇಖರ ಪಾಟೀಲ (ಚಂಪಾ), ಶ್ರೀರಾಮ ಇಟ್ಟಣ್ಣನವರ, ಪ್ರೊ.ವಿರುಪಾಕ್ಷಪ್ಪ ಕೋರಗಲ್ಲ, ಸತೀಶ ಕುಲಕರ್ಣಿ, ಬಸವರಾಜ ಸೂಳೆಬಾವಿ,ಆರ್.ಜಿ.ಹಳ್ಳಿನಾಗರಾಜ ಸೇರಿದಂತೆ ಸಹಸ್ರಾರು ಜನರು, ವನ್ಯಜೀವಿ ಛಾಯಾಗ್ರಾಹಕರು, ಪರಿಸರ ಪ್ರೇಮಿಗಳು, ವಿದ್ಯಾರ್ಥಿಗಳು, ಸಂಶೋಧಕರು ವೀಕ್ಷಿಸಿ ಛಾಯಾಚಿತ್ರಗಳ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದರು.
ಅಂಗೂರ ಅವರು ಸೆರೆಹಿಡಿದ ಅನೇಕ ಛಾಯಾಚಿತ್ರಗಳು ಅಂತರರಾಷ್ಟ್ರೀಯ ಮಟ್ಟದ ಛಾಯಾಚಿತ್ರ ಸ್ಪರ್ಧೆಗೆ ಆಯ್ಕೆಯಾಗಿವೆ. ಹಲವಾರು ಛಾಯಾಚಿತ್ರಗಳು ದೇಶಾಧ್ಯಂತ ಪ್ರದರ್ಶನ ಕಂಡಿವೆ. ಬಾಲ್ಯದಲ್ಲಿ ತಮ್ಮ ಸುತ್ತ ಮತ್ತಲಿನ ಪರಿಸರದಲ್ಲಿ ಕಂಡು ಬಂದ ಪ್ರಾಣಿ, ಪಕ್ಷಿ, ಕೀಟಗಳ ಬಗ್ಗೆ ಗಮನಹರಿಸುತ್ತಾ ಬಂದಂತೆ ಜೀವ ಜಗತ್ತಿನ ಬಗ್ಗೆ ಅಧ್ಯಯನ ಮಾಡುವ ಬಯಕೆ ಮೊಳಕೆ ಒಡೆಯಿತು. ಅದರ ಪ್ರತಿಫಲವೆ ಇಂದು ಮಾಲತೇಶ ಅಂಗೂರ ಅವರಲ್ಲಿ ವನ್ಯಜೀವಿ ಆಸಕ್ತಿ ಬಳೆಯಲು ಕಾರಣವಾಯಿತು. ಇಂದು ಪರಿಸರ ಪೂರಕವಾಗಿ ಕೆಲಸಮಾಡುತ್ತಾ, ಪಕ್ಷಿ ತಜ್ಞರಾಗಿ ಕೆಲಸ ಮಾಡುತ್ತಿದ್ದಾರೆ. ಹಾಗಂತ ತಮ್ಮನ್ನು ಎಂದು ತಜ್ಞ ಎಂದು ಕರೆಸಿಕೊಳ್ಳಲು ಇಚ್ಚಿಸದ ಇವರು, ನಾನೊಬ್ಬ ಕಲಿಕಾರ್ಥಿ, ನಾನು ಕಲಿಯುವುದು ಇನ್ನು ಬಹಳ ಇದೆ ಎಂದು ವಿನಂಬ್ರತೆಯಿಂದ ಹೇಳುತ್ತಾರೆ.
ಹಾವೇರಿಜಿಲ್ಲೆಯಲ್ಲಿ 150ಕ್ಕೂ ಹೆಚ್ಚು ಪಕ್ಷಿಗಳನ್ನು ಗುರುತಿಸಿ ದಾಖಲಿಸಿ ಅವುಗಳ ಬಗ್ಗೆ ಅಧ್ಯಯನ ನಡೆಸಿ, ತಜ್ಞರೊಂದಿಗೆ ಚರ್ಚಿಸಿ ಪಕ್ಷಿಗಳ ಬಗ್ಗೆ ವಿವಿಧ ಪತ್ರಿಕೆಗಳ ಬಗ್ಗೆ ಬರೆದಿರುವ ಲೇಖನಗಳನ್ನು ಸಂಗ್ರಹಿಸಿ , ಪಕ್ಷಿಗಳ ಬಗೆಗಿನ ಮಾಹಿತಿಯನ್ನುಒಳಗೊಂಡಿರುವ ಪುಸ್ತಕವನ್ನು ಪ್ರಕಟಿಸುವ ಸಿದ್ದತೆಯಲ್ಲಿದ್ದಾರೆ.
ಇವರು ಪೋಟೊಗ್ರಫಿಯನ್ನು ಶಾಸ್ತ್ರೋಕ್ತವಾಗಿ ಅಧ್ಯಯನಮಾಡಿದವರಲ್ಲ. ಅವರಿವರಿವರು ಕ್ಯಾಮೆರಾಗಳನ್ನು ಬಳಸುವುದನ್ನು ನೋಡಿ, ಖ್ಯಾತ ವನ್ಯಜೀವಿ ಛಾಯಾಗ್ರಾಹಕರಾದ ಖ್ಯಾತ ಸಾಹಿತಿಗಳಾಗಿದ್ದ ದಿ.ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರು ಹಾಗೂ ಖ್ಯಾತ ವನ್ಯ ಜೀವಿ ಛಾಯಾಗ್ರಾಹಕರಾದ ಎಂ.ವೈ.ಘೋರ್ಪಡೆಯವರ ಛಾಯಾಚಿತ್ರ ಹಾಗೂ ಅವರ ಲೇಖನ ಗಳನ್ನು ಓದಿ ತಾನು ಏಕೆ ವನ್ಯಜೀವಿ ಛಾಯಾಗ್ರಾಹಕನಾಗಬಾರದು ಎನ್ನುವ ಉದ್ದೇಶದಿಂದ ಈಕ್ಷೇತ್ರಕ್ಕೆ ಕಾಲಿಟ್ಟರು.
ಇವರು ಕ್ಯಾಮೆರಾ ಹಿಡಿಯಲು ನೆರವಾದವರು ಖ್ಯಾತ ನಟರಾದ ಬಿ.ಸಿ.ಪಾಟೀಲ, ಕರಾವಳಿ ಮುಂಜಾವು ಪತ್ರಿಕೆ ಸಂಪಾದಕ ಗಂಗಾಧರ ಹಿರೇಗುತ್ತಿಯವರು, ಹಾವೇರಿಯಲ್ಲಿ ಈ ಇಬ್ಬರು ಆರಂಭಿಸಿದ ಕೌರವ ಪತ್ರಿಕೆಯಲ್ಲಿ ಆರಂಭದಲ್ಲಿ ವರದಿಗಾರನಾಗಿ ಸೇರ್ಪಡೆಯಾದ ಅಂಗೂರ ಅವರ ಛಾಯಾಚಿತ್ರದಲ್ಲಿನ ವಿಶೇಷತೆಯನ್ನು ಗುರುತಿಸಿ ಪ್ರೋತ್ಸಾಹ ನೀಡಿದ ಕಾರಣಕ್ಕೆ ಓರ್ವ ಉತ್ತಮ ಕ್ರಿಯಾಶೀಲ ಪತ್ರಕರ್ತನಾಗಿ, ಅಂಕಣಕಾರನಾಗಿ, ವನ್ಯಜೀವಿ ಛಾಯಾಗ್ರಾಹಕನಾಗಿ ಬೆಳೆಯಲು ಸಾಧ್ಯವಾಯಿತು. .
ಕಳೆದ ವರ್ಷ ಅನಾರೋಗ್ಯಕ್ಕೆ ತುತ್ತಾಗಿ ಹಾಸಿಗೆ ಹಿಡಿದಿದ್ದ ಇವರು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಗುಣಮುಖರಾಗಿ ಬಂದರು. ಆದರೆ ತೀವ್ರ ಆರ್ಥಿಕ ಸಂಕಷ್ಟ ಇವರನ್ನು ಬಾಧಿಸಿತು. ಸದಾ ತಮ್ಮ ಸಂಗಾತಿಯನ್ನಾಗಿ ಮಾಡಿಕೊಂಡಿದ್ದ ಕ್ಯಾಮೆರಾವನ್ನು ಇವರು ಮಾರಬೇಕಾಯಿತು. ಹಾವೇರಿಯ ಉದ್ಯಮಿ ಕೆ.ಮಂಜಣ್ಣ ಹಾಗೂ ಅಂಗೂರಅವರ ಸ್ನೇಹಿತರ ಬಳಗ ನೆರವಿಗೆ ಧಾವಿಸಿ ಅಂಗೂರ ಅವರ ಕೈಹಿಡಿದು ಅವರು ಮದಲಿನಂತಾಗಲು ಸಹಕರಿಸಿದರು. ಕೆಲವೆ ದಿನಗಳಲ್ಲಿ ಆರೋಗ್ಯ ಸುಧಾರಣೆಯಾದ ತಕ್ಷಣ ಸಾಲ ಮಾಡಿ ಕ್ಯಾಮೆರಾವನ್ನು ಕೊಂಡು ವನ್ಯಜೀವಿ ಛಾಯಾಗ್ರಹಣಕ್ಕೆ ಮುಂದಾದರು. ಬಡತನ ಬಹಳ ಕೆಟ್ಟದ್ದು, ಆದರೆ ಇವರ ಸಾಧನೆಗೆ ಬಡತನ ಅಡ್ಡಿಯಾಗಿಲ್ಲ. ತಮ್ಮ ಸಂಕಷ್ಟವನ್ನು ಎಲ್ಲಿಯೂ ಹೇಳಿಕೊಳ್ಳದೇ ತಮ್ಮ ಮನದಾಳದ ನೋವನ್ನು ನುಂಗಿ ತಮ್ಮ ಸರಳ ಸಜ್ಜನಕೆಯ ಸ್ವಭಾವದಿಂದ ಎಲ್ಲರ ಮನ ಗೆಲ್ಲುವ ಮೂಲಕ ಮನೆಮಾತಾಗಿದ್ದಾರೆ. ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕೆ ಸಿಗುತ್ತದೆ ಎನ್ನುವುದಕ್ಕೆ ಮಾಲತೇಶ ಅಂಗೂರ ಅವರು ಸಾಕ್ಷಿಯಾಗಿದ್ದಾರೆ.
ಇವರು 2012ರಲ್ಲಿ ಪ್ರಕಟಿಸಿದ್ದ ಅಂಕಣ ಬರಹಗಳ ಕೃತಿ ಬಣ್ಣದಗರಿಗೆ ಹತ್ತಾರು ಪ್ರಶಸ್ತಿ- ಪುರಸ್ಕಾರಗಳು ಲಭಿಸಿವೆ. ಪಶ್ಚಿಮ ಬಂಗಾಲದ ಪೋಟೋಗ್ರಾಫಿ ಅಸೋಷಿಯಷನ್ ಕೊಲಕತ್ ಇವರು ನಡೆಸಿದ ರಾಷ್ಟ್ರಮಟ್ಟದ ಛಾಯಾಚಿತ್ರ ಸ್ಪರ್ಧೆ-2015 ರ ನಿಸರ್ಗ ವಿಭಾಗದಲ್ಲಿ ಅಂತರಾಷ್ಟ್ರೀಯ ಛಾಯಾಚಿತ್ರ ಪ್ರದರ್ಶನಕ್ಕೆ ಮಿಡಿಯನ್ ಇಗ್ರೇಟ್ ಮೀಟಿಂಗ ಛಾಯಾಚಿತ್ರ ಆಯ್ಕೆಯಾಗಿತ್ತು. ಇದಲ್ಲದೆ ತಾಲೂಕಾ ಹಾಗೂ ಜಿಲ್ಲಾ ಮಟ್ಟದ ಅನೇಕ ಛಾಯಾಚಿತ್ರ ಸ್ಪರ್ಧೆಗಳಲ್ಲಿ ಇವರ ಛಾಯಾಚಿತ್ರಗಳು ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡಿವೆ. ಅನೇಕ ಅಂತರಾಷ್ಟ್ರೀಯ ಮಟ್ಟದ ನಿಸರ್ಗ ಛಾಯಾ ಸ್ಪರ್ಧೆಯಲ್ಲಿ ಇವರು ಭಾಗವಹಿಸಿದ್ದಕ್ಕಾಗಿ ಗೌರವ ಪುರಸ್ಕಾರ ಪಡೆದಿದ್ದಾರೆ.
ಇವರ ಸಾಹಿತ್ಯ, ಪತ್ರಿಕೋದ್ಯಮ, ವನ್ಯಜೀವಿ ಛಾಯಾಗ್ರಹಣ ಕ್ಷೇತ್ರದಲ್ಲಿನ ಸಾಧನೆಯನ್ನು ಗುರುತಿಸಿ ಚಿತ್ರದುರ್ಗದ ಡಾ.ಶಿವಮೂರ್ತಿ ಮುರುಘಾಶರಣರು ತಮ್ಮ ಶೂನ್ಯ ಪೀಠದ ಬೆಳಿಹಬ್ಬದ ಸಮಾರಂಭದಲ್ಲಿ ಇವರನ್ನು ಗೌರವಿಸಿದ್ದಾರೆ. ರಂಭಾಪುರಿ ಜಗದ್ಗುರುಗಳಿ ವೃತ್ತಿ ಚೈತನ್ನೆ ರೂಪಿಣಿ ಪ್ರಶಸ್ತಿ ನೀಡಿದ್ದಾರೆ. ಹುಕ್ಕೇರಿಮಠದ ಸದಾಶಿವಶ್ರೀ, ಹೊಸಮಠದ ಬಸವಶಾಂತಲಿಂಗಶ್ರೀ, ಹರಸೂರುಬಣ್ಣದ ಮಠದ ಅಭಿನವರುದ್ರ ಚನ್ನಮಲ್ಲಿಕಾರ್ಜುನಶ್ರೀ ಗೌರವಿಸಿದ್ದಾರೆ. ನಾಡು-ನುಡಿ ಸೇವೆಯನ್ನು ಗುರುತಿಸಿ ಡಿ.2-3-4ರಂದು ರಾಯಚೂರಿನಲ್ಲಿ ನಡೆದ ಅಖಿಲಭಾರತ 82ನೇ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಇವರನ್ನು ಸನ್ಮಾನಿಸಿ ಗೌರವಿಸಿದೆ.
ಇವರ ಬಿಡುವಿಲ್ಲದ ಕಾರ್ಯತತ್ಪರತೆಯನ್ನು ಗುರುತಿಸಿ ಕರ್ನಾಟಕ ಸರಕಾರದ ಮಾಧ್ಯಮ ಅಕಾಡೆಮಿಯು 2016ನೇಸಾಲಿನ ಮಾಧ್ಯಮಕಾಡೆಮಿ ಪ್ರಶಸ್ತಿ ನೀಡಿದೆ. ಮಾ.11,2017ರಂದು ವಿಧಾನಸೌಧದ ಬ್ಲಾಂಕೇಟ್ ಹಾಲ್‍ನಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಂಗೂರವರಿಗೆ 2016ನೇ ಸಾಲಿನ ಮಾಧ್ಯಮ ಅಕಾಡಮಿ ಪ್ರಶಸ್ತಿ ಪ್ರದಾನಮಾಡಿದ್ದಾರೆ.
ಅಂಗೂರಅವರ ಛಾಯಾಚಿತ್ರಗಳ ಹಿರಿಮೆಯನ್ನು ಗುರುತಿಸಿ ಹುಬ್ಬಳ್ಳಿ, ಬಾಗಲಕೋಟಿ, ಬೆಂಗಳೂರು, ಶಿಗ್ಗಾವಿ ಮತ್ತಿತರು ಸ್ಥಳಗಳಲ್ಲಿ ಛಾಯಾಚಿತ್ರ ಪ್ರದರ್ಶನಗಳು ನಡೆದಿವೆ. ಜಿಲ್ಲಾ ಉತ್ಸವ ದಲ್ಲಿ ಅಂಗೂರವರು ಛಾಯಾಚಿತ್ರ ಪ್ರದರ್ಶನವನ್ನು ಜಿಲ್ಲಾಡಳಿತ ಏರ್ಪಡಿಸುವ ಮೂಲಕ ಇವರನ್ನು ಸನ್ಮಾನಿಸಿ ಗೌರವಿಸಿದೆ.
ತಾವು ಬೆಳೆಯುವದರ ಜೊತೆಗೆ ಅನೇಕ ಯುವಕರನ್ನು ವನ್ಯಜೀವಿ ಛಾಯಾಗ್ರಹಣಕ್ಕೆ ಸೆಳೆಯುವ ಮೂಲಕ ಮೂಲಕ ಅವರಲ್ಲಿ ಪರಿಸರದ ಬಗ್ಗೆ ಕಾಳಜಿ ಮೂಡಿಸುವದರ ಜೊತೆಗೆ ವನ್ಯಜೀವಿ ಛಾಯಾಗ್ರಣ ಪರಂಪರೆಯನ್ನು ಬೆಳೆಸುವ ನಿಟ್ಟಿನಲ್ಲಿ ಯುವಕರ ತಂಡವನ್ನೆ ಕಟ್ಟಿದ್ದಾರೆ. ಇವರ ಗರಡಿಯಲ್ಲಿ ಫಳಗಿದ ಹಲವಾರು ಯುವಕರು ಇಂದು ನಾಡಿನಾಧ್ಯಂತ ವನ್ಯಜೀವಿ ಛಾಯಾಗ್ರಾಹಕರಾಗಿ, ವನ್ಯಜೀವಿಗಳ ಜೀವ ವೈವಿಧ್ಯತೆಯ ಬಗ್ಗೆ ಅಧ್ಯಯನ ಮಾಡುತ್ತಾ ಹೆಸರು ಮಾಡುತ್ತಿದ್ದಾರೆ. ಅನೇಕರು ವನ್ಯಜೀವಿಗಳ ಬಗ್ಗೆ ಲೇಖನ ಬರೆಯುವ ಮೂಲಕ ಪರಿಸರದ ಬಗೆಗಿನ ಕಾಳಜಿ ಮೆರೆಯುತ್ತಿದ್ದಾರೆ.
ಸದಾ ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಾ ಅನಾರೋಗ್ಯಕ್ಕೆ ತುತ್ತಾದರು ಸಹ ಎಲ್ಲಿಯೊ ಅದನ್ನು ತೋರಿಸಿಗೊಡದೆ ತಮ್ಮ ಬಳಿ ಬರುವ ಶಿಷ್ಯ ವರ್ಗಕ್ಕೆ ತಮಗೆ ಗೊತ್ತಿದ್ದ ಮಾಹಿತಿಯನ್ನು ತಿಳಿಸುತ್ತಾ ಅವರೊಂದಿಗೆ ಕಾಡು ಮೇಡುಗಳಲ್ಲಿ ಅಲೆಯುತ್ತಾ ವನ್ಯಜೀವಿಗಳ ಕೌತುಕವನ್ನು ವಿವರಿಸುತ್ತಾ ಅಪರೂಪದ ವನ್ಯಜೀವಿಗಳ ಕೌತುಕಗಳನ್ನು ಛಾಯಾ ಚಿತ್ರದಲ್ಲಿ ಸೆರೆ ಹಿಡಿದು ಕಲೆಗಾರಿಕೆಯನ್ನು ತಿಳಿಸುತ್ತಾರೆ. ಜನರಲ್ಲಿ , ವಿದ್ಯಾರ್ಥಿಗಳಲ್ಲಿ ವನ್ಯಜೀವಿಗಳ ಬಗ್ಗೆ, ಪರಿಸರದ ಬಗ್ಗೆ ಕಾಳಜಿ ಮೂಡಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಇವರ ಕಾರ್ಯ ಅಭಿನಂದನಾರ್ಹ.

ಬಾಪು ನಂದಿಹಳ್ಳಿ

loading...