ಶ್ರೀ ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆ ಶಿರಸಂಗಿಯ ಐತಿಹಾಸಿಕತೆ

0
77
loading...

ಕನ್ನಡಮ್ಮ ಸುದ್ದಿ-ಹುಬ್ಬಳ್ಳಿ/ಶಿರಸಂಗಿ : ವಿಶ್ವಕರ್ಮದ ಕುಲದೇವತೆ ಶ್ರೀ ಕಾಳಿಕಾದೇವಿಯ ಯುಗಾದಿಯ ಯಾತ್ರಾ ಮಹೋತ್ಸವ ಬೆಳಗಾವಿ ಜಿಲ್ಲೆ ಶಿರಸಂಗಿಯಲ್ಲಿ ಇದೇ ಮಾರ್ಚ 28 ಹಾಗೂ 29ರಂದು ಜರುಗಿತು. ದಕ್ಷಿಣ ಭಾರತದ ಪ್ರಮುಖ ಶಾಕ್ತ ಪೀಠಗಳಲ್ಲೊಂದಾದ ಸವದತ್ತಿ ತಾಲೂಕಿನ ಶಿರಸಂಗಿಯು ಇತಿಹಾಸ, ಪುರಾಣ, ಹಾಗೂ ಧಾರ್ಮಿಕ ನೆಲೆಯಲ್ಲಿ ರಾಮಾಯಣ ಕಾಲಕ್ಕೆ ಕೊಂಡಿಯಾಗಿದೆ. ಪುರಾಣ ಕಾಲದಲ್ಲಿ ‘ಋಷ್ಯಶೃಂಗಪುರ’, ‘ಪಿರಿಶಿಂಗಿ’, ‘ಹಿರಿಶಿಂಗಿ’ ಎಂದು ಶಾಸನಗಳಲ್ಲಿ ಗುರುತಿಸಲಾದ ಈ ಕ್ಷೇತ್ರ 12ನೇ ಶತಮಾನದಲ್ಲಿ ಚಾಲುಕ್ಯ ಅರಸರ ಮಂಡಳ ಕ್ಷೇತ್ರವಾಗಿತ್ತು. ನಂತರ 16ನೇ ಶತಮಾನದಲ್ಲಿ ವಿಜಯ ನಗರ ಅರಸರ ಆಳ್ವಿಕೆಗೊಳಪಟ್ಟಿತ್ತು. ನಂತರ, ಪೇಶ್ವೆ ಆಧುನಿಕ ಯುಗದಲ್ಲಿ ಶಿರಸಂಗಿ ದೇಸಾಯರ ಆಡಳಿತದಲ್ಲಿದ್ದ ಈ ಕ್ಷೇತ್ರ ವಿಶ್ವಕರ್ಮರ ಪುಣ್ಯಕ್ಷೇತ್ರವೆನಿಸಿದೆ.
ಇತಿಹಾಸದಲ್ಲಿ ಇಣುಕಿ ನೋಡಿದರೆ ರಾಮ, ಲಕ್ಷ್ಮಣರು ಲಂಕಾಸುರನನ್ನು ವಧಿಸಿ, ತಿರುಗಿ ಉತ್ತರಕ್ಕೆ ಪಯಣಿಸುವಾಗ ಇಲ್ಲಿ ರಾಮೇಶ್ವರನನ್ನು ಪ್ರತಿಷ್ಠಾಪಿಸಿದರೆಂಬ ಪಾರಂಪರ್ಯದ ಕಥೆ ಇದೆ. ಇಲ್ಲಿಯ ಸ್ಥಳ ಮಹಾತ್ಮೆ ಎಂದರೆ ವೈಶ್ವಕರ್ಮಣ ಋಷಿ ಋಷ್ಯಶೃಂಗರು ಇಲ್ಲಿನ ಗುಡ್ಡದ ತಪ್ಪಲಿನಲ್ಲಿ ಆಶ್ರಮ ಸ್ಥಾಪಿಸಿ ಅಲ್ಲಿ ತಪಗೈಯುತ್ತಿದ್ದರು. ಕಾಲಾಂತರದಲ್ಲಿ ಐದು ಜನ ರಾಕ್ಷಸರು ಋಷಿಯ ತಪೋಭಂಗ ಮಾಡತೊಡಗಿದರು. ಆಗ ಋಷ್ಯಶೃಂಗರು ರಾಕ್ಷಸರನ್ನು ಸಂಹರಿಸುವಂತೆ ತಾಯಿ ಕಾಳಿಕೆಯನ್ನು ಪ್ರಾರ್ಥಿಸಿದರು. ಅವರ ಅಣತಿಯಂತೆ ಕಾಳಿಕಾದೇವಿ ಐದು ಜನ ರಾಕ್ಷಸರನ್ನು ಸಂಹರಿಸಿದಳು. ಈ ಘಟನೆ ಜರುಗಿದ ಸಂದರ್ಭವೇ ‘ಯುಗಾದಿ’. ಇಲ್ಲಿ ಪ್ರತಿವರ್ಷ ಯುಗಾದಿ ಮಹೋತ್ಸವ ಜರುಗುತ್ತಿದ್ದು, ಯುಗಾದಿ ಅಮಾವಾಸ್ಯೆಯಂದು ಕಾಳಿಕಾ ದೇವಸ್ಥಾನದಲ್ಲಿ ನಿರ್ಮಿಸಿರುವ ‘ಬುತ್ತಿ ಕಟ್ಟಿ’ ಮೇಲಿನಿಂದ ಕುಂಕುಮ ಲೇಪಿತ ಐದು ಅನ್ನದ ಉಂಡೆಗಳನ್ನು ಆಕಾಶದತ್ತ ಹಾರಿಸುವುದು ಒಂದು ಸಂಪ್ರದಾಯವಾಗಿ ಅನುಚಾನವಾಗಿ ನಡೆದು ಬಂದಿದೆ. ಈ ಐದು ಉಂಡೆಗಳು ನಲುಂದ, ನರುಂದ, ಬೆಟ್ಟಾಸುರ, ಚಿಕ್ಕುಂಬ ಹಾಗೂ ಹಿರಿಕುಂಬ ರಾಕ್ಷಸರನ್ನು ಸಂಕೇತಿಸುತ್ತವೆ. ಶಿರಸಂಗಿಯ ಸುತ್ತಣ ಪ್ರದೇಶದಲ್ಲಿ ತಾಯಿ ಕಾಳಿಕೆಯು ಚಂಡಾಡಿದ್ದು, ಅವರು ನರಗುಂದ, ನವಲಗುಂದ, ಬೆಟ್ಟದೂರು, ಚಿಕ್ಕುಂಬಿ ಹಾಗೂ ಹಿರೇಕುಂಬಿ ಬೆಟ್ಟಗಳಾಗಿ ಬಿದ್ದರೆಂದು ಸ್ಥಳ ಪುರಾಣ ಹೇಳುತ್ತದೆ.
ಈ ಇತಿಹಾಸವನ್ನು ಸಮರ್ಥಿಸುವಂತೆ ಶಿರಸಂಗಿ ಕಾಳಿಕಾದೇವಿಯ ಪರಿಸರದಲ್ಲಿ ಭೀಮರಥಿ ಹೊಂಡ, ಖಡ್ಗ ತೀರ್ಥ ಎಂಬ ಹೊಂಡಗಳಿವೆ. ಕಾಳಿಕಾದೇವಿಯು ರಾಕ್ಷಸರನ್ನು ವಧಿಸಿ, ಬಂದು ಖಡ್ಗತೀರ್ಥದ ಪುಷ್ಕರಣಿಯಲ್ಲಿ ರಕ್ತ ಲೇಪಿತ ತನ್ನ ಖಡ್ಗವನ್ನು ತೊಳೆದಳು ಎಂಬ ಪ್ರತೀತಿ ಇದೆ.
ಯುಗಾದಿ ಮಹೋತ್ಸವ: ಈ ಇತಿಹಾಸದ ಹಿನ್ನಲೆಯಲ್ಲಿ ಪ್ರತಿ ಯುಗಾದಿಯಂದು ಈ ಕ್ಷೇತ್ರದಲ್ಲಿ ಯುಗಾದಿ ಯಾತ್ರಾ ಮಹೋತ್ಸವ ಆಚರಿಸಲ್ಪಟ್ಟಿತು. ಈ ವರ್ಷ ಇದೇ ಮಾರ್ಚ 28 ಹಾಗೂ 29ರಂದು ಜಾತ್ರಾ ಮಹೋತ್ಸವ ಏರ್ಪಾಡಾಗಿತ್ತು. ಮಾರ್ಚ 28ರಂದು ಪ್ರಾತಃಕಾಲದಲ್ಲಿ ಶ್ರೀ ಕಾಳಿಕಾದೇವಿಗೆ ಪಂಚಾಮೃತ ಅಭಿಷೇಕ, ದೇವಿಗೆ ಹೊಸಗೋಧಿ ಅರ್ಪಣೆ, ಶ್ರೀ ದೇವಿ ಪಾರಾಯಣಗಳು ಅಚ್ಚುಕಟ್ಟಾಗಿ ಜರುಗಿದವು. ನಂತರ ಮಧ್ಯಾಹ್ನ 3 ಗಂಟೆಯಿಂದ ಧಾರ್ಮಿಕ, ಸಾಮಾಜಿಕ ಹಾಗೂ ಸಾಂಸ್ಕøತಿಕ ಸಭೆಗಳು ಜರಗಿದವು. ಈ ಸಮಾರಂಭದಲ್ಲಿ ಸಮಾಜದ ಹಲವಾರು ಮಹಾಸ್ವಾಮಿಗಳು, ಶಾಸಕರು, ಜನಪ್ರತಿನಿಧಿಗಳು, ಸಮಾಜದ ಗಣ್ಯರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ವಿಶ್ವಕರ್ಮ ವಿಕಾಸ ವಾಹಿನಿ ಮಾಸ ಪತ್ರಿಕೆ ಬಿಡುಗಡೆಗೊಂಡಿತು. ಅದರಂತೆ ಕಾಳಿಕಾ ದರ್ಶನ, ಮರಾಠಿ ಆವೃತ್ತಿಯ ಕಿರುಹೊತ್ತಿಗೆ ಬಿಡುಗಡೆಗೊಳಿಸಲಾಯಿತು. ವಿಶ್ವಕರ್ಮ ಸಮಾಜದ ವಧು-ವರರ ಆನ್‍ಲೈನ್ ನೋಂದಣಿ ಹಾಗೂ ಮಾಹಿತಿಗಾಗಿ ವೆಬ್‍ಸೈಟ್ ಸಹ ಈ ಸಂದರ್ಭದಲ್ಲಿ ಬಿಡುಗಡೆಯಾಯಿತು. ನಂತರ ಪ್ರತಿಭಾ ಪುರಸ್ಕಾರ, ನಾಣ್ಯ ತುಲಾಭಾರ ಹಾಗೂ ಧಾನ್ಯ ತುಲಾಭಾರ ಮತ್ತು ಸಾಂಸ್ಕøತಿಕ ಕಾಂiÀರ್iಕ್ರಮಗಳು ಜರುಗಿದವು, ರಾತ್ರಿ ದೀಪೋತ್ಸವ ಜರುಗಿತು.
ಈ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳನ್ನು ನಿರ್ವಹಿಸುವ ಶ್ರೀ ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆ ಹಾಗೂ ವಿಶ್ವಕರ್ಮ ಪ್ರತಿಷ್ಠಾನಗಳು ಜಾತ್ರಾ ಮಹೋತ್ಸವದ ವ್ಯವಸ್ಥೆಯನ್ನು ಅತ್ಯಂತ ಅÀಚ್ಚುಕಟ್ಟಾಗಿ ನಿರ್ವಹಿಸಿತು. ಮಾರ್ಚ 29ರಂದು ಮಹಾಪ್ರಸಾದ ಜರುಗಿತು ಎಂದು ಶ್ರೀ ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆಯ ಅಧ್ಯಕ್ಷ ಪ್ರೋ: ಪಿ.ಬಿ. ಬಡಿಗೇರ ಅವರು ಹುಬ್ಬಳ್ಳಿಯಿಂದ ಪತ್ರಿಕಾ ಪ್ರಕಟನೆ ಹೊರಡಿಸಿದ್ದಾರೆ.

loading...