ಸಾಮೂಹಿಕ ವಿವಾಹ ಕಾರ್ಯಕ್ರಮ

0
67
loading...

ಕನ್ನಡಮ್ಮ ಸುದ್ದಿ-ಮುಂಡಗೋಡ : ಸಂಸಾರದಲ್ಲಿ ಯಾವುದೇ ಬಿರುಗಾಳಿ ಬಂದರೂ ಅದಕ್ಕೆ ಜಗ್ಗದೇ ಅವುಗಳನ್ನು ಸಮರ್ಥವಾಗಿ ಎದುರಿಸಿ ಆದರ್ಶಮಯವಾದ ಜೀವನ ಸಾಗಿಸುವ ಮನೋಭಾವ ಹೊಂದಿದರೆ ಯಾವುದೇ ಶಕ್ತಿ ಕೂಡ ನಮ್ಮ ದಾಂಪತ್ಯದಲ್ಲಿ ಬಿರುಕು ತರಲು ಸಾದ್ಯವಿಲ್ಲ ಎಂದು ಮಂಟೂರ ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಮಹಾಸ್ವಾಮಿಗಳು ಹೇಳಿದರು.
ಮಂಗಳವಾರ ತಾಲೂಕಿನ ಇಂದೂರ ಗ್ರಾಮದ ಶ್ರೀ ಕಲ್ಮೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಸಂಸಾರ ಬಂಧನ ಮೋಕ್ಷಕ್ಕೆ ಅಡಿಯಾಗುವುದಿಲ್ಲ, ನೂತನವಾಗಿ ವಿವಾಹವಾದ ಸತಿ-ಪತಿಗಳು ಒಂದಾಗಿ ಕಷ್ಟ ಸುಖ ಹಂಚಿಕೊಂಡು ಬಾಳಿರಿ. ನಿಮ್ಮ ಸಂಸಾರದ ಗುಟ್ಟು ಒಂದೆಯಾಗಿರಬೇಕು ಎಂದು ನೂತನ ವಧು-ವರರಿಗೆ ಕಿವಿಮಾತು ಹೇಳಿದರು
ಅತ್ತಿವೇರಿ ಬಸವಧಾಮದ ಶ್ರೀ ಬಸವೇಶ್ವರಿ ಮಾತೆ ಮಾತನಾಡಿ, ನಮ್ಮ ಬದುಕನ್ನು ನೋಡಿ ಇತರರು ಮೆಚ್ಚಬೇಕು. ಅಂತಹ ಆದರ್ಶಮಯ ಬದುಕನ್ನು ನಾವು ರೂಪಿಸಿಕೊಳ್ಳಬೇಕು ಎಂದರು. ಹುಬ್ಬಳ್ಳಿ ಎರಡೆತ್ತಿನಮಠದ ಶ್ರೀಸಿದ್ದಲಿಂಗ ಮಹಸ್ವಾಮಿಗಳು ಕಾರ್ಯಕ್ರಮದ ನೇತೃತ್ವವಹಿಸಿದ್ದರು. ಶಾಸಕ ಶಿವರಾಮ ಹೆಬ್ಬಾರ, ಮಾಜಿ ಶಾಸಕ ವಿ.ಎಸ್.ಪಾಟೀಲ ಮಾತನಾಡಿದರು. ಜಿ.ಪಂ ಸದಸ್ಯ ರವಿಗೌಡ ಪಾಟೀಲ, ತಾ.ಪಂ ಅಧ್ಯಕ್ಷೆ ದಾಕ್ಷಾಯಣಿ ಸುರಗೀಮಠ, ಇಂದೂರ ಗ್ರಾ.ಪಂ.ಅಧ್ಯಕ್ಷ ಮಹ್ಮದರಫೀಕ ದೇಸಳ್ಳಿ ತಾ.ಪಂ.ಸದಸ್ಯ ಜ್ಞಾನದೇವ ಗುಡಿಯಾಳ, ಕೆಂಜೋಡಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಾದ ತೋಟಗಾರಿಕಾ ಅಧಿಕಾರಿಯಾದ ಶಂಕರಗೌಡ ಪಾಟೀಲ, ಸಹಾಯಕ ಕೃಷಿ ನಿರ್ದೇಶಕರಾದ ಅರವಿಂದ ಕಮ್ಮಾರ, ತಾಲೂಕಾ ವೈದ್ಯಾಧಿಕಾರಿ ಡಾ.ಕಿರಣ ಕುಲಕರ್ಣಿ, ರಾಜಶೇಖರ ನಾಯ್ಕ, ಲೋಚಲಪ್ಪ ಬೆಳವಲಕೊಪ್ಪ, ಎ.ವಿ.ನಾಯ್ಕ, ಕೃಷ್ಣಾಬಾಯಿ ನೇತ್ರೇಕರ್ ಅವರನ್ನು ಸನ್ಮಾನಿಸಲಾಯಿತು.
ಈ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 9 ಜೋಡಿಗಳು ಸತಿಪತಿಗಳಾದರು. ಆರಂಭದಲ್ಲಿ ಶಿಲ್ಪಾ ಪಾಟೀಲ ಸ್ವಾಗತಿಸಿದರು. ಬಿ.ಕೆ.ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂತೋಷ ಅಂಗಡಿ ಮತ್ತು ದಿನೇಶ ವೆರ್ಣೇಕರ ಕಾರ್ಯಕ್ರಮ ನಿರೂಪಿಸಿದರು. ಎಸ್.ಎಸ್.ಸುಂಕದ ವಂದಿಸಿದರು.

loading...