28 ರಿಂದ ಕಸಮಳಗಿ ಜೈನ ಬಸದಿ ಪಂಚಕಲ್ಯಾಣ ಮಹೋತ್ಸವ

0
54
loading...

ಕನ್ನಡಮ್ಮ ಸುದ್ದಿ-ಬೆಳಗಾವಿ20: ಖಾನಾಪೂರ ತಾಲೂಕಿನ ಕಸಮಳಗಿ ಗ್ರಾಮದಲ್ಲಿ ಭಗವಾನ.ಶ್ರೀ.1008 ಪಾಶ್ರ್ವನಾಥ ತೀರ್ಥಂಕರರ ಜಿನ ಮಂದಿರ ಮತ್ತು ನೂತನ ಮಾನಸ್ತಂಭೋಪರಿ ಜಿನಬಿಂಬಗಳ ಮತ್ತು 24 ತೀರ್ಥಂಕರರ ವಿಶ್ವ ಮಟ್ಟದ ಬೃಹತ್ ಪಂಚಕಲ್ಯಾಣ ಮಹಾಮಹೋತ್ಸವ ಏ. 28 ರಿಂದ ಮೇ2 ರವರೆಗೆ ನಡೆ ಯಲಿದೆ ಎಂದು ಪಂಚಕಲ್ಯಾಣ ಮಹಾಮಹೋತ್ಸವ ಸಮಿತಿ ಅಧ್ಯಕ್ಷ ರಾಜೀವ ದೊಡ್ಡಣ್ಣವರ, ಶಾಸಕ ಸಂಜಯ ಪಾಟೀಲ ಮತ್ತು ಮಾಜಿ ಶಾಸಕ ಅಭಯ ಪಾಟೀಲ ಎಸ್.ಡಿ.ಎಂ. ಕಾರ್ಯದರ್ಶಿ ಜೀನೇಂದ್ರಪ್ರಸಾದ ಹೇಳಿದರು.
ಗುರುವಾರ ಕರೆಯಲಾಗಿದ್ದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ ಅವರು. ಸುಮಾರು 12 ವರ್ಷಗಳ ಹಿಂದೆ ಅಂದರೆ 2005 ರಲ್ಲಿ ಕಸಮಳಗಿ ಗ್ರಾಮದ ಶಾಲಾ ಕಟ್ಟಡ ಆವರಣ ನಿರ್ಮಾಣದ ಸಂದರ್ಭದಲ್ಲಿ ಭೂಗರ್ಭದಲ್ಲಿ ಅತ್ಯಂತ ಪುರಾತಣವಾದ ಕ್ರಿ.ಶ.11 ನೇ ಶತಮಾನದ ಶ್ರೀ.ಪಾಶ್ರ್ವನಾಥ ತೀರ್ಥಂಕರರ ಪ್ರತಿಮೆ ದೊರೆಯಿತು. ಅಂದಿನಿಂದ ಇಂದಿನವರೆಗೆ ಈ ಪ್ರತಿಮೆಯನ್ನು ಪೂಜೆ ಮಾಡಲಾಗುತ್ತಿದೆ. ಭೂಗರ್ಭದಲ್ಲಿ ದೊರೆತ ಈ ಪ್ರತಿಮೆ ವಿಶೇಷವಾಗಿದ್ದು, ಪ್ರತಿ ದಿನ ಮೂರು ಬಣ್ಣಗಳಲ್ಲಿ ರೂಪಾಂತರಗೊಳ್ಳುತ್ತದೆ. ಇದೊಂದು ವಿಶೇಷ ರೀತಿಯ ಕಪ್ಪು ಮಿಶ್ರಿತ ನೀಲಿ ಛಾಯೆಯ ಬಳಪದ ಶಿಲೆಯಲ್ಲಿ ಕೆತ್ತಲಾಗಿದ್ದು, ಈ ಶಿಲ್ಪವು ಇಡೀ ಭಾರತದಲ್ಲಿಯೇ ವಿಶೇಷವಾಗಿದೆ ಎಂದು ಅವರು ತಿಳಿಸಿದರು.
12 ವರ್ಷಗಳಿಂದ ನಿರಂತರ ಪ್ರಯತ್ನದಿಂದ ಇದೀಗ ಈ ತೀರ್ಥಂಕರರ ಪ್ರತಿಮೆ ಪ್ರತಿಷ್ಠಾಪಿಸುವುದಕ್ಕಾಗಿ ಕಸಮಳಗಿ ಗ್ರಾಮದಲ್ಲಿ ಜಿನ ಮಂದಿರ ನಿರ್ಮಿಸಲಾಗಿದೆ. ಶ್ರವಣಬೆಳಗೊಳದ ಭಟ್ಟಾರಕ ಶ್ರೀಗಳ ಪ್ರೇರಣೆ ಮತ್ತು ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪದ್ಮವಿಭೂಷಣ ಡಾ.ವಿರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಈ ಜಿನಮಂದಿರವನ್ನು ನಿರ್ಮಿಸಲಾಗಿದೆ. ಪಂಚಕಲ್ಯಾಣ ಮಹಾಮಹೋತ್ಸವ ಕಾರ್ಯಕ್ರಮಕ್ಕೆ ಡಾ. ವಿರೇಂದ್ರ ಹೆಗ್ಗಡೆ ದಂಪತಿಗಳು ಸೌಧರ್ಮ ಇಂದ್ರ ಇಂದ್ರಾಯಣಿ ಯಜಮಾನ ಪದವನ್ನು ಸ್ವೀಕರಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ಶ್ರೀ.108 ವರ್ಧಮಾನ ಸಾಗರಜೀ ಮುನಿಗಳು ಹಾಗೂ ಅವರ ಸಂಘ , ಶ್ರೀ. 108 ಸಿದ್ದಸೇನ ಮುನಿಗಳು ಹಾಗೂ ಜಿನವಾಣಿ ಮಾತಾಜಿ ಸಾನಿಧ್ಯ ವಹಿಸಲಿದ್ದಾರೆ ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಅವರು ಮಾತನಾಡಿ, ಶುಕ್ರವಾರ ಏ.28 ರಂದು ಬೆಳಿಗ್ಗೆ 5 ಗಂಟೆಗೆ ಮಂಗಲವಾದ್ಯ ಘೋಷ, ಮಂಗಲ ಪಾಠ, ನಾಂದಿ ಮಂಗಲ, ಆಚಾರ್ಯ ನಿಮಂತ್ರಣ, ಪ್ರತಿಷ್ಠಾಚಾರ್ಯ ನಿಮಂತ್ರಣ, ಇಂದ್ರ ಪ್ರತಿಷ್ಠಾ, ಧ್ವಜಾರೋಹಣ, ಮಂಟಪ ಉದ್ಘಾಟನೆ, ಲಘು ಶಾಂತಿ ಮಂಟಪ ವೇದಿ ಪ್ರತಿಷ್ಠಾ, ಮಂಗಲ ಕುಂಭ ನಯನ, ಪೀಠ ಯಂತ್ರ ಆರಾಧನಾ, ಮಧ್ಯಾನ 2 ಗಂಟೆಗೆ ಧರ್ಮಸಭಾ ಹಾಗೂ ಶ್ರೀಗಳಿಂದ ಪ್ರವಚನ, ಸವಾಲ, ಯಾಗಮಂಡಲ ವಿಧಾನ, ಸಾಯಂಕಾಲ 6 ಗಂಟೆಗೆ ಅಂಕುರಾರೋಪಣ, ಶಾಂತಿ ಹೋಮ, ಪಂಚಕುಂಭ ವಿನ್ಯಾಸ, ಭೇರಿಡಾತನ, ಭಂದ್ರಕುಂಭ ನಯನ, ಧ್ವಜ ಪಟವಿಹಾರ, ಗರ್ಭಕಲ್ಯಾಣ ಇಂದ್ರಸಭಾ, ಕುಬೇರ ರತ್ನ ವೃಷ್ಠಿ, ಹದಿನಾರು ಸ್ವಪ್ನ ದರ್ಶನ, ಸಂಗೀತಾರತಿ ಕಾರ್ಯಕ್ರಮ ನಡೆಯಲಿದೆ.
ಈ ಜಂಟಿ ಪತ್ರಿಕಾಗೋಷ್ಟಿಯಲ್ಲಿ ಶ್ರೀ. 1008 ಪಾಶ್ರ್ವನಾಥ ತೀರ್ಥಂಕರ ದಿಗಂಬರ ಜಿನಮಂದಿರ ಪಂಚಕಲ್ಯಾಣ ಪ್ರತಿಷ್ಠಾ ಮಹಾಮಹೋತ್ಸವ ಸಮಿತಿ ಸದಸ್ಯರಾದ ಜಯಪಾಲ ಸಾವಂತ, ದೇವೆಂದ್ರ ಗೌಡ, ಮಹಾವೀರ ಹರದಿ, ಪ್ರಮೋದ ಕೋಚೆರಿ, ದತ್ತಾ ಡೋರ್ಲೆ, ಅಭಿನಂದನ ಕೋಚೆರಿ,ಅಭಯ ಅವಲಕ್ಕಿ, ಕುಂತಿನಾಥ ಕಲಮನಿ,ಹೀರಾಚಂದ ಕಲಮನಿ, ವಿನಯ ಬಾಳಿಕಾಯ , ಡಿ.ಡಿ.ಪಾಟೀಲ, ಡಾ. ಶ್ರೀಕಾಂತ ಕೋಂಕಣಿ ಸೇರಿದಂತೆ ವಿವಿಧ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು ಮೊದಲಾದವರು ಉಪಸ್ಥಿತರಿದ್ದರು.

loading...