ನ್ಯೂಯಾರ್ಕ್: ಅಟ್ಲಾಂಟಾ ವಲಸೆ ಅಧಿಕಾರಿಗಳ ವಶದಲ್ಲಿದ್ದ ಭಾರತೀಯ ಮೂಲದ ವ್ಯಕ್ತಿಯೋರ್ವ ಸಾವಿಗೀಡಾಗಿದ್ದು, ತೀವ್ರ ಆನಾರೋಗ್ಯದಿಂದ ಆತ ಮೃತಪಟ್ಟಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಧಿಕಾರಿಗಳು ತಿಳಿಸಿರುವಂತೆ ಅತುಲ್ ಕುಮಾರ್ ಬಾಬುಭಾಯಿ ಪಟೇಲ್ ಎಂಬ 58 ವರ್ಷದ ಹಿರಿಯ ನಾಗರಿಕ ಸಾವನ್ನಪ್ಪಿದ್ದು, ಈ ಹಿಂದೆ ಮೇ 10ರಂದು ವಿಮಾನದ ಮೂಲಕ ಈಕ್ವೆಡಾರ್ ನಿಂದ ಅಟ್ಲಾಂಟಾಕ್ಕೆ ಆಗಮಿಸಿದ್ದರು. ಈ  ವೇಳೆ ವಿಮಾನ ನಿಲ್ದಾಣದ ಅಧಿಕಾರಿಗಳು ಇವರನ್ನು ಪರಿಶೀಲಿಸಿದಾಗ ಇವರ ಬಳಿ ಸೂಕ್ತ ದಾಖಲೆಗಳು ಇರಲಿಲ್ಲ. ಹೀಗಾಗಿ ಅಟ್ಲಾಂಟಾ ಪೊಲೀಸರು ಇವರನ್ನು ಅಕ್ರಮ ಪ್ರವೇಶದ ಆರೋಪದ ಮೇರೆಗೆ ಬಂಧಿಸಿದ್ದರು ಎಂದು  ತಿಳಿದುಬಂದಿದೆ.
ಇನ್ನು ಈ ಬಗ್ಗೆ ಅಟ್ಲಾಂಟಾ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದು, ಸೂಕ್ತ ದಾಖಲೆ ಇಲ್ಲದ ಆರೋಪದ ಮೇರೆಗೆ ಅತುಲ್ ಕುಮಾರ್ ಬಾಬುಭಾಯಿ ಪಟೇಲ್ ಅವರನ್ನು ವಶಕ್ಕೆ ಪಡೆಯಲಾಗಿತ್ತು. ಸತತ 2 ದಿನಗಳ ಕಾಲ ಅಧಿಕಾರಿಗಳ  ವಶದಲ್ಲಿದ್ದ ಅತುಲ್ ಕುಮಾರ್ ಬಾಬುಭಾಯಿ ಪಟೇಲ್ ಅವರು ಹೈ ಬಿಪಿ ಹಾಗೂ ಶ್ವಾಸಕೋಶ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದರು. ಅವರನ್ನು ಪರೀಕ್ಷಿಸಿದ ವೈದ್ಯರ ಸಲಹೆ ಮೇರೆಗೆ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು  ಮಾಡಿ ಇಲಾಖೆ ವತಿಯಿಂದಲೇ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಅತುಲ್ ಕುಮಾರ್ ಬಾಬುಭಾಯಿ ಪಟೇಲ್ ಅವರು ಹೃದಯ ವೈಫಲ್ಯದಿಂದ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಸ್ತುತ ಭಾರತದ ವಿದೇಶಾಂಗ ಇಲಾಖೆ ಅಧಿಕಾರಿಗಳಿಗೆ ಅಟ್ಲಾಂಟಾ ಅಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡಿದ್ದು, ಅಧಿಕಾರಿಗಳು ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ತಿಳಿದುಬಂದಿದೆ.
loading...