loading...

ಕನ್ನಡಮ್ಮ ಸುದ್ದಿ-ಧಾರವಾಡ : ರಾಜ್ಯದಲ್ಲಿ ವೈಜ್ಞಾನಿಕ ಭಾಷೆಯ ಅಭಿವೃದ್ಧಿಗೆ ಹಾಗೂ ಕನ್ನಡದಲ್ಲಿ ವಿವಿಧ ವಿಜ್ಞಾನ ವಿಷಯಗಳಿಗೆ ಸಂಬಂಧಿಸಿದ ನಿಘಂಟುಗಳ ಪ್ರಕಟಣೆಗೆ ರಾಜ್ಯ ವಿಜ್ಞಾನ ಪರಿಷತ್ತು ಮುಂದಾಗಬೇಕು ಎಂದು ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೋ. ಪ್ರಮೋದ ಬಿ. ಗಾಯಿ ಅಭಿಪ್ರಾಯಪಟ್ಟರು.
ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಮತ್ತು ಪ್ರಾದೇಶಿಕ ವಿಜ್ಞಾನ ಕೇಂದ್ರ ಧಾರವಾಡ ಇವುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಜ್ಞಾನ ಲೇಖಕರ ಶಿಬಿರ ಉದ್ಘಾಟಿಸಿ ಮಾತನಾಡಿ, ಭಾರತೀಯ ಪ್ರಾದೇಶಿಕ ಭಾಷೆಗಳಲ್ಲಿ ವಿಜ್ಞಾನ ಕುರಿತ ಬರಹಗಾರರ ಸಂಖ್ಯೆ ಅತ್ಯಂತ ಕಡಿಮೆ ಇದ್ದು ವಿಶೇಷವಾಗಿ ಕನ್ನಡ ಭಾಷೆಯಲ್ಲಿ ವಿಜ್ಞಾನ ಬರಹಗಾರರ ಕೊರತೆ ಹೆಚ್ಚಾಗಿದೆ ಇದಕ್ಕೆ ವಿಜ್ಞಾನ ವಿಷಯಗಳಿಗೆ ಸಂಬಂಧಿಸಿದ ನಿಘಂಟುಗಳ ಕೊರತೆ ಕಾರಣ. ಜಗತ್ತಿನ ಇತರ ರಾಷ್ಟ್ರಗಳಾದ ರಷ್ಯ ಮತ್ತು ಜಪಾನ್‍ನಂತಹ ಮೊದಲಾದ ರಾಷ್ಟ್ರಗಳು ತಮ್ಮದೇ ಆದ ಭಾಷೆಗಳಲ್ಲಿ ವಿಜ್ಞಾನದ ಕುರಿತು ಪ್ರಕಟಣೆಗಳನ್ನು ನಿರಾಯಾಸವಾಗಿ ಪ್ರಕಟಿಸುತ್ತಿವೆ. ಪ್ರಾದೇಶಿಕ ಭಾಷೆಗಳಲ್ಲಿ ಸಾಹಿತ್ಯ ಹಾಗೂ ವಿಜ್ಞಾನ ಶಬ್ದಗಳ ಅರ್ಥಗಳನ್ನು ತಿಳಿಸುವ ನಿಘಂಟುಗಳ ಕೊರತೆಯಿಂದ ಅದು ನಮ್ಮ ದೇಶದಲ್ಲಿ ಸಾಧ್ಯವಿಲ್ಲದಾಗಿದೆ ಎಂದರು.
ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ.ಕೆ.ಬಿ.ಗುಡಸಿ ಮಾತನಾಡಿ ವಿಜ್ಞಾನದ ವಿಷಯವನ್ನು ಇತರ ಭಾಷೆಗಳಿಗೆ ತರ್ಜುಮೆ ಮಾಡುವುದು ಒಂದು ಸವಾಲಿನ ಕೆಲಸವಾಗಿದ್ದು ಈ ಶಿಬಿರದಲ್ಲಿ ಶಿಬಿರಾರ್ಥಿಗಳು ಹೆಚ್ಚಿನ ಆಸಕ್ತಿವಹಿಸಿ ಜ್ಞಾನ ಸಂಪಾದಿಸಿ ಉತ್ತಮ ವಿಜ್ಞಾನ ಬರಹಗಾರರಾಗಿ ರೂಪುಗೊಳ್ಳಬೇಕು ಎಂದರು.
ಬಾಲವಿಜ್ಞಾನ ಮಾಸಪತ್ರಿಕೆಯ ಪ್ರಧಾನ ಸಂಪಾದಕಿ ಶ್ರೀಮತಿ. ಹರಿಪ್ರಸಾದ ಅಧ್ಯಕ್ಷತೆವಹಿಸಿದ್ದರು.
ಸಂಜಯಕುಮಾರ ಮಾಲಗತ್ತಿ, ಪ್ರೊ.ಸಿ.ಡಿ.ಪಾಟೀಲ, ದಾನಿ ಬಾಬುರಾವ್ ಉಪಸ್ಥಿತರಿದ್ದರು. ಶ್ರೀಮತಿ.ಗಾಯತ್ರಿ ಹುದ್ದಾರ ನಿರೂಪಿಸಿದರು. ಹಡಪದ ವಂದಿಸಿದರು.

loading...