ಕಾಂಗ್ರೆಸ್‍ನಿಂದ ಪಾಠ ಹೇಳಿಸಿಕೊಳ್ಳುವ ಅಗತ್ಯ ಬಿಜೆಪಿಗೆ ಇಲ್ಲ: ಯಂಕಂಚಿ

0
335
loading...

ಕನ್ನಡಮ್ಮ ಸುದ್ದಿ
ಬಾಗಲಕೋಟೆ:22 ಕಾಂಗ್ರೆಸ್ ಪಕ್ಷ ದಲಿತರ ಹೆಸರಿನಲ್ಲಿ ಕಳೆದ 60 ವರ್ಷಗಳಿಂದ ದೇಶವನ್ನು ಹಾಳು ಮಾಡುತ್ತಾ ಬಂದಿದೆ. ಅಂಥ ಪಕ್ಷದಿಂದ ದಲಿತರ ಬಗ್ಗೆ ಬಿಜೆಪಿ ಪಾಠ ಹೇಳಿಸಿಕೊಳ್ಳುವ ಅಗತ್ಯವಿಲ್ಲ ಎಂದು ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಬಸವರಾಜ ಯಂಕಂಚಿ ಹೇಳಿದ್ದಾರೆ.
ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರು ದಲಿತ ಮತ್ತು ಹಿಂದುಳಿದ ವರ್ಗಗಳ ಮೇಲಿನ ಕಳಕಳಿ ಮತ್ತು ಕಾಳಜಿ ಸಹಿಸದ ಕಾಂಗ್ರೆಸ್ ಪಕ್ಷ ವಿನಾಕಾರಣ ಅವರ ಮೇಲೆ ಹೊಟೇಲ್ ತಿಂಡಿಯ ಆರೋಪ ಮಾಡುತ್ತಿರುವುದು ಸರಿಯಲ್ಲ. ಬಿ.ಎಸ್.ಯಡಿಯೂರಪ್ಪನವರು ದಲಿತ ಮತ್ತು ಹಿಂದುಳಿದ ವರ್ಗಗಳ ಆಶಾಕಿರಣವಾಗಿ ಮಾಡಿರುವ ಸಾಧನೆಗಳನ್ನು ಬಿಜೆಪಿ ಬಿಡುಗಡೆ ಮಾಡುತ್ತದೆ. ಕಾಂಗ್ರೆಸ್ ಪಕ್ಷಕ್ಕೆ ತಾಕತ್ತಿದ್ದರೇ ಹಿಂದುಳಿದ ಮತ್ತು ದಲಿತರಿಗೆ ನೀಡಿದ ಕೊಡುಗೆಗಳನ್ನು ಬಿಡುಗಡೆ ಮಾಡಲಿ ಎಂದು ಅವರು ಸವಾಲ್ ಹಾಕಿದ್ದಾರೆ.
ಕಾಂಗ್ರೆಸ್ ಪಕ್ಷ ಕಳೆದ 60 ವರ್ಷಗಳಿಂದ ದಲಿತ ಮತ್ತು ಹಿಂದುಳಿದವರನ್ನು ಕೇವಲ ಮತ ಬ್ಯಾಂಕ್‍ಗಾಗಿ ಬಳಸಿಕೊಂಡು ತಮ್ಮ ರಾಜಕೀಯ ಅಸ್ತಿತ್ವವನ್ನು ಕಂಡುಕೊಂಡ ಕಾಂಗ್ರೆಸ್ ಪಕ್ಷಕ್ಕೆ ಬಿಜೆಪಿ ಪಕ್ಷದ ಜನರ ಪರ ಕಾಳಜಿಯ ಬಗ್ಗೆ ಟೀಕಿಸುವ ನೈತಿಕತೆ ಇಲ್ಲ. ಕರ್ನಾಟಕದಲ್ಲಿ ಭೀಕರ ಬರಗಾಲದಿಂದ ರಾಜ್ಯ ತತ್ತರಿಸಿ ಹೋಗಿದೆ. ರಾಜ್ಯ ಸರಕಾರದಿಂದ ಜನ ಜಾನುವಾರುಗಳ ರಕ್ಷಣೆ ಮಾಡದ ಸರಕಾರಕ್ಕೆ ಬಿಜೆಪಿಯಿಂದ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಎರಡು ಬಾರಿ ಬರ ಅಧ್ಯಯನ ನಡೆಸಿ ರೈತರ ಕಾಳಜಿ ವಿಚಾರಿಸಿದ್ದಾರೆ. ಅಂಥವರ ಬಗ್ಗೆ ಹಗುರವಾಗಿ ಮಾತನಾಡುವ ನೈತಿಕತೆ ಕಾಂಗ್ರೆಸ್ ಪಕ್ಷದ ಮುಖಂಡರಿಗಿಲ್ಲ ಎಂದು ಅವರು ತಾಕೀತು ಮಾಡಿದ್ದಾರೆ.
ಚಿತ್ರದುರ್ಗದ ದಲಿತರ ಮನೆಯಲ್ಲಿ ಬಿ.ಎಸ್.ಯಡಿಯೂರಪ್ಪನವರು ಹೊಟೇಲ್ ಊಟ್ ಮಾಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ಮಾಡುತ್ತಿರುವ ಆರೋಪ ಸುಳ್ಳು. ಯಾರ ಮನೆಯಲ್ಲಿ ಊಟ ಮಾಡಿದ್ದಾರೋ ಅವರೇ ಸಾರ್ವಜನಿಕವಾಗಿ ನಮ್ಮ ಮನೆಯ ಊಟವನ್ನೆ ಮಾಡಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ತಿಂಡಿಗೆ ಇಟಲಿ, ಊಟಕ್ಕೆ ವಾಷಿಂಗ್ಟ್‍ನ, ಮಲಗಲು ಮಲೇಷ್ಯಾಕ್ಕೆ ಹೋಗುವ ಸಂಪ್ರದಾಯ ವಿರುವ ನಾಯಕರು ಆಳುವ ಪಕ್ಷ ನಮ್ಮದಲ್ಲ. ದೀನ ದುರ್ಬಲರ ಧ್ವನಿಯಾಗಿ ಜನಪರ ಕಾಳಜಿಯನ್ನು ಬಿಜೆಪಿ ಪಕ್ಷ ಮಾಡುತ್ತಿದೆ ಎಂದು ಅವರು ಹೇಳಿದರು.
ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ದಲಿತರ ಹಾಗೂ ಹಿಂದುಳಿದ ವರ್ಗದ ಜನರನ್ನು ತುಳಿದು ಅವರಿಗೆ ಸವಲತ್ತು ನೀಡುವ ನೆಪದಲ್ಲಿ ಕೋಟ್ಯಾಂತರ ರೂ.ಗಳನ್ನು ಕೊಳ್ಳೆ ಹೊಡೆದದ್ದು ಕಾಂಗ್ರೆಸ್ ಪಕ್ಷದ ಇತಿಹಾಸವಾಗಿದೆ. ರಾಜ್ಯದಲ್ಲಿ ಹಿಂದುಳಿದ ವರ್ಗಗಳಿಗಾಗಿಯೇ ಇರುವ ಅಂಬೇಡ್ಕರ ಅಭಿವೃದ್ಧಿ ನಿಗಮ, ಕೊಳಚೆ ನಿರ್ಮೂಲನಾ ಮಂಡಳಿ, ದೇವರಾಜ ಅರಸ ನಿಗಮ, ಸಮಾಜ ಕಲ್ಯಾಣ ಹೀಗೆ ಹಿಂದುಳಿದವರ ಅಭಿವೃದ್ಧಿಗಾಗಿ ಮಿಸಲಿಟ್ಟ ಹಣ ದುರ್ಬಳಕೆಯ ಬಗ್ಗೆ ಸಮಗ್ರ ತನಿಖೆಯಾದರೇ ಕಾಂಗ್ರೆಸ್ ಪಕ್ಷದ ಎಲ್ಲ ನಾಯಕರ ಮುಖವಾಡ ಕಳಚಿ ಬಿಳುತ್ತದೆ. ಬಿಜೆಪಿ ಹಾಗೂ ಯಡಿಯೂರಪ್ಪನವರ ಮೇಲೆ ಆರೋಪ ಮಾಡುತ್ತ ಕಾಲಹರಣ ಮಾಡುವ ಬದಲು ಭೀಕರ ಬರಗಾಲದಿಂದ ಬಳಲುತ್ತಿರುವ ರಾಜ್ಯಕ್ಕೆ ರಕ್ಷಣೆಗೆ ಮುಂದಾಗಬೇಕೆಂದು ಬಸವರಾಜ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

loading...