loading...

ಕನ್ನಡಮ್ಮ ಸುದ್ದಿ-ಬೆಳಗಾವಿ: ಸ್ಥಳೀಯ ಕಾರಂಜಿಮಠದ ಪೀಠಾಧಿಪತಿಗಳಾದ ಶ್ರೀ.ಮ.ನಿ.ಪ್ರ ಗುರುಸಿದ್ಧ ಸ್ವಾಮಿಗಳು ತಮ್ಮ ನಿಧನದ ನಂತರ ಮೃತದೇಹವನ್ನು ಹಾಗೂ ನೇತ್ರಗಳನ್ನು ವೈದ್ಯ ವಿದ್ಯಾರ್ಥಿಗಳ ಅನುಕೂಲಕ್ಕೆ ದಾನ ಮಾಡಿರುವುದು ಐತಿಹಾಸಿಕ ನಿಲುವು. ಶ್ರೀಗಳಿಂದ ದೇಹ ಮತ್ತು ನೇತ್ರದಾನದ ನಿರ್ಧಾರ ಆಧ್ಯಾತ್ಮಿಕ ವಲಯದಲ್ಲಿ ಕ್ರಾಂತಿಕಾರಿಯಾದ ಹೆಜ್ಜೆಯಾಗಿದೆ ಎಂದು ಬೆಳಗಾವಿ ಲಿಂಗಾಯತ ಸಂಘಟನೆಯ ಅಧ್ಯಕ್ಷ ಶಶಿಭೂಷಣ ಪಾಟೀಲ ಅಭಿಪ್ರಾಯ ಪಟ್ಟರು.
ಬೆಳಗಾವಿ ಲಿಂಗಾಯತ ಸಂಘಟನೆಯ 14ನೇ ವಾರ್ಷಿಕೋತ್ಸವದ ಅಂಗವಾಗಿ ಮಹಾಂತೇಶನಗರದ ಮಹಾಂತಭವನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ 14ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಕಾರಂಜಿಮಠದ ಶ್ರೀಗಳನ್ನು ಸತ್ಕರಿಸಿ ಮಾತನಾಡಿದ ಅವರು, ಧಾರ್ಮಿಕ ಪ್ರಪಂಚದ ಪೀಠಾಧಿಪತಿಯೊಬ್ಬ ಸಂಪ್ರದಾಯದ ಪ್ರಕಾರ ಗದ್ದುಗೆ ಕಟ್ಟಿಸಿಕೊಳ್ಳದೇ, ತಮ್ಮ ದೇಹವನ್ನು ಪರೋಪಕಾರಾರ್ಥವಾಗಿ ದಾನರೂಪದಲ್ಲಿ ನೀಡುವ ನಿರ್ಣಯ ಕೈಗೊಂಡು ಇತರರಿಗೆ ಮಾದರಿಯಾಗಿದ್ದಾರೆ ಎಂದರು.
ಬೈಲಹೊಂಗಲ ಡಾ. ರಾಮಣ್ಣವರ ಪ್ರತಿಷ್ಠಾನದಿಂದ ಕೆ.ಎಲ್.ಇ. ಸಂಸ್ಥೆಯ ಬಿ.ಎಮ್.ಕಂಕನವಾಡಿ ಆಯುರ್ವೇದ ಮೆಡಿಕಲ್ ಕಾಲೇಜಿಗೆ ತಮ್ಮ ದೇಹವನ್ನು ಮತ್ತು ಡಾ. ಪ್ರಭಾಕರ ಕೋರೆ ಕೆ.ಎಲ್.ಇ. ಆಸ್ಪತ್ರೆಯ ನೇತ್ರ ಭಂಡಾರಕ್ಕೆ ನೇತ್ರಗಳನ್ನು ದಾನ ಮಾಡುವ ವಾಗ್ದಾನ ಮಾಡಿದ ಶ್ರೀಗಳನ್ನು ತಮ್ಮ ಸಂಘಟನೆಯ ವತಿಯಿಂದ ಸತ್ಕರಿಸುತ್ತಿರುವುದು ಸಂಘಟನೆಯ ಪಾಲಿಗೆ ಹೆಮ್ಮೆಯ ಸಂಗತಿಯಾಗಿದೆ. ಸಮಾಜದ ಜನ ಸಾಮಾನ್ಯರಲ್ಲಿ ಇರುವ ಮೂಢನಂಬಿಕೆಗಳನ್ನು ಮೆಟ್ಟಿ ನಿಂತು ಐತಿಹಾಸಿಕ ನಿರ್ಣಯ ಕೈಗೊಂಡ ಸ್ವಾಮಿಗಳ ನಿರ್ಧಾರ ಶ್ಲಾಘನೀಯ ಮತ್ತು ಇತರರಿಗೆ ಮಾದರಿ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಡಾ. ರಾಮಣ್ಣವರ ಪ್ರತಿಷ್ಠಾನದ ಕಾರ್ಯದರ್ಶಿ ಡಾ. ಮಹಾಂತೇಶ ರಾಮಣ್ಣವರ ಮಾತನಾಡಿ, ದೇಹದಾನ ಕುರಿತು ವಿವರವಾದ ಮಾಹಿತಿ ನೀಡಿದರು. ಮರಣಾನಂತರ ನೇತ್ರದಾನದಿಂದ ಇಬ್ಬರ ಅಂದರ ಬಾಳಿಗೆ ಬೆಳಕು ನೀಡುವ ಉದ್ದೇಶ ಹೊಂದಿರುವ ಶ್ರೀಗಳ ದೂರದೃಷ್ಟಿಯನ್ನು ಶ್ಲಾಘಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಕಾರಂಜಿಮಠ ಶ್ರೀಗಳು, ತಮ್ಮ ಮರಣಾನಂತರ ತಮ್ಮ ಪಾರ್ಥೀವ ಶರೀರ ಪಂಚ ಭೂತಗಳಲ್ಲಿ ಲೀನಗೊಂಡು ಬದಲು ನಾಲ್ಕಾರು ಜನಕ್ಕೆ ಉಪಯೋಗವಾಗಲಿ ಎಂಬ ಒಂದೇ ಒಂದು ಉದ್ದೇಶದಿಂದ ದೇಹ ಹಾಗೂ ನೇತ್ರದಾನಕ್ಕೆ ತಾವು ಮುಂದಾಗಿದ್ದು, ಇದರಿಂದ ಜನರಲ್ಲಿ ದೇಹದಾನದ ಬಗ್ಗೆ ಜಾಗೃತಿ ಮೂಡಿದರೆ ತಮ್ಮ ದಾನದ ಸಂಕಲ್ಪ ಸಾರ್ಥಕವಾದಂತೆ. ಮೃತದೇಹಗಳ ಕೊರತೆಯಿಂದ ಬಳಲುತ್ತಿರುವ ವೈದ್ಯಕೀಯ ಕಾಲೇಜುಗಳಿಗೆ ಶರೀರ ರಚನಾ ಶಾಸ್ತ್ರದ ಬಗ್ಗೆ ಅಧ್ಯಯನ ಮಾಡಲು ಮೃತದೇಹಗಳು ದೊರೆಯಬೇಕು ಮತ್ತು ಮೃತದೇಹದ ಅಧ್ಯಯನ ಕೈಗೊಂಡ ಭಾವಿ ವೈದ್ಯರಿಂದ ಸಮಾಜಕ್ಕೆ ಉತ್ತಮ ಕೊಡುಗೆ ಲಭ್ಯವಾಗಬೇಕು ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಕಾರಂಜಿಮಠದ ಶ್ರೀಗಳ ದೇಹದಾನದಿಂದ ಪ್ರೇರಣೆಗೊಂಡ ಬೆಳಗಾವಿ ಲಿಂಗಾಯತ ಸಂಘಟನೆಯ 25ಕ್ಕೂ ಹೆಚ್ಚು ಸದಸ್ಯರು ಶ್ರೀಗಳ ಸಮ್ಮುಖದಲ್ಲಿ ದೇಹ ದಾನ ಮಾಡಲು ಒಪ್ಪಿಗೆ ಸೂಚಿಸಿದರು. ಕಾರ್ಯಕ್ರಮದಲ್ಲಿ ಶಂಕರ ಗುಡಸ್, ಮಹಾಂತೇಶ ದೇಸಾಯಿ, ಬಸವಪ್ರಭು ಪಾಟೀಲ, ಸಂಗಮೇಶ ಅರಳಿ, ಸುರೇಶ ನರಗುಂದ ಅಶೋಕ ಬರಗುಂಡಿ ,ಬಸವರಾಜ ಸೊಂಟನವರ ಸೇರಿದಂತೆ ಹಿರಿಯ ನಾಗರಿಕ ವೇದಿಕೆಯ ಸದಸ್ಯರು ಹಾಗೂ ಹಿರಿಯ ನಾಗರಿಕ ವೇದಿಕೆಯ ಸದಸ್ಯರು ಉಪಸ್ಥಿತರಿದ್ದರು.
ಸುವರ್ಣ ಗುಡಸ ಅವರು ಸ್ವಾಗತಿಸಿದರು. ಈರಣ್ಣ ದೇಯಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸದಾಶಿವ ದೇವರಮನಿ ನಿರೂಪಿಸಿದರು. ಜಯಶ್ರೀ ನರಗುಂದ ವಂದಿಸಿದರು.

loading...