ನವದೆಹಲಿ: ಕುಲಭೂಷಣ್ ಜಾದವ್ ಮರಣದಂಡನೆ ಶಿಕ್ಷೆಗೆ ಅಂತಾರಾಷ್ಟ್ರೀಯ ನ್ಯಾಯ ಕೋರ್ಟ್ ತಂದಿರುವುದಕ್ಕೆ ಅತೃಪ್ತಿ ವ್ಯಕ್ತಪಡಿಸಿರುವ ಪಾಕಿಸ್ತಾನ ಸರ್ಕಾರ, ಸದ್ಯದಲ್ಲಿಯೇ ಕೇಸಿಗೆ ಸಂಬಂಧಪಟ್ಟಂತೆ ಹೆಚ್ಚಿನ ಸಾಕ್ಷಿಗಳನ್ನು ನೀಡುತ್ತೇವೆ ಎಂದು ಹೇಳಿದೆ.
ಅಂತಾರಾಷ್ಟ್ರೀಯ ನ್ಯಾಯಾಲಯದ ತೀರ್ಪನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಜಾಧವ್ ವಿರುದ್ಧ ಇನ್ನಷ್ಟು ಬಲವಾದ ಸಾಕ್ಷ್ಯಾಧಾರಗಳನ್ನು ನ್ಯಾಯಾಲಯದ ಮುಂದೆ ನೀಡುತ್ತೇವೆ ಎಂದು ಪಾಕಿಸ್ತಾನದ ವಿದೇಶಾಂಗ ಇಲಾಖೆ ವಕ್ತಾರ ನಫೀಸ್ ಝಕಾರಿಯಾ ತಿಳಿಸಿದ್ದಾರೆ.
ಭಾರತದ ವಿರುದ್ಧ ಹರಿಹಾಯ್ದ ಅವರು ಜಾಧವ್ ಕೇಸನ್ನು ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ತೆಗೆದುಕೊಂಡು ಹೋಗುವ ಮೂಲಕ ಭಾರತ ತನ್ನ ನಿಜ ಬಣ್ಣವನ್ನು ಮರೆಮಾಚಲು ಪ್ರಯತ್ನಿಸುತ್ತಿದೆ ಎಂದರು.
ಭಾರತದ ನಿಜಬಣ್ಣ ಜಗತ್ತಿನ ಮುಂದೆ ಬಯಲಾಗಲಿದೆ. ವಿಧ್ವಂಸಕತೆ, ಭಯೋತ್ಪಾದನೆ ಮತ್ತು ಅಧೀನ ಚಟುವಟಿಕೆಗ ಬಗ್ಗೆ ಜಾಧವ್ ಒಂದಲ್ಲ ಎರಡು ಬಾರಿ ತಪ್ಪೊಪ್ಪಿಕೊಂಡಿದ್ದಾರೆ. ಜಾಧವ್ ರ ಸಹಯೋಗ ಪಡೆಯುವಿಕೆ ಕುರಿತು ಪಾಕಿಸ್ತಾನದ ಮನವಿಗೆ ಭಾರತ ಧನಾತ್ಮಕವಾಗಿ ಸ್ಪಂದಿಸಲಿಲ್ಲ. ಮುಗ್ಧ ಪಾಕಿಸ್ತಾನೀಯರ ಸಾವಿಗೆ ಕಾರಣನಾದ ವ್ಯಕ್ತಿಯನ್ನು ಭಾರತ ರಕ್ಷಿಸಲು ನೋಡುತ್ತಿದೆ ಎಂದು ಆಪಾದಿಸಿದರು.
ಪಾಕಿಸ್ತಾನ ದೇಶದ ಹಿತದೃಷ್ಟಿಯಿಂದ ಅಂತಾರಾಷ್ಟ್ರೀಯ ನ್ಯಾಯಾಲಯದ ತೀರ್ಪನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದೇವೆ ಎಂದು ಝಕಾರಿಯಾ ತಿಳಿಸಿದರು.
loading...