ಖಾನಾಪುರ: ಕಳೆದ ಎರಡು ವರ್ಷಗಳಿಂದ ತಲೆದೋರಿರುವ ಭೀಕರ ಬರಗಾಲದಿಂದ ರೈತಾಪಿ ವರ್ಗ ಕಂಗೆಟ್ಟಿದ್ದು, ಈ ವರ್ಷ ಒಳ್ಳೆಯ ಮಳೆ-ಬೆಳೆ ಸಿಗಲಿ ಎಂದು ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಅಶೋಕ ಯಮಕನಮರಡಿ ಹೇಳಿದರು.
ಪಟ್ಟಣದ ಮಲಪ್ರಭಾ ತೀರದಲ್ಲಿ ಕೃಷಿಕ ಸಮಾಜದ ವತಿಯಿಂದ ವರುಣನ ಕೃಪೆಗಾಗಿ ಮಲಪ್ರಭಾ ನದಿಗೆ ಗಂಗಾಪೂಜೆ ನೆರವೇರಿಸಿ ಮಾತನಾಡಿದ ಅವರು, ಇತ್ತೀಚೆಗೆ ಬಂದ ಅಕಾಲಿಕ ಮಳೆಯ ನಂತರ ತಾಲೂಕಿನ ನೂರಾರು ರೈತರು ತಮ್ಮ ಜಮೀನುಗಳಲ್ಲಿ ಭತ್ತದ ಬಿತ್ತನೆಯನ್ನು ಮಾಡಿದ್ದು, ಭತ್ತದ ಬೆಳೆ ಚಿಗುರೊಡೆದಿದೆ. ಈಗಾಗಲೇ ಮುಂಗಾರು ಮಳೆಯ ನಿರೀಕ್ಷೆಯಲ್ಲಿರುವ ರೈತರಿಗೆ ವರುಣ ನಿರಾಸೆಗೊಳಿಸದೇ ಉತ್ತಮ ವರ್ಷಧಾರೆಯ ಮೂಲಕ ಸಧ್ಯ ಉದ್ಭವಿಸಿದ ಬರವನ್ನು ಹೋಗಲಾಡಿಸಬೇಕು ಎಂದು ಆಶಿಸಿದರು.
ಹಸಿರು ಸೇನೆಯ ಮುಖಂಡ ರಾಘವೇಂದ್ರ ನಾಯ್ಕ ಮಾತನಾಡಿ, ರೈತರ ಒಳಿತಿಗಾಗಿ ಸರ್ವ ಪಕ್ಷಗಳೂ ರಾಜಕೀಯವನ್ನು ಬದಿಗಿಟ್ಟು ಮಹಾದಾಯಿ ಯೋಜನೆಯನ್ನು ಅನುಷ್ಠಾನಗೊಳಿಸಬೇಕು. ಉತ್ತರ ಕರ್ನಾಟಕದ ಪ್ರಮುಖ ನೀರಾವರಿ ಯೋಜನೆಗಳನ್ನು ಜಾರಿಗೆ ತರಲು ಪ್ರಯತ್ನಿಸಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಯಲ್ಲಪ್ಪ ಚನ್ನಾಪುರ, ಗಂಗಪ್ಪ ಹೇರೆಕರ ಸೇರಿದಂತೆ ಕೃಷಿಕ ಸಮಾಜ, ಹಸಿರು ಸೇನೆಯ ಪದಾಧಿಕಾರಿಗಳು ಇದ್ದರು.
loading...