ಖಾನಾಪುರ: ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದಲ್ಲಿ ಸೋಮವಾರ ತಾಲೂಕಿನ ರೈತಾಪಿ ವರ್ಗದ ಕುಂದುಕೊರತೆಗಳ ಕುರಿತ ವಿಶೇಷ ಸಭೆ ತಹಸೀಲ್ದಾರ್ ಶಿವಾನಂದ ಉಳ್ಳೇಗಡ್ಡಿ ಅವರ ಅಧ್ಯಕ್ಷತೆಯಲ್ಲಿ ಜರುಗಿತು.
ಸಭೆಯಲ್ಲಿ ಭಾಗವಹಿಸಿದ್ದ ರೈತರು, ಪಂಪಸೆಟ್‍ಗಳಿಗೆ ನಿಯಮಿತ ವಿದ್ಯುತ್ ಸರಬರಾಜು, ರೈತರ ಸಾಲಮನ್ನಾ, ಕಬ್ಬಿನ ಬಾಕಿ ಬಿಲ್ಲು ಪಾವತಿ, ರೈತರ ಹೊಲಕ್ಕೆ ವಿದ್ಯುತ್ ಸರಬರಾಜು ಮಾಡುವ ಟ್ರಾನ್ಸಫಾರ್ಮರ್‍ಗಳನ್ನು ನಿಗದಿತ ಅವಧಿಯ ಒಳಗೆ ದುರಸ್ತಿ ಮಾಡುವುದು, ದಿನಕ್ಕೆ ಕನಿಷ್ಠ 7 ಗಂಟೆ ಮೂರು ಫೇಸ್ ವಿದ್ಯುತ್ ಸರಬರಾಜು ಮಾಡುವುದು, ಮಲಪ್ರಭಾ ನದಿಯಿಂದ ತಾಲೂಕಿನ ಕೆರೆಗಳನ್ನು ತುಂಬಿಸುವ ಕಾಮಗಾರಿ ಕೈಗೊಳ್ಳುವುದು, ಕೃಷಿ ಕೂಲಿ ಕಾರ್ಮಿಕರು ಮತ್ತು ಕೃಷಿಕರಿಗೆ ಮಾಶಾಸನ ನೀಡುವುದು, ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ವಿಮಾ ಕಂತು ತುಂಬಿದ ರೈತರ ಮುಂಗಾರು ಬೆಳೆಗೆ ಪರಿಹಾರ ವಿತರಿಸುವುದು, ರೈತರ ಆತ್ಮಹತ್ಯೆಯನ್ನು ತಡೆಯುವ ನಿಟ್ಟಿನಲ್ಲಿ ವಿಶೇಷ ಗಮನ ಹರಿಸುವುದು ಸೇರಿದಂತೆ ರೈತಾಪಿ ವರ್ಗದ ವಿವಿಧ ಸಮಸ್ಯೆಗಳ ಬಗ್ಗೆ ತಾಲೂಕು ಆಡಳಿತದ ಗಮನ ಸೆಳೆದರು.
ಸಭೆ ಉದ್ದೇಶಿಸಿ ಮಾತನಾಡಿದ ತಹಸೀಲ್ದಾರರು, ಈಗಾಗಲೇ ತಾಲೂಕಿನ ರೈತರ ಪ್ರಮುಖ ಸಮಸ್ಯೆಗಳ ಬಗ್ಗೆ ಹಲವು ಬಾರಿ ಅಧಿಕಾರಿಗಳ ಸಭೆ ನಡೆಸಿ ತಾಲೂಕುಮಟ್ಟದಲ್ಲಿ ಇರುವ ಸಮಸ್ಯೆಗಳ ಇತ್ಯರ್ಥಕ್ಕೆ ಕ್ರಮ ಜರುಗಿಸಲಾಗಿದೆ. ಹೆಸ್ಕಾಂ ಇಲಾಖೆಗೆ ರೈತರ ಟ್ರಾನ್ಸಫಾರ್ಮರ್ ದುರಸ್ತಿಯ ನಿಟ್ಟಿನಲ್ಲಿ ವಿಳಂಬ ಮಾಡದಂತೆ ಸೂಚಿಸಲಾಗಿದೆ. ಇತ್ತೀಚೆಗೆ ಆತ್ಮಹತ್ಯೆಗೆ ಶರಣಾದ ತಾಲೂಕಿನ ಜುಂಜವಾಡ ಗ್ರಾಮದ ರೈತ ಶಿವಾಜಿ ಲಾಡ ಅವರ ಕುಟುಂಬಕ್ಕೆ ಸರ್ಕಾರದಿಂದ ಮಂಜೂರಾದ ಪರಿಹಾರ ವಿತರಿಸಲಾಗಿದೆ. ರೈತರ ಸಮಸ್ಯೆಗಳ ಇತ್ಯರ್ಥಕ್ಕೆ ತಾಲೂಕು ಆಡಳಿತ ಬದ್ಧವಿದ್ದು, ರೈತರಿಗೆ ತೊಂದರೆಯಾಗದಂತೆ ಗಮನಹರಿಸಲಾಗುವುದು ಎಂದರು.
ಸಭೆಯಲ್ಲಿ ಸಿಪಿಐ ಐ.ಎಸ್ ಗುರುನಾಥ, ಸಹಾಯಕ ಕೃಷಿ ನಿರ್ದೇಶಕ ಡಿ.ಬಿ ಚವ್ಹಾಣ, ಪಶು ಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಗುರುರಾಜ ಮನಗೂಳಿ, ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಅಶೋಕ ಯಮಕನಮರಡಿ, ಯಲ್ಲಪ್ಪ ಚನ್ನಾಪುರ, ಗಂಗಪ್ಪ ಹೇರೆಕರ ಮತ್ತಿತರರು ಇದ್ದರು.
loading...