ಖಾನಾಪುರ ತಾಲೂಕು ಪಂಚಾಯ್ತಿ ಅಧಿಕಾರಿಗಳು ಮತ್ತು ಸಿಬ್ಬಂದಿಯಿಂದ ಸುಲಿಗೆ

0
16
ಸುದ್ದಿಗೋಷ್ಠಿಯಲ್ಲಿ ತಾಪಂ ಸದಸ್ಯ ಶಿವಾನಂದ ಚಲವಾದಿ ಅಸಮಾಧಾನ
ಖಾನಾಪುರ: ತಾಪಂ ಕ್ಷೇತ್ರದ ಅನುದಾನ ಬಿಡುಗಡೆ ಮಾಡುವ ಸಲುವಾಗಿ ತಾಲೂಕು ಪಂಚಾಯ್ತಿ ಕಚೇರಿಯವರು ಶೇ.10, ಜಿಪಂ ಇಂಜಿನಿಯರಿಂಗ್ ವಿಭಾಗದವರು ಶೇ.5 ಮತ್ತು ಇತರೆ ಶೇ.3ರಂತೆ ಒಟ್ಟು ಅನುದಾನದ ಶೇ.18ರಷ್ಟು ಹಣವನ್ನು ಕಮೀಷನ್ ರೂಪದಲ್ಲಿ ನೀಡುವಂತೆ ಬೇಡಿಕೆ ಇಡುತ್ತಿದ್ದಾರೆ. ಹಣ ಕೊಡದಿದ್ದರೆ ಗುತ್ತಿಗೆದಾರರಿಗೆ ಅನುದಾನದ ಚೆಕ್ ಪಾವತಿ ಮಾಡಲು ಇಲ್ಲಸಲ್ಲದ ನೆಪ ನೀಡಿ ಸತಾಯಿಸುತ್ತಿದ್ದಾರೆ ಎಂದು ಮಂಗೇನಕೊಪ್ಪ ಕ್ಷೇತ್ರದ ತಾಪಂ ಸದಸ್ಯ ಶಿವಾನಂದ ಚಲವಾದಿ ಅಸಮಾಧಾನ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಹೊಸದಾಗಿ ಚುನಾಯಿಸಿ ಕಳುಹಿಸಿದ ತಮ್ಮ ಕ್ಷೇತ್ರದ ತಾಪಂ ಸದಸ್ಯರಿಗೆ ಕ್ಷೇತ್ರದ ಜನರು ಮೂಲಭೂತ ಸಮಸ್ಯೆಗಳ ದೊಡ್ಡ ಯಾದಿಯನ್ನೇ ನೀಡುತ್ತಿದ್ದಾರೆ. ಆದರೆ ಈ ವರ್ಷ ತಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ ಕೇವಲ ತಲಾ 4 ಲಕ್ಷ ಅನುದಾನ ನೀಡಿದ್ದರಿಂದ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಆರ್ಥಿಕ ಸಮಸ್ಯೆ ಎದುರಾಗಿದೆ. ಇರುವ ಅಲ್ಪ ಅನುದಾನದಲ್ಲಿ ಸಮುದಾಯ ಅಭಿವೃದ್ಧಿ ಕೆಲಸವನ್ನೂ ಕೈಗೊಳ್ಳಲು ಅಡಚಣೆಯಾಗಿದೆ. ಜೊತೆಗೆ ಬಿಡುಗಡೆಯಾದ ಅತ್ಯಲ್ಪ ಅನುದಾನವನ್ನು ಸಮರ್ಪಕವಾಗಿ ವಿನಿಯೋಗಿಸುವ ಉದ್ದೇಶವಿದ್ದರೂ ತಾಲೂಕು ಪಂಚಾಯ್ತಿ ಮತ್ತು ಜಿಪಂ ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಮತ್ತು ಸಿಬ್ಬಂದಿಯ ಧನದಾಹದಿಂದಾಗಿ ಅನುದಾನವನ್ನು ಸರಿಯಾಗಿ ಬಳಸಲು ಸಾಧ್ಯವಾಗದ ಸನ್ನಿವೇಶ ನಿರ್ಮಾಣವಾಗಿದೆ. ಈ ವಿಷಯವನ್ನು ಈಗಾಗಲೇ ಜಿಪಂ ಸಿಇಒ ಅವರ ಗಮನಕ್ಕೆ ತರಲಾಗಿದ್ದು, ತಾಪಂ ಸದಸ್ಯರ ಅನುದಾನದಲ್ಲಿ ಕಮೀಷನ್‍ಗಾಗಿ ಸತಾಯಿಸುವ ಅಧಿಕಾರಿ ಮತ್ತು ಸಿಬ್ಬಂದಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
loading...