loading...

ಖಾನಾಪುರ: ಪಟ್ಟಣದ ಶಾಸಕರ ಮಾದರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಬಾಲಭವನ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಟ್ಯಾಲೆಂಟ್ ಸರ್ಚ್ ಫೌಂಡೇಶನ್‍ಗಳ ವತಿಯಿಂದ ಕಳೆದ 15 ದಿನಗಳಿಂದ ಜರುಗಿದ ಜಿಲ್ಲಾ ಮಟ್ಟದ ಮಕ್ಕಳ ವಿಶೇಷ ಬೇಸಿಗೆ ಶಿಬಿರ ಶುಕ್ರವಾರ ಸಂಪನ್ನಗೊಂಡಿತು.
ಶಿಬಿರದಲ್ಲಿ ಭಾಗವಹಿಸಿದ್ದ 6ರಿಂದ 15ವರ್ಷದ ಮಕ್ಕಳಿಗೆ ಚಿತ್ರಕಲೆ, ಗಾಯನ, ನೃತ್ಯ ಮತ್ತಿತರ ರಂಗಗಳಲ್ಲಿ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ನೀಡಲಾಗಿದೆ. ವಿವಿಧ ಕ್ಷೇತ್ರಗಳ ಪರಿಣಿತರನ್ನು ಶಿಬಿರಕ್ಕೆ ಆಹ್ವಾನಿಸಿ ಅವರಿಂದ ವಿಶೇಷ ವರ್ಗಗಳನ್ನು ಆಯೋಜಿಸಿ ಮಕ್ಕಳಲ್ಲಿ ಅಡಗಿದ್ದ ಬಹುಮುಖ ಪ್ರತಿಭೆ ಅನಾವರಣಕ್ಕೆ ವೇದಿಕೆ ಒದಗಿಸಲಾಗಿದೆ. ಶಿಬಿರದಲ್ಲಿ ಭಾಗವಹಿಸಿದ ಪ್ರತಿಯೊಬ್ಬ ಮಗುವಿಗೆ ವಿಶೇಷ ಕಿಟ್ ಹಾಗೂ ಪ್ರಮಾಣ ಪತ್ರ ನೀಡಲಾಗಿದೆ ಎಂದು ಶಿಬಿರದ ಸಂಯೋಜಕ ರಾಜೇಂದ್ರ ಭಂಡಾರಿ ಹೇಳಿದರು.
ಸಹಾಯಕ ಸಿಡಿಪಿಒ ಸುಮನ ನಾಯ್ಕ ಮಾತನಾಡಿ, ರಜಾ ಅವಧಿಯಲ್ಲಿ ನಡೆದ ಈ ಶಿಬಿರದಲ್ಲಿ ಮಕ್ಕಳಿಗೆ ಪಠ್ಯೇತರ ಚಟುವಟಿಕೆಗಳ ಬಗ್ಗೆ ಮಾಹಿತಿ ಹಾಗೂ ಮಾರ್ಗದರ್ಶನ ನೀಡುವ ಮೂಲಕ ಅವರಿಗೆ ಇಷ್ಟವಾದ ವಿಭಾಗದ ಬಗ್ಗೆ ಜ್ಞಾನ ಪಡೆದುಕೊಳ್ಳುವಂತೆ ಕ್ರಮ ಜರುಗಿಸಲಾಗಿದ್ದು, ಶಿಬಿರ ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಅನುಕೂಲಕರ ವಾತಾವರಣ ಕಲ್ಪಿಸಿದೆ ಎಂದರು.
ಈ ಸಂದರ್ಭದಲ್ಲಿ ಟ್ಯಾಲೆಂಟ್ ಸರ್ಚ್ ಫೌಂಡೇಶನ್‍ನ ಡಾ.ಸಲೀಂ ಸೋನೆಖಾನ, ಸಿಡಿಪಿಒ ಚಂದ್ರಕಾಂತ ಕಾರೇಕರ, ಸರ್ಕಾರಿ ಬಾಲ ಮಂದಿರದ ಅಧೀಕ್ಷಕಿ ಅನ್ನಪೂರ್ಣ ಕುಬಗಡ್ಡಿ, ಶಿಕ್ಷಣ ಇಲಾಖೆಯ ಸಂಪನ್ಮೂಲ ವ್ಯಕ್ತಿ ರಮೇಶ ಪತ್ತಾರ, ಬಿ.ಕೆ ತಳವಾರ ಸೇರಿದಂತೆ ಶಿಬಿರಾರ್ಥಿಗಳು, ಪಾಲಕರು, ಶಿಕ್ಷಕರು ಇದ್ದರು. ಶಿಬಿರಾರ್ಥಿಗಳು ತಮ್ಮ ಅನುಭವ ಹಂಚಿಕೊಂಡರು. ಉತ್ತಮ ಶಿಬಿರಾರ್ಥಿಗೆ ಬಹುಮಾನ ವಿತರಿಸಿ ಗೌರವಿಸಲಾಯಿತು. ಉಪನ್ಯಾಸಕಿ ಶ್ರೀದೇವಿ ಬೆಳವಡಿ ಸ್ವಾಗತಿಸಿದರು. ಫಾರೂಕ್ ವಂದಿಸಿದರು.

loading...