loading...

ಕನ್ನಡಮ್ಮ ಸುದ್ದಿ-ರಾಣೇಬೆನ್ನೂರ : ಬರ ಪರಿಸ್ಥಿತಿ ಅವಲೋಕನ ಹಾಗೂ ಪಕ್ಷ ಸಂಘಟನೆ ಉದ್ದೇಶದಿಂದ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ಮುಖಂಡರುಗಳು ಮೇ 24ರಂದು ಮಧ್ಯಾಹ್ನ 3ಕ್ಕೆ ನಗರಕ್ಕೆ ಆಗಮಿಸಲಿದ್ದಾರೆ ಎಂದು ತಾಲೂಕ ಬಿಜೆಪಿ ಅಧ್ಯಕ್ಷ ವಿಶ್ವನಾಥ ಪಾಟೀಲ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾವೇರಿಯಿಂದ ಆಗಮಿಸುವ ಯಡಿಯೂರಪ್ಪ ಅವರನ್ನು ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ ಬಳಿಯಿಂದ ಸ್ವಾಗತಿಸಿ ಬೈಕ್ ರ್ಯಾಲಿ ಮೂಲಕ ಅವರನ್ನು ಕರೆತಂದು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಲಾಗುವುದು. ನಂತರ ವಾಲ್ಮೀಕಿ ಓಣಿಯ ನಾಯಕ ಸಮಾಜದ ಚರ್ಚೆ ನಡೆಸಿ ಚಹಾಕೂಟದಲ್ಲಿ ಭಾಗವಹಿಸುವರು. ಅಲ್ಲಿಂದ ಹೊಸಮನಿ ಸಿದ್ದಪ್ಪ (ಶಿವಾ) ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಏರ್ಪಡಿಸಲಾಗಿರುವ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡುವರು. ಬಳಿಕ ನಗರ ಘಟಕದ ಅಧ್ಯಕ್ಷ ಚೋಳಪ್ಪ ಕಸವಾಳ ಮನೆಯಲ್ಲಿ ಓಬಿಸಿ ಜನಾಂಗದವರ ಜೊತೆ ಸಭೆ ನಡೆಸುವರು ಎಂದರು.
ಪಕ್ಷದ ನಗರ ಘಟಕದ ಅಧ್ಯಕ್ಷ ಚೋಳಪ್ಪ ಕಸವಾಳ, ಅರುಣಕುಮಾರ ಪೂಜಾರ, ನೀಲಪ್ಪ ದೇವರಗುಡ್ಡ ಮತ್ತು ಇತರರು ಸುದ್ದಿಗೋಷ್ಠಿಯಲ್ಲಿ ಇದ್ದರು.

loading...