loading...

ನವದೆಹಲಿ: ಭಾರತದ ಎನ್‍ಎಸ್ ಜಿ ಸದಸ್ಯತ್ವಕ್ಕೆ ಬೆಂಬಲ ನೀಡುವಂತೆ ಚೀನಾವನ್ನು ಮನವೊಲಿಸಿ ಇಲ್ಲದಿದ್ದರೆ ಉಭಯ ದೇಶಗಳ ನಡುವಿನ ಅಣು ಒಪ್ಪಂದವನ್ನು ರದ್ದುಗೊಳಿಸುವುದಾಗಿ ಭಾರತ ರಷ್ಯಾ ಮೇಲೆ ಒತ್ತಡ ಹೇರಿದೆ.
ಇತ್ತೀಚೆಗೆ ಚೀನಾದ ಬೀಜಿಂಗ್ ನಲ್ಲಿ ನಡೆದ ಒನ್ ಬೆಲ್ಟ್ ಒನ್ ರೋಡ್ ಯೋಜನೆಗೆ ಪರ್ಯಾಯವಾಗಿ ಜಪಾನ್ ಸಹಯೋಗದೊಂದಿಗೆ ಫ್ರೀಡಂ ಕಾರಿಡಾರ್ ಯೋಜನೆ ಸಾಕಾರಕ್ಕೆ ಮುನ್ನುಡಿ ಬರೆದು ಚೀನಾಗೆ ಸೆಡ್ಡು ಹೊಡೆದಿದ್ದ, ಭಾರತ ಈಗ ವಿಶ್ವದ ಪರಮಾಣು ಪೂರೈಕೆದಾರರ ಗುಂಪು (ಎನ್‍ಎಸ್‍ಜಿ) ಸದಸ್ಯತ್ವ ಗಿಟ್ಟಿಸಿಕೊಳ್ಳುವ ನಿಟ್ಟಿನಲ್ಲೂ ಇಂಥದ್ದೇ ಮಹತ್ವದ ರಣತಂತ್ರ ರೂಪಿಸಿದೆ.
ಮೂಲಗಳ ಪ್ರಕಾರ ಎನ್‍ಎಸ್ ಜಿ ಕನಸನ್ನು ನನಸಾಗಿಸಿಕೊಳ್ಳುವುದಕ್ಕಾಗಿ ತನ್ನ ಪರಮಾಪ್ತ ರಾಷ್ಟ್ರ ರಷ್ಯಾದ ಮೇಲೆ ಭಾರತ ಪ್ರಬಲ ಒತ್ತಡ ಹೇರಿದೆ. ಇತ್ತೀಚಿನ ದಿನಗಳಲ್ಲಿ ರಷ್ಯಾ ಚೀನಾದೊಂದಿಗೆ ಹೆಚ್ಚು ಸ್ನೇಹ ಹೊಂದಿದ್ದು, ಜಾಗತಿಕ ವಿಷಯಗಳಿಗೆ ಸಂಬಂಧಿಸಿದಂತೆ ಚೀನಾವನ್ನು ಬಹಿರಂಗವಾಗಿಯೇ ಬೆಂಬಲಿಸುತ್ತಿದೆ. ಹೀಗಾಗಿ ಭಾರತದ ಎನ್‍ಎಸ್‍ಜಿ ಸದಸ್ಯತ್ವಕ್ಕೆ ಬೆಂಬಲ ನೀಡುವಂತೆ ಚೀನಾ ಮೇಲೆ ಒತ್ತಡ ಹೇರುವಂತೆ ರಷ್ಯಾ ಮೇಲೆ ಭಾರತ ಒತ್ತಡ ಹೇರುತ್ತಿದೆ. ಎನ್‍ಎಸ್‍ಜಿ ಸದಸ್ಯತ್ವಕ್ಕೆ ಬೆಂಬಲ ನೀಡದಿದ್ದಲ್ಲಿ ತಮಿಳುನಾಡಿನ ಕೂಡಂಕೂಳಂನ ಅಣು ವಿದ್ಯುತ್ ಘಟಕಗಳ 5 ಹಾಗೂ 6ನೇ ಹಂತದ ಒಪ್ಪಂದದಿಂದ ಹಿಂದೆ ಸರಿಯುವುದಾಗಿಯೂ ಭಾರತ ನೇರ ಎಚ್ಚರಿಕೆ ರವಾನಿಸಿದೆ.
ರಷ್ಯಾ ಮೇಲೆ ಒತ್ತಡ ಹೇರುವ ಸಲುವಾಗಿ ಭಾರತ 5 ಹಾಗೂ 6ನೇ ಹಂತದ ಒಪ್ಪಂದಕ್ಕೆ ಸಹಿ ಹಾಕಲು ವಿಳಂಬ ಮಾಡುತ್ತಿದೆ. ಈ ಸಂಬಂಧ ರಷ್ಯಾ ಸರ್ಕಾರಕ್ಕೂ ಅಧಿಕೃತವಾಗಿ ಮಾಹಿತಿ ನೀಡಿರುವ ಭಾರತ ಎನ್‍ಎಸ್‍ಜಿ ಸದಸ್ಯತ್ವಕ್ಕೆ ಬೆಂಬಲ ಸಿಗದಿದ್ದಲ್ಲಿ ದೇಶೀಯವಾಗಿಯೇ ಯೋಜನೆ ಮುಂದುವರಿಸಲು ನಿರ್ಧರಿಸಿದೆ ಎನ್ನಲಾಗಿದೆ. ಹೀಗಾಗಿ ಭಾರತದ ಈ ದಿಢೀರ್ ನಡೆಯಿಂದಾಗಿ ರಷ್ಯಾ ಅಕ್ಷರಶಃ ಒತ್ತಡಕ್ಕೆ ಸಿಲುಕಿದ್ದು, ರಷ್ಯಾ ಸರ್ಕಾರಕ್ಕೂ ಭಾರತ ಕೂಡಂಕೂಳಂ ಯೋಜನೆ ಒಪ್ಪಂದವನ್ನು ವಿಳಂಬ ಮಾಡುತ್ತಿರುವ ಬಗ್ಗೆ ಮನವರಿಕೆ ಆಗಿದೆ. ಹೀಗಾಗಿಯೇ ಆತಂಕದಿಂದ ಭಾರತದೊಂದಿಗೆ ಮಾತುಕತೆಗೆ ಮುಂದಾಗಿದೆ. ಕಳೆದ ವಾರವಷ್ಟೇ ರಷ್ಯಾ ಉಪ ಪ್ರಧಾನಮಂತ್ರಿ ಡಿಮಿಟ್ರಿ ರೋಗೋಜಿನ್ ಭಾರತ ಪ್ರಧಾನಿ ನರೇಂದ್ರ ಮೋದಿಯೊಂದಿಗೆ ಚರ್ಚೆ ನಡೆಸಿದ್ದಾರೆ. ಆದರೆ ಒಪ್ಪಂದಕ್ಕೆ ಅಂಕಿತ ಹಾಕುವ ಕುರಿತು ಭಾರತದಿಂದ ಸ್ಪಷ್ಟ ಭರವಸೆ ದೊರೆತಿಲ್ಲ ಎಂದು ಹೇಳಲಾಗುತ್ತಿದೆ.

loading...