ಲಾಭ ಗಳಿಕೆಯಲ್ಲಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಹೊಸ ದಾಖಲೆ – 47% ವೃದ್ಧಿ

0
39
loading...

ಕನ್ನಡಮ್ಮ ಸುದ್ದಿ-ಧಾರವಾಡ : ತನ್ನ ಸೇವಾ ಕ್ಷೇತ್ರದಲ್ಲಿನ ನಾಲ್ಕುವರ್ಷಗಳ ಸತತ ಬರಗಾಲದ ನಡುವೆಯೂ ಧಾರವಾಡ ಮೂಲದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕು ಲಾಭ ಗಳಿಕೆಯಲ್ಲಿ 47 ಪ್ರತಿಶತ ಪ್ರಗತಿ ದರದಲ್ಲಿ 257.71 ಕೋಟಿ ರೂ.ಲಾಭ ಗಳಿಸುವ ಮೂಲಕ ಲಾಭ ಗಳಿಕೆಯಲ್ಲಿ ಹೊಸ ವಿಕ್ರಮ ದಾಖಲಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷ ಎಸ್ ರವೀಂದ್ರನ್ ಬುಧವಾರದಂದು ಧಾರವಾಡದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಬ್ಯಾಂಕಿನ ಕಾರ್ಯನಿರ್ವಹಣಾ ಲಾಭ ರೂ.174.96 ಕೋಟಿ ರೂ. ಳಿಂದ 257.71 ಕೋಟಿ ರೂ. ಗಳಿಗೆ ವೃದ್ಧಿಸಿದ್ದು ಹಲವು ಉಪಬಂಧ ಹಾಗೂ ಕೇಂದ್ರ ಸರ್ಕಾರಕ್ಕೆ ಆದಾಯ ತೆರಿಗೆಯನ್ನು ಪಾವತಿಸಿಯೂ ಬ್ಯಾಂಕು 41% ಪ್ರಗತಿ ದರದಲ್ಲಿ ರೂ.153.75 ಕೋಟಿ ರೂ. ನಿಕ್ಕಿ ಲಾಭಗಳಿಸುವಲ್ಲಿ ಶಕ್ತವಾಗಿದೆ. ಈ ಮೂಲಕ ಬ್ಯಾಂಕಿನ ನಿವ್ವಳ ಸಂಪತ್ತು1437.33 ಕೋಟಿ ರೂ.ಗಳಿಂದ 1591.08 ಕೋಟಿ ರೂ.ಗಳಿಗೆ ವೃದ್ಧಿಸಿದೆ ಎಂದು ರವೀಂದ್ರನ್ ತಿಳಿಸಿದರು.
21 ಸಾವಿರ ಕೋಟಿ ರೂ. ದಾಟಿದ ಬ್ಯಾಂಕಿನ ವಹಿವಾಟು:
ಪ್ರಗತಿ ವಿವರಿಸಿ ಮಾತನಾಡಿದ ರವೀಂದ್ರನ್ 2015-16ರ ಸಾಲಿನ ಒಟ್ಟು ವ್ಯವಹಾರದ ಮೇಲೆ (ರೂ.20165.26ಕೋಟಿ) 964.00ಕೋಟಿ ರೂ. ನಿವ್ವಳ ಹೆಚ್ಚಳವನ್ನು ಸಾಧಿಸಿರುವ ಬ್ಯಾಂಕು 21579.26 ಕೋಟಿ ರೂ. ವಹಿವಾಟು ದಾಖಲಿಸಿದೆ. ಠೇವಣಿ ಸಂಗ್ರಹಣೆಯಲ್ಲಿ 12001.27 ಕೋಟಿ ರೂ. ಮಟ್ಟವನ್ನು ತಲುಪಿದೆ. ಗ್ರಾಹಕರ ಸಂಖ್ಯೆಯಲ್ಲೂ ಹೆಚ್ಚಳವಾಗಿದ್ದು, ಅದು 79 ಲಕ್ಷ ಮೀರಿದೆ. ಪ್ರತಿ ಉದ್ಯೋಗಿಯ ಸರಾಸರಿ ವಹಿವಾಟು 6.45 ಕೋಟಿ ರೂ.ಗಳಿಂದ 7.30 ಕೋಟಿರೂ.ಗಳಿಗೆ ವೃದ್ಧಿಸಿದೆ ಎಂದೂ ರವೀಂದ್ರನ್ ತಿಳಿಸಿದರು.

ಪ್ರಗತಿಗೆ ಪೂರಕವಾದ ಸಾಲ ಸೌಲಭ್ಯ :
9 ಜಿಲ್ಲೆಗಳಲ್ಲಿ 621 ಶಾಖೆಗಳನ್ನು ಹೊಂದಿರುವ ಬ್ಯಾಂಕು 2016-17 ರ ಸಾಲಿನಲ್ಲಿ 5307.30 ಕೋಟಿ ರೂ. ಸಾಲ ವಿತರಿಸಿದೆ. ಬ್ಯಾಂಕಿನ ಸಾಲ ಹಾಗೂ ಮುಂಗಡಗಳು 9577.99 ಕೋಟಿ ರೂ. ಮಟ್ಟವನ್ನು ತಲುಪಿದೆ. ಆದ್ಯತಾ ರಂಗಕ್ಕೆ ಪರಮಾದ್ಯತೆ ನೀಡಿರುವ ಬ್ಯಾಂಕು ಈ ರಂಗದಡಿ 8511.64 ಕೋಟಿ ರೂ. ಸಾಲವನ್ನು ಹೊಂದಿದೆ. ಒಟ್ಟೂ ಸಾಲದಲ್ಲಿ ಆದ್ಯತಾ ರಂಗದ ಪಾಲು 88.87 ಪ್ರತಿಶತವಾಗಿದ್ದು, ಭಾರತೀಯ ರಿಸರ್ವ್ ಬ್ಯಾಂಕ್ ನಿಗದಿ ಪಡಿಸಿದ ಗುರಿ 75 ಪ್ರತಿಶತವನ್ನು ಬ್ಯಾಂಕು ಮೀರಿ ಮುನ್ನಡೆದಿದೆ ಎಂದೂ ರವೀಂದ್ರನ್ ಹೇಳಿದರು. ಬ್ಯಾಂಕಿನ ಒಟ್ಟು ಸಾಲದಲ್ಲಿ ಕೃಷಿರಂಗದ ಸಾಲದ ಪ್ರಮಾಣ 6239.78 ಕೋಟಿ ರೂ. ಗಳಾಗಿದ್ದು ಅದು ಒಟ್ಟಾರೆ ಸಾಲದ 65.15 ಪ್ರತಿಶತವಾಗಿದೆ. ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿ 186342 ರೈತರಿಗೆ 2789.00 ಕೋಟಿ ರೂ. ಸಾಲ ವಿತರಿಸಿದೆ . ಸಣ್ಣ ಮತ್ತು ಮಧ್ಯಮ ತರಗತಿಯ ಉದ್ಯಮಕ್ಕೆ ಮಹತ್ವ ನೀಡಿರುವ ಬ್ಯಾಂಕು 1259.90 ಕೋಟಿ ರೂ. ಸಾಲ ವಿತರಿಸಿದ್ದು 32 % ಏರಿಕೆ ದಾಖಲಾಗಿದೆ. ಪ್ರಧಾನ ಮಂತ್ರಿ ಮುದ್ರಾ ಯೋಜನೆಯಲ್ಲಿ ಬ್ಯಾಂಕು 61162 ಉದ್ಯೋಗಾಕಾಂಕ್ಷಿಗಳಿಗೆ 758.83 ಕೋಟಿ ರೂ. ಸಾಲ ವಿತರಿಸಿದೆ ಎಂದೂ ರವೀಂದ್ರನ್ ಹೇಳಿದರು.
ಶಾಖಾ ಜಾಲ:
ಕಳೆದ ಸಾಲಿನಲ್ಲಿ ಬ್ಯಾಂಕು 10 ಹೊಸ ಶಾಖೆ ಮತ್ತು ಒಂದು ನೂತನ ಪ್ರಾದೇಶಿಕ ಕಛೇರಿಯನ್ನು ಪ್ರಾರಂಭಿಸುವ ಮೂಲಕ ಶಾಖೆಗಳ ಸಂಖ್ಯೆಯನ್ನು 621ಕ್ಕೂ ಹಾಗೆ0iÉುೀ ಪ್ರಾದೇಶಿಕ ಕಾರ್ಯಾಲಯದ ಸಂಖ್ಯೆಯನ್ನು 10 ಕ್ಕೂ ಏರಿಸಿಕೊಂಡಿದೆ. ಬ್ಯಾಂಕು ಒಟ್ಟಾರೆ 84 ಏಟಿಎಮ್ ಮತ್ತು 2 ಸಂಚಾರಿ ಏಟಿಎಮ್ ಗಳನ್ನು ಹೊಂದಿದೆ.

ಅನುತ್ಪಾದಕ ಆಸ್ತಿಯ ಮೇಲೆ ಉತ್ತಮ ನಿಯಂತ್ರಣ : (ಓPಂ)
ಕಳೆದ ನಾಲ್ಕು ವರ್ಷಗಳಿಂದ ತೀವ್ರಗೊಂಡಿರುವ ಬರ ಬ್ಯಾಂಕಿನ ಸಾಲ ವಸೂಲಾತಿಯ ಮೇಲೆ ಪರಿಣಾಮ ಬೀರಿದ್ದರೂ ಅನುತ್ಪಾದಕ ಸಾಲದ ಮೇಲೆ ಬ್ಯಾಂಕು ಉತ್ತಮ ನಿಯಂತ್ರಣ ಸಾಧಿಸಿದೆ. ಬ್ಯಾಂಕಿನ ನಿಕ್ಕಿ ಅನುತ್ಪಾದಕ ಆಸ್ತಿ 2.90% ನಿಂದ 2.66 % ಗೆ ಇಳಿದಿದ್ದು ಬ್ಯಾಂಕಿನ ಪ್ರಾವಿಸನ್ ಕವರೇಜ್ ಅನುಪಾತ 31 ಪ್ರತಿಶತದಿಂದ 36.34 ಪ್ರತಿಶತಕ್ಕೆ ಏರಿದೆ.ಇದು ಬ್ಯಾಂಕಿನ ಸದೃಢತೆಯ ಸಂಕೇತವಾಗಿದೆ ಎಂದೂ ರವೀಂದ್ರನ್ ಹೇಳಿದರು.

ರಾಜ್ಯದಲ್ಲಿ ಮೊದಲ ಸ್ಥಾನ:
ಅಸಂಘಟಿತ ವರ್ಗ ಮತ್ತು ಹಳ್ಳಿಗಾಡಿನ ಜನರಿಗೆ ಸಾಮಾಜಿಕ ಭದ್ರತೆ ಕಲ್ಪಿಸುವ ನಿಟ್ಟಿನಲ್ಲಿ ಬ್ಯಾಂಕು ಮಹತ್ವದ ಪಾತ್ರ ವಹಿಸುತ್ತಲಿದೆ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಜೀವ ಹಾಗೂ ಅಪಘಾತ ವಿಮೆ ಜನಸಾಮಾನ್ಯರ ಬದುಕಿಗೊಂದು ಹೊಸ ಭರವಸೆ ಮೂಡಿಸಿದೆ. ಬ್ಯಾಂಕು ಇಲ್ಲಿಯವರೆಗೆ 15.30 ಲಕ್ಷ ಜನರನ್ನು ಪ್ರಧಾನ ಮಂತ್ರಿ ಜನ ಧನ್ ಯೋಜನೆಯಡಿ ತಂದಿದ್ದು ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿದೆ ಎಂದೂ ರವೀಂದ್ರನ್ ಹೇಳಿದರು. ವಿತ್ತೀಯ ಸೇರ್ಪಡೆ ಯೋಜನೆಯನ್ವಯ 857 ಸಹ ಸೇವಾ ಕ್ಷೇತ್ರಗಳಡಿ ಬ್ಯಾಂಕ್ 2033 ಗ್ರಾಮಗಳನ್ನು ಹೊಂದಿದ್ದು 329 ಶಾಖೆಗಳಲ್ಲದೆ 528 ವ್ಯವಹಾರ ಪ್ರತಿನಿಧಿಗಳು ಮತ್ತು 104 ಬ್ಯಾಂಕ್ ಸಖಿಗಳ ಮೂಲಕ ಸೇವೆ ಸಲ್ಲಿಸುತ್ತಿದೆ.
ನಗದುರಹಿತ ವಹಿವಾಟು :
ನೋಟು ಅಮಾನ್ಯದ ನಂತರ ದೈನಂದಿನ ಬ್ಯಾಂಕ್ ವ್ಯವಹಾರಕ್ಕೆ ಅದರಲ್ಲೂ ವಿಶೇಷವಾಗಿ ಹಣ ಪಾವತಿ ಮತ್ತು ರವಾನೆಗೆ ಜನಸಾಮಾನ್ಯರನ್ನು ಡಿಜಿಟಲ್ ಮಾಧ್ಯಮದತ್ತ ಸೆಳೆದಿರುವುದು ಬ್ಯಾಂಕಿನ ಮಹತ್ವದ ಕಾರ್ಯಗಳಲ್ಲೊಂದಾಗಿದೆ. ನಗದು ರಹಿತ ವ್ಯವಹಾರಕ್ಕೆ ಸಂಬಂಧಿಸಿ ಬಹುತೇಕ ಎಲ್ಲ ನೂತನ ತಂತ್ರಜ್ಞಾನವನ್ನು ಜನಸಾಮಾನ್ಯರಿಗೆ ಬ್ಯಾಂಕು ಪರಿಚಯಿಸಿದೆ. ಸದ್ಯಕ್ಕೆ ತನ್ನ ಕಾರ್ಯಕ್ಷೇತ್ರದ 9 ಜಿಲ್ಲೆಗಳಲ್ಲಿ ಬ್ಯಾಂಕು 14 ಗ್ರಾಮಗಳನ್ನು ಸಂಪೂರ್ಣ ಡಿಜಿಟಲ್ ಗ್ರಾಮಗಳನ್ನಾಗಿ ಪರಿವರ್ತಿಸಿದೆ. ಬ್ಯಾಂಕು ಈ ಆರ್ಥಿಕ ವರ್ಷಾಂತ್ಯಕ್ಕೆ ಇನ್ನೂ 250 ಗ್ರಾಮಗಳನ್ನು ಸಂಪೂರ್ಣ ಡಿಜಿಟಲ್ ಗ್ರಾಮಗಳನ್ನಾಗಿ ಪರಿವರ್ತಿಸುವ ಗುರಿ ಹೊಂದಿದೆ. ಬ್ಯಾಂಕಿನ ಮೊಬೈಲ್ ಆ್ಯಪ್, ಬಳಕೆದಾರರ ಸ್ನೇಹಿಯಾಗಿ ಜನಪ್ರಿಯವಾಗಿದ್ದು 480000 ಆ್ಯಪ್ ಡೌನ್ ಲೋಡ್ ಮಾಡಿಕೊಡಲಾಗಿದೆ ಮತ್ತು ಇದರಲ್ಲಿ ಸುಮಾರು ಅರ್ಧದಷ್ಟು ಜನ ನಿತ್ಯವೂ ಅದರ ಸೇವೆ ಪಡೆಯುತ್ತಿದ್ದಾರೆ ಎಂದರು.
ಸಾಮಾಜಿಕ ಬ್ಯಾಂಕಿಂಗ್‍ನಲ್ಲಿ ಶ್ರೇಷ್ಠತೆ
ಗ್ರಾಮೀಣ ಬ್ಯಾಂಕಿಂಗ್ ಮತ್ತು ಸಾಮಾಜಿಕ ವಿಮಾ ಯೋಜನೆಗಳ ಅನುಷ್ಠಾನದಲ್ಲಿ ತೋರಿದ ಉತ್ತಮ ಸಾಧನೆಗೆ ಸಂಬಂಧಿಸಿ ಬ್ಯಾಂಕ್ ಸ್ಕೋಚ್ ಗ್ರೂಫ್ ಮತ್ತು ಭಾರತೀಯ ಕೈಗಾರಿಕಾ ಮತ್ತು ವಾಣಿಜ್ಯ ಮಂಡಳಿ (ಅಸೋಚಮ್) ರಾಷ್ಟ್ರಮಟ್ಟದ ಪುರಸ್ಕಾರ ನೀಡಿ ಗೌರವಿಸಿದೆ.
ಸಾಮಾಜಿಕ ಜವಾಬ್ದಾರಿ:
ಬ್ಯಾಂಕಿಂಗ್ ವ್ಯವಹಾರದ ಜೊತೆಗೆ ಸಾಮಾಜಿಕ ಬದ್ಧತೆಯನ್ನೂ ಸಮರ್ಥವಾಗಿ ತೋರುತ್ತಿರುವ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕು ಕಳೆದ ಸಾಲಿನ ಪರಿಸರ ದಿನಾಚರಣೆಯಲ್ಲಿ ತನ್ನನ್ನು ಅತ್ಯಂತ ವಿಶಿಷ್ಟವಾಗಿ ತೊಡಗಿಸಿಕೊಂಡಿತ್ತು. ಧಾರವಾಡದಲ್ಲಿರುವ ಬ್ಯಾಂಕಿನ ಪ್ರಧಾನ ಕಛೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ 110 ಉದ್ಯೋಗಿಗಳು ಪ್ರತಿ ಶನಿವಾರ ಸೈಕಲ್ ಬಳಸಿ ಅಥವಾ ಸಾರ್ವಜನಿಕ ಸಾಗಣೆ ವ್ಯವಸ್ಥೆ ಬಳಸಿ ಬ್ಯಾಂಕ್ ಕಾರ್ಯಕ್ಕೆ ಹಾಜರಾದದ್ದು ವಿಶಿಷ್ಟವಾಗಿತ್ತು. ಕಳೆದ ಸಾಲಿನಲ್ಲಿ, ಮಳೆ ನೀರು ಇಂಗಿಸುವಿಕೆಗೆ ಸಂಬಂಧಿಸಿ ವಿವಿಧಡೆ ಬ್ಯಾಂಕು ಯಕ್ಷಗಾನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು. ಈ ವರ್ಷದವಧಿಯಲ್ಲಿ ಕೆಲ ಕೆರೆಗಳನ್ನು ದತ್ತು ಪಡೆದು ಅಭಿವೃದ್ಧಿ ಪಡಿಸುವ ಕಾರ್ಯಯೋಜನೆಯನ್ನು ಬ್ಯಾಂಕು ಹೊಂದಿದೆ.

25000 ಕೋಟಿ ರೂ. ವಹಿವಾಟು ತಲುಪುವ ಮಹತ್ತರ ಗುರಿ:
2017-18 ರ ಸಾಲಿನ ಆರ್ಥಿಕ ವರ್ಷದ ಅಂತ್ಯಕ್ಕೆ 25000 ಕೋಟಿ ರೂ. ವಹಿವಾಟು ತಲುಪುವ ಮಹತ್ತರ ಗುರಿಯನ್ನು ರವೀಂದ್ರನ್ ಪ್ರಕಟಿಸಿದರು. 6500 ಕೋಟಿ ರೂ. ಸಾಲ ವಿತರಿಸುವ ಗುರಿ ಹೊಂದಿರುವ ಬ್ಯಾಂಕು ಈ ವರ್ಷ ಇನ್ನೂ 29 ನೂತನ ಶಾಖೆಗಳನ್ನು ತೆರೆಯಲಿದೆ. ಇನ್ನೂ 100 ಗ್ರಾಮಗಳನ್ನು ಸಂಪೂರ್ಣ ಡಿಜಿಟಲ್ ಗ್ರಾಮಗಳನ್ನಾಗಿ ಪರಿವರ್ತಿಸಲಾಗುವುದು. ಸಾಲದ ಬಡ್ಡಿಯನ್ನು ಸಾಕಷ್ಟು ತಗ್ಗಿಸಲಾಗಿದ್ದು ಎರೆಡು ನೂತನ ಠೇವಣಿ ಯೋಜನೆ ಮತ್ತು ಮೂರು ಹೊಸ ಸಾಲ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಗೃಹ ಸಾಲ , ಸಣ್ಣ ಮತ್ತು ಮಧ್ಯಮ ತರಗತಿಯ ಕೈಗಾರಿಕೆ, ಕೃಷಿ ರಂಗದಲ್ಲಿ ಹೂಡಿಕೆ ಸಾಲ ಹಾಗೆ0iÉುೀ ಸಮಗ್ರ ಕೃಷಿ ಪದ್ಧತಿಗೆ ಈ ಆರ್ಥಿಕ ವರ್ಷದಲ್ಲಿ ಆದ್ಯತೆ ನೀಡಲಾಗುವುದು ಎಂದೂ ರವೀಂದ್ರನ್ ಹೇಳಿದರು.

ಮುಖ್ಯಾಂಶಗಳು : * 21500 ಕೋಟಿ ದಾಟಿದ ವಹಿವಾಟು .
* 47% ಪ್ರಗತಿ ದರದಲ್ಲಿ 257.71 ಕೋಟಿ ರೂ.ಲಾಭಗಳಿಕೆ
* ಅನುತ್ಪಾದಕ ಆಸ್ತಿಯ ಪರಿಣಾಮಕಾರಿ ನಿಯಂತ್ರಣ
* 25000 ಕೋಟಿ ರೂ. ವಹಿವಾಟು ತಲುಪುವ ಮಹತ್ತರ ಗುರಿ
* 14 ಗ್ರಾಮಗಳು ಸಂಪೂರ್ಣ ಡಿಜಿಟಲ್ ಗ್ರಾಮ

ಈ ಸಂದರ್ಭದಲ್ಲಿ ಬ್ಯಾಂಕಿನ ಮಹಾಪ್ರಬಂಧಕರಾದ ಕೆ ಸುಬ್ಬರಾವ್, ಎಸ್ ಎಮ್ ಗೋರಬಾಳ್, ಐ ಜಿ ಕುಮಾರ ಗೌಡ ,sಸಾರ್ವಜನಿಕ ಸಂಪರ್ಕಾಧಿಕಾರಿ ಉಲ್ಲಾಸ ಗುನಗಾ ಉಪಸ್ಥಿತರಿದ್ದರು.

loading...