ಶಿರೋಲಿಯಲ್ಲಿ ವನ್ಯಜೀವಿ ಅಪರಾಧ ನಿಯಂತ್ರಣ ಕಾರ್ಯಾಗಾರ

0
30
ಕನ್ನಡಮ್ಮ ಸುದ್ದಿ-ಖಾನಾಪುರ: ತಾಲೂಕಿನ ಲೋಂಡಾ ಅರಣ್ಯ ವಲಯದ ಶಿರೋಲಿಯಲ್ಲಿ ಶುಕ್ರವಾರ ಅರಣ್ಯ ಇಲಾಖೆ, ಗ್ರಾಮ ಪಂಚಾಯ್ತಿ ಶಿರೋಲಿ ಮತ್ತು ಚೆನೈನ ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯದ ವನ್ಯಜೀವಿ ಅಪರಾಧ ನಿಯಂತ್ರಣ ದಳಗಳ ಸಹಯೋಗದಲ್ಲಿ  ವನ್ಯಜೀವಿ ಅಪರಾಧ ಪತ್ತೆ ಮತ್ತು ನಿಯಂತ್ರಣ ಜಾಗೃತಿ ಕಾರ್ಯಾಗಾರ ಜರುಗಿತು. ವನ್ಯಜೀವಿ ಅಪರಾಧ ನಿಯಂತ್ರಣ ದಳದ ದಕ್ಷಿಣ ಭಾರತ ವಲಯದ ವಿಭಾಗೀಯ ನಿರ್ದೇಶಕಿ ಮತ್ತು ಐ.ಎಫ್.ಎಸ್ ಅಧಿಕಾರಿ ಟಿ.ಉಮಾ ನೇತೃತ್ವದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಪ್ರವೀಣ ಮತ್ತು ಇಮಾಮ್ ಪಿ.ಪಿ.ಟಿ ಮೂಲಕ ವನ್ಯಜೀವಿ ಅಪರಾಧ ನಿಗ್ರಹದ ಪ್ರಾತ್ಯಕ್ಷಿತೆ ನೀಡಿದರು.
ಚೆನೈನ ಕೇಂದ್ರ ವನ್ಯಜೀವಿ ಅಪರಾಧ ನಿಯಂತ್ರಣ ದಳದ ಇನ್ಸಪೆಕ್ಟರ್ ಪ್ರದೀಪ ಕಾರ್ಯಾಗಾರ ಉದ್ದೇಶಿಸಿ ಮಾತನಾಡಿ, ಅರಣ್ಯದಲ್ಲಿ ಜರುಗುವ ಹುಲಿ, ಆನೆ ಮತ್ತಿತರ ಅಪರೂಪದ ಮತ್ತು ವಿನಾಶದಂಚಿನ ವನ್ಯಮೃಗಗಳ ಬೇಟೆ, ಕಳ್ಳಸಾಗಣೆ ಸೇರಿದಂತೆ ಕಾನೂನುಬಾಹಿರ ವನ್ಯಜೀವಿ ಅಪರಾಧಗಳ ನಿಗ್ರಹದ ನಿಟ್ಟಿನಲ್ಲಿ ಪೊಲೀಸ್ ಮತ್ತು ಅರಣ್ಯ ಇಲಾಖೆಗಳಿಗೆ ಸಾರ್ವಜನಿಕರ ಸಹಭಾಗಿತ್ವ ಅವಶ್ಯವಾಗಿದೆ. ವನ್ಯಜೀವಿಗಳಿಗೆ ಧಕ್ಕೆ ಉಂಟಾಗುವ ಸನ್ನಿವೇಶಗಳು ಎದುರಾದಲ್ಲಿ ಅರಣ್ಯ ಮತ್ತು ಪೊಲೀಸ್ ಇಲಾಖೆಗಳು ಎರಡೂ ಸಹ ದೂರು ದಾಖಲಿಸಿಕೊಂಡು ತನಿಖೆ ಕೈಗೊಳ್ಳಬಹುದಾಗಿದೆ. ಸ್ಥಳೀಯವಾಗಿ ಸಂಭವಿಸುವ ವನ್ಯಜೀವಿ ಅಪರಾಧ ಪ್ರಕರಣಗಳ ತನಿಖೆಯನ್ನು ಸ್ಥಳೀಯ ಪೊಲೀಸರು ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ಕೈಗೊಳ್ಳುತ್ತಾರೆ. ಅಂತರಾಜ್ಯ ಮತ್ತು ಅಂತರಾಷ್ಟ್ರೀಯ ಮಟ್ಟದ ಪ್ರಕರಣಗಳ ತನಿಖೆಯನ್ನು ವನ್ಯಜೀವಿ ಅಪರಾಧ ನಿಯಂತ್ರಣ ದಳ ಕೈಗೊಳ್ಳುತ್ತದೆ. ತನಿಖೆ ಸಂದರ್ಭದಲ್ಲಿ ರಾಜ್ಯ-ರಾಜ್ಯಗಳ ನಡುವೆ, ಪೊಲೀಸ್ ಮತ್ತು ಅರಣ್ಯ ಇಲಾಖೆಗಳ ನಡುವೆ ಸೌಹಾರ್ದಯುತ ಸಂಬಂಧ ಇದ್ದರೆ ತನಿಖೆಗೆ ಅನುಕೂಲಕರ. ಉಳಿದ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ವನ್ಯಜೀವಿ ಅಪರಾಧ ನಿಯಂತ್ರಣದ ವಿಷಯದಲ್ಲಿ ಪೊಲೀಸ್ ಮತ್ತು ಅರಣ್ಯ ಇಲಾಖೆಗಳ ನಡುವೆ ಸಮನ್ವಯ ಮತ್ತು ಬಾಂಧವ್ಯ ಉತ್ತಮವಾಗಿದೆ. ಈ ಕಾರಣದಿಂದಾಗಿ ಕರ್ನಾಟಕದಲ್ಲಿ ವನ್ಯಜೀವಿ ಅಪರಾಧ ಪ್ರಕರಣಗಳ ಸಂಖ್ಯೆ ಕ್ಷೀಣಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೆಳಗಾವಿ ಡಿಎಫ್‍ಒ ಬಸವರಾಜ ಪಾಟೀಲ ಮಾತನಾಡಿ, ಅರಣ್ಯ ಮತ್ತು ವನ್ಯಜೀವಿಗಳನ್ನು ಉಳಿಸಿ ಸಂರಕ್ಷಿಸುವ ನಿಟ್ಟಿನಲ್ಲಿ ಸರ್ಕಾರ ವಿವಿಧ ಯೋಜನೆಗಳನ್ನು ಹಮ್ಮಿಕೊಂಡಿದೆ. ವನ್ಯಜೀವಿಗಳು ವಾಸಿಸುವ ಪ್ರದೇಶದಲ್ಲಿ ಸಂಭವಿಸುವ ಬೆಳೆಹಾನಿಗೆ ಇಲಾಖೆಯ ವತಿಯಿಂದ ಪರಿಹಾರ ನೀಡಲಾಗುತ್ತಿದೆ. ಕಾನನದಲ್ಲಿ ವಾಸಿಸುವ ಜನರ ಸಮಸ್ಯೆಗಳಿಗೆ ಇಲಾಖೆಯ ಮಟ್ಟದಲ್ಲಿ ಪರಿಹಾರ ಕಲ್ಪಿಸುವ ಕೆಲಸಗಳೂ ನಡೆಯುತ್ತಿವೆ. ಇಲಾಖೆ ಕಾನನವಾಸಿಗಳ ಹಿತಾಸಕ್ತಿ ಕಾಪಾಡಲು ಬದ್ಧವಿದ್ದು, ಇದಕ್ಕೆ ಪ್ರತಿಯಾಗಿ ವನ್ಯಜೀವಿ ಅಪರಾಧ ನಿಯಂತ್ರಣದ ನಿಟ್ಟಿನಲ್ಲಿ ಕಾನನದಂಚಿನ ನಾಗರಿಕರು ಇಲಾಖೆಯ ಜೊತೆ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲ ಅರಣ್ಯ ಇಲಾಖೆಯ ಬೆಳಗಾವಿ ವಿಭಾಗದ ಅಧಿಕಾರಿಗಳು, ಸಿಬ್ಬಂದಿ, ಶಿರೋಲಿ ಗ್ರಾಪಂ ವ್ಯಾಪ್ತಿಯ ಜನಪ್ರತಿನಿಧಿಗಳು, ಸಾರ್ವಜನಿಕರು ಭಾಗವಹಿಸಿದ್ದರು ಸೇರಿದಂತೆ ಇದ್ದರು. ಎಸಿಎಫ್ ಸಿ.ಬಿ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಭೀಮಗಡ ಆರ್.ಎಫ್.ಒ ಎಸ್.ಜಿ ವಾಂದ್ರೆ ಸ್ವಾಗತಿಸಿದರು. ನಾಗರಗಾಳಿ ಆರ್.ಎಫ್.ಒ ರತ್ನಾಕರ ನಿರೂಪಿಸಿದರು. ಲೋಂಡಾ ಆರ್.ಎಫ್.ಒ ಬಸವರಾಜ ವಾಳದ ವಂದಿಸಿದರು.
loading...