loading...

ಕನ್ನಡಮ್ಮ ಸುದ್ದಿ-ಬೆಳಗಾವಿ: ಸಮಾಜ ಅಭಿವೃದ್ಧಿ ಪಥದಲ್ಲಿ ಸಾಗಿ ಆರ್ಥಿಕ ಪ್ರಗತಿ ಕಾಣಬೇಕಾದರೆ ಸಂಘ ಸಂಸ್ಥೆಗಳ ಪಾತ್ರ ಅತೀ ಅವಶ್ಯವಾಗಿದ್ದು, ಗ್ರಾಹಕರು ಇಲ್ಲಿ ಸಿಗುವ ಸೌಲಭ್ಯಗಳನ್ನು ಸದುಪಯೋಗ ಮಾಡಿಕೊಂಡು ನೆಮ್ಮದಿಯ ಜೀವನ ನಡೆಸಬೇಕೆಂದು ಶ್ರೀ ಸಾಯಿ ಕ್ರೇಡಿಟ್ ಸೌಹಾರ್ದ ಸಹಕಾರಿ ಸಂಸ್ಥೆಯ ಶಾಖಾಧ್ಯಕ್ಷ ವಿಶ್ವನಾಥ ಗೌಡಪ್ಪನವರ ಹೇಳಿದರು.
ನಗರದ ಶಿವಬಸವ ನಗರದಲ್ಲಿರುವ ಚಿಕ್ಕೋಡಿ ಮೂಲದ ಶ್ರೀ ಸಾಯಿ ಕ್ರೇಡಿಟ್ ಸೌಹಾರ್ದ ಸಹಕಾರಿ ಸಂಸ್ಥೆಯ ಸ್ಥಳೀಯ ಶಾಖಾ ಕಛೇರಿಯಲ್ಲಿ ಗುರುವಾರ ನಡೆದ 2 ನೇ ವರ್ಷದ ವಾರ್ಷಿಕೋತ್ಸವ ಹಾಗೂ ಮಹಾಲಕ್ಷ್ಮೀ ಪೂಜಾ ಸಮಾರಂಭದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗ್ರಾಹಕರ ಆರ್ಥಿಕ ವ್ಯವಸ್ಥೆಗೆ ಸ್ಪಂದಿಸುವ ಸಂಘ ಸಂಸ್ಥೆಗಳು ನೀಡುವ ಸಾಲವನ್ನು ಗ್ರಾಹಕರು ಪ್ರಾಮಾಣಿಕವಾಗಿ ಮರಳಿಸಿದರೆ ಅದು ಮತ್ತೂಬ್ಬರ ಸಂಕಷ್ಟಕ್ಕೆ ಸಹಕಾರಿಯಾಗುತ್ತದೆ. ಈ ನಿಟ್ಟಿನಲ್ಲಿ ಸಂಘಗಳೊಂದಿಗೆ ಗ್ರಾಹಕರು ಉತ್ತಮ ಬಾಂಧವ್ಯ ಹೊಂದಿ ವಿಶ್ವಾಸಾರ್ಹತೆಯಿಂದ ವ್ಯವಹರಿಸಬೇಕೆಂದರು.
ದಿವ್ಯ ಸಾನಿಧ್ಯ ವಹಿಸಿದ ಕಾರಂಜಿ ಮಠದ ಪೀಠಾಧೀಶ ಪೂಜ್ಯ ಗುರುಸಿದ್ದ ಸ್ವಾಮೀಜಿ ಮಾತನಾಡಿ, ಗ್ರಾಹಕರ ಹಿತ ರಕ್ಷಣೆ ಬಯಸುವ ಹಣಕಾಸು ಸಂಸ್ಥೆಗಳು ಸಮಾಜದ ಅಭ್ಯುದಯಕ್ಕೆ ಸ್ಥಾಪಿತವಾಗಿದ್ದು, ಅಲ್ಲಿ ಪಡೆದಂತಹ ಸೌಲಭ್ಯಗಳನ್ನು ಸದುಪಯೋಗ ಮಾಡಿಕೊಂಡು ಪ್ರತಿಯೊಬ್ಬರು ಸ್ವಾವಲಂಬಿ ಜೀವನ ನಡೆಸಿ ಬದುಕು ಸಾರ್ಥಕ ಮಾಡಿಕೊಳ್ಳಬೇಕೆಂದರು.
ಸಂಸ್ಥೆಯ ಸಂಸ್ಥಾಪಕ, ಕಾರ್ಯಾಧ್ಯಕ್ಷ ಜಗದೀಶ ಕವಟಗಿಮಠ, ಪ್ರಧಾನ ಶಾಖಾ ವ್ಯವಸ್ಥಾಪಕ ಎಂಬಿ.ಬಡಿಗೇರ, ಪ್ರಧಾನ ಶಾಖೆಯ ಉಪಾಧ್ಯಕ್ಷ ಷಡಕ್ಷರಿ ಮ್ಯಾಗೇರಿ, ಶಾಖೆಯ ಉಪಾಧ್ಯಕ್ಷ ಭರಮಗೌಡಾ ಪಾಟೀಲ, ನಿರ್ಧೇಶಕರಾದ ಸೋಮಶೇಖರ ಹಿರೇಮಠ, ಅರುಣ ಮಾನೆ, ಶಂಕರ ಪರಸನ್ನವರ, ಅಪ್ಪಾಸಾಹೇಬ ಕೇರೂರೆ, ಪ್ರಕಾಶ ಮಾನೆ, ಅಭಿಜಿತ ಶಿವಯೋಗಿಮಠ ಮುಂತಾದವರು ಉಪಸ್ಥಿತರಿದ್ದರು. ಶಾಖಾ ನಿರ್ದೇಶಕ ಪ್ರವೀಣ ಮೋತಿಮಠ ಸ್ವಾಗತಿಸಿದರು. ಶಾಖಾ ವ್ಯವಸ್ಥಾಪಕ ಮಲ್ಲಿಕಾರ್ಜುನ ಕುಡಸೋಮನ್ನವರ ಬ್ಯಾಂಕಿನ ಪ್ರಗತಿ ಕುರಿತು ವರದಿ ವಾಚಿಸಿ ಕೊನೆಯಲ್ಲಿ ವಂದಿಸಿದರು. ಈ ಸಂದರ್ಭದಲ್ಲಿ ಪಿಗ್ಮಿ ಸಂಗ್ರಾಹಕರು ಹಾಗೂ ಸಿಬ್ಬಂದಿ ವರ್ಗ ಪಾಲ್ಗೊಂಡಿದ್ದರು.

loading...