ಕನ್ನಡಮ್ಮ ಸುದ್ದಿ-ಗೋಕಾಕ: ರೈತರ ಆರ್ಥಿಕ ಮಟ್ಟವನ್ನು ಹೆಚ್ಚಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುವ ಕುರಿ-ಮೇಕೆಗಳ ಆರೋಗ್ಯ ರಕ್ಷಣೆಗಾಗಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು ರೈತರು ಸದುಪಯೋಗಪಡಿಸಿಕೊಳ್ಳಬೇಕೆಂದು ಸಣ್ಣ ಕೈಗಾರಿಕೆ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು.
     ಬುಧವಾರದಂದು ನಗರದ ಸಚಿವರ ಕಾರ್ಯಾಲಯದಲ್ಲಿ ಪಶು ಪಾಲನಾ ಹಾಗೂ ಪಶು ವೈದ್ಯಕೀಯ ಇಲಾಖೆ ಹಮ್ಮಿಕೊಂಡ ಬೆಳಗಾವಿ ಜಿಲ್ಲಾ ಮಟ್ಟದ ಕುರಿ-ಮೇಕೆಗಳಿಗೆÀ ಜೂನ್ 15 ರ ವರೆಗೆ ಜಂತು ನಾಶಕ ಔಷಧಿ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
     ಬರಗಾಲದ ಛಾಯೆಯಿಂದ ಕಂಗೆಟ್ಟಿರುವ ರೈತರಿಗೆ ಈಗ ನಾಡಿನಲ್ಲಿ ಮುಂಗಾರ ಹಂಗಾಮು ಪ್ರಾರಂಭವಾಗಿದ್ದು ರೈತರಲ್ಲಿ ಸಂತಸವನ್ನುಂಟು ಮಾಡಿದೆ. ರೈತರು ಕೃಷಿಯ ಜೊತೆಗೆ ಉಪಕಸುಬಗಳಾದ ಹೈನುಗಾರಿಕೆ, ಕುರಿ-ಮೇಕೆ, ಕೋಳಿ ಸಾಕಾಣಿಕೆಗೆ ಹೆಚ್ಚಿನ ಮಹತ್ವನ್ನು ನೀಡುವುದರ ಜೊತೆಯಲ್ಲಿ ಆಧುನಿಕತೆಯನ್ನು ಬೆಳೆಸಿಕೊಳ್ಳಬೇಕೆಂದು ಸಲಹೆ ನೀಡಿದರು.
     ರೈತ ದೇಶದ ಬೆನ್ನೆಲುಬು ಆಗಿದ್ದು, ರೈತರ ಅಭಿವೃದ್ದಿಗಾಗಿ ರಾಜ್ಯದಲ್ಲಿ ಕಾಂಗ್ರೇಸ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳು ರೈತರಿಗೆ ಮುಟ್ಟುವಲ್ಲಿ ಅಧಿಕಾರಿಗಳು ಶ್ರಮಿಸಿಬೇಕು. ಅಂದಾಗ ಮಾತ್ರ ರೈತರು ಆರ್ಥಿಕವಾಗಿ ಸದೃಢರಾಗುವುದರ ಜೊತೆಗೆ ನಾಡು ಕೂಡಾ ಅಭಿವೃದ್ದಿಯಾಗುತ್ತದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
     ಬೆಳಗಾವಿ ಜಿಲ್ಲೆಯಲ್ಲಿ ಸುಮಾರು 14 ಲಕ್ಷದಷ್ಟು ಕುರಿ-ಮೇಕೆಗಳಿದ್ದು, 8 ಸಾವಿರ ಕುರಿಗಾರರ ಜೀವನಕ್ಕೆ ಆಶ್ರಯವಾಗಿವೆ. ಕಾಲ ಕಾಲಕ್ಕೆ ಪಶು ಪಾಲನ ಇಲಾಖೆಯು ಹಮ್ಮಿಕೊಳ್ಳುವ ಇಂತಹ ಉಚಿತ ಔಷಧಿಗಳ ವಿತರಣಾ ಕಾರ್ಯಕ್ರಮ, ಲಸಿಕಾ ಕಾರ್ಯಕ್ರಮ ಹಾಗೂ ಕುರಿ-ಮೇಕೆಗಳಿಗೆ ಸಂಬಂಧಿಸಿದಂತಹ ವಿವಿಧ ಯೋಜನೆಗಳ ಸದುಪಯೋಗಪಡಿಸಿಕೊಳ್ಳುವ ಮೂಲಕ ಅವುಗಳ ಆರೋಗ್ಯ ರಕ್ಷಿಸಿ ತಮ್ಮ ಆರ್ಥಿಕ ಮಟ್ಟವನ್ನು ಸುಧಾರಿಸಿಕೊಳ್ಳುವಂತೆ ಕರೆ ನೀಡಿದರು.
     ಪಶು ಪಾಲನೆ ಇಲಾಖೆಯ ಉಪನಿರ್ದೇಶಕ ಡಾ|| ಎ.ಕೆ.ಚಂದ್ರಶೇಖರ ಮಾತನಾಡಿ, ಮುಂಗಾರು ಮಳೆ ಪ್ರಾರಂಭವಾಗಿದ್ದು ಕುರಿ-ಮೇಕೆಗಳ ಸಂರಕ್ಷಣೆಗಾಗಿ, ಜಿಲ್ಲೆಯ ಎಲ್ಲ ಪಶು ವೈದ್ಯಕೀಯ ಸಂಸ್ಥೆಗಳಲ್ಲಿ ಸಾಕಷ್ಟು ಔಷಧಿ ಹಾಗೂ ಲಸಿಕೆಗಳನ್ನು ಸಂಗ್ರಹಿಸಿಡಲಾಗಿದೆ. ಇದೇ ಜೂನ್ ತಿಂಗಳಲ್ಲಿ ಎಲ್ಲ ಕುರಿ-ಮೇಕೆಗಳಿಗೆ ಕರಳುಬೇನೆ ಲಸಿಕೆಯನ್ನು ಹಾಕಲಾಗುವುದು, ಕುರಿಗಾರರು ಇವುಗಳ ಸದುಪಯೋಗಪಡಿಸಿಕೊಳ್ಳುವಂತೆ ಸಲಹೆ ನೀಡಿದರು.
     ಇದೇ ಸಂದರ್ಭದಲ್ಲಿ ಪಶು ಪಾಲನಾ ಇಲಾಖೆಯ ರೈತರಿಗೆ ವಿವಿಧ ಯೋಜನೆಗಳ ಮಾಹಿತಿಯುಳ್ಳ ಕೈಪಿಡಿಯನ್ನು ಸಚಿವರು ಬಿಡುಗಡೆಗೊಳಿಸಿದರು.
     ಕಾರ್ಯಕ್ರಮದಲ್ಲಿ ಜಿಪಂ ಸದಸ್ಯರಾದ ಟಿ.ಆರ್.ಕಾಗಲ, ಮಡ್ಡೆಪ್ಪ ತೋಳಿನವರ, ಪಶು ಪಾಲನಾ ಇಲಾಖೆಯ ಸಹಾಯಕ ನಿರ್ದೇಶಕರುಗಳಾದ ಡಾ|| ಅಶೋಕ ಕೊಳ್ಳಿ, ಡಾ|| ಮೋಹನ ಕಮತ, ಸೇರಿದಂತೆ ಅನೇಕರು ಇದ್ದರು.
loading...